ರಾಜ್ಯ ಬಿಟ್ಟು ಎಲ್ಲಿಯೂ ಹೋಗಲ್ಲ ಎಂದ ಯಡಿಯೂರಪ್ಪ | ಸಿಎಂ ಸ್ಥಾನಕ್ಕೆ ರಾಜೀನಾಮೆಯ ಬಳಿಕ ಮುಂದಿನ ಆಯ್ಕೆ ಏನು? - Mahanayaka
6:21 AM Thursday 12 - December 2024

ರಾಜ್ಯ ಬಿಟ್ಟು ಎಲ್ಲಿಯೂ ಹೋಗಲ್ಲ ಎಂದ ಯಡಿಯೂರಪ್ಪ | ಸಿಎಂ ಸ್ಥಾನಕ್ಕೆ ರಾಜೀನಾಮೆಯ ಬಳಿಕ ಮುಂದಿನ ಆಯ್ಕೆ ಏನು?

yediyurappa
26/07/2021

ಬೆಂಗಳೂರು: ನಾನು ಎರಡು ತಿಂಗಳ ಹಿಂದೆಯೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೆ. ಆದರೆ, 2 ವರ್ಷ ಅಧಿಕಾರ ಪೂರೈಸಿದ 26ರಂದು ರಾಜೀನಾಮೆ ನೀಡುವುದು ಸೂಕ್ತ ಎಂದು ಇಂದು ರಾಜೀನಾಮೆ ನೀಡಿದ್ದೇನೆ. ನನಗೆ ಯಾರ ಒತ್ತಡವೂ ಇಲ್ಲ. ಸ್ವತಃ ನಾನೇ ರಾಜೀನಾಮೆ ನೀಡಿದ್ದೇನೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.

ಇಂದು ರಾಜ್ಯಪಾಲರನ್ನು ಭೇಟಿ ಮಾಡಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ನಡ್ಡಾ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದರು.

ರಾಜ್ಯದ ಯಾವುದೇ ನಾಯಕರಿಗೆ ನೀಡದಷ್ಟು ಅವಕಾಶಗಳನ್ನು ನನಗೆ ನೀಡಿದ್ದಾರೆ. ನಾಲ್ಕು ಬಾರಿ ಸಿಎಂ ಮಾಡಿದ್ದಾರೆ. ಇಡೀ ದೇಶದಲ್ಲಿಯೇ 75 ವರ್ಷದ ಬಳಿಕವೂ ನನ್ನನ್ನು ಸಿಎಂ ಮಾಡಿದ್ದಾರೆ. ಇಂದು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ರಾಜೀನಾಮೆಯನ್ನು ಸ್ವೀಕರಿಸಿದ ರಾಜ್ಯಪಾಲರು ನನ್ನನ್ನು ಪ್ರೀತಿಯಿಂದ ಕಳುಹಿಸಿಕೊಟ್ಟಿದ್ದಾರೆ. ಅವರಿಗೆ ನನ್ನ ಧನ್ಯವಾದಗಳು. ಇನ್ನೂ ಇಡೀ ರಾಜ್ಯದ ಜನತೆಗೆ ಕೂಡ ನನ್ನ ಧನ್ಯವಾದಗಳು. ನನ್ನನ್ನು ನಿರಂತರವಾಗಿ ಗೆಲ್ಲಿಸಿದ ಶಿಕಾರಿಪುರ ಜನತೆಗೆ ಹಾಗೂ ಕಾರ್ಯಕರ್ತರಿಗೆ ಧನ್ಯವಾದಗಳು ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.

ಹೈಕಮಾಂಡ್ ನ ಒತ್ತಡದಿಂದ ರಾಜೀನಾಮೆ ನೀಡಿದ್ದೀರಾ? ಎಂಬ ಪತ್ರಕರ್ತರ ಪ್ರಶ್ನೆಗ ಉತ್ತರಿಸಿದ ಅವರು, ನನಗೆ ದೆಹಲಿಯಿಂದ ಯಾವುದೇ ಒತ್ತಡ ಬಂದಿಲ್ಲ. ಸ್ವತಃ ನಾನೇ ರಾಜೀನಾಮೆ ನೀಡಿದ್ದೇನೆ. ಬಿಜೆಪಿ ಪಕ್ಷವನ್ನು ಮತ್ತೊಮ್ಮೆ ರಾಜ್ಯದಲ್ಲಿ  ಅಧಿಕಾರಕ್ಕೆ ತರುವ ಸಂಕಲ್ಪವನ್ನು ಮಾಡಿ ನಾನು ಇಲ್ಲಿಂದ ತೆರಳುತ್ತಿದ್ದೇನೆ ಎಂದು ಅವರು ಹೇಳಿದರು.

ಮುಂದೆ ಯಾರು ಮುಖ್ಯಮಂತ್ರಿಯಾಗಬೇಕು ಎಂದು ಬಯಸುತ್ತೀರಿ? ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, ನಾನು ಯಾರ ಹೆಸರನ್ನೂ ಹೇಳುವುದಿಲ್ಲ. ಮುಂದೆ ಯಾರೇ ಸಿಎಂ ಆದರೂ ಅವರಿಗೆ ಸಂಪೂರ್ಣವಾದ ಸಹಕಾರವನ್ನು ನೀಡುತ್ತೇನೆ ಎಂದು ತಿಳಿಸಿದರು.

ನಿಮ್ಮನ್ನು ಬೇರೆ ರಾಜ್ಯದ ರಾಜ್ಯಪಾಲರಾಗಿ ನೇಮಕ ಮಾಡಲಾಗುತ್ತದೆಯೇ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವುದೇ ನನ್ನ ಗುರಿಯಾಗಿದೆ. ನಾನು ಬೇರೆ ರಾಜ್ಯದಲ್ಲಿ ಕೆಲಸ ಮಾಡುವುದಿಲ್ಲ. ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಇರುವಾಗ ನನಗೆ ಕೇಂದ್ರದಲ್ಲಿ ಸಚಿವರಾಗುವಂತೆ ಹೇಳಿದ್ದರು. ಆದರೆ ನಾನು ಅದನ್ನು ನಿರಾಕರಿಸಿದ್ದೆ. ನಾನು ಬೇರೆ ಯಾವುದೇ ರಾಜ್ಯದಲ್ಲಿ ಕೆಲಸ ಮಾಡಲು ಇಚ್ಛಿಸುವುದಿಲ್ಲ. ಕರ್ನಾಟಕದಲ್ಲಿಯೇ ಪಕ್ಷ ಸಂಘಟನೆಯಲ್ಲಿ ತೊಡಗುತ್ತೇನೆ ಎಂದು ಯಡಿಯೂರಪ್ಪ ತಿಳಿಸಿದರು.

ಇತ್ತೀಚಿನ ಸುದ್ದಿ