ಕಟು ವಾಕ್ಯಗಳಿಂದ ಯಡಿಯೂರಪ್ಪ ರಾಜೀನಾಮೆಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ!
ಬೆಂಗಳೂರು: ಸಿಎಂ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪನವರು ರಾಜೀನಾಮೆ ನೀಡಿದರೂ ರಾಜ್ಯಕ್ಕೆ ಯಾವುದೇ ಪ್ರಯೋಜನವಿಲ್ಲ. ಯಡಿಯೂರಪ್ಪನವರ ಸರ್ಕಾರ ಭ್ರಷ್ಟ ಸರ್ಕಾರವಾಗಿತ್ತು. ಮುಂದೆ ಸಿಎಂ ಆಗುವವರೂ ಭ್ರಷ್ಟಾಚಾರವನ್ನೇ ನಡೆಸುತ್ತಾರೆ. ಸಿಎಂ ಬದಲಾವಣೆಯಿಂದ ರಾಜ್ಯಕ್ಕೆ ಯಾವುದೇ ಪ್ರಯೋಜನವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸಿಎಂ ಸ್ಥಾನಕ್ಕೆ ಯಡಿಯೂರಪ್ಪನವರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಸುದ್ದಿವಾಹಿನಿಯೊಂದರ ಜೊತೆಗೆ ಮಾತನಾಡಿದ ಸಿದ್ದರಾಮಯ್ಯ, ಯಡಿಯೂರಪ್ಪ ರಾಜೀನಾಮೆಯ ಬಗ್ಗೆ ಯಾವುದೇ ಅನುಕಂಪವನ್ನೂ ತೋರದೇ ನಿರ್ದಾಕ್ಷಿಣ್ಯವಾಗಿ ಹೇಳಿಕೆ ನೀಡಿದರು. ಜೊತೆಗೆ ಯಡಿಯೂರಪ್ಪ ರಾಜೀನಾಮೆ ನೀಡಿದರು ಎಂದು ನಾನು ಸುಳ್ಳು ಹೇಳಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.
ಯಡಿಯೂರಪ್ಪ ನಾಲ್ಕು ಬಾರಿ ಸಿಎಂ ಆದರೂ, ಒಂದು ಬಾರಿ ಕೂಡ ಅಧಿಕಾರ ಪೂರ್ಣಗೊಳಿಸಿಲ್ಲ. ಯಡಿಯೂರಪ್ಪ ಸರ್ಕಾರ 30 ಪರ್ಸೆಂಟ್ ಸರ್ಕಾರವಾಗಿತ್ತು. ಸ್ವತಂತ್ರ ಭಾರತ ಕಂಡ ಅತ್ಯಂತ ಭ್ರಷ್ಟ ಸರ್ಕಾರ ಯಡಿಯೂರಪ್ಪನವರದ್ದು ಎಂದು ಸಿದ್ದರಾಮಯ್ಯ ಹೇಳಿದರು.
ಯಡಿಯೂರಪ್ಪ ರಾಜೀನಾಮೆ ನೀಡುತ್ತಾರೆ ಎನ್ನುವ ಮಾಹಿತಿ ನನಗೆ 6 ತಿಂಗಳ ಹಿಂದೆಯೇ ಇತ್ತು. ರಾಜ್ಯದಲ್ಲಿ ಬಿಜೆಪಿ ಬಹುಮತ ಸಾಧಿಸಿ ಸರ್ಕಾರ ನಡೆಸಿಲ್ಲ. 17 ಶಾಸಕರು ಬಿಜೆಪಿಗೆ ಹೋಗಿದ್ದರಿಂದಾಗಿ ಈಗ ಅವರ ಸರ್ಕಾರ ಬಂದಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ ಬಿಜೆಪಿ ಬಹುಮತ ಸಾಬೀತುಪಡಿಸಿ ಅಧಿಕಾರಕ್ಕೆ ಬಂದಿಲ್ಲ. ಹಿಂಬಾಗಿಲಿನ ಮೂಲಕವೇ ಅವರು ಅಧಿಕಾರಕ್ಕೆ ಬಂದಿದ್ದಾರೆ ಎಂದು ಸಿದ್ದರಾಮಯ್ಯ ಕುಟುಕಿದರು.
ಇನ್ನೂ ಯಡಿಯೂರಪ್ಪನವರ ಬಗ್ಗೆ ವೈಯಕ್ತಿವಾಗಿ ಏನಾದರೂ ಹೇಳಬೇಕೆಂದರೆ, ಅವರಿಗೆ ಆಯುಷ್ಯ ಆರೋಗ್ಯ ಸಿಗಲಿ, ಸುದೀರ್ಘ ಕಾಲ ಅವರು ಬಾಳಲಿ ಎಂದಷ್ಟೇ ಸಿದ್ದರಾಮಯ್ಯ ಹೇಳಿದರು.