ಅತ್ತೆಯನ್ನು ಪ್ರಿಯಕರನ ಜೊತೆ ಸೇರಿ ಮುಗಿಸಿದ ಸೊಸೆ | ಸಿನಿಮೀಯ ಶೈಲಿಯಲ್ಲಿ ಹತ್ಯೆ ನಡೆಸಿದ್ದ ಆರೋಪಿಗಳು - Mahanayaka
2:06 PM Friday 20 - September 2024

ಅತ್ತೆಯನ್ನು ಪ್ರಿಯಕರನ ಜೊತೆ ಸೇರಿ ಮುಗಿಸಿದ ಸೊಸೆ | ಸಿನಿಮೀಯ ಶೈಲಿಯಲ್ಲಿ ಹತ್ಯೆ ನಡೆಸಿದ್ದ ಆರೋಪಿಗಳು

ningamma
27/07/2021

ಬೆಂಗಳೂರು: ತುಮಕೂರು ಬಳಿಯ ರೈಲ್ವೇ ಹಳಿಯ ಮೇಲೆ ವೃದ್ಧೆಯ ಮುಂಡ ಹಾಗೂ ಬಾಗಲಕೋಟೆ ಜಿಲ್ಲೆಯ ಇಳಕಲ್ ನಲ್ಲಿ ಲಾರಿಯೊಂದರಲ್ಲಿ ರುಂಡ ಪತ್ತೆಯಾದ ಪ್ರಕರಣದ ಹಿಂದಿನ ರಹಸ್ಯ ಇದೀಗ ಬಯಲಾಗಿದ್ದು, ಅತ್ತೆಯನ್ನು ಸೊಸೆ ಭೀಕರವಾಗಿ ಹತ್ಯೆ ಮಾಡಿಸಿರುವುದು ಬೆಳಕಿಗೆ ಬಂದಿದೆ.

70 ವರ್ಷ ವಯಸ್ಸಿನ ನಿಂಗಮ್ಮ ಎಂಬವರು ಹತ್ಯೆಗೀಡಾಗಿರುವ ಮಹಿಳೆಯಾಗಿದ್ದಾರೆ. ಇವರ ಸೊಸೆ ಲತಾ ಈ ಹತ್ಯೆಗೆ ಸಂಚು ರೂಪಿಸಿದ ಪ್ರಮುಖ ಆರೋಪಿಯಾಗಿದ್ದು, ಈಕೆಯ ಪ್ರಿಯಕರ 42 ವರ್ಷ ವಯಸ್ಸಿನ ಬಿಎಂಟಿಸಿ ಚಾಲಕ ಎಂ.ಬಿ.ಬಾಲಚಂದ್ರ ಕೃತ್ಯ ನಡೆಸಿದವನಾಗಿದ್ದಾನೆ.

ಮೃತ ನಿಂಗಮ್ಮ ಅವರಿಗೆ ಇಬ್ಬರು ಪುತ್ರರು. ಈ ಪೈಕಿ ಓರ್ವ ಸಾಫ್ಟ್ ವೇರ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಇನ್ನೋರ್ವ ಪುತ್ರ ತೀರಿ ಹೋಗಿದ್ದಾನೆ. ಈತನ ಪತ್ನಿಯೇ ಆರೋಪಿ ಲತಾ ಆಗಿದ್ದಾಳೆ. ಪತಿ ತೀರಿ ಹೋದ ಬಳಿಕ ಅತ್ತೆಯನ್ನು ಚೆನ್ನಾಗಿ ನೋಡಿಕೊಂಡಿಲ್ಲ ಎನ್ನುವ ಕಾರಣಕ್ಕೆ ಹಿರಿಯರ ಸಮ್ಮುಖದಲ್ಲಿ ಪಂಚಾಯತಿ ಸೇರಿಸಿ, ಅತ್ತೆಗೆ 2 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಸೊಸೆಗೆ ತಾಕಿತು ಮಾಡಲಾಗಿತ್ತು. ಆದರೆ, ಸೊಸೆ 50 ಸಾವಿರ ಹಣವನ್ನು ಮಾತ್ರವೇ ನೀಡಿದ್ದಳು ಎನ್ನಲಾಗಿದೆ. ಇದಾದ ಬಳಿಕ 1.50 ಲಕ್ಷ ಹಣ ನೀಡುವಂತೆ ಅತ್ತೆ ಸೊಸೆಯ ಮೇಲೆ ಒತ್ತಡ ಹಾಕಿದ್ದಾಳೆ ಎಂದು ಹೇಳಲಾಗಿದೆ.


Provided by

ಇನ್ನೂ ಲತಾ ಪತಿಯ ಸಾವಿನ ಬಳಿಕ ಬಿಎಂಟಿಸಿ ಬಸ್ ಚಾಲಕ ಬಾಲಚಂದ್ರ ಜೊತೆಗೆ ಪ್ರೇಮ ಸಂಬಂಧ ಹೊಂದಿದ್ದಳು. ಈ ವಿಚಾರ ತಿಳಿದ ನಿಂಗಮ್ಮ ಊರಿಡೀ ಈ ಬಗ್ಗೆ ಕಥೆ ಹೆಣೆದು ಮನೆ ಮನೆಗೆ ಸ್ಟೋರಿ ಹೇಳುತ್ತಿದ್ದರು ಎಂದು ಆರೋಪಿಸಲಾಗಿದೆ. ಇದು ಸೊಸೆಗೆ ತೀವ್ರವಾದ ಕೋಪವನ್ನುಂಟು ಮಾಡಿತ್ತು. ಇದರ ಜೊತೆಗೆ ತನಗೆ ಹಣ ಕೊಡು ಎಂದು ಅತ್ತೆಯ ಒತ್ತಡ ಹೆಚ್ಚಿದಾಗ ಅತ್ತೆಯನ್ನು ಮುಗಿಸಬೇಕು ಎಂದು ಸೊಸೆ ಯೋಜನೆ ರೂಪಿಸಿದ್ದಾಳೆ ಎಂದು ಹೇಳಲಾಗಿದೆ.

ಅತ್ತೆಯನ್ನು ಮುಗಿಸುವ ಪ್ಲಾನ್ ಪ್ರಕಾರ, ಜುಲೈ 19ರಂದು ನಿಂಗಮ್ಮಗೆ ಪರಿಹಾರದ ಹಣವನ್ನು ನೀಡುವುದಾಗಿ ಹೇಳಿದ್ದ ಸೊಸೆ ಲತಾ, ತುಮಕೂರಿನಲ್ಲಿರುವ ಬಾಲಚಂದ್ರನ ಮನೆಗೆ ಕಳುಹಿಸಿದ್ದಳು. ಆ ಬಳಿಕ ಆಕೆ ತನ್ನ ತವರು ಮನೆ ಮಳವಳ್ಳಿಗೆ ತೆರಳಿದ್ದಳು. ಇತ್ತ ಹಣ ಪಡೆಯಲು ಬಂದಿದ್ದ ನಿಂಗಮ್ಮನನ್ನ ಬಾಲಚಂದ್ರ ಥಳಿಸಿ,  ಹಗ್ಗದಿಂದ ಕತ್ತು ಬಿಗಿದು ಹತ್ಯೆ ಮಾಡಿದ್ದು, ಬಳಿಕ ಮೃತದೇಹವನ್ನು ರೈಲು ಹಳಿಯ ಮೇಲೆ ಎಸೆದಿದ್ದ. ಇದೇ ಸಂದರ್ಭದಲ್ಲಿ ರೈಲು ಹರಿದ ಪರಿಣಾಮ ವೃದ್ಧೆಯ ರುಂಡ ಬೇರ್ಪಟ್ಟಿತ್ತು. ರುಂಡದ ಗುರುತು ಸಿಗಬಹುದು ಎನ್ನುವ ಕಾರಣಕ್ಕೆ ರುಂಡವನ್ನು  ಎತ್ತಿಕೊಂಡು ಹೋಗಿ ತುಮಕೂರು ಟೋಲ್ ಗೇಟ್ ಬಳಿ ಲಾರಿಯೊಂದರೊಳಗೆ ಎಸೆದಿದ್ದ. ಆ ಲಾರಿ ಇಳಕಲ್ ಗೆ ಹೋಗಿದ್ದು, ಈ ವೇಳೆ ಲಾರಿಯ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಘಟನೆಗೆ ಸಂಬಂಧಿಸಿದಂತೆ ಆರೋಪಿ ಬಾಲಚಂದ್ರನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕೃತ್ಯದ ಪ್ರಮುಖ ಆರೋಪಿ ಲತಾ ತಲೆಮರೆಸಿಕೊಂಡಿದ್ದು, ಆಕೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ ಎಂದು ರೈಲ್ವೆ ಎಡಿಜಿಪಿ ಭಾಸ್ಕರ್ ರಾವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ಸುದ್ದಿಗಳು…

ಷಡ್ಯಂತ್ರಗಳ ಬಾಣಗಳ ಹಾಸಿಗೆಯಲ್ಲಿ ಯಶಸ್ವಿಯಾಗಿ ಭೀಷ್ಮನನ್ನು ಮಲಗಿಸಿಬಿಟ್ಟಿರಿ!

ರಾಜ್ ಕುಂದ್ರಾ 20-25 ನಿಮಿಷದ ಸಾಫ್ಟ್ ಅಶ್ಲೀಲ ಚಿತ್ರ ಮಾಡುತ್ತಿದ್ದರು: ತನ್ವೀರ್ ಹಶ್ಮಿ

ಬಸವಣ್ಣಗೆ ಮಾಡಿದ ಅನ್ಯಾಯ ಯಡಿಯೂರಪ್ಪಗೂ ಆಯಿತು | ಕಣ್ಣೀರು ಹಾಕಿಸಿ ಅಧಿಕಾರದಿಂದ ಕೆಳಗಿಳಿಸಲಾಗಿದೆ | ಸತೀಶ್ ಜಾರಕಿಹೊಳಿ

ಯಾರಾಗಲಿದ್ದಾರೆ ಮುಂದಿನ ಸಿಎಂ? | ಅಮಿತ್ ಶಾ ಆತ್ಮೀಯರಾಗಿರುವ ಇವರಿಗೇ ಪಟ್ಟ ಕಟ್ಟುತ್ತಾರಾ?

ಮಠಾಧಿಪತಿಗಳಿಗೆ ಸಿಎಂ ಆಗುವ ಕನಸು | ಮಠಾಧಿಪತಿಗಳನ್ನು ಕರ್ನಾಟಕದ ಮುಖ್ಯಮಂತ್ರಿ ಮಾಡಿ ಎಂದ ಸ್ವಾಮೀಜಿ

ಇತ್ತೀಚಿನ ಸುದ್ದಿ