ವ್ಯಾಪಾರ ಮಾಡಲು ಬಂದ ಖಾಸಗಿ ಸಂಸ್ಥೆಗಳು ರಾಜಕೀಯ ನಿರ್ಧರಿಸುತ್ತಿವೆ | ಟ್ವಿಟ್ಟರ್ ವಿರುದ್ಧ ರಾಹುಲ್ ಗಾಂಧಿ ಅಸಮಾಧಾನ - Mahanayaka

ವ್ಯಾಪಾರ ಮಾಡಲು ಬಂದ ಖಾಸಗಿ ಸಂಸ್ಥೆಗಳು ರಾಜಕೀಯ ನಿರ್ಧರಿಸುತ್ತಿವೆ | ಟ್ವಿಟ್ಟರ್ ವಿರುದ್ಧ ರಾಹುಲ್ ಗಾಂಧಿ ಅಸಮಾಧಾನ

rahul gandhi
13/08/2021

ನವದೆಹಲಿ: ವ್ಯಾಪಾರ ಮಾಡಲು ಬಂದ ಖಾಸಗಿ ಸಂಸ್ಥೆ ರಾಜಕೀಯವನ್ನು ನಿರ್ಧರಿಸುವುದನ್ನು ರಾಜಕಾರಣಿಯಾಗಿ ನಾನು ಇಷ್ಟ ಪಡುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದು,  ಭಾರತದಲ್ಲಿ ಪ್ರಜಾಪ್ರಭುತ್ವ ದಾಳಿಗೆ ಒಳಗಾಗಿದೆ. ನಮಗೆ ಸಂಸತ್‍ ನಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ, ಮಾಧ್ಯಮಗಳನ್ನು ನಿಯಂತ್ರಿಸಲಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ತಮ್ಮ ಟ್ವಿಟರ್ ಖಾತೆಯನ್ನು ಸ್ಥಗಿತಗೊಳಿಸಿರುವುದರ ವಿರುದ್ಧ ರಾಹುಲ್ ಗಾಂಧಿ ಅವರು ವಿಡಿಯೋ ಮೂಲಕ ಸಂದೇಶ ಕಳುಹಿಸಿದ್ದು,  ನಮಗೆ ಅನಿಸಿದ್ದನ್ನು ನಾವು ಟ್ವಿಟರ್‍ನಲ್ಲಿ ಹಾಕುತ್ತಿದ್ದೆವು. ಅದರ ಅವಕಾಶವನ್ನು ನಿರಾಕರಿಸುವ ಮೂಲಕ ಖಾಸಗಿ ಕಂಪೆನಿ ರಾಜಕೀಯದ ಮಿತಿಯನ್ನು ನಿರ್ಧರಿಸಲು ಮುಂದಾಗಿದೆ ಎಂದು ಆರೋಪಿಸಿದ್ದಾರೆ. ಇದು ಕೇವಲ ರಾಹುಲ್ ಗಾಂಧಿ ಮೇಲಿನ ದಾಳಿಯಷ್ಟೆ ಅಲ್ಲ. ಪ್ರಜಾಪ್ರಭುತ್ವದ ಮೇಲಿನ ಆಕ್ರಮಣ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ನನ್ನ ಟ್ವಿಟ್ಟರ್ ಖಾತೆಯಲ್ಲಿ 19 ರಿಂದ 20 ದಶಲಕ್ಷ ಮಂದಿ ಅನುಪಾಲಕರಿದ್ದಾರೆ. ಖಾತೆಯನ್ನು ಬಂದ್ ಮಾಡುವ ಮೂಲಕ ಟ್ವಿಟರ್ ಅವರೆಲ್ಲರ ಅಭಿಪ್ರಾಯ ಹೇಳುವ ಹಕ್ಕನ್ನು ಧಮನ ಮಾಡಿದೆ. ವಾಸ್ತವವಾಗಿ ಟ್ವಿಟರ್ ನಿಷ್ಪಕ್ಷಪಾತ ವೇದಿಕೆಯಲ್ಲ. ಸರ್ಕಾರ ಹೇಳಿದಂತೆ ನಡೆದುಕೊಳ್ಳುವ ಮೂಲಕ ಪಕ್ಷಪಾತಿಯಾಗಿದೆ. ರಾಜಕೀಯವಾಗಿ ತಟಸ್ಥ ನಿಲುವು ಅನುಸರಿಸಬೇಕಿದ್ದ ಖಾಸಗಿ ಸಂಸ್ಥೆ ಸಂಪರ್ಕಾಧಿಕಾರಿಯಂತೆ ನಡೆದುಕೊಳ್ಳುವುದು, ಏಕಪಕ್ಷೀಯವಾಗಿ ರಾಜಕಾರಣವನ್ನು ವಿಶ್ಲೇಷಣೆ ಮಾಡುವುದು ಅಪಾಯಕಾರಿ ಎಂದು ರಾಹುಲ್‍ಗಾಂಧಿ ಎಚ್ಚರಿಕೆ ನೀಡಿದ್ದಾರೆ.

ದೆಹಲಿಯಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಯಾದ ದಲಿತ ಬಾಲಕಿಯ ಕುಟುಂಬದ ಪೋಟೋವನ್ನು ತಮ್ಮ ಖಾತೆಯಲ್ಲಿ ಪ್ರಕಟಿಸುವ ಮೂಲಕ ರಾಹುಲ್ ಗಾಂಧಿ ಸಂಸ್ಥೆಯ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಆಕ್ಷೇಪಿಸಿರುವ ಟ್ವಿಟರ್ ಖಾತೆಯನ್ನು ಬಂದ್ ಮಾಡಿದೆ. ಅತ್ಯಾಚಾರ ಸಂತ್ರಸ್ಥೆಯ ಗುರುತು ಬಹಿರಂಗ ಮಾಡಿರುವ ರಾಹುಲ್ ಗಾಂಧಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ದೆಹಲಿ ಹೈಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಅಲ್ಲಿ ಹೇಳಿಕೆ ದಾಖಲಿಸಿರುವ ಟ್ವಿಟರ್ ಖಾತೆಯನ್ನು ಜಪ್ತಿ ಮಾಡಿರುವುದನ್ನು ಒಪ್ಪಿಕೊಂಡಿದೆ.

ಇತ್ತೀಚಿನ ಸುದ್ದಿ