ತೆರೆದ ಗಾಯಗಳು ನಮ್ಮೊಳಗೇ ಇವೆ | ನಾ ದಿವಾಕರ
ಚರಿತ್ರೆಯ ಕಂದಕಗಳನ್ನು ತೋಡುತ್ತಲೇ ಸಮಕಾಲೀನ ಇತಿಹಾಸದ ಹೆಜ್ಜೆಗುರುತುಗಳನ್ನು ಅಳಿಸಿ ಹಾಕುತ್ತಾ ಹೊಸ ಇತಿಹಾಸವನ್ನು ಬರೆಯುವ ಒಂದು ವಿಕೃತ ಸಾಂಸ್ಕೃತಿಕ ಪರಂಪರೆಗೆ ಭಾರತ ಕರ್ಮಭೂಮಿಯಾಗಿ ಪರಿಣಮಿಸುತ್ತಿದೆ. ಚರಿತ್ರೆಯಲ್ಲಿ ಆಗಿಹೋದ ದುರಂತಗಳನ್ನು ಭವಿಷ್ಯದ ಸೌಧಗಳಿಗೆ ಅಡಿಗಲ್ಲುಗಳಂತೆ ಬಳಸುವ ಒಂದು ಚಾಣಾಕ್ಷ ತಂತ್ರದ ಶೋಧದಲ್ಲಿ #ಆತ್ಮನಿರ್ಭರಭಾರತ #ಆದರ್ಶಭಾರತವಾಗಿ ಹೊರಹೊಮ್ಮಲು ತುದಿಗಾಲಲ್ಲಿ ನಿಂತಿದೆ. 75ನೆಯ ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ 1947ರ ವಿಮೋಚನೆಯ ಕ್ಷಣಗಳಿಗಿಂತಲೂ ಆ ಸಂದರ್ಭದ ವಿಭಜನೆಯ ನೋವುಗಳನ್ನು ಸ್ಮರಿಸುವ ಬಗ್ಗೆ ಪ್ರಸ್ತಾಪಿಸಿ, ಆಗಸ್ಟ್ 14ರಂದು “ ವಿಭಜನೆಯ ಕರಾಳತೆಯ ಸ್ಮರಣೆಯ ದಿನ ” ಎಂದು ಆಚರಿಸುವಂತೆ ದೇಶ ಬಾಂಧವರಿಗೆ ಕರೆ ನೀಡಿದ್ದಾರೆ.
ಹಾಗೆ ನೋಡಿದರೆ ನಾವು ವಿಭಜನೆಯ ನೋವುಗಳನ್ನು ಮರೆತಿದ್ದೇವೆಯೇ ? ಭಾರತ ಇಬ್ಭಾಗವಾದ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡ ಮತ್ತು ನಿರಾಶ್ರಿತರಾದ 20 ಲಕ್ಷಕ್ಕೂ ಹೆಚ್ಚು ಅಮಾಯಕ ಜೀವಗಳನ್ನು ನಾವು ಈವರೆಗೂ ಸ್ಮರಿಸಿಯೇ ಇಲ್ಲ. ಆದರೆ ಈ ಸಾವು ನೋವುಗಳ ಹಿಂದಿನ ಸಾಂಸ್ಕೃತಿಕ ವಿಕೃತಿಗಳನ್ನು, ಸಾಮಾಜಿಕ ಕ್ರೌರ್ಯವನ್ನು ಮತ್ತು ಮತೀಯ ರಾಜಕಾರಣದ ಒಳಸುಳಿಗಳನ್ನು ಮರೆತು ಒಂದು ಸೌಹಾರ್ದಯುತ ಸಮಾಜವನ್ನು ಕಟ್ಟಲು ಭಾರತದ ಪ್ರಜೆಗಳಿಗೆ ಅವಕಾಶ ನೀಡಲಾಗಿದೆಯೇ ? ಇಂದಿಗೂ 21ನೆಯ ಶತಮಾನದ ನವ ಪೀಳಿಗೆಗೆ ವಿಭಜನೆ ಎಂದರೆ ಎರಡು ಭೌಗೋಳಿಕ ಪ್ರದೇಶಗಳು ಮತ್ತು ಎರಡು ಮತಧರ್ಮಗಳು ನೆನಪಾಗುವುದೇ ಹೊರತು, ಈ ಮತಧರ್ಮಗಳ ಸಂರಕ್ಷಕರ ತಣ್ಣನೆಯ ಕ್ರೌರ್ಯಕ್ಕೆ ಬಲಿಯಾದ ಜೀವಗಳು ನೆನಪಾಗುವುದೇ ಇಲ್ಲ.
“ ವಿಭಜನೆಯ ನೋವುಗಳನ್ನು ಮರೆಯಲು ಸಾಧ್ಯವೇ ಇಲ್ಲ,,,, ವಿಭಜನೆಯ ವಿಷಣ್ಣತೆಯನ್ನು ಸ್ಮರಿಸುವ ದಿನಾಚರಣೆಯ ಮೂಲಕ ನಮ್ಮೊಳಗಿನ ಸಾಮಾಜಿಕ ವಿಭಜನೆಗಳನ್ನು, ಅಸಾಮರಸ್ಯಗಳನ್ನು ಹೋಗಲಾಡಿಸಿ, ಏಕತೆಯ ಭಾವವನ್ನು ಮತ್ತಷ್ಟು ಬಲಪಡಿಸಿ, ಸಾಮಾಜಿಕ ಸೌಹಾರ್ದತೆ ಮತ್ತು ಮಾನವ ಅಭ್ಯುದಯವನ್ನು ,,,” ಸಾಧಿಸಲು ಆಗಸ್ಟ್ 14ನ್ನು ವಿಭಜನೆಯ ವಿಷಣ್ಣತೆಯ ಸ್ಮರಣಾ ದಿನವನ್ನಾಗಿ ಆಚರಿಸಲು ಪ್ರಧಾನಿಗಳು ಕರೆ ನೀಡಿದ್ದಾರೆ. ಆದರೆ ಇಂದಿಗೂ ಜೀವಂತವಾಗಿರುವ ವಿಭಜನೆಯ ಸಂದರ್ಭದ ಕೆಲವು ಜೀವಗಳಿಗಾದರೂ ಈ ನೆನಪುಗಳು, ಗಡಿಯ ಎರಡೂ ಬದಿಗಳಲ್ಲಿ ಜೀವಂತವಾಗಿಯೇ ಇವೆ. ತಮ್ಮವರನ್ನು ಕಳೆದುಕೊಂಡು ನಿರಾಶ್ರಿತರಾದವರು ಇಂದಿಗೂ ಆ ಕಳೆದುಹೋದ ಬಂಧಗಳ ಶೋಧದಲ್ಲಿ ತೊಡಗಿಯೇ ಇದ್ದಾರೆ. ಹಿಂದೂ ಅಥವಾ ಮುಸ್ಲಿಂ ಎಂಬ ವಿಕೃತ ರಂಗಿನ ಮಸೂರಗಳನ್ನು ಬದಿಗಿಟ್ಟು ಮಾನವೀಯತೆಯ ಕನ್ನಡಿಯ ಮುಂದೆ ನಿಂತು ಆತ್ಮಪರಿಶೋಧನೆಯಲ್ಲಿ ತೊಡಗುವ ಯಾವುದೇ ವ್ಯಕ್ತಿಗೆ ಈ ನೆನಪುಗಳು ಕರಾಳ ರಾತ್ರಿಗಳ ಭೀಕರ ಸ್ವಪ್ನವಾಗಿಯೇ ಕಾಣುತ್ತದೆ.
ನಾವು ಸ್ಮರಿಸುವುದಾದರೂ ಏನನ್ನು ಸ್ಮರಿಸಬೇಕು ? ಮೂರು ದಶಕಗಳಿಗೂ ಹೆಚ್ಚು ಕಾಲ ಸ್ವಾತಂತ್ರ್ಯ ಸಂಗ್ರಾಮದ ತ್ಯಾಗ ಬಲಿದಾನಗಳ ನಡುವೆಯೇ, ಸಮಾಜದ ಆಂತರ್ಯದಲ್ಲಿ ಮತೀಯ ದ್ವೇಷದ ಬೀಜಗಳನ್ನು ಬಿತ್ತುತ್ತಲೇ ಬಂದ ಹಿಂದೂ ಮತ್ತು ಮುಸ್ಲಿಂ ಮತೀಯವಾದಿಗಳ ಹುನ್ನಾರವನ್ನು ಸ್ಮರಿಸುವುದೋ ಅಥವಾ ಯಾವುದೇ ಕಾರಣಕ್ಕೂ ಹಿಂದೂಗಳು ಮತ್ತು ಮುಸ್ಲಿಮರು ಒಂದು ರಾಷ್ಟ್ರವಾಗಿರಲು ಸಾಧ್ಯವಿಲ್ಲ ಎಂದು ಘಂಟಾಘೋಷವಾಗಿ ಸಾರಿದ ಗೋಲ್ವಾಲ್ಕರ್, ಸಾವರ್ಕರ್, ಜಿನ್ನಾ ಮತ್ತಿತರ ಮತಾಂಧ ನಾಯಕರ ಫ್ಯಾಸಿಸ್ಟ್ ತಂತ್ರಗಾರಿಕೆಯನ್ನೋ ? ವಿಭಜನೆಯ ಸಂದರ್ಭದಲ್ಲಿ ನಡೆದ ಘಟನೆಗಳು ಒಬ್ಬ ವ್ಯಕ್ತಿ ಅಥವಾ ಒಂದು ಪಕ್ಷ-ಸಂಘಟನೆ ನಿಂತು ನಿರ್ದೇಶಿಸಿ ನಡೆಸಿದ ಹತ್ಯಾಕಾಂಡಗಳಲ್ಲ ಎನ್ನುವುದನ್ನೂ ನಾವು ನೆನಪಿಡಬೇಕಿದೆ.
ಯಾರನ್ನು ಕೊಲ್ಲಲಾಗುತ್ತಿದೆ, ಯಾರು ಕೊಲ್ಲುತ್ತಿದ್ದಾರೆ, ಏತಕ್ಕಾಗಿ ಕೊಲ್ಲಬೇಕು, ಯಾರಿಗಾಗಿ ಈ ಹತ್ಯಾಕಾಂಡ ಎಂದು ಯೋಚಿಸುವ ಕ್ಷಣಮಾತ್ರದ ಅವಕಾಶವನ್ನೂ ನೀಡದಂತೆ ನಡೆದ ಈ ಭೀಕರ ಘಟನೆಗಳ ಹಿಂದೆ ಇದ್ದುದು ವರುಷಗಳ ಕಾಲ ಜನಸಾಮಾನ್ಯರ ಮನಸಿನಲ್ಲಿ ಬಿತ್ತಲಾದ ವಿಷಬೀಜಗಳು. ಸಾದತ್ ಹಸನ್ ಮಾಂಟೋ ಅವರ ಕತೆಗಳಲ್ಲಿ, ಭೀಷ್ಮ ಸಹಾನಿಯವರ ತಮಸ್ ಕಾದಂಬರಿಯಲ್ಲಿ ಈ ವಿಷಣ್ಣತೆಯ ದುರಂತ ಚಿತ್ರಣವನ್ನು ಎಳೆಎಳೆಯಾಗಿ ಬಿಡಿಸಿಡಲಾಗಿದೆ. ಈ ವಿಷಬೀಜ ಬಿತ್ತನೆಯ ಕಾರ್ಯವನ್ನು ವಿಧಿಯೊಡನೆ ಅನುಸಂಧಾನ ಮಾಡಿದ ನಡುರಾತ್ರಿಯ ಗಳಿಗೆಯಲ್ಲೇ ನಿಲ್ಲಿಸಿಬಿಟ್ಟಿದ್ದರೆ, 75ನೆಯ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ನಮಗೆ ಕಳೆದ ಹೋದ ಜೀವಗಳು ‘ ಮತಧಾರ್ಮಿಕ ಅಸ್ಮಿತೆಯ ’ ಹೊದಿಕೆ ಇಲ್ಲದೆಯೇ ನೆನಪಾಗುತ್ತಿದ್ದವು. ಆದರೆ ಏಕೆ ಹಾಗಾಗಲಿಲ್ಲ ? ಇದು ಇಂದು ಸ್ಮರಣೆಯ ಹಪಹಪಿಯಲ್ಲಿರುವ ಮನಸುಗಳಿಗೆ ಹೊಳೆಯಬೇಕಾದ ಪ್ರಶ್ನೆ.
75 ವರ್ಷಗಳುದ್ದಕ್ಕೂ ಈ ವಿಷಬೀಜಗಳನ್ನು ಬಿತ್ತಲು ನೆರವಾಗುವಂತೆ ಭೂಮಿಯನ್ನು ಹದಗೊಳಿಸುವ ನೇಗಿಲ ಹೊತ್ತ ‘ ಯೋಗಿಗಳು ’ ಇಂದಿಗೂ ಸಕ್ರಿಯವಾಗಿದ್ದಾರಲ್ಲವೇ ? ದೇಶದ ಭೌಗೋಳಿಕ ವಿಭಜನೆ ಮರೆತು ಮುನ್ನಡೆಯಬೇಕಾದ ಒಂದು ಘಳಿಗೆಯಾಗಬೇಕಿತ್ತು. ವಿಭಜಿತ ಭೂ ಪ್ರದೇಶಗಳಲ್ಲಿ ಬದುಕಿ ಬಾಳುತ್ತಿರುವ ಕೋಟ್ಯಂತರ ಜೀವಿಗಳಿಗೆ ಭಾವನಾತ್ಮಕವಾಗಿ ಒಂದಾಗಿ ಬಾಳುವಂತಹ ಒಂದು ಸನ್ನಿವೇಶವನ್ನು ಸೃಷ್ಟಿಸುವ ನೈತಿಕ ಜವಾಬ್ದಾರಿ, ಸ್ವತಂತ್ರ ಭಾರತದ ಪ್ರಜೆಗಳಾದ ನಮ್ಮ ಮೇಲೆ ಇತ್ತಲ್ಲವೇ ? ಈ ದೇಶದ ಸಾರಥ್ಯ ವಹಿಸಿದ ಜನನಾಯಕರಲ್ಲಿ ಇರಬೇಕಿತ್ತಲ್ಲವೇ ? ಈ ನೈತಿಕತೆ ಇದ್ದುದರಿಂದಲೇ ಸಂವಿಧಾನ ಕರ್ತೃಗಳು, ವಿಭಜನೆಯನ್ನು ವಿರೋಧಿಸಿದ ಗಾಂಧಿ, ಆಜಾದ್, ಅಂಬೇಡ್ಕರ್, ಪಟೇಲ್, ನೆಹರೂ ಮುಂತಾದ ನಾಯಕರು ಭಾರತವನ್ನು ಒಂದು ಸಹಬಾಳ್ವೆಯ ಜಾತ್ಯತೀತ ರಾಷ್ಟ್ರವನ್ನಾಗಿ ರೂಪಿಸಲು ಸಜ್ಜಾಗಿದ್ದರು.
ಆದರೆ ಈ ಸಾರಥಿಗಳು ನಡೆಸಲಿಚ್ಚಿಸಿದ ಸರ್ವಸ್ವತಂತ್ರ ಭಾರತದ ಭವ್ಯ ರಥವನ್ನು ಮುನ್ನಡೆಸುವಾಗ ಮುಳ್ಳು ಬೇಲಿಗಳನ್ನು ನಿರ್ಮಿಸಿದವರು, ಕಂದಕಗಳನ್ನು ತೋಡಿದವರು, ಅಡ್ಡಗೋಡೆಗಳನ್ನು ಕಟ್ಟಿದವರು, ಈ ಮಾರ್ಗದಲ್ಲೇ ತಮ್ಮ ಮತಧಾರ್ಮಿಕ ನೇಗಿಲುಗಳನ್ನು ಬಳಸಿ ವ್ಯವಸ್ಥಿತವಾಗಿ ದ್ವೇಷ ಬೀಜಗಳನ್ನು ಬಿತ್ತನೆ ಮಾಡಿದ ‘ ನೇಗಿಲ ಯೋಗಿಗಳು ’ ನಮ್ಮ ನಡುವೆ ಇಂದಿಗೂ ಜೀವಂತವಾಗಿ, ಸಕ್ರಿಯವಾಗಿದ್ದಾರೆ. ವಿಭಜನೆಗೆ ಮುನ್ನ ಜನಸಾಮಾನ್ಯರ ಮನಸಿನಲ್ಲಿ ಮತಾಂಧತೆ ಮತ್ತು ಮತೀಯ ದ್ವೇಷದ ಭಾವನೆಗಳನ್ನು ಬಿತ್ತಿದ ಶಕ್ತಿಗಳೇ ಇಂದಿಗೂ ಸಹ ಅಧಿಕಾರ ಪೀಠಗಳಲ್ಲಿ, ಆಡಳಿತ ವ್ಯವಸ್ಥೆಯಲ್ಲಿ, ಸಾಂಸ್ಕೃತಿಕ ನೆಲೆಗಳಲ್ಲಿ ಮತ್ತು ಸಾಮಾಜಿಕ ವಲಯದಲ್ಲಿ ಹೆಚ್ಚು ಕ್ರಿಯಾಶೀಲವಾಗಿವೆ. ಭೌಗೋಳಿಕ ರಾಷ್ಟ್ರದ ಗೌರವವನ್ನು, ಅಖಂಡತೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಭಾವನಾತ್ಮಕ ಸಂಕೇತಗಳಾಗಿರಬೇಕಾದ ‘ಭಾರತಮಾತಾ ಕಿ ಜೈ ’ ಎಂಬ ಘೋಷಣೆ, ದೇಶದ ಏಕತೆಯನ್ನು ಬಿಂಬಿಸಬೇಕಾದ ತ್ರಿವರ್ಣ ಧ್ವಜ ಅಥವಾ ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷ್ ವಸಾಹತುಶಾಹಿಯ ವಿರುದ್ಧ ಒಂದು ಪ್ರಬಲ ಅಸ್ತ್ರವಾಗಿದ್ದ ‘ ವಂದೇಮಾತರಂ ’ ಎನ್ನುವ ಘೋಷಣೆ ಇಂದು ದ್ವೇಷ ಭಾವನೆಗಳನ್ನು ಬಿತ್ತುವ ಕಾರ್ಖಾನೆಗಳಲ್ಲಿ ಉತ್ಪಾದಿಸುವ ಸರಕುಗಳಾಗಿ ಪರಿಣಮಿಸಿವೆ.
ಈ ಸರಕುಗಳನ್ನು ಕಳೆದ ಏಳು ದಶಕಗಳಲ್ಲಿ ಎಷ್ಟು ವ್ಯವಸ್ಥಿತವಾಗಿ ಬಳಸಲಾಗುತ್ತಿದೆ ಎಂದು ಒಮ್ಮೆ ಯೋಚಿಸಿದರೂ ನಾವು ಆಗಸ್ಟ್ 14ನ್ನು ಏಕೆ ಸ್ಮರಿಸಬೇಕು ಎಂದು ಅರ್ಥವಾಗಿಬಿಡುತ್ತದೆ. ಸಾಮಾಜಿಕ ಸೌಹಾರ್ದತೆಯನ್ನು ಬಯಸುವ ಮನಸುಗಳಿಗೆ ಸಮಾಜದ ಆಂತರ್ಯದ ಪರಿವೆ ಇರಬೇಕು, ಭಾರತೀಯ ಸಮಾಜದ ಬಹುತ್ವದ ಒಳಸುಳಿಗಳು ಅರಿವಿರಬೇಕು. ಈ ಪರಿಜ್ಞಾನ ಇದ್ದಿದ್ದರೆ ಪೌರತ್ವ ತಿದ್ದುಪಡಿ ಕಾಯ್ದೆಯಂತಹ ಒಂದು ಶಾಸನ ಜಾರಿಯಾಗುತ್ತಲೇ ಇರಲಿಲ್ಲ. ನಡೆದು ಬಂದ ಹಾದಿಯತ್ತ ಒಮ್ಮೆ ತಿರುಗಿ ನೋಡಿದರೆ ನಮಗೆ ಕಳೆದ ಏಳು ದಶಕಗಳಲ್ಲಿ ಮತಾಂಧತೆ ಮತ್ತು ಮತೀಯ ದ್ವೇಷಕ್ಕೆ ಬಲಿಯಾದ ಸಾವಿರಾರು ಜೀವಗಳು ಕಣ್ಣೆದುರು ನಿಲ್ಲಬೇಕಲ್ಲವೇ ? ಈ ಜೀವಗಳಲ್ಲಿ ಮತಧಾರ್ಮಿಕ ಅಸ್ಮಿತೆಗಳನ್ನು ಹೆಕ್ಕಿ ತೆಗೆದು ನೋಡುವ ಒಂದು ವಿಕೃತಿಯನ್ನೂ ನಾವು ನೋಡಿದ್ದೇವೆ.
ಹಾಗಾಗಿಯೇ 1961ರ ಜಬಲ್ಪುರ ಗಲಭೆಗಳು, 1969ರ ಅಹಮದಾಬಾದ್, 1980ರ ಮೊರಾದಾಬಾದ್, 1984ರ ಭಿವಂಡಿ, ಸಿಖ್ ವಿರೋಧಿ ಗಲಭೆಗಳು, 1989ರ ಭಗಲ್ಪುರ, 1989-92ರ ಅಯೋಧ್ಯಾಪರ್ವ, 1993ರ ಮುಂಬಯಿ, 2002ರ ಗುಜರಾತ್, 2015ರ ಮುಝಫರ್‍ನಗರ ಮತ್ತು 2021ರ ದೆಹಲಿ ನಮಗೆ ಶಾಶ್ವತ ಸ್ಮಾರಕಗಳಾಗಿ ನಿಂತುಬಿಡುತ್ತವೆ. ಈ ಕೋಮು ಗಲಭೆಗಳಲ್ಲಿ ಮಡಿದವರೆಷ್ಟು, ನಿರಾಶ್ರಿತರಾದವರೆಷ್ಟು, ನೋವುಂಡವರ ಮತಧಾರ್ಮಿಕ ಅಸ್ಮಿತೆಗಳೇನು ಎಂದು ಯೋಚಿಸುವ ಮುನ್ನ ಈ ಗಲಭೆಗಳ ಹಿಂದಿನ ಮತೀಯ ಮನಸ್ಥಿತಿಗಳಿಗೂ, ವಿಭಜನೆಗೆ ಮುನ್ನ ಮಡುಗಟ್ಟಿದ್ದ ಕೋಮು ದ್ವೇಷದ ಮನಸ್ಥಿತಿಗೂ ಏನು ವ್ಯತ್ಯಾಸವಿದೆ ಎಂದು ಯೋಚಿಸಿದರೆ ಬಹುಶಃ ನಮಗೆ ಆಗಸ್ಟ್ 14 ವಿಭಿನ್ನವಾಗಿಯೇ ಕಾಣುತ್ತದೆ.
ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸಂಭವಿಸಿದ ಈ ಹೃದಯವಿದ್ರಾವಕ ಅಮಾನುಷ ಕೃತ್ಯಗಳಿಗೆ ನಾವು ಯಾರನ್ನು ಹೊಣೆ ಮಾಡಿದ್ದೇವೆ ? 1961ರಿಂದ 2021ರವರೆಗೆ ನಡೆದ ಭೀಕರ ಹತ್ಯೆಗಳಿಗೆ ಯಾರನ್ನು ದೂಷಿಸಿದ್ದೇವೆ ? ಯಾವ ನ್ಯಾಯ ವ್ಯವಸ್ಥೆ ಈ ಗಲಭೆಗಳಲ್ಲಿ ಮಡಿದ ಅಸಂಖ್ಯಾತ ಅಮಾಯಕ ಜೀವಗಳಿಗೆ, ನಿರಾಶ್ರಿತರಾದ ಕುಟುಂಬಗಳಿಗೆ ಸಾಂತ್ವನ ನೀಡಿದೆ ? ತಿಲಕ, ಟೊಪ್ಪಿ, ಗಡ್ಡ, ಕುಂಕುಮ, ತ್ರಿಶೂಲ, ಲಾಂಗು, ನಾಡಬಾಂಬುಗಳು ಸಾವಿನ ಸಂಕೇತಗಳಾಗಿ ವಿಜೃಂಭಿಸಲಾದ ಈ ಗಲಭೆಗಳ ಹಿಂದಿನ ಮನಸ್ಥಿತಿಯಾದರೂ ಯಾವುದು ? ಈ ಮನಸ್ಥಿತಿಗೆ ನಾವು ಒಂದು ಮತಧಾರ್ಮಿಕ ಸ್ಥಾವರ ರೂಪ ನೀಡಲು ಸಾಧ್ಯವೇ ಯೋಚಿಸೋಣ. ಒಂದು ತುಂಡು ದನದ ಮಾಂಸಕ್ಕಾಗಿ ಜೀವತೆತ್ತ ನಿದರ್ಶನ ಇತ್ತೀಚಿನದೇ ಅಲ್ಲವೇ ? ಒಂದು ಪ್ರಾದೇಶಿಕ ಅಸ್ಮಿತೆಗಾಗಿ, ಮತಧಾರ್ಮಿಕ ಅಸ್ಮಿತೆಗಾಗಿ ಜೀವ ತೆರಬೇಕಾದ ಒಂದು ವಿಷಣ್ಣತೆಯನ್ನು ಕಳೆದ ನಾಲ್ಕು ದಶಕಗಳಲ್ಲಿ ವ್ಯವಸ್ಥಿತವಾಗಿ ಕಾಣುತ್ತಲೇ ಬಂದಿದ್ದೇವೆ ಅಲ್ಲವೇ ?
ರೈಲಿನಲ್ಲಿ ಸುಟ್ಟು ಭಸ್ಮವಾದ 57 ಜೀವಗಳಾಗಲಿ, ನಂತರ 2002ರಲ್ಲಿ ಹೆಕ್ಕಿಹೆಕ್ಕಿ ತೆಗೆಯಲಾದ ಸಾವಿರಾರು ಜೀವಗಳಾಗಲೀ, ಚಾರಿತ್ರಿಕ ಸ್ಥಾವರಗಳಿಗಾಗಿ ಬಲಿಯಾದ ಜಂಗಮ ಜೀವಗಳಾಗಲೀ ಅಥವಾ ರಾಜಕೀಯ ದ್ವೇಷಕ್ಕೆ, ಅಧಿಕಾರ ರಾಜಕಾರಣದ ಸ್ವಾರ್ಥಕ್ಕೆ ಬಲಿಯಾದ ಸಾವಿರಾರು ಅಮಾಯಕ ಜೀವಗಳಾಗಲಿ, ಇವಾವುದೂ ನಮ್ಮ ಅಂತಃಪ್ರಜ್ಞೆಯನ್ನು ಕಲಕುತ್ತಲೇ ಇಲ್ಲವಲ್ಲಾ ಏಕೆ ? ಏಕೆಂದರೆ ‘ ಅವರು ’ ಸಾಯಲೆಂದೇ ಹುಟ್ಟಿದ್ದಾರೆ ಅಥವಾ ‘ ಬದುಕುವ ’ ಅರ್ಹತೆಯನ್ನು ಕಳೆದುಕೊಂಡಿದ್ದಾರೆ. ಕಾಶ್ಮೀರ, ಪಂಜಾಬ್ ಮತ್ತು ಈಶಾನ್ಯ ರಾಜ್ಯಗಳಲ್ಲಿ ಈ ಸಾಂಸ್ಕೃತಿಕ ವಿಕೃತಿಯ ವಿಭಿನ್ನ ಆಯಾಮಗಳನ್ನು ನಾವು ಗಮನಿಸುತ್ತಲೇ ಬಂದಿದ್ದೇವೆ. ಏಕೆಂದರೆ ವಿಭಜನೆಯ ಸಂದರ್ಭದಲ್ಲಿ ಬಿತ್ತಲಾದ ದ್ವೇಷ ಬೀಜಗಳು ಈಗ ಹೆಮ್ಮರಗಳಾಗಿ ಬೆಳೆದುನಿಂತಿವೆ. ಈ ಬೀಜದಿಂದಲೇ ಕುಡಿಯೊಡೆದ ಸಸಿಗಳು ಮೂರು ದಶಕಗಳ ಹಿಂದೆ ಮೊಳಕೆಯೊಡೆದು ಈ ವಿಷವೃಕ್ಷಗಳಾಗಿ ಬೆಳೆದುನಿಂತಿವೆ. ಈ ಮನಸ್ಥಿತಿ ಒಂದು ಸಂಸ್ಕೃತಿಯ ರೂಪ ಪಡೆದಿರುವುದರಿಂದಲೇ ಚುನಾಯಿತ ಜನಪ್ರತಿನಿಧಿಗಳೂ ಸಹ ‘ ಅನ್ಯರನ್ನು ’ ಗುಂಡಿಟ್ಟು ಕೊಲ್ಲಲು ನಿರ್ಭೀತಿಯಿಂದ ಆಜ್ಞಾಪಿಸುತ್ತಾರೆ, ಯಾವುದೇ ಶಿಕ್ಷೆಗೊಳಗಾಗದೆ ! ಇದನ್ನು ಹೇಗೆ ಅರ್ಥೈಸುವುದು ?
75 ವರ್ಷಗಳಲ್ಲಿ ಸ್ವತಂತ್ರ ಭಾರತ ಕಂಡಿರುವ ಭೀಕರ ಹತ್ಯಾಕಾಂಡಗಳನ್ನು ನೆನೆಯುವಾಗ ನಾವು ಮರೆಯಬಾರದ ಕೆಲವು ವಿಷಣ್ಣತೆಗಳೂ ನಮಗೆ ನೆನಪಾಗಬೇಕಲ್ಲವೇ ? ನೆಲ್ಲಿ, ತ್ಸುಂಡೂರು, ಬತಾನಿತೊಲ, ಕರಂಚೇಡು, ಲಕ್ಷ್ಮಣಪುರ ಬಾತೆ, ತೆಲಂಗಾಣ, ಕಂಬಾಲಪಲ್ಲಿ, ಖೈರ್ಲಾಂಜಿ ಇತ್ತೀಚಿನ ಹಾಥ್ರಸ್ ವರೆಗಿನ ಜಾತಿ ದೌರ್ಜನ್ಯದ ಕಥನಗಳನ್ನು ನೆನೆಯದೆಯೇ ಸಾಮಾಜಿಕ ಸೌಹಾರ್ದತೆಯ ಬಗ್ಗೆ ಮಾತನಾಡಲಾಗುವುದಿಲ್ಲ ಅಲ್ಲವೇ ? ಈ ಜಾತಿ ದೌರ್ಜನ್ಯಗಳ ನಿರಂತರತೆಯನ್ನು ಸಂಖ್ಯೆಗಳ ಚೌಕಟ್ಟಿನಲ್ಲಿ ನೋಡಲಾಗುವುದಿಲ್ಲ.. ಏಕೆಂದರೆ ಈ ದೌರ್ಜನ್ಯಗಳ ಹಿಂದೆ ಒಂದು ವಿಭಜಕ ಮನಸ್ಥಿತಿ ಇದೆ. ನಡುರಾತ್ರಿಯಲ್ಲಿ ಸುಟ್ಟುಹಾಕಲಾದ ಹಾಥ್ರಸ್‍ನ ಸಂತ್ರಸ್ಥೆ ಒಂಟಿಯಾದರೂ ಆಕೆ ಅನುಭವಿಸಿದ ಯಾತನೆ, ದೌರ್ಜನ್ಯ, ನೋವು ಒಂದು ಸಮುದಾಯವನ್ನು ಕಾಡುವಂತಹುದು. ಅಕ್ಲಾಖ್ ಏಕಾಂಗಿಯಾದರೂ ಆತನ ಹತ್ಯೆಯ ಹಿಂದೆ ಇಡೀ ಒಂದು ಸಮಾಜವನ್ನು, ಆ ಸಮಾಜದ ಆಹಾರ ಸಂಸ್ಕೃತಿಯನ್ನು ನಿರಾಕರಿಸುವ ಇಂಗಿತ ಇದೆ ಎನ್ನುವುದನ್ನು ಗಮನಿಸಬೇಕು.
ಈ ವಿಭಜಕ ಮನಸ್ಥಿತಿಯನ್ನು ನಾವು ಕೇವಲ ಮತಧಾರ್ಮಿಕ ಚೌಕಟ್ಟಿನಲ್ಲೇ ನೋಡುತ್ತಾ ಹೋದರೆ, ಜಾತಿ ದೌರ್ಜನ್ಯಗಳಿಗೆ ದಿನನಿತ್ಯ ಬಲಿಯಾಗುತ್ತಲೇ ಇರುವ ಅಸಂಖ್ಯಾತ ಅಮಾಯಕ ಜೀವಗಳನ್ನು ನಮ್ಮ ‘ ಸಾಮಾಜಿಕ ಸೌಹಾರ್ದತೆ ’ಯ ಚೌಕಟ್ಟಿನಿಂದ ಹೊರಗಿಟ್ಟು ನೋಡಿದಂತೆಯೇ ಆಗುತ್ತದೆ. ಸ್ವತಂತ್ರ ಭಾರತದಲ್ಲಿ ಅಸಹಾಯಕ ಜನಸಮುದಾಯಗಳು, ಅಸುರಕ್ಷಿತ ಅಮಾಯಕ ಪ್ರಜೆಗಳು ನಿರಂತರವಾಗಿ ದೌರ್ಜನ್ಯಕ್ಕೊಳಗಾಗುತ್ತಲೇ ಇದ್ದಾರೆ. ಹಾಗೆಯೇ ಈ ದೌರ್ಜನ್ಯದ ವಿರುದ್ಧ, ಅಮಾನುಷ ಪ್ರವೃತ್ತಿಯ ವಿರುದ್ಧ ದನಿ ಎತ್ತುವ ಸ್ವತಂತ್ರ ಜೀವಿಗಳು ಹತ್ಯೆಯಾಗುತ್ತಲೇ ಇದ್ದಾರೆ. ಶಂಕರ್ ಗುಹ ನಿಯೋಗಿಯಿಂದ ಗೌರಿ ಲಂಕೇಶ್‍ವರೆಗೆ, ಸ್ಟ್ಯಾನ್ ಸ್ವಾಮಿಯವರೆಗೆ ಇದು ಕಂಡುಬರುತ್ತದೆ.
ಈ ಸಾವುಗಳನ್ನು ಸಂಭ್ರಮಿಸುವ ಮತ್ತು ಈ ದೌರ್ಜನ್ಯ ಮತ್ತು ಹತ್ಯೆಗಳಿಗೆ ಮೌನ ಸಮ್ಮತಿ ಸೂಚಿಸುವ ಸಾಂಸ್ಕೃತಿಕ ರಾಜಕಾರಣದ ತಣ್ಣನೆಯ ಕ್ರೌರ್ಯವನ್ನು ಖಂಡಿಸದೆ ಹೋದರೆ ನಮಗೆ ವಿಭಜನೆಯ ವಿಷಣ್ಣತೆಯನ್ನಾಗಲೀ, ನೋವುಗಳನ್ನಾಗಲೀ ಸ್ಮರಿಸುವ ನೈತಿಕತೆಯೇ ಇರಲಾರದು. ’ ನಮ್ಮವರಲ್ಲದವರನ್ನು ’ ಅಥವಾ ‘ ಅನ್ಯರನ್ನು ’ ಸಾವಿನ ತುದಿಯಲ್ಲೇ ಇರಿಸುವ ಒಂದು ವಿಕೃತ ಸಂಸ್ಕೃತಿಯನ್ನು ಪೋಷಿಸುತ್ತಲೇ ನಾವು 74 ವರ್ಷಗಳ ಸ್ವಾತಂತ್ರ್ಯವನ್ನು ಅನುಭವಿಸಿರುವುದೂ ಕಟುವಾಸ್ತವ. ಈ ಅಮಾನುಷ ಸಂಸ್ಕೃತಿಯನ್ನು ಇಲ್ಲವಾಗಿಸುವ ಮೂಲಕ ಮಾತ್ರವೇ ನಾವು ‘ ವಿಭಜನೆಯ ವಿಷಣ್ಣತೆಗೆ, ನೋವುಗಳಿಗೆ ’ ಮಾನವೀಯ ನೆಲೆಯಲ್ಲಿ ಸ್ಪಂದಿಸಲು ಸಾಧ್ಯ.
ಆಗ ಮಾತ್ರವೇ ನಮಗೆ ಈ ನೋವುಗಳನ್ನು ಸ್ಮರಿಸುವ ನೈತಿಕ ಹಕ್ಕು ಇರಲೂ ಸಾಧ್ಯ. ಇದು ಆತ್ಮಸಾಕ್ಷಿಯ ಪ್ರಶ್ನೆ. ಆತ್ಮಸಾಕ್ಷಿ ಎನ್ನುವುದೊಂದಿದ್ದರೆ #ಆತ್ಮನಿರ್ಭರ ಭಾರತವನ್ನು #ಆದರ್ಶಭಾರತವನ್ನಾಗಿ ಮಾಡಲು ಆತ್ಮಘಾತುಕ ಮನಸುಗಳ ನಿರ್ಮಲೀಕರಣ ಆಗಲೇಬೇಕಿದೆ. ನಾವು ಸ್ಮರಿಸಬೇಕಿರುವುದು ಆಗಸ್ಟ್ 14 ಒಂದನ್ನೇ ಅಲ್ಲ. ಸ್ಮರಿಸಲು ಹಲವು ದಿನಾಂಕಗಳಿವೆ. ಸ್ವತಂತ್ರ ಭಾರತದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಈ ಕರಾಳ ದಿನಗಳು ಕಣ್ಣಿಗೆ ರಾಚುತ್ತಲೇ ಇರುತ್ತವೆ. ನಾವು ತೊಟ್ಟ ಮಸೂರಗಳು ಸ್ವಚ್ಚವಾಗಿರಬೇಕಷ್ಟೇ.
ನಾ ದಿವಾಕರ