ಗಣೇಶನ ಹಬ್ಬದಂದು ಗಬ್ಬೆದ್ದು ನಾರಲಿದೆ ಬೆಂಗಳೂರು! | ಸ್ವಚ್ಛತಾ ಸೈನಿಕರು ಕೊಟ್ರು ನೋಡಿ ಶಾಕ್! - Mahanayaka
12:11 PM Wednesday 5 - February 2025

ಗಣೇಶನ ಹಬ್ಬದಂದು ಗಬ್ಬೆದ್ದು ನಾರಲಿದೆ ಬೆಂಗಳೂರು! | ಸ್ವಚ್ಛತಾ ಸೈನಿಕರು ಕೊಟ್ರು ನೋಡಿ ಶಾಕ್!

poura karmika
06/09/2021

ಬೆಂಗಳೂರು: ಸ್ವಚ್ಛ ಭಾರತದ ಹೆಸರಿನಲ್ಲಿ ಕಂಡ ಕಂಡವರಿಗೆ ಹಣ ಸುರಿಯುವ ಬದಲು ಪೌರ ಕಾರ್ಮಿಕರ ಬೇಡಿಕೆಗಳನ್ನು ಸರ್ಕಾರ ಈಡೇರಿಸುತ್ತಿದ್ದರೆ, ಇಂದು ಬೆಂಗಳೂರಿಗೆ ಈ ಸ್ಥಿತಿ ಬರುತ್ತಿರಲಿಲ್ಲ. ಒಂದು ದಿನ ಪೌರ ಕಾರ್ಮಿಕರು ಕೆಲಸ ಮಾಡದಿದ್ದರೆ, ಬೆಂಗಳೂರಿನಂತಹ ನಗರಗಳ ಸ್ಥಿತಿ ಹೇಗಿರ ಬಹುದು ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ. ಇದೀಗ ಅಂತಹ ದಿನ ಬಹಳ ಹತ್ತಿರವಾಗಿದೆ. ಗಣೇಶನ ಹಬ್ಬದಂದು ಇಡೀ ಬೆಂಗಳೂರು ಗಬ್ಬೆದ್ದು ನಾರಲಿದೆ.

ಹೌದು…! ಗಣೇಶ ಚತುರ್ಥಿ ಆರಂಭದ ಮೂರು ದಿನಗಳ ಮುಂಚಿತವಾಗಿ ಅಂದರೆ ನಾಳೆಯಿಂದ, ಸುಮಾರು 17,200ಕ್ಕೂ ಅಧಿಕ ಬಿಬಿಎಂಪಿ ಪೌರ ಕಾರ್ಮಿಕರು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ. ಹೀಗಾಗಿ ಬೆಂಗಳೂರು ಹಬ್ಬದ ದಿನ  ಗಬ್ಬೆದ್ದು ನಾರುವ ಲಕ್ಷಣಗಳು ಬಹುತೇಕ ಖಚಿತ ಎಂದೇ ಹೇಳಲಾಗುತ್ತಿದೆ.

ನಗರದಲ್ಲಿ ಕಚೇರಿಗಳಲ್ಲಿ ಕುಳಿತು ಕೆಲಸ ಮಾಡುವ ಸಿಬ್ಬಂದಿಗಿಂತ ಪೌರ ಕಾರ್ಮಿಕರು ಪ್ರಮುಖವಾಗಿದ್ದಾರೆ. ಸ್ವಚ್ಛತಾ ಸೈನಿಕರಾದ ನಮಗೆ ಕನಿಷ್ಟ ಸೌಲಭ್ಯಗಳನ್ನು ಪಾಲಿಕೆ ನೀಡುತ್ತಿಲ್ಲ. ಕಾಯಂ ನೇಮಕಾತಿ, ಆರೋಗ್ಯ ಕಾರ್ಡ್ ಸೌಲಭ್ಯ ಮತ್ತು ಗುಣಮಟ್ಟದ ಸಮವಸ್ತ್ರ ವಿತರಣೆ ಬಗ್ಗೆ ಪಾಲಿಕೆ ಮುಖ್ಯ ಆಯುಕ್ತರಿಗೆ ಮನವಿ ಮಾಡಿದರೂ ಕಿವಿಗೊಡುತ್ತಿಲ್ಲ. ಹೀಗಾಗಿ ನಾಳೆ ಆರ್.ಸುಬ್ಬಣ್ಣ ವೃತ್ತ (ಮೌರ್ಯ ಸರ್ಕಲ್) ಮತ್ತು ಪಾಲಿಕೆ ಕೇಂದ್ರ ಕಚೇರಿಯಲ್ಲಿ ತಲಾ 300 ಮಂದಿ ಮುಷ್ಕರ ಆರಂಭಿಸಲಿದ್ದೇವೆ. ಉಳಿದ ಕಾರ್ಮಿಕರು ಸ್ವಚ್ಛತಾ ಕಾರ್ಯ ಮಾಡದೆ ವಾರ್ಡ್ ಗಳಲ್ಲಿ ಬೇಡಿಕೆ ಈಡೇರುವವರೆಗೆ ಮುಷ್ಕರ ನಡೆಸಲಿದ್ದಾರೆ ಎಂದು ಬೆಂಗಳೂರು ನಗರ ನೇರಪಾವತಿ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಪಿ.ಎನ್. ಮುತ್ಯಾಲ ತಿಳಿಸಿದ್ದಾರೆ.

ಪೌರ ಕಾರ್ಮಿಕರ ಬೇಡಿಕೆಗಳೇನು?

ಆರೋಗ್ಯ ಸುರಕ್ಷತೆಗಾಗಿ ಹೆಲ್ತ್‍ ಕಾರ್ಡ್ ಸೌಲಭ್ಯ, 60 ವರ್ಷ ಮೇಲ್ಪಟ್ಟು ನಿವೃತ್ತಿ ಹೊಂದಿದವರಿಗೆ ಪಿಂಚಣಿ, ಎಲ್ಲ ವಾರ್ಡ್ ಗಳಲ್ಲಿ ಮಸ್ಟರಿಂಗ್ ಕೇಂದ್ರ (ವಿಶ್ರಾಂತಿ, ಶೌಚಗೃಹ) ಸ್ಥಾಪಿಸಬೇಕು, ಪ್ರಸ್ತುತ ನೀಡಿರುವ ಬಟ್ಟೆಗಳು ಕಳಪೆಯಾಗಿದ್ದು, ಕನಿಷ್ಠ 4 ಜೊತೆ ಖಾಕಿ ಸಮವಸ್ತ್ರ ಕೊಡಿ, ವಾರದಲ್ಲಿ ಒಂದು ದಿನ ಬಣ್ಣದ ಬಟ್ಟೆ ಧರಿಸಲು ಅವಕಾಶ, ಇಎಸ್‍ ಐ ಮತ್ತು ಪಿಎಫ್ ಪಾವತಿಗೆ ಸಮರ್ಪಕ ವ್ಯವಸ್ಥೆ, ಮಾಸಿಕ 2 ಜೊತೆ ಸುರಕ್ಷತಾ ಸಾಮಗ್ರಿ (ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್) ವಿತರಣೆ ನೀಡಬೇಕು ಎಂದು ಸ್ವಚ್ಛತಾ ಸೈನಿಕರು ಬೇಡಿಕೆ ಇಟ್ಟಿದ್ದಾರೆ. ಇವರೇನೂ ಕಾರು, ಬಂಗಲೆ ಕೊಡಿ ಎಂದು ಸರ್ಕಾರವನ್ನು ಕೇಳುತ್ತಿಲ್ಲ. ಇಂತಹ ಕನಿಷ್ಠ ಸೌಲಭ್ಯಗಳನ್ನೂ ನೀಡದ ಸರ್ಕಾರ ಪೌರ ಕಾರ್ಮಿಕರ ಜೊತೆಗೆ ಎಷ್ಟೊಂದು ಹೀನಾಯವಾಗಿ ನಡೆದುಕೊಂಡಿದೆ ಎನ್ನುವುದು ಸಾರ್ವಜನಿಕರಿಗೂ ಗೊತ್ತಾಗಲಿದೆ.

ಕಸದ ರಾಶಿಯಾಗಲಿದೆ ಬೆಂಗಳೂರು!

ಗಣೇಶನ ಹಬ್ಬದ ದಿನ ಬೆಂಗಳೂರಿನಲ್ಲಿ ಭಾರೀ ಕಸ ಉತ್ಪತ್ತಿಯಾಗುತ್ತದೆ. ಇದರ ಜೊತೆಗೆ ಮನೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ, ಪೂಜಿಸಿ ಬಳಿಕ ಎಸೆಯಲು ಸ್ಥಳವಿಲ್ಲದೇ ರಸ್ತೆ ಬದಿಯಲ್ಲಿಯೇ ಎಸೆದು ಹೋಗುವವರು ಕೂಡ ಬಹಳಷ್ಟು ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ನಗರದಾದ್ಯಂತ ಕಸದ ರಾಶಿಯಾಗಲಿದ್ದು, ನಗರಗಳು ನಾತ ಹೊಡೆಯುವ ಸಾಧ್ಯತೆಗಳು ಕಂಡು ಬಂದಿದೆ. ಸ್ವಚ್ಛ ಭಾರತದ ಹೆಸರಿನಲ್ಲಿ ಕೋಟಿಗಟ್ಟಲೆ ವ್ಯರ್ಥ ಖರ್ಚು ಮಾಡುವ ಬದಲು ಪೌರ ಕಾರ್ಮಿಕರಿಗೆ ಬಳಸಿದ್ದರೆ, ಇಂದು ಪ್ರತಿಯೊಂದು ನಗರ ಕೂಡ ಸ್ವಚ್ಛವಾಗಿರುತ್ತಿತ್ತು. ಸ್ವಚ್ಛತಾ ಕಾರ್ಮಿಕರ ಬೇಡಿಕೆಗಳನ್ನೂ ಈಡೇರಿಸಲಾಗದ ಸರ್ಕಾರ ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಬಗೆ ಹರಿಸುವುದೇ? ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ.

ಇನ್ನಷ್ಟು ಸುದ್ದಿಗಳು…

 

ಕಾನ್ಶಿ ಫೌಂಡೇಶನ್ ಬಗ್ಗೆ ವಿಜಯ ಮಹೇಶ್ ಅಪಾರವಾದ ಕನಸನ್ನು ಹೊಂದಿದ್ದರು | ಯೋಗೇಶ್ ಮಾಸ್ಟರ್

ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರ ಪತ್ನಿ, ಖ್ಯಾತ ಚಳುವಳಿಗಾರ್ತಿ ವಿಜಯ ಮಹೇಶ್ ನಿಧನ

ಪೊಲೀಸರ ಎದುರೇ ಕ್ರೈಸ್ತ ಪಾದ್ರಿ ಸೇರಿದಂತೆ ಮೂವರಿಗೆ ಹಲ್ಲೆ ನಡೆಸಿದ ಬಲಪಂಥೀಯರು!

ದೆಹಲಿ ಪೊಲೀಸ್ ಸಬಿಯಾ ಸೈಫಿ ಸಾಮೂಹಿಕ ಅತ್ಯಾಚಾರ, ಬರ್ಬರ ಹತ್ಯೆ | 50 ಬಾರಿ ಚುಚ್ಚಿದರು, ಅಂಗಾಂಗ ಕತ್ತರಿಸಿದರು!

ಹಾರ, ತುರಾಯಿ ಸನ್ಮಾನ ಪಡೆದ ಸಿಎಂ ಬಸವರಾಜ್ ಬೊಮ್ಮಾಯಿ! | ಆದೇಶ ಪಾಲಿಸಬೇಕಾದವರು ಯಾರು?

ಬೈಕು, ಟಿವಿ, ಫ್ರಿಡ್ಜ್ ಹೊಂದಿದವರ ಪಡಿತರ ಚೀಟಿ ರದ್ದಾಗುವುದೇ? | ಕೊನೆಗೂ ಸ್ಪಷ್ಟನೆ ನೀಡಿದ ಇಲಾಖೆ

ಕುಟುಂಬ ಸಂಘಟನೆಯ ಬದಲು ಪಕ್ಷ ಸಂಘಟನೆ ಧ್ಯೇಯವಾಗಿರಲಿ  | ಬಿ.ವೈ.ವಿಜಯೇಂದ್ರಗೆ ಯತ್ನಾಳ್ ಟಾಂಗ್

ಇತ್ತೀಚಿನ ಸುದ್ದಿ