ಪೊಲೀಸ್ ಅಧಿಕಾರಿಯ ಜೇಬಿಗೆ ಕೈ ಹಾಕಿ ಚಿನ್ನದ ಬಳೆ ಕದ್ದ ಕಳ್ಳ!
ಚಿಕ್ಕಬಳ್ಳಾಪುರ: ಕಳ್ಳನೋರ್ವ ಪೊಲೀಸ್ ಅಧಿಕಾರಿಯೊಬ್ಬರ ಜೇಬಿಗೆ ಕೈ ಹಾಕಿ ಚಿನ್ನದ ಬಳೆ ಕಳವು ಮಾಡಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದ್ದು, ಕಳ್ಳನ ಕೈ ಚಳಕದ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ ಎಂದು ವರದಿಯಾಗಿದೆ.
ಶಿಡ್ಲಘಟ್ಟ ತಾಲೂಕಿನ ದಿಬ್ಬೂಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ರಾಮಕೃಷ್ಣಪ್ಪ ಎಂಬವರ ಜೇಬಿಗೆ ಕೈ ಹಾಕಿದ ಕಳ್ಳ ಬರೋಬ್ಬರಿ 4 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಬಲೆಯನ್ನು ಕಳವು ಮಾಡಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ರಾಮಕೃಷ್ಣಪ್ಪ ಅವರು ಎಲ್ ಐಸಿ ಪಾಲಿಸಿ ಮೂಲಕ ಬಂದ ಹಣದಲ್ಲಿ ತಮ್ಮ ಪತ್ನಿಗೆ ಚಿನ್ನದ ಬಳೆ ಮಾಡಿಸಿದ್ದು, ಇದನ್ನು ಪಡೆದುಕೊಳ್ಳಲು ಚಿಂತಾಮಣಿ ನಗರದ ವೈಷ್ಣವಿ ಜ್ಯುವೆಲ್ಲರಿಗೆ ಹೋಗಿದ್ದರು. ಹಣ ನೀಡಿ ಚಿನ್ನದ ಬಳೆಯನ್ನು ಜೇಬಿನಲ್ಲಿಟ್ಟಿದ್ದರು. ಈ ವೇಳೆ ಗ್ರಾಹಕರ ಸೋಗಿನಲ್ಲಿ ಬಂದಿದ್ದ ಕಳ್ಳ, ಸದ್ದಿಲ್ಲದೇ ಪೊಲೀಸ್ ಅಧಿಕಾರಿಯ ಜೇಬಿಗೆ ಕೈ ಹಾಕಿ ಬಳೆಯನ್ನು ಕದ್ದು ಸ್ಥಳದಿಂದ ಪರಾರಿಯಾಗಿದ್ದಾನೆ.
ಕಳ್ಳ ಜೇಬಿಗೆ ಕೈ ಹಾಕಿ ಕದ್ದಿರುವುದು ರಾಮಕೃಷ್ಣಪ್ಪ ಅವರಿಗೆ ತಿಳಿದಿರಲಿಲ್ಲ. ಮನೆಗೆ ಹೋಗುವ ಮಾರ್ಗ ಮಧ್ಯೆ ಚಿನ್ನದ ಬಳೆ ಇದೆಯೇ ಎಂದು ಜೇಬಿಗೆ ಕೈ ಹಾಕಿದಾಗ ಜೇಬಿನಲ್ಲಿ ಚಿನ್ನದ ಬಳೆ ಇರಲಿಲ್ಲ. ತಕ್ಷಣವೇ ಅವರು ಚಿನ್ನದಂಗಡಿಗೆ ಬಂದು ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದ್ದು, ಈ ವೇಳೆ ಕಳ್ಳನ ಕೃತ್ಯ ಬಯಲಾಗಿದೆ. ಘಟನೆ ಸಂಬಂಧ ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇನ್ನಷ್ಟು ಸುದ್ದಿಗಳು…
ದಂಪತಿಯನ್ನು ಅಡ್ಡಗಟ್ಟಿ, ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಚಿನ್ನಾಭರಣ ದೋಚಿದ ದರೋಡೆಕೋರರು
ಚೌತಿಗೂ ಮೊದಲೇ ಬಿಬಿಎಂಪಿ ಕಚೇರಿ ಆವರಣಕ್ಕೆ ಬಂದ ಗಣಪ! | ಗಣೇಶೋತ್ಸವಕ್ಕೆ ನಿರ್ಬಂಧದ ವಿರುದ್ಧ ಪ್ರತಿಭಟನೆ
ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ವ್ಯಾನ್ ಗೆ ಲಾರಿ ಡಿಕ್ಕಿ: ನಾಲ್ವರು ಮಹಿಳೆಯರು ಸಾವು, 15 ಮಂದಿಗೆ ಗಾಯ
ವಿದ್ಯುತ್ ಚಾಲಿತ ವಾಹನ ಬಳಸಿದರೆ, ಪೆಟ್ರೋಲ್ ಬೆಲೆ ಇಳಿಯುತ್ತದೆ | ಸಚಿವ ನಾರಾಯಣ ಗೌಡ