ರಾತ್ರೋ ರಾತ್ರಿ ಇಬ್ಬರು ಹುಡುಗರ ಖಾತೆಗೆ ಜಮಾ ಆಯಿತು 900 ಕೋಟಿಗೂ ಅಧಿಕ ಹಣ!
ಪಾಟ್ನಾ: ಬಿಹಾರದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯೇ ಅಭದ್ರತೆಯಿಂದ ಕೂಡಿದ್ದು, ಕೆಲವು ದಿನಗಳ ಹಿಂದೆಯಷ್ಟೇ ವ್ಯಕ್ತಿಯೋರ್ವನ ಖಾತೆ 5.5 ಲಕ್ಷ ರೂಪಾಯಿ ಜಮಾ ಆದ ಘಟನೆಯ ಬಳಿಕ ಇದೀಗ ಬಿಹಾರದ ಕತ್ತಿಹಾರ್ ಹಳ್ಳಿಯ ಶಾಲಾ ಮಕ್ಕಳ ಖಾತೆಗಳಿಗೆ ರಾತ್ರೋ ರಾತ್ರಿ ಕೋಟ್ಯಂತರ ರೂಪಾಯಿ ಜಮಾ ಆಗಿರುವ ಘಟನೆ ನಡೆದಿದೆ.
ಇಬ್ಬರು ವಿದ್ಯಾರ್ಥಿಗಳು ಶಾಲಾ ಸಮವಸ್ತ್ರ ಹಾಗೂ ಶಾಲಾ ವೆಚ್ಚಗಳಿಗೆ ಸಂಬಂಧಿಸಿದಂತೆ ಸರ್ಕಾರದ ಯೋಜನೆಗೆ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಸರ್ಕಾರ ಹಣ ನೀಡುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದರು. ಹೀಗಾಗಿ ತಮ್ಮ ಹೆತ್ತವರೊಂದಿಗೆ ಹಳ್ಳಿಯ ಸಾರ್ವಜನಿಕ ಅಂತರ್ಜಾಲ ಕೇಂದ್ರಕ್ಕೆ ಹಣ ಬಂದಿದೆಯೇ ಎಂದು ನೋಡಲು ಹೋಗಿದ್ದಾರೆ.
ಖಾತೆಯನ್ನು ಪರಿಶೀಲಿಸಿದ ವೇಳೆ ಖಾತೆಗೆ ಕೋಟಿ ಗಟ್ಟಲೆ ಹಣ ಜಮಾ ಆಗಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ. 6ನೇ ತರಗತಿ ಕಲಿಯುತ್ತಿರುವ ವಿದ್ಯಾರ್ಥಿಯ ಖಾತೆಗೆ 6.2 ಕೋ.ರೂ.ಗೂ ಅಧಿಕ ಹಾಗೂ ಇನ್ನೊಬ್ಬ ಹುಡುಗನ ಖಾತೆ 900 ಕೋಟಿ ರೂಪಾಯಿ ಜಮಾವಾಗಿದೆ.
ಇಬ್ಬರು ಹುಡುಗರ ಖಾತೆಗೆ ದೊಡ್ಡ ಮೊತ್ತದ ಹಣ ಜಮಾವಾಗಿರುವುದು ಪತ್ತೆಯಾಗಿದೆ. ನಿನ್ನೆ ಸಂಜೆ ನಮಗೆ ಈ ಮಾಹಿತಿ ಸಿಕ್ಕಿತು. ಶಾಖೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಈ ಬಗ್ಗೆ ನಾವು ತನಿಖೆ ಮಾಡುತ್ತೇವೆ ಎಂದು ಶಾಖೆಯ ವ್ಯವಸ್ಥಾಪಕ ತಿಳಿಸಿದ್ದಾರೆ.
ಇನ್ನೂ ಹುಡುಗರ ಖಾತೆಗ ಕೋಟ್ಯಂತರ ರೂಪಾಯಿ ಜಮಾವಾಗಿರುವ ವಿಚಾರ ತಿಳಿಯುತ್ತಿದ್ದಂತೆಯೇ ಊರಿನ ಜನರೆಲ್ಲರೂ ಬ್ಯಾಂಕ್ ಮುಂದೆ ನೆರೆದಿದ್ದಾರೆ. ಬಿಹಾರದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ತೀವ್ರ ಲೋಪದೋಷಗಳು ಪತ್ತೆಯಾಗುತ್ತಿವೆ. ಇದೊಂದು ಅಚಾತುರ್ಯವೇ ಅಥವಾ ಉದ್ದೇಶ ಪೂರ್ವಕವಾಗಿ ನಡೆದ ಘಟನೆಯೇ ಎನ್ನುವ ಬಗ್ಗೆ ಅನುಮಾನಗಳು ಮೂಡಿವೆ.