ರಾಜ್ಯದಲ್ಲಿಯೂ ತಟ್ಟಿದ ಭಾರತ್ ಬಂದ್ ಬಿಸಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ತೀವ್ರ ಪ್ರತಿಭಟನೆ
ಬೆಂಗಳೂರು: ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಇಂದು ಭಾರತ್ ಬಂದ್ ನಡೆಯುತ್ತಿದ್ದು, ಇದೇ ವೇಳೆ ರಾಜ್ಯದಲ್ಲಿ ಬಂದ್ ನಡೆಯದಿದ್ದರೂ, ತೀವ್ರ ತರಹದ ಪ್ರತಿಭಟನೆ ನಡೆದಿದ್ದು, ರೈತರ ಪ್ರತಿಭಟನೆ ರಾಜ್ಯಾದ್ಯಂತ ತೀವ್ರತೆ ಪಡೆದುಕೊಂಡಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಭಾರತ್ ಬಂದ್ ಬೆಂಬಲಿಸಿ ಬೈಕ್ ಜಾಥಾ ನಡೆಸಲಾಗಿದೆ. ಸಿಪಿಐಎಂ, ಎಸ್ಐಟಿಯು, ಕನ್ನಡಪರ ಹಾಗೂ ರೈತ ಸಂಘಟನೆಗಳು ಧರಣಿಯಲ್ಲಿ ಭಾಗಿಯಾಗಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಮೈಸೂರು-ಶಿವಮೊಗ್ಗ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುತ್ತಿದೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಕೃಷ್ಣಾಪುರ ಬಳಿ ರಸ್ತೆ ತಡೆದು ಪ್ರತಿಭಟನಾಕಾರರು ಬಂದ್ ಗೆ ಬೆಂಬಲಿಸಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ರೈತ ವಿರೋಧಿ ಕಾಯ್ದೆಗಳನ್ನು ರದ್ದು ಪಡಿಸುವಂತೆ ಆಗ್ರಹಿಸಿದ್ದಾರೆ.
ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಧಾರವಾಡದ ಆಲೂರು ವೆಂಕಟರಾವ್ ವೃತ್ತದಲ್ಲಿ ವಿಭಿನ್ನ ರೀತಿ ಧರಣಿ ನಡೆಸಲಾಗಿದೆ. ಎತ್ತಿನ ಗಾಡಿಯಲ್ಲಿ ಪ್ರತಿಭಟನಾ ನಿರತರು ಆಗಮಸಿದ್ದು, ವಾಹನ ತಡೆದು ಧರಣಿ ಬೆಂಬಲಿಸಲು ಮಹಿಳೆಯರು ಮನವಿ ಮಾಡಿದ್ದಾರೆ. ಚಕ್ಕಡಿ ಮೂಲಕ ಜಯ ಕರ್ನಾಟಕ ಸಂಘಟನೆ ಪ್ರತಿಭಟನೆಗೆ ಬಂದಿದ್ದಾರೆ.
ಶಿವಮೊಗ್ಗ ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಭಾರತ್ ಬಂದ್ ಹಿನ್ನೆಲೆ ಬೈಕ್ ಮೆರವಣಿಗೆ ನಡೆಸಲಾಗುತ್ತಿದೆ. ಅಮೀರ್ ಅಹ್ಮದ್ ವೃತ್ತದಿಂದ ಹೊಳೆ ಬಸ್ ನಿಲ್ದಾಣ ವರೆಗೆ ಬೈಕ್ ಜಾಥಾ ನಡೆಯುತ್ತಿದ್ದು, ಬಂದ್ಗೆ ಬೆಂಬಲಿಸಲು ರೈತ ಮುಖಂಡರು ಮನವಿ ಮಾಡಿದ್ದಾರೆ.
“ಅಧಿಕಾರದ ಆಸೆ ಇದ್ದರೆ, ಈ ಕಾಯ್ದೆ ಬಿಟ್ಟಾಕಿ”
ಬಿಜೆಪಿಯವರಿಗೆ ನಾಳೆ ಅಧಿಕಾರದ ಆಸೆ ಇದ್ದರೆ. ಈ ಕಾಯ್ದೆ ಬಿಟ್ಟಾಕಿ. ಇಲ್ಲವಾದರೆ ಜನರು ನಿಮ್ಮನ್ನು ಕಸದತೊಟ್ಟಿಗೆ ಎಸೆಯುತ್ತಾರೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ. ಬಳಿಕ ಮಾತನಾಡಿದ ಅವರು 2 ಕಿಮೀ ನಡಿಗೆಯ ಮೂಲಕ ಜಾಥ ನಡೆಸುತ್ತೇವೆ. ಆಮೇಲೆ ವಾಹನದ ಮೂಲಕ ಟೌನ್ ಹಾಲ್ಗೆ ಹೋಗಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.
ಬಂದ್ ಗೆ ಬೆಂಬಲಿಸದವರ ವಿರುದ್ಧ ಆಕ್ರೋಶ
ಕೊಪ್ಪಳ ಜಿಲ್ಲೆ ಗಂಗಾವತಿಯ ಗಾಂಧಿ ಸರ್ಕಲ್ನಲ್ಲಿ ರೈತರು ಅಂಗಡಿ ಬಂದ್ ಮಾಡಿಸಿದ್ದಾರೆ. ಈ ವೇಳೆ ಪೊಲೀಸರು ಮತ್ತು ರೈತರ ಮಧ್ಯೆ ವಾಗ್ವಾದ ನಡೆದಿದೆ. ಆಗ ಭಾರತ್ ಬಂದ್ ಗೆ ಬೆಂಬಲಿಸದವರ ವಿರುದ್ಧ ರೈತರು ಆಕ್ರೋಶ ಹೊರ ಹಾಕಿದ್ದಾರೆ.
ಬಸ್ ತಡೆದು ಪ್ರತಿಭಟನೆ
ಕೋಲಾರ ಜಿಲ್ಲೆ ಶ್ರೀನಿವಾಸಪುರದಲ್ಲಿ ರೈತ ಸಂಘಟನೆಗಳು ಬಸ್ಗಳ ತಡೆದು ಆಕ್ರೋಶ ಹೊರ ಹಾಕುತ್ತಿದ್ದಾರೆ. ಶಾಲಾ ಬಸ್ ಹಾಗೂ ಖಾಸಗಿ ಬಸ್ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಾಪಸ್ಸು ಪಡೆಯಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಗೋಣಿಚೀಲ ಹಾಕಿಕೊಂಡು ಧರಣಿ
ಬೆಂಗಳೂರಿನ ಕೆ.ಆರ್.ಪುರಂನಿಂದ ಮೆರವಣಿಗೆ ಆರಂಭವಾಗಿದ್ದು, ತಲೆಯ ಮೇಲೆ ಗೋಣಿಚೀಲ ಹಾಕಿಕೊಂಡು ಧರಣಿ ನಡೆಸಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಮೆರವಣಿಗೆ ನಡೆಯುತ್ತಿದ್ದು, ರಸ್ತೆ ತಡೆಯದೆ ಮೆರವಣಿಗೆ ಮಾಡುವುದಕ್ಕೆ ಪೊಲೀಸರು ಅನುಮತಿ ನೀಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj
ಇನ್ನಷ್ಟು ಸುದ್ದಿಗಳು…
ದಲಿತ ಮಕ್ಕಳ ಊಟದ ತಟ್ಟೆಯನ್ನು ಇತರ ಮಕ್ಕಳು ಮುಟ್ಟುತ್ತಿಲ್ಲ | ದೇವರಂತ ಮಕ್ಕಳ ಮೇಲೆಯೂ ಅಸ್ಪೃಶ್ಯತೆಯ ಕರಿನೆರಳು
ದೇಶಾದ್ಯಂತ ಬುಗಿಲೆದ್ದ ರೈತರ ಆಕ್ರೋಶ: ವಿವಿಧ ಹೆದ್ದಾರಿ ತಡೆದು ತೀವ್ರ ಪ್ರತಿಭಟನೆ
ಸರ್ಕಾರಿ ಆಸ್ಪತ್ರೆಯ ಲಿಫ್ಟ್ ನಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ | ವಾರ್ಡ್ ಬಾಯ್ ಅರೆಸ್ಟ್
ಸೊಂಟಕ್ಕೆ ವೇಲ್ ಕಟ್ಟಿಕೊಂಡು ಬೆಟ್ಟದಿಂದ ಹಾರಿ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು