RSS ಶಿಕ್ಷಣ ನೀಡುತ್ತಿರುವುದು ರಾಷ್ಟ್ರ ನಿರ್ಮಾಣಕ್ಕಲ್ಲ, ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತಲು | ಬಿಜೆಪಿಗರಿಗೆ ಕುಮಾರಸ್ವಾಮಿ ತಿರುಗೇಟು
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಆರೆಸ್ಸೆಸ್(RSS) ವಿರುದ್ಧ ನೀಡಿರುವ ಹೇಳಿಕೆಯ ಬೆನ್ನಲ್ಲೇ ಬಿಜೆಪಿ ನಾಯಕರು ಕುಮಾರಸ್ವಾಮಿ ವಿರುದ್ಧ ಮುಗಿಬಿದ್ದಿದ್ದಾರೆ. ಈ ನಡುವೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಹೇಳಿಕೆಗಳಿಗೆ ಕುಮಾರಸ್ವಾಮಿ 16 ಸರಣಿ ಟ್ವೀಟ್ ಗಳ ಮೂಲಕ ತಿರುಗೇಟು ನೀಡಿದ್ದಾರೆ.
ಸಿ.ಟಿ.ರವಿ ಅವರೇ, 2006ಕ್ಕಿಂತ ಮೊದಲು ರಾಜ್ಯದಲ್ಲಿದ್ದ ಬಿಜೆಪಿ ನಾಯಕರ ಚೆರಿತ್ರೆ ಗಮನಿಸಿ. ಜನರ ಬಾಯಿಯಲ್ಲಿ ಅವರ ಹಗರಣಗಳ ಕಥೆಗಳಿವೆ. RSSನಿಂದ ಅವರೆಲ್ಲ ತರಬೇತಿ ಪಡೆದು ರಾಷ್ಟ್ರ ನಿರ್ಮಾಣ ಮಾಡಿದರೋ, ಜನರ ಹಣ ಲೂಟಿ ಹೊಡೆದು ತಮ್ಮ ಸಾಮ್ರಾಜ್ಯಗಳನ್ನು ನಿರ್ಮಾಣ ಮಾಡಿಕೊಂಡರೋ ಎನ್ನುವುದನ್ನು ತಿಳಿದುಕೊಳ್ಳಿ ಎಂದು ಅವರು ತಿರುಗೇಟು ನೀಡಿದ್ದಾರೆ.
ರಾಜ್ಯದಲ್ಲಿ ಭ್ರಷ್ಟಾಚಾರವನ್ನು ಕಂಡರಿಯದ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದೇ ಬಿಜೆಪಿ ಸರಕಾರ. ಒಮ್ಮೆ ಹಳೆಯದನ್ನೆಲ್ಲ ನೆನಪು ಮಾಡಿಕೊಳ್ಳಿ. ಅಧಿಕಾರದಲ್ಲಿದ್ದಾಗ ದೇಶದ ಸಂಪತ್ತು, ಜನರ ತೆರಿಗೆ ಹಣ ಲೂಟಿ ಹೊಡೆಯುವ ಕೆಲಸ ಮಾಡಿಲ್ಲ ನಾವು. ನಮ್ಮ ಕುಟುಂಬ ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ಆಸರೆಯಾಗಿ ಅವರ ಮನೆಗಳ ಬೆಳಕಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.
ನನ್ನ ಸೇವಾ ಗುಣ, ನಿಸ್ವಾರ್ಥತೆ ಏನೆಂಬುದು ಜನರಿಗಿಂತ ಒಮ್ಮೆ ಸಂಕಷ್ಟಕ್ಕೆ ಸಿಲುಕಿದ್ದ ನಿಮಗೇ ಚೆನ್ನಾಗಿ ಗೊತ್ತಿದೆ ಎಂಬುದು ನನ್ನ ಭಾವನೆ. ಅಂದು ಆರೆಸ್ಸೆಸ್ ಮೇಲಿನ ನಿಷ್ಠೆ ನಿಮ್ಮನ್ನು ರಕ್ಷಣೆ ಮಾಡಲಿಲ್ಲ. ಹೆಚ್.ಡಿ.ಕುಮಾರಸ್ವಾಮಿಯ ನಿಸ್ವಾರ್ಥತೆಯ ಫಲಾನುಭವಿ ನೀವು. ಆತ್ಮಸಾಕ್ಷಿಯನ್ನೊಮ್ಮೆ ಕೇಳಿಕೊಳ್ಳಿ ಸಿ.ಟಿ.ರವಿಯವರೇ ಎಂದು ಅವರು ತಿರುಗೇಟು ನೀಡಿದರು.
1975ರಲ್ಲಿ ಜನಸಂಘವೂ ಜನತಾ ಪಕ್ಷದ ಮೈತ್ರಿ ಭಾಗವಾಗಿತ್ತು. ಆಗ ಜನಸಂಘದ ನಾಯಕರ ಜತೆ ದೇವೇಗೌಡರೂ ವೇದಿಕೆ ಹಂಚಿಕೊಂಡಿದ್ದರು. ಅಟಲ್, ಅಡ್ವಾಣಿ ಅವರಂತೆ ಗೌಡರೂ ತುರ್ತುಪರಿಸ್ಥಿತಿ ವಿರುದ್ಧ ದನಿಯೆತ್ತಿ ಜೈಲಿಗೆ ಹೋಗಿದ್ದರು. ಆದರೆ, 1975ರ RSSʼಗೂ ಈಗಿನ RSSʼಗೂ ಅಜಗಜಾಂತರ ವ್ಯತ್ಯಾಸವಿದೆ. ಇದು ನಿಮಗಿಂತ ಗೌಡರಿಗೇ ಚೆನ್ನಾಗಿ ಗೊತ್ತು ಎಂದು ಅವರು ಸಿ.ಟಿ.ರವಿ ಹೇಳಿಕೆಗೆ ತಿರುಗೇಟು ನೀಡಿದರು.
ಎಮರ್ಜೆನ್ಸಿ ವೇಳೆ ಜನಸಂಘವಷ್ಟೇ ಅಲ್ಲ, ಅನೇಕ ನಾಯಕರು ಜೈಲಿಗೆ ಹೋಗಿದ್ದರು. ಅಡ್ವಾಣಿ ಅವರು ಬೆಂಗಳೂರು ಜೈಲಿನಲ್ಲೇ ಇದ್ದರು. ಅಲ್ಲಿ ಅಡ್ವಾಣಿ ಅವರೊಂದಿಗಿನ ಒಡನಾಟದಿಂದ ಗೌಡರು ಹಾಗೆ ಹೇಳಿರಬಹುದು. ಎಮರ್ಜೆನ್ಸಿ ಬಳಿಕ RSS ಹೇಗೆ ಬದಲಾಯಿತೆಂಬುದು ಅವರಿಗೆ ತಿಳಿದಿದೆ. ಮೈಸೂರಿನಲ್ಲಿ ಗೌಡರು ಹೇಳಿದ್ದನ್ನೇ ಇವತ್ತು ತಿರುಚಿ ಹೇಳಬೇಡಿ ಎಂದು ಅವರು ಹೇಳಿದರು.
ಗೌಡರು ಎಂದೂ RSS ಒಪ್ಪಿಲ್ಲ. ಹಾಗಿದ್ದಿದ್ದರೆ, ಪ್ರಧಾನಿ ಆಗಿದ್ದ ಅವರಿಗೆ ಕಾಂಗ್ರೆಸ್ ʼಕೈʼಕೊಟ್ಟಾಗ ಬೆಂಬಲಕ್ಕೆ ಬಂದ ವಾಜಪೇಯಿ ಅವರ ಆಫರ್ ಒಪ್ಪುತ್ತಿದ್ದರು. ಅಷ್ಟೇ ಏಕೆ, ಬಿಜೆಪಿ ಜತೆ ನಾನು ಸರಕಾರ ರಚಿಸಿದ ಕಾರಣಕ್ಕೆ ಅವರ ಆರೋಗ್ಯ ಹಾಳಾಯಿತು. ಇದು RSS ಬಗ್ಗೆ ಗೌಡರು ಕಾಯ್ದುಕೊಂಡಿರುವ ಅಂತರ. ಅಪ್ರಬುದ್ಧತೆ ಇರುವುದು ಯಾರಿಗೆ? ಎಂದು ಪ್ರಶ್ನಿಸಿದ್ದಾರೆ.
ಸೇವೆ, ಸಂಸ್ಕಾರ RSS ನೀಡುತ್ತಿದೆ ಎನ್ನುತ್ತೀರಿ. ಆದರೆ ಸಮಾಜಕ್ಕೆ ಬೇಕಿರುವುದು ನೆಮ್ಮದಿ, ಶಾಂತಿ, ಮಾಡುವ ಕೈಗಳಿಗೆ ಉದ್ಯೋಗ, ಹಸಿದ ಹೊಟ್ಟೆಗೆ ಅನ್ನ. ಈ ವಿಷಯದಲ್ಲಿ RSS ಏನು ಮಾಡಿದೆ ಎಂಬುದನ್ನು ಜನರ ಮುಂದಿಡಿ. ಬದುಕಿಗೆ ಶಿಕ್ಷಣ ಕೊಡುವುದು ಬಿಟ್ಟು ರಾಷ್ಟ್ರವನ್ನು ಒಡೆಯುವ ರೀತಿ ಮುಗ್ಧ ಮಕ್ಕಳ ಮಿದುಳು ಹಾಳು ಮಾಡುತ್ತಿದ್ದೀರಿ ಎಂದು ಅವರು ಆರೋಪಿಸಿದರು.
ಸೇವೆ, ಸಂಸ್ಕಾರ RSS ಗುತ್ತಿಗೆಯಲ್ಲ. ದೇಶಕ್ಕಾಗಿ ನಿಮ್ಮ ಕೊಡುಗೆ, ತ್ಯಾಗ ಏನು? ಇಂದಿರಾಗಾಂಧಿ, ರಾಜೀವ್ ಗಾಂಧಿ ರಾಷ್ಟ್ರಕ್ಕಾಗಿ ಜೀವತ್ಯಾಗ ಮಾಡಿದರು. ನಿಮ್ಮಲ್ಲಿ ಅಂಥವರು ಒಬ್ಬರಿದ್ದಾರಾ? ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿಗೇ ಗುಂಡಿಕ್ಕಿದವರು ನೀವು. ನೀವು ಸಮಾಜದ ಉದ್ಧಾರ ಮಾಡುತ್ತೀರಾ? ಇದಕ್ಕೇ RSS ʼವಿಶ್ವಕುಖ್ಯಾತಿʼ ಆಗಿದ್ದು ಎಂದು ಹೇಳಿದ್ದಾರೆ.
2008-9ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದರು. ಪ್ರವಾಹ ಬಂದು ಜನ ಸಂಕಷ್ಟಕ್ಕೀಡಾದಾಗ ನಾವು, ನಮ್ಮ ಪಕ್ಷದ ಕಾರ್ಯಕರ್ತರು ಬೆಳಗಾವಿ, ಬಾಗಲಕೋಟೆ ಇತರೆ ಜಿಲ್ಲೆಗಳ ಹಳ್ಳಿಗಳಿಗೆ ಹೋಗಿ ನೆರವಾದೆವು. ಪ್ರತಿ ಕನ್ನಡಿಗರೂ ನೆರೆಯಿಂದ ಸರ್ವಸ್ವ ಕಳೆದುಕೊಂಡ ಸಂಸತ್ರರಿಗೆ ಮಿಡಿದರು. ಜತೆಗೆ, ಕೊಡಗಿನಲ್ಲಿ ಮನೆ ಕಟ್ಟಿಸಿದವರು ಯಾರು? ಎಂದು ಪ್ರಶ್ನಿಸಿದರು.
ಉತ್ತರ ಕರ್ನಾಟಕದ ಜನರ ಬದುಕು ಕಣ್ಣೀರ ಕಡಲಾಗಿದ್ದಾಗ ಸರಕಾರದಲ್ಲಿದ್ದ ಮಂತ್ರಿಗಳು, ಶಾಸಕರೆಲ್ಲ ಎಲ್ಲಿದ್ದಿರಿ? ಒಮ್ಮೆ ನೆನಪು ಮಾಡಿಕೊಳ್ಳಿ ಸಿ.ಟಿ.ರವಿಯವರೇ. ಮೈಸೂರಿನ ಸುತ್ತೂರು ಸದನದಲ್ಲಿ ಯೋಗ ಮಾಡಿಕೊಂಡು ನಿಮ್ಮ ಪಕ್ಷದವರೆಲ್ಲ ಆರಾಮ ಸ್ಥಿತಿಯಲ್ಲಿದ್ದರೆ, ನಮ್ಮ ಕಾರ್ಯಕರ್ತರು ವಿರಾಮ ಇಲ್ಲದೆ ನೆರೆಪೀಡಿತರಿಗೆ ನೆರವಾಗುತ್ತಿದ್ದರು ಎಂದು ತಿರುಗೇಟು ನೀಡಿದರು.
1996ರಲ್ಲಿ ಗೌಡರು ಪ್ರಧಾನಿ ಆಗಿದ್ದಾಗ ಒಂದು ವಾರ ಈಶಾನ್ಯ ಭಾರತದಲ್ಲಿ ತಂಗಿದ್ದರು. ಆ ಭಾಗದ ಸಮಗ್ರ ಅಭಿವೃದ್ಧಿಗೆ 6.500 ಕೋಟಿ ಪ್ಯಾಕೇಜ್ ಕೊಟ್ಟಿದ್ದನ್ನು ಅಲ್ಲಿನ ಜನ ಈಗಲೂ ಸ್ಮರಿಸುತ್ತಾರೆ. ಈಗ ಅದೇ ಈಶಾನ್ಯದಲ್ಲಿ 2 ರಾಜ್ಯಗಳು ಶತ್ರು ದೇಶಗಳಂತೆ ಹೊಡೆದಾಡುತ್ತಿವೆ. ಇದು ನಿಮ್ಮ ಆಡಳಿತ ವೈಖರಿ. ಗೌಡರಿಂದ ನೀವು ಕಲಿಯುವುದು ಬಹಳ ಇದೆ ಎಂದು ಅವರು ಹೇಳಿದರು.
ನೆರೆ, ಕೋವಿಡ್ ಲಾಕ್ʼಡೌನ್ ವೇಳೆಯಲ್ಲಿ ಜೆಡಿಎಸ್ ಪಕ್ಷದಿಂದ 30-40 ಲಾರಿಯಷ್ಟು ಧವಸ-ಧಾನ್ಯ, ಬಟ್ಟೆ, ಜೀವನಾಶ್ಯಕ ವಸ್ತು ತುಂಬಿಕೊಂಡು ಹೋಗಿ ಹಳ್ಳಿಹಳ್ಳಿಯಲ್ಲೂ ಹಂಚಿದ್ದೇವೆ. ನಮ್ಮ ಕಾರ್ಯಕರ್ತರು ಸಂಕಷ್ಟದಲ್ಲಿದ್ದ ಜನರಿಗೆ ಹಗಲಿರಳು ಶ್ರಮಿಸಿ ನೆರವಿನ ಹಸ್ತ ಚಾಚಿದ್ದಾರೆ ಎಂದು ಹೇಳಿದ್ದಾರೆ.
ನಾವೂ ಜನಸೇವೆ ಮಾಡಿದ್ದೇವೆ ಎನ್ನುವುದನ್ನು ನೀವು ಮರೆಯಬಾರದು. ʼಸೇವೆʼ ಎಂಬ ಪದ RSS ಪೇಟೆಂಟ್ ಅಲ್ಲ. ಔದಾರ್ಯವನ್ನು RSS ಒಂದೇ ಮೆರೆದಿಲ್ಲ. ರಾಜ್ಯದ ಜನರೆಲ್ಲರೂ ಮೆರೆದಿದ್ದಾರೆ. ಇದನ್ನು ಅಲ್ಲಗಳೆಯಬೇಡಿ ಸಿ.ಟಿ.ರವಿಯವರೇ ಎಂದು ಅವರು ಹೇಳಿದರು.
RSS ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವುದು ರಾಷ್ಟ್ರ ನಿರ್ಮಾಣಕ್ಕಲ್ಲ. ಇತಿಹಾಸವನ್ನು ತಿರುಚಿ ಮಕ್ಕಳ ಮನಸ್ಸುಗಳನ್ನು ಕೆಡಿಸಿ ಅವರ ಹೃದಯಗಳಲ್ಲಿ ವಿಷಬೀಜ ಬಿತ್ತಲು. ಕಲೆ, ಸಂಸ್ಕೃತಿ, ಸಾಹಿತ್ಯಗಳಲ್ಲಿ RSS ಬದ್ಧತೆ ಏನೆಂಬುದು ಭಾರತಕ್ಕಷ್ಟೇ ಅಲ್ಲ, ವಿಶ್ವಕ್ಕೇ ಗೊತ್ತಿದೆ. ನಾನು ಓದಿ, ಕೇಳಿ, ನೋಡಿ ತಿಳಿದುಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ.
ರೈತ-ಕಾರ್ಮಿಕರಿಗೆ RSS ಮಾಡಿದ್ದೇನು? ಅನೇಕ ತಿಂಗಳಿಂದ ರೈತರು ಹೋರಾಟ ನಡೆಸುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಅನ್ನದಾತರ ಮೇಲೆ ವಾಹನ ಹತ್ತಿಸಿ ಕೊಲ್ಲಲಾಗಿದೆ. ಈ ಬಗ್ಗೆ RSS ಮೌನ ಏಕೆ? ಕೊರೋನ ಸಂಕಷ್ಟದ ಸಮಯದಲ್ಲಿ ಯಾರ ಜೇಬುಗಳು ತುಂಬುತ್ತಿವೆ ಎಂಬುದು ದೇಶಕ್ಕೆ ಗೊತ್ತಿದೆ. ಸೇವೆ, ಸ್ವದೇಶಿ ತತ್ವಗಳು RSS ಅಲಂಕಾರಕ್ಕೆ ಮಾತ್ರ ಎಂದು ಅವರು ಟೀಕಿಸಿದರು.
RSSನಿಂದ ಸ್ವಾಗತ ಪಡೆದುಕೊಳ್ಳುವ ದುಃಸ್ಥಿತಿ ನನಗೆ ಇನ್ನೂ ಬಂದಿಲ್ಲ. ನೀವು RSS ಸಿದ್ದಾಂತದ ಬಗ್ಗೆ ಹೇಳುವುದನ್ನು ನಿಲ್ಲಿಸಿ. ನಾನು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಿ. ನಿಮ್ಮ ಸ್ವಯಂ ಸೇವಕರನ್ನೇ ಮಾತನಾಡಿಸಿ, ಸಂಘವನ್ನು ಹತ್ತಿರದಿಂದ ಕಂಡ ಲೇಖಕರು ಬರೆದಿರುವ ಆ ಪುಸ್ತಕವನ್ನು ಒಮ್ಮೆ ಓದಿ ಸಿ.ಟಿ.ರವಿಯವರೇ ಎಂದು ಸಿ.ಟಿ.ರವಿ ಅವರಿಗೆ ಕುಮಾರಸ್ವಾಮಿ ಸವಾಲು ಹಾಕಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9