ಕರಂಗೋಲು ಕುಣಿತ: ಅದರ ಸಾಮಾಜಿಕ ಮತ್ತು ಅಲೌಕಿಕ ನೆಲೆಗಳು - Mahanayaka
8:13 AM Thursday 12 - December 2024

ಕರಂಗೋಲು ಕುಣಿತ: ಅದರ ಸಾಮಾಜಿಕ ಮತ್ತು ಅಲೌಕಿಕ ನೆಲೆಗಳು

karangolu kunitha
13/10/2021

ಲೇಖಕರು: ರಘು ಧರ್ಮಸೇನ

( ಈ ಅಧ್ಯಯನವು ಆದಿ ದ್ರಾವಿಡ  ಸಮುದಾಯದ ಮೇಲಿನ ಸುಮಾರು ಹದಿನೈದು  ವರ್ಷಗಳ ಜನಾಂಗೀಕ ಅಧ್ಯಯನದ ಫಲಶ್ರುತಿಯಾಗಿದೆ..ಅಧ್ಯಯನ  ಸಂದರ್ಭದಲ್ಲಿ  ಬಾಬು ಬಳ್ಲಾಜೆ ಅಂತಹ ಹಲವಾರು ಪಾಡ್ದನಕಾರರು ಹಾಗೂ ಆದಿ ದ್ರಾವಿಡ  ಸಮುದಾಯದ  ಹಲವಾರು ಮಾಹಿತಿದಾರರನ್ನು ಸಂದರ್ಶನ ಮಾಡಿ ಅವರು ಕೊಟ್ಟ ಮಾಹಿತಿಗಳನ್ನು  ಅಧ್ಯಯನದಲ್ಲಿ ಬಳಕೆ ಮಾಡಲಾಗಿದೆ )

ತುಳುನಾಡಿನಲ್ಲಿ “ಕರಂಗೋಲು” ಎಂಬ ವಿಶಿಷ್ಟವಾದ ಕುಣಿತದ ಪ್ರಕಾರವಿದೆ. ಮೇಲ್ನೋಟಕ್ಕೆ ಮನೋರಂಜನಾ ಅಥವಾ ಕ್ರಷಿ ಸಂಬಂಧಿತ ಕುಣಿತ ಎಂಬಂತೇ ಕಂಡುಬಂದರೂ, ಅದು ಲೌಕಿಕತೆಯಿಂದ ಅಲೌಕಿಕತೆಗೆ ವಿಸ್ತರಿಸಲ್ಪಟ್ಟ, ಜನಾಂಗದ ವೀರರ ಸಾಹಸಗಳನ್ನು, ಸಾಧನೆಗಳನ್ನು ಹಾಗೂ ಮೂಲನಿವಾಸಿ ಧಾರ್ಮಿಕತೆಯನ್ನು ಪ್ರದರ್ಶಿಸುವ, ಪುನರ್ ಅಭಿನಯಿಸುವ , ಈ ಮೂಲಕ  ಆ ವೀರರ ಆಶಯಗಳನ್ನು  ಪ್ರಸ್ತುತ ಆಧುನಿಕ ಕಾಲದಲ್ಲೂ ಎತ್ತಿ ಹಿಡಿದು ವ್ಯವಸ್ಥೆಗೆ  ತನ್ನ  ಸಾಂಸ್ಕೃತಿಕ ಪ್ರತಿಭಟನೆಯನ್ನು  ಗೊತ್ತುಪಡಿಸುವ, ತನ್ಮೂಲಕ    ತುಳಿತಕ್ಕೆ ಒಳಗಾದ ಸಮುದಾಯದ  ವಿಶಿಷ್ಟವಾದ ಅಸ್ಮಿತೆಗೆ ಸಾರ್ವಜನಿಕವಾಗಿ ಮನ್ನಣೆ  ಪಡೆದುಕೊಳ್ಳುವ  ಸಮಾಜೋ-ಸಾಂಸ್ಕೃತಿಕ  ಮತ್ತು ಧಾರ್ಮಿಕತೆಯ ಒಂದು ಪಠ್ಯ  ಅಥವಾ ವಿನ್ಯಾಸವಾಗಿ ಕಂಡು ಬರುತ್ತಿದೆ.

ಸುಗ್ಗಿಯ ಕಾಲದಲ್ಲಿ  ಕರಂಗೋಲು ಕುಣಿತದ  ಆಚರಣೆಯನ್ನು  ತುಳುನಾಡಿನ ಆದಿ ದ್ರಾವಿಡ ಸಮುದಾಯ ಮೂಲತಃ  ಆಚರಿಸಿಕೊಂಡು ಬಂದಿದೆ. ಈ ಕುಣಿತ ಪ್ರಕಾರವು ಕಾನದ ಕಟದರು ತಮ್ಮ  ಕಾಲದಲ್ಲಿ  ಜನರಿಗೆ ಬಾಧಿಸುತ್ತಿದ್ದ “ಮಾರಿ” ಸಿಡುಬು, ಕಾಲರಾ, ಪ್ಲೇಗ್ ಅಂತಹ ಸಾಂಕ್ರಾಮಿಕ  ರೋಗಗಳನ್ನು  ತಮ್ಮ  ಜಾನಪ ಜಾನಪದೀಯ  ಔಷಧ  ಜ್ಞಾನದಿಂದ ಇಲ್ಲವೇ ಗಿಡ ಮೂಲಿಕೆಗಳಿಂದ ಗುಣಪಡಿಸುತ್ತಿದ್ದರು, ಇಲ್ಲವೇ ಆ ರೋಗಗಳನ್ನು  ನಿವಾರಿಸುತ್ತಿದ್ದರು. ಈ ಮೂಲಕ ಊರಿಗೆ ಅಪ್ಪಳಿಸಿದ “ಮಾರಿ”ಯನ್ನು ಓಡಿಸಿ ಜನರನ್ನು  ಊರನ್ನು  ರಕ್ಷಣೆ  ಮಾಡುತ್ತಿದ್ದರು  ಎಂಬುದನ್ನು  ಸಂಕೇತಿಸುತ್ತದೆ. ಇದರ ಜೊತೆಗೆ ಸುಗ್ಗಿಯ  ಸಂಭ್ರಮವನ್ನು, ವಿಶೇಷವಾದ ಸುಗ್ಗಿ –ಮಾಯಿಯ ಹುಣ್ಣಿಮೆಯನ್ನು, ಇತರ ಕ್ರಷಿ ಸಂಬಂದಿತ ಮನೋರಂಜನೆಗಳನ್ನು ಹಾಗೂ ಮುಖ್ಯವಾಗಿ ಕಾನದ ಕಟದರು ಭತ್ತದ  ವಿಶೇಷ  ತಳಿಯಾದ “ಅತಿಕಾರೆ”ಯನ್ನು ತಂದು ಕ್ರಷಿ ಮಾಡಿ ಸಾಧಿಸಿದನ್ನು ಸಂಕೇತಿಸುತ್ತದೆ. ಈ ಮೂಲಕ ಸಾಮಾಜಿಕ  ವ್ಯವಸ್ಥೆ ಯ ಮೇಲೆ ಕಾನದ ಕಟದರು ಸಾಧಿಸಿದ ವಿಜಯವನ್ನು  ಕರಂಗೋಲಿನ  ಮೂಲಕ ಮರು ಅಭಿನಯಿಸಿ ಪ್ರದರ್ಶಿಸುತ್ತಿದೆ ಎಂಬುದಾಗಿ  ಕಂಡು ಬರುತ್ತಿದೆ

ಕರಂಗೋಲು ಕುಣಿತದ ಸಂದರ್ಭದಲ್ಲಿ ಇಬ್ಬರು  ಪಾತ್ರಧಾರಿಗಳು ತಲೆಗೆ ಬಿಳಿ ಮುಂಡಾಸು ಸುತ್ತಿಕೊಂಡು ಮೈಗೆ ಜೇಡಿ ಮಣ್ಣಿನಿಂದ ವರ್ತುಲಗಳನ್ನು ಬಿಡಿಸಿಕೊಂಡು ಎರಡು ಕೈಗಳಲ್ಲಿ  ನೆಕ್ಕಿ ಗಿಡದ ಸೊಪ್ಪಿನ ಸೂಡಿಗಳನ್ನು ಹಿಡಿದುಕೊಂಡು “ಪೊಲಿ…ಪೊಲಿ…ಪೊಲಿಯೇ ಪೊಲಿಯರ ಪೋ…” ಎಂದು ಸುಶ್ರಾವ್ಯವಾಗಿ  ಹಾಡುತ್ತಾ ಮನೆಗೆ ಪೊಲಿಯನ್ನು (ಸಮ್ರದ್ದಿಯನ್ನು) ತಂದಿದ್ದೇವೆ ಎಂದು ಘೋಷಿಸುತ್ತಾ ಕ್ರಮ ಬದ್ದವಾಗಿ ಮಣಿ ಗಂಟೆಯ ತಾಳಕ್ಕೆ  ಸರಿಯಾಗಿ  ಹೆಜ್ಜೆ  ಹಾಕುತ್ತ ಕುಣಿಯುತ್ತಾರೆ. ಪಕ್ಕದಲ್ಲಿ  ಮತೊಬ್ಬ ಪಾತ್ರಧಾರಿ ಕೈಯಲ್ಲಿ ಮಣಿ ಗಂಟೆಯೊಂದನ್ನು  ತಾಳ ಬದ್ದವಾಗಿ ಅಲ್ಲಾಡಿಸುತ್ತ  ಕರಂಗೋಲು ಪಾಡ್ದನವನ್ನು ಹಾಡುತ್ತಾನೆ. ಕುಣಿತ ಯಾವ ಮನೆಯಲ್ಲಿ ನಡೆಯುತ್ತಿದೆಯೋ ಆ ಮನೆಯವರು ಕುಣಿತ ಆರಂಭವಾಗುವ ಮೊದಲೇ ದೀಪವೊಂದನ್ನು ಅಂಗಳದಲ್ಲಿ  ತಂದಿರಿಸಬೇಕು. ಕುಣಿತದ ಕೊನೆಯಲ್ಲಿ  ಮನೆಗೆ ಪೊಲಿ, ಸಮ್ರಧ್ಧಿ ಅದ್ರಷ್ಟವನ್ನು ತುಂಬಿ ಅನಿಷ್ಟಗಳನ್ನು ನಿವಾರಿಸಿದ್ದೇವೆ ” ಎಂದು ಕುಣಿತದ ಹಾಡುಗಾರ ಘೋಷಿಸುತ್ತಾನೆ.  ಮುಂದೆ ಕುಣಿತದ  ಇಬ್ಬರು  ಪಾತ್ರಧಾರಿಗಳು ಮನೆಯಲ್ಲಿ  ಚಿಕ್ಕ  ಮಕ್ಕಳು  ಹಾಗೂ ಪ್ರಾಯಸ್ಥರ ಹಾಗೂ  ಮುದುಕರ ಮೈಯನ್ನು ತಾವು ಕೈಯಲ್ಲಿ ಹಿಡಿದ ನೆಕ್ಕಿಯ ಸೊಪ್ಪಿನ ಸೂಡಿಯಿಂದ ನಿವಾಳಿಸುತ್ತಾರೆ. ಇದು ಸೋಂಕನ್ನು  ಅನಿಷ್ಟಗಳನ್ನು ನಿವಾರಿಸುವ ಕ್ರಮವೇ ಆಗಿರುತ್ತದೆ. ಆ ನಂತರ ಕರಂಗೋಲು ಕುಣಿತದ ತಂಡಕ್ಕೆ  ಆ ಮನೆಯವರು ಮುಖ್ಯವಾಗಿ ಭತ್ತ, ಅವಲಕ್ಕಿ, ತೆಂಗಿನಕಾಯಿ ಮತ್ತಿತರ  ಫಲವಸ್ತುಗಳನ್ನು ಬಲು ಭಕ್ತಿಯಿಂದ ಅರ್ಪಿಸುವ ಕ್ರಮ ಸಂಪ್ರದಾಯ ಇದೆ. ಇದರ ನಂತರ ಮುಂದಿನ ಮನೆಗೆ ಕರಂಗೋಲು ತಂಡ ಸಾಗುತ್ತದೆ.

ಡಾ.ಕೆ.ಚಿನ್ನಪ್ಪ ಗೌಡರು ಕರಂಗೋಲು ಕುಣಿತ : ಪಠ್ಯ, ಪ್ರದರ್ಶನ ಮತ್ತು ಅರ್ಥ” ಎಂಬ ಅಧ್ಯಯನದಲ್ಲಿ  ಕರಂಗೋಲು ಕುಣಿತದ ಹಾಡು (ಪಾಡ್ದನ) ಪ್ರದರ್ಶನ  ಮತ್ತು ಅದರ ಅರ್ಥ  ಮಹತ್ವಗಳನ್ನು ಬಿಚ್ಚಿಡುತ್ತಾರೆ. ” ಬಹಳ ಬಾರಿ ಇಂತಹ ಕುಣಿತಗಳು ಒಳಗೊಂಡಿರುವ ಸಾಹಿತಿಕ ಭಾಗವಾದ ಹಾಡುಗಳನ್ನು , ವೇಷಧಾರಿಗಳು ಧರಿಸಿರುವ ವೇಷಭೂಷಣಗಳನ್ನ, ಅಲಂಕಾರ ಸಾಮಗ್ರಿಗಳನ್ನು  ಮತ್ತು ಕುಣಿತದ ಶೈಲಿಗಳನ್ನು  ಪರಸ್ಪರ  ಸಂಬಂಧವಿಲ್ಲದ  ಪ್ರತ್ಯೇಕ  ಪ್ರತ್ಯೇಕ  ಅವಯವಗಳೆಂದು ಪರಿಭಾವಿಸಿಕೊಂಡು ವರ್ಣಿಸುವ, ವಿವರಿಸುವ ಮತ್ತು ಅರ್ಥೈಸುವ ಪ್ರಯತ್ನಗಳು  ನಡೆದಿವೆ. ಈ ಪ್ರಯತ್ನಗಳ ಹಿಂದೆ ಮೆಚ್ಚುಗೆಯನ್ನು  ಧಾರಾಳವಾಗಿ ವ್ಯಕ್ತಪಡಿಸುವ ಪ್ರಶಂಸಾಪರ ಮನಸ್ಸೊಂದು ಕೆಲಸ ಮಾಡಿರುವುದು ಸುಲಭವಾಗಿ  ಕಂಡು ಬರುತ್ತದೆ. ಹೀಗಾಗಿ “ಸುಂದರವಾದ ಕುಣಿತ”, ಮನಸೆಳೆಯುವ ವೇಷಭೂಷಣ, ಅನಿಷ್ಟವನ್ನು ತೊಡೆದು ಹಾಕುವ ಆಶಯ, ಉಳಿಸಿ ಬೆಳೆಸಬೇಕಾದ ಕಲೆ – ಎಂಬಂತಹ ಸರಳಾತ್ಮಕ, ನಿರ್ಧಾರಾತ್ಮಕ ಮತ್ತು ಘೋಷಣಾತ್ಮಕ ಹೇಳಿಕೆಗಳನ್ನು  ಕೊಡುತ್ತಿರುವುದು ಕಂಡು ಬರುತ್ತದೆ. ಕುಣಿತವೊಂದು ಸಂಕೀರ್ಣ  ರೂಪಕ ಅಭಿವ್ಯಕ್ತಿ  ಮಾಧ್ಯಮ  ಎಂದಾಗಲಿ,  ತುಳುನಾಡಿನ  ಜಾತ್ಯಾಧರಿತ ಸಮಾಜವೊಂದರ ಚಾರಿತ್ರಿಕ  ಉತ್ಪನ್ನವೆಂದಾಗಲಿ, ಬರಿಯ ಹಾಡು ಮಾತ್ರ  ಪಠ್ಯ  ಅಲ್ಲ  ಎಂದಾಗಲೀ, ಪಠ್ಯ  ಸಂದರ್ಭ ಪ್ರದರ್ಶನ  ಮತ್ತು ಅರ್ಥ  – ಇವುಗಳೊಳಗೆ ನಿಕಟವಾದ  ಸಂಬಂಧವಿದೆಯೆಂದಾಗಲಿ ಸರಿಯಾದ ತಿಳುವಳಿಕೆ  ಇಲ್ಲದಿರುವುದೇ ಈ ಬಗೆಯ ಸರಳ ತೀರ್ಮಾನಗಳಿಗೆ ಕಾರಣವಾಗಿದೆ” ( ಸಿರಿ; ಪುಟ,392)

ಈ ಹಿನ್ನೆಲೆಯಲ್ಲಿಯೇ ಕರಂಗೋಲು ಕುಣಿತದ ಬಗೆಗಿನ ವಿವಿಧ  ಲೇಖಕರ ತೀರ್ಮಾನಗಳನ್ನು, ಅರ್ಥೈಸುವಿಕೆಗಳನ್ನು ನಮ್ಮ  ಮುಂದೆ  ಡಾ. ಚಿನ್ನಪ್ಪ ಗೌಡರು ಇಡುತ್ತಾರೆ- “ಕ್ರಷಿ ಚಟುವಟಿಕೆಗೆ ಸಂಬಂಧಿಸಿದ  ಒಂದು ಹವ್ಯಾಸಿ  ಕಲೆ, ಇದಕ್ಕೆ  ಸ್ಪಷ್ಟವಾದ  ಅರ್ಥ ದೊರೆಯುದಿಲ್ಲವಾದರೂ ಕಲಾವಿದರು ಹಿಡಿಯುವ ಕೋಲು ಕರಿಯದಾದುದರಿಂದ ಈ ಅರ್ಥ  ಬಂದಿರಬಹುದೆನಿಸುತ್ತದೆ ಅಥವಾ ಕರದಲ್ಲಿ ಹಿಡಿಯುವ ಕೋಲು ಕರ್ಂಗೊಲು ಆಗಿರಬಹುದು, ಸುಗ್ಗಿಯ  ಕಾಲದಲ್ಲಿ ಕಲಾವಿದರು ವೇಷ ಹಾಕಿಕೊಂಡು ಮನೆ ಮನೆಗೆ ಬಿತ್ತನೆಯ ಬೀಜ ಸಂಗ್ರಹಿಸುತ್ತಾರೆ, ಅವರ ಮೈಮೇಲೆ ಅಲಂಕರಿಸಿಕೊಳ್ಳುವ ಸೊಪ್ಪು  ಸುಗ್ಗಿಯ  ಸಮ್ರದ್ಧಿಯ ಸಂಕೇತ, ಸವರಿಕೊಳ್ಳುವ ಕರಿಯ ಬಣ್ಣ  ತಮ್ಮ  ಬದುಕಿನ ಕತ್ತಲೆಯ  ಸ್ವರೂಪ, ಈ ಕುಣಿತವು ಮುಖ್ಯವಾಗಿ ಕ್ರಷಿಗೆ ಸಂಬಂಧಪಟ್ಟಿದ್ದಾಗಿದ್ದು ಕರಂಗೋಲು ಎಂಬುದು ಒಂದು ವಿಧದ  ವಿಶಿಷ್ಟ  ಧಾನ್ಯದ ತಳಿ ಎಂಬ ಅಭಿಪ್ರಾಯವು ಕರಂಗೋಲು ಪದಗಳಿಂದ ಹೊರಡುವಂತಿದೆ “( ಅದೇ; ಪುಟ, 392)

ಮುಂದುವರಿದು ಡಾ.ಚಿನ್ನಪ್ಪ ಗೌಡರು ಕರಂಗೋಲು ಕುಣಿತದ ವಿವರಗಳನ್ನು  ಬಲು ವಿಸ್ತಾರವಾಗಿ  ದಾಖಲಿಸುತ್ತಾರೆ. ” ಆದಿ ದ್ರಾವಿಡ  ( ಶಬ್ದವನ್ನು  ಬದಲಾಯಿಸಲಾಗಿದೆ) ಜನಾಂಗಕ್ಕೆ  ಸೇರಿದ ಒಟ್ಟು ಐದು ಜನರು ಕರ್ಂಗೋಲು ತಂಡದಲ್ಲಿರುತ್ತಾರೆ. ಇಬ್ಬರು  ವೇಷ ಹಾಕಿ ಕುಣಿದರೆ ಮತ್ತಿಬ್ಬರು ಹಾಡು ಮತ್ತು ಗಂಟೆಯ ಸದ್ದಿನ ಹಿಮ್ಮೇಳನವನ್ನು ಒದಗಿಸುತ್ತಾರೆ. ಮನೆ ಮನೆಗೆ ಹೋಗಿ ಪ್ರದರ್ಶನ  ನೀಡಿದಾಗ ದೊರೆಯುವ ವಸ್ತು  ರೂಪದ ಸಂಭಾವನೆಯನ್ನು ಹೊತ್ತುಕೊಂಡು  ಬರಲು ಮತ್ತೊಬ್ಬನಿರುತ್ತಾನೆ. ಭತ್ತ  ಹೊರುವವನು ಎಂದೇ ಅವನನ್ನು  ಕರೆಯಲಾಗುತ್ತದೆ. ಕರ್ಂಗೋಲಿಗೆ ಕೂಲಿಯಾಗಿ ಭತ್ತ  ಕೊಡಬೇಕೆಂಬ ವಾಡಿಕೆಯಿದೆ.. ಸುಗ್ಗಿ  ಹುಣ್ಣಿಮೆಯ ಮುಂಚಿನ ದಿನ, ಸುಗ್ಗಿ  ಹುಣ್ಣಿಮೆ ಮತ್ತು  ಅದರ ಮರುದಿನ –ಹೀಗೆ ಮೂರು ದಿನ ಮಾತ್ರ  ಎರಡು ಮೂರು ಗ್ರಾಮಗಳೊಳಗೆ ಸಂಚರಿಸುತಾರೆ. ಇಬ್ಬರಿಗೆ ಬಣ್ಣ  ಹಾಕಿ ವೇಷ ಭೂಷಣ  ತೊಡಿಸುವ ಮೊದಲು ಆದಿ ದ್ರಾವಿಡ  (ಶಬ್ದವನ್ನು  ಬದಲಾಯಿಸಲಾಗಿದೆ ) ಜನಾಂಗದ ಆರಾಧ್ಯ  ದೈವಗಳಾಗಿರುವ ‘ಕಾಣದ” ಮತ್ತು ‘ಕಟದ’ ಎಂಬಿಬ್ಬರಿಗೆ ಒಂದು ತಂಬಿಗೆ ನೀರಿಟ್ಟು ಕೈ ಮುಗಿಯುತ್ತಾರೆ.

“ಮೂರು ದಿನದ ಆಟವನ್ನು  ಪ್ರದರ್ಶಿಸುವ  ವೇಳೆಗೆ  ಕೈ ಕಾಲಿಗೆ ಏನೂ ತೊಂದರೆಯಾಗದಂತೆ  ಕಾಪಾಡಿದರೆ ನಿಮಗೆ ಪೂಜೆಯನ್ನು  ಸಲ್ಲಿಸುತ್ತೇವೆ ” ಎಂದು ಪ್ರಾರ್ಥನೆಯನ್ನು  ಸಲ್ಲಿಸುತ್ತಾರೆ. ಜೇಡಿ ಮಣ್ಣಿನ್ನು ಕಲಸಿ ‘ಲೆಂಕಿರಿ ಓಟೆ’ (ಬಿದಿರಿನ ಜಾತಿ)ಯ ಸಹಾಯದಿಂದ  ಕರ್ಂಗೋಲು ಕಟ್ಟಿದವರ ಮುಖ , ತೋಳು, ಎದೆ, ಬೆನ್ನು,  ಹೊಟ್ಟೆ  -ಹೀಗೆ ಮೈಮೆಲೇಲ್ಲಾ ಹತ್ತಿರ ಹತ್ತಿರ ವರ್ತುಲಗಳನ್ನು ಬಿಡಿಸುತ್ತಾರೆ. ಕಪ್ಪು  ಚರ್ಮದ ಮೇಲೆ ನಿಬಿಡವಾದ ಈ ವರ್ತುಲಗಳು ನೆಗೆದು ಕಾಣುತ್ತವೆ. ಇದೇ ಜೇಡಿ ಮಣ್ಣಿನಿಂದ  ಎದೆ, ಹೊಟ್ಟೆ, ಮತ್ತು ಬೆನ್ನಿನ ಮೇಲೆ ಬರುವಂತೆ ಸಮಾನಾಂತರದ ಅಗಲವಾದ ಎರಡು ಗೆರೆಗಳನ್ನು  ಎಳೆಯುತ್ತಾರೆ ಇದಕ್ಕೆ  “ಗೇಂಟಿ” ಎಳೆಯುವುದು ಎನ್ನುತ್ತಾರೆ . ತಲೆಗೆ ಬಿಳಿಯ ಮುಂಡಾಸು ಸುತ್ತುತಾರೆ. ಸೊಂಟದಿಂದ ಕೆಳಗೆ ಬಿಳಿಯ ವಸ್ತ್ರ, ಕೈ ಮತ್ತು ಕಾಲುಗಳಿಗೆ “ಜೇಡಿಯ ದಂಡೆ” ಹಾಕುತ್ತಾರೆ. ಇಬ್ಬರೂ  ಕೈಗಳಲ್ಲಿ  ನೆಕ್ಕಿ ಸೊಪ್ಪಿನ ಸೂಡಿಯನ್ನು ಹಿಡಿದುಕೊಳ್ಳುತ್ತಾರೆ. ಮತ್ತಿಬ್ಬರು ಮಾಮೂಲಿ  ಉಡುಪು, ತಲೆಗೆ ಮುಂಡಾಸು, ಬಲದ ಕೈಯಲ್ಲಿ  ‘ಗಂಟೆ’ಯನ್ನು  ಹಿಡಿದುಕೊಂಡಿರುತ್ತಾರೆ. ಗ್ರಾಮ ಸಂಚಾರದ ಅವಧಿಯಲ್ಲಿ  ತಂಡದ  ಸದಸ್ಯರು  ‘ಶುದ್ಧ’ದಲ್ಲಿರಬೇಕು. ಕರ್ಂಗೋಲು ಹಾಡಿನ ಮೊದಲು ಸೊಲ್ಲು ಹೇಳಿ ” ಪೊಲಿ ಲೆತೊಂದು ಬತ್ತೋ ” ( ಪೊಲಿಯನ್ನು ಕರೆದುಕೊಂಡು ಬಂದಿದ್ದೇವೆ) ಎಂದು ಗಟ್ಟಿಯಾಗಿ  ಹೇಳುತ್ತಾರೆ.

ಆಗ ಮನೆಯವರು ಬಾಗಿಲು ತೆಗೆದು ದೀಪ ಉರಿಸಿ ಜಗಲಿಯಲ್ಲಿ ತಂದಿಡುತ್ತಾರೆ. ‘ಕರ್ಂಗೋಲ್ ನಲಿಪುಲೆ’ — ಕರ್ಂಗೋಲು ಕುಣಿಯಿರಿ ಎಂದು ಮನೆಯವರು ಎಂದು ಮನೆಯವರು ಸೂಚನೆ ಕೊಟ್ಟ  ಮೇಲೆ ಇಬ್ಬರ ಹಾಡು ಮತ್ತು  ಮತ್ತಿಬ್ಬರ ಕುಣಿತ ಪ್ರಾರಂಭವಾಗುತ್ತದೆ. ಹಾಡಿನ ಪ್ರತಿ ಸೊಲ್ಲನ್ನು ಆವರ್ತನೆಯ ರೂಪದಲ್ಲಿ  ಹಾಡಲಾಗುತ್ತದೆ. ಹಾಡನ್ನು  ಪ್ರಾರಂಭಿಸುವ ಮೊದಲು ಮತ್ತು ಕೊನೆಗೊಮ್ಮೆ ಗಂಟೆಯ ಸದ್ದನ್ನು ಚೆನ್ನಾಗಿ  ಮಾಡುತ್ತಾರೆ. ಹಾಡುವ ಇಬ್ಬರು  ಅಂಗಳದ ಒಂದು ಬದಿಯಲ್ಲಿ  ನಿಲ್ಲುತ್ತಾರೆ. ಕರ್ಂಗೋಲು ಕುಣಿಯುವವರು ಹಾಡುವವರಿಗಿಂತ ಮುಂದೆ ಸಾಲಾಗಿ ನಿಂತು ಅಲ್ಲಿಂದ ಒಂದು ಹೆಜ್ಜೆಯನ್ನು  ಮುಂದಕ್ಕಿಟ್ಟು ಮತ್ತೆ ಹಿಂದಕ್ಕೆ ಹೆಜ್ಜೆಯಿಟ್ಟು ನಿರಂತರವಾಗಿ  ಇದೇ ಶೈಲಿಯಲ್ಲಿ ಕುಣಿಯುತ್ತಾರೆ. ಮುಂದಕ್ಕೆ  ಹೋಗಿ ಹಿಂದಕ್ಕೆ  ಬರುವುದಷ್ಟೇ ಕುಣಿತ. ಮುಂದಕ್ಕೆ  ಹೆಜ್ಜೆಯಿಟ್ಟು ಮೊಣಕಾಲನ್ನು ತುಸು ಬಗ್ಗಿಸುವುದು, ಕೈಗಳಲ್ಲಿ  ಹಿಡಿದಿಡುವ  ನೆಕ್ಕಿ ಸೊಪ್ಪನ್ನು ಎತ್ತಿ  ತಮ್ಮ  ತಮ್ಮ  ತಲೆಯ  ಮೇಲಕ್ಕೆ  ಸವರುವಂತೆ ಹಾಕಿಕೊಳ್ಳುವುದು, ಕುಣಿತದ  ನಡುವೆ ಎರಡು ಮೂರು ಬಾರಿ ಜೊತೆಯಾಗಿ ಅಟ್ಟಹಾಸವನ್ನು ಕೊಟ್ಟು  ತಿರುಗಿ ದಿಕ್ಕನ್ನು  ಬದಲಾಯಿಸಿ ವಿರುದ್ಧ  ದಿಕ್ಕಿಗೆ  ಹೆಜ್ಜೆ  ಹಾಕಿ ಕುಣಿಯುವುದು —  ಇವಿಷ್ಟು ಕುಣಿತದಲ್ಲಿ ವಿವರಿಸಬಹುದಾದ ಅಂಶಗಳು. ಗಂಟೆಯ  ತಾಳ ಗತಿಗೆ ಸುಶ್ರಾವ್ಯವಾಗಿ  ಇಬ್ಬರು  ಹಾಡುತ್ತಾರೆ .

ಹಾಡಿನಲ್ಲಿ  ಅನೇಕ ಘಟನೆಗಳ ನಿರೂಪಣೆಯಿದ್ದರೆ ಕುಣಿತ ಮಾತ್ರ  ಒಂದೇ ರೀತಿಯಾಗಿರುತ್ತದೆ. ಕುಣಿತಕ್ಕೂ ಹಾಡಿಗೂ ವಸ್ತುವುನ್ನಾಗಲಿ ಭಾವಾಭಿನಯದಲ್ಲಾಗಲಿ ಯಾವುದೇ  ಸಂಬಂಧ ಸ್ಪಷ್ಟವಾಗುವುದಿಲ್ಲ. ಹಾಡು ಮುಕ್ತಾಯದಲ್ಲಿ ತಂಡದ  ಮುಖ್ಯಸ್ಥ  ‘ಪೊಲಿ ಲೆತೊಂದ್ ಬತ್ತ್ ಇಲ್ಲ್ ಇಂಜಾಯೋ ” ( ಪೊಲಿ ಕರೆದುಕೊಂಡು  ಬಂದು ಮನೆ ತುಂಬಿಸಿದೆವು ) ಎಂದು ಹೇಳುತ್ತಾನೆ. ಒಂದು ರಾತ್ರಿಯ  ಸಂಚಾರ ಮುಗಿಸಿದ ಮೇಲೆ ಕರ್ಂಗೋಲು ತಂಡವು ಒಂದು ಕಾಸರಕನ ಬುಢದ ಬಳಿಗೆ ಬರುತ್ತದೆ. ಬಣ್ಣ  ತೆಗೆದು ವೇಷ ಕಳಚುವ ವಿಧಿಯು ಈ ಮರದ ಬುಡದಲ್ಲಿ  ನಡೆಯುತ್ತದೆ. ಬಣ್ಣ  ತೆಗೆದು ವೇಷ ಕಳಚಿ ಕಾಸರಕನ ಮರದಿಂದ  ಏಳು ಎಲೆಗಳನ್ನು  ಕಿತ್ತು ನೆಲದ ಮೇಲೆ ಸಾಲಾಗಿ ಇಟ್ಟು ಅದರಲ್ಲಿ  ಹಿಡಿ ಅಕ್ಕಿ ಹಾಕಿ ಕೈ ಮುಗಿಯಿತ್ತಾರೆ. ನೆಕ್ಕಿ ಸೊಪ್ಪಿನ ಸೂಡಿಯನ್ನು ಅದೇ ಮರದ ಬುಡದಲ್ಲಿಟ್ಟು ಹೋಗುತ್ತಾರೆ. (ಅದೇ, ಪುಟ; 397)

ಮುಂದುವರಿಯುತ್ತದೆ… 

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಇತ್ತೀಚಿನ ಸುದ್ದಿ