ದಲಿತ ನಾಯಕ ಎಂ.ಜಯಣ್ಣ ನಿಧನ: ಮುರುಘಾ ಶರಣರು, ಹೆಚ್.ಆಂಜನೇಯ ಸೇರಿದಂತೆ ಅನೇಕ ಗಣ್ಯರಿಂದ ಸಂತಾಪ ಸೂಚನೆ
ಚಿತ್ರದುರ್ಗ: ನಿರಂತರ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಚಿತ್ರದುರ್ಗ ಜಿಲ್ಲೆಯ ಅಭಿವೃದ್ಧಿಗೆ ಕಾರಣೀಭೂತರಾಗಿದ್ದ ಎಂ.ಜಯಣ್ಣ (70) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ನಿಧನರಾಗಿದ್ದಾರೆ. ಇವರು ದಲಿತ ಸಂಘರ್ಷ ಸಮಿತಿಯ ಸಂಸ್ಥಾಪರಾದ ಪ್ರೊ.ಬಿ ಕೃಷ್ಣಪ್ಪರವರ ಗರಡಿಯಲ್ಲಿ ಬೆಳೆದು ದಸಂಸ ರಾಜ್ಯ ಸಂಚಾಲಕರಾಗಿದ್ದರು. ದಲಿತರ ದ್ವನಿಯಾಗಿ ನಿರಂತರವಾಗಿ ದಲಿತಪರ ಹೋರಾಟವನ್ನು ನಡೆಸಿ ಕೊಂಡು ಬಂದಿದ್ದಾರೆ.
ದಲಿತ ಮುಖಂಡರಾದ ಎಂ.ಜಯಣ್ಣ ಅವರ ಸಾವು ನಾಡಿಗೆ ತುಂಬಲಾರದ ನಷ್ಟ ಹಾಗೂ ಆಘಾತವನ್ನುಂಟು ಮಾಡಿದೆ. ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದ ಇವರು, ನೀರಾವರಿ,ರೈಲ್ವೆ, ಅಪ್ಪರ್ ಭದ್ರಾ ಮೊದಲಾದ ಮೆಗಾ ಪ್ರಾಜೆಕ್ಟ್ ಗಳ ಹಿಂದೆ ಇದ್ದ ಅವರ ಹೋರಾಟ ಮಾಡಿದ್ದರು. ಇವರಿಗೆ ದಾವಣಗೆರೆ ಶಿವಯೋಗಾಶ್ರಮದ ವಿರಕ್ತಮಠದಿಂದ ಶೂನ್ಯಪೀಠ ಅಲ್ಲಮ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.
ಎಂ.ಜಯಣ್ಣ ಅವರ ನಿಧನಕ್ಕೆ ಬಸವಾದಿ ಪ್ರಮಥರು, ಡಾ .ಶಿವಮೂರ್ತಿ ಮುರುಘಾ ಶರಣರು ಹಾಗೂ ಮಾಜಿ ಸಚಿವರಾದ ಹೆಚ್. ಆಂಜನೇಯ, ಚಿತ್ರದುರ್ಗದ ಮಾಜಿ ಸಂಸದರಾದ ಎಂ ಚಂದ್ರಪ್ಪ, ಶಿವಮೊಗ್ಗ ಎಂ ಗುರುಮೂರ್ತಿ , ಚಿತ್ರದುರ್ಗದ ಕೆಂಗುಂಟೆ ಜಯಣ್ಣ ಸೇರಿದಂತೆ ಅನೇಕ ದಲಿತ ಮುಖಂಡರುಗಳು, ರಾಜಕೀಯ ಮುಸ್ಸದ್ದಿಗಳು, ಅಧಿಕಾರಿ ವರ್ಗದವರು ತೀವ್ರ ಸಂತಾಪ ಸೂಚಿಸಿದ್ದಾರೆ .