ಮನುಷ್ಯರಿಂದ ಆತ್ಮಾವಲೋಕನದ ಅವಾರ್ಡ್ ಬಯಸುವ ಜೈಭೀಮ್ | ರಘೋತ್ತಮ ಹೊ.ಬ - Mahanayaka
2:53 PM Friday 20 - September 2024

ಮನುಷ್ಯರಿಂದ ಆತ್ಮಾವಲೋಕನದ ಅವಾರ್ಡ್ ಬಯಸುವ ಜೈಭೀಮ್ | ರಘೋತ್ತಮ ಹೊ.ಬ

jai bheem raghottama hoba
03/11/2021

ಖ್ಯಾತ ನಟ ಸೂರ್ಯ ಅಭಿನಯದ ಪಂಚ ಭಾಷೆಗಳಲ್ಲಿ ತಯಾರಾಗಿರುವ ಜೈಭೀಮ್ ಸಿನೆಮಾ ನೋಡಿದೆ. ಅದನ್ನು ಸಿನಿಮಾ ಎಂಬ ಮೂರಕ್ಷರದಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಬದುಕು ಎನ್ನಬಹುದು, ವಾಸ್ತವ ಎನ್ನಬಹುದು. ಇನ್ನೊಂದಷ್ಟು ಅಕ್ಷರದ ಪದಗಳಲ್ಲಿ ಹೇಳುವುದಾದರೆ ನ್ಯಾಯ, ಸಮಾನತೆ… ಹೀಗೆ ಪದಗಳ ಸಾಲು ಸಾಲು ಚಿತ್ರಕ್ಕೆ ಅನ್ವರ್ಥವಾಗಿ ಸಿಗುತ್ತ ಸಾಗುತ್ತವೆ.

ಚಿತ್ರದ ಟೈಟಲ್ ಬಗ್ಗೆ ಹೇಳುವುದಾದರೆ ಬಾಬಾಸಾಹೇಬ್ ಅಂಬೇಡ್ಕರರ ಜೀವನ ಮತ್ತು ಘಟನೆ ಏನನ್ನು ಒಳಗೊಳ್ಳದ ಜನಪ್ರಿಯ ಧಾಟಿಯ ಕಮರ್ಷಿಯಲ್ ಈ ಚಿತ್ರಕ್ಕೆ ಜೈಭೀಮ್ ಅಲ್ಲದೆ ಬೇರೆ ಬೇರೆ ಹೆಸರುಗಳನ್ನು ಇಡಬಹುದಿತ್ತು. ಆದರೆ ಮೂಲತಃ ಓರ್ವ ಶ್ರೇಷ್ಠ ನ್ಯಾಯವಾದಿಯಾದ ಬಾಬಾಸಾಹೇಬ್ ಅಂಬೇಡ್ಕರ್ ರ ಹೆಸರನ್ನು ಈ ಚಿತ್ರಕ್ಕೆ ಇಟ್ಟಿರುವ ಮುಖ್ಯ ಉದ್ದೇಶ ಚಿತ್ರದ ಪ್ರಧಾನ ಪಾತ್ರಧಾರಿ ವಕೀಲನಾಗಿರುವುದು. ಹಾಗೆಯೇ ಆ ಪಾತ್ರ ಬಾಬಾಸಾಹೇಬ್ ಅಂಬೇಡ್ಕರರ ರೀತಿ ವಕೀಲದಾರಿಕೆಯ ವೃತ್ತಿಪರತೆಯ ಜೊತೆಜೊತೆಗೆ ತನ್ನಲ್ಲಿ ಇರಬಹುದಾದ ಅಪ್ರತಿಮ ದಿಟ್ಟ ನ್ಯಾಯಪರ ಹೋರಾಟದ ಕೆಚ್ಚನ್ನು ಚಿತ್ರದಲ್ಲಿ ದಾಖಲಿಸುತ್ತ ಸಾಗುತ್ತದೆ ಎಂಬುದು. ಖಂಡಿತ ಚಿತ್ರದ ವೇಗ ಮತ್ತು ಜನಪ್ರಿಯತೆಗೆ ಹಾಗೆಯೇ ವಕೀಲಿಕೆಯ ಶೈಲಿ ಮತ್ತು ಬದ್ಧತೆ ತಿಳಿದವರಿಗೆ ಈ ಟೈಟಲ್ ವಿಶೇಷ ಶಕ್ತಿ ತುಂಬುತ್ತದೆ ಎಂದರೆ ತಪ್ಪಾಗದು.

ಕತೆ ಮತ್ತು ನಿರೂಪಣೆ ಕುರಿತು ಬರುವುದಾದರೆ, ಪರಿಶಿಷ್ಟ ಬುಡಕಟ್ಟು(ಎಸ್ ಟಿ) ಇಲಿ ಹಿಡಿಯುವ ತಮಿಳುನಾಡಿನ ಇರುಳರು ಎಂಬ ಸಮುದಾಯದ ಮೇಲೆ ನಡೆಯುವ ದೌರ್ಜನ್ಯದ ತಿರುಳನ್ನು ಚಿತ್ರ ಹೊಂದಿದೆ. ಇಲಿ ಹಿಡಿಯುವ ದೃಶ್ಯದ ಮೂಲಕವೇ  ಆರಂಭದಲ್ಲೇ ಅದನ್ನು ತೋರಿಸುವ ಪರಿ ಚಿತ್ರವೊಂದು ಹೇಗೆಲ್ಲ ಸಮಾಜದ ಕೆಟ್ಟ ವ್ಯವಸ್ಥೆಯನ್ನು ದಿಟ್ಟವಾಗಿ ತೋರಿಸಬಹುದು ಎಂಬುದಕ್ಕೆ ಸ್ಪಷ್ಟ ನಿದರ್ಶನವಾಗುತ್ತದೆ. ಒಂದು ಮಾತು ವಾಸ್ತವ ಹೀಗೆ ತೋರಿಸುವುದು ಬಹಳ ಮುಖ್ಯ. ಚಲನಚಿತ್ರಗಳು ಏನೇನೋ ತೋರಿಸಿ ಸೆನ್ಸಾರ್ ಕಣ್ಣು ತಪ್ಪಿಸುವ ಬದಲು ಇದನ್ನು ತೋರಿಸಬೇಕು. ಏಕೆಂದರೆ ದೌರ್ಜನ್ಯ ಮಾಡುವವನಿಗೆ ಇದು ನಿನ್ನ ನಿಜ ರೂಪ ಎಂದು ತೋರಿಸಬೇಕಲ್ಲವೆ? ಅದು ಗೊತ್ತಾಗಬೇಕಲ್ಲವೆ? ಜೈಭೀಮ್ ಆ ಕೆಲಸ ಮಾಡುತ್ತದೆ.


Provided by

ಮುಖ್ಯವಾಗಿ ಮೇಲ್ಜಾತಿಯವರ ಮನೆಯೊಂದಕ್ಕೆ ವಾಸ್ತವವಾಗಿ ಅವರನ್ನು ರಕ್ಷಿಸಲು ಹಾವು ಹಿಡಿಯಲು ಹೋಗುವ ಆ ಇರುಳರು ಸಮುದಾಯದ ನಾಯಕ ಪಾತ್ರ ಕೊನೆಗೆ ಕಳ್ಳತನದ ಆರೋಪಕ್ಕೊಳಗಾಗಿ ಪೋಲೀಸರಿಂದ ಬಂಧನಕ್ಕೊಳಗಾಗುತ್ತದೆ. ಮುಂದುವರೆದು ತಾವು ಮಾಡದ ತಪ್ಪನ್ನು ಒಪ್ಪಿಕೊಳ್ಳುವಂತೆ ಪೋಲೀಸರಿಂದ ಅವರು ಅನುಭವಿಸುವ ಅಪರಿಮಿತ ಕ್ರೂರ ಹಿಂಸೆ ಎಂತಹವರ ಎದೆಯನ್ನು ಝಲ್ ಎನಿಸುತ್ತದೆ. ಸಂವಿಧಾನ ಹೇಳುವ “ದೇಶದ ಪ್ರತಿಯೊಬ್ಬ ನಾಗರಿಕನಿಗೂ ನ್ಯಾಯ” ಎಂಬ ತತ್ವವನ್ನು ನಾವು ಪಾಲಿಸುತ್ತಿದ್ದೇವಾ ಎಂಬ ಗಾಢ ಪಾಪ ಪ್ರಜ್ಞೆಗೆ ಇಲ್ಲಿ ಹಾದು ಹೋಗುವ ದೃಶ್ಯಗಳು ಅಕ್ಷರಶಃ ನಮ್ಮನ್ನು ಈಡು ಮಾಡುತ್ತವೆ.

ಈ ಸಂದರ್ಭದಲ್ಲಿ ನೊಂದ ಆ ಜನರಿಗೆ ನ್ಯಾಯ ಕೊಡಿಸುವ ಪಾತ್ರವಾಗಿ ನಾಯಕ ನಟ ಚಂದ್ರು(#ಸೂರ್ಯ) ಆಗಮಿಸುತ್ತಾರೆ. ವಕೀಲಿಕೆಯ ಮೂಲಕ ಅವರ ಪರ ಹೋರಾಟಕ್ಕಿಳಿಯುವುದು, ಭಾರತೀಯ ಸಿನಿಮಾಗಳ ನಿಜದ ಕರ್ತವ್ಯ ಇದಾಗಬೇಕಿತ್ತು ಎಂಬುದನ್ನು ಬಹಳ ಆರ್ದ್ರವಾಗಿ ತಡವಾಗಿಯಾದರೂ ನೆನಪಿಸುತ್ತದೆ. ಅಂದಹಾಗೆ ಇಲ್ಲಿ ಶೋಷಣೆಯೇ ವಿಲನ್, ಅಂತಹ ಶೋಷಣೆಯ ವಿರುದ್ಧ ಯಾವುದೇ ಹಂತದಲ್ಲೂ ಎದೆಗುಂದದೆ ಕ್ಷಣ ಕ್ಷಣಕ್ಕೂ ಥ್ರಿಲ್ ಮೂಡಿಸುತ್ತ ನ್ಯಾಯ ಕೊಡಿಸುವ ನ್ಯಾಯವಾದಿಯೇ ಹೀರೊ. ನಿಜ ಹೇಳಬೇಕೆಂದರೆ ಚಿತ್ರದ ಈ ದೃಶ್ಯಗಳನ್ನೆಲ್ಲ ಒಂದು ಲೇಖನದಲ್ಲಿ ಹಿಡಿದಿಡುವುದು ಸಾಧ್ಯವಿಲ್ಲ. ಅದನ್ನು ನೋಡಿಯೆ ಸವಿ ಅನುಭವಿಸಬೇಕು. ಆ ಮಟ್ಟಿಗೆ ಚುಂಬಕ ಶಕ್ತಿ ರೀತಿ ಸಿನಿಮಾ ಬೆಳೆಯುತ್ತ, ಸೆಳೆಯುತ್ತ ಸಾಗುತ್ತದೆ. ಎಲ್ಲೊ ಒಂದೆಡೆ ಮಾನವೀಯ ಮನಸ್ಸುಳ್ಳ ಮನುಷ್ಯನನ್ನು ಸಿನಿಮಾ ತಾನು ಕೂಡ ಆ ವಕೀಲ ಪಾತ್ರದ ಭಾಗವಾಗಬಾರದಾ ಎಂಬ ಆಸೆಗೆಳೆದರೆ ಅದರಲ್ಲಿ ಆಶ್ಚರ್ಯವೇನಿಲ್ಲ.

ಪೊಲೀಸ್ ದೌರ್ಜನ್ಯವನ್ನಂತು ಬಹಳ ಹಸಿ ಹಸಿಯಾಗಿ ತೋರಿಸಲಾಗಿದೆ. ತಾವೇ ಕಳ್ಳತನ ಮಾಡಿದ್ದರೂ ಅದರ ಆರೋಪವನ್ನು ಆ ಮುಗ್ಧ ಬುಡಕಟ್ಟು ಜನಾಂಗ ಒಪ್ಪಿಕೊಳ್ಳುವಂತೆ ಅವರು ನಡೆಸುವ ದೌರ್ಜನ್ಯ,  ಪೋಲೀಸರ ಆ ದೌರ್ಜನ್ಯದಲ್ಲಿ ಹತನಾಗುವ ಆ ಬುಡಕಟ್ಟು ಸಮುದಾಯದ ವ್ಯಕ್ತಿ, ಕುಟುಂಬ ಎಲ್ಲವೂ ನಮ್ಮ ಜಾತಿವಾದಿ ದೌರ್ಜನ್ಯಕೋರ ಸಮಾಜಕ್ಕೆ ಕನ್ನಡಿ ಹಿಡಿಯುತ್ತದೆ. ಈ ನಿಟ್ಟಿನಲ್ಲಿ ಚಿತ್ರದಲ್ಲಿ ಉದ್ದಕ್ಕೂ ಬರುವ ಜಾತಿ ವ್ಯವಸ್ಥೆಯ  ಕ್ರೂರತನದ ಹಸಿ ಬಿಸಿ ದೃಶ್ಯಗಳು ಪ್ರೇಕ್ಷಕರ, ಅದರಲ್ಲೂ ಜಾತಿ ದೌರ್ಜನ್ಯಕೋರರ ಅಂತರಂಗ ಕಲಕಲಿಲ್ಲ ಎಂದರೆ ಖಂಡಿತ ಅಂತಹವರ ಎದೆಗಳು ಮನುಷ್ಯರದಂತು ಆಗಿರಲಿಕ್ಕಿಲ್ಲ.

ಬುಡಕಟ್ಟು ಸಮುದಾಯದ ಆ ವ್ಯಕ್ತಿಯ ಹತ್ಯೆಯ ಆ ಪ್ರಕರಣವನ್ನು ಚಿತ್ರದುದ್ದಕ್ಕು ವಕೀಲ ಚಂದ್ರು ಎತ್ತಿಕೊಂಡು ಸಾಗುವ ಪರಿ ಸಿಂಪ್ಲಿ ಥ್ರಿಲ್ಲಿಂಗ್, ನ್ಯಾಯಾಲಯದ ಹೋರಾಟದ ಜೊತೆಗೆ ಕಮ್ಯುನಿಸ್ಟ್ ಪಕ್ಷವೊಂದರ ಅಡಿಯಲ್ಲು ಚಂದ್ರು ಹೋರಾಟಕ್ಕೆ ಅಣಿಯಾಗುತ್ತಾರೆ ಎಂದರೆ ಚಿತ್ರದ ಬಿರುಸು ಎಂತಹದ್ದು ಎಂಬುದನ್ನು ಯಾರಾದರೂ ಊಹಿಸಬಹುದು. ಈ ನಡುವೆ ಹಾದಿ ತಪ್ಪುತ್ತಿದ್ದ ತನಿಖೆಯನ್ನು ಸರಿ ದಾರಿಗೆ ತರುವ ಮೂಲಕ ಚಂದ್ರು ತನಿಖೆಯನ್ನು ಉನ್ನತ ಮಟ್ಟದ ಪೊಲೀಸ್ ಅಧಿಕಾರಿಯೊಬ್ಬರ ಕೈಗೆ ಕೊಡಿಸುವಲ್ಲಿ ಯಶಸ್ವಿಯಾಗುತ್ತಾನೆ. ಆ ಉನ್ನತ ಅಧಿಕಾರಿಯ ಪಾತ್ರ ನಮ್ಮ ಕನ್ನಡದ ಪ್ರಕಾಶ್ ರೈ ರದ್ದು ಎಂದರೆ ಅದರ ಕಟ್ಟುವಿಕೆ ಹೇಗಿರುತ್ತದೆ ಎಂಬುದನ್ನು ಇಲ್ಲಿ ಬಿಡಿಸಿ ಹೇಳುವ ಅಗತ್ಯವಿಲ್ಲ.

ಒಟ್ಟಾರೆ ನಾಯಕ ಚಂದ್ರು (ಸೂರ್ಯ), ತನಿಖಾಧಿಕಾರಿ ಐಜಿಪಿ ಪೆರುಮಾಳ್ ( ಪ್ರಕಾಶ್ ರೈ) ಚಿತ್ರದ ಎರಡನೇ ಅರ್ಧದ ರೋಚಕತೆಗೆ ಕಾರಣರಾಗುತ್ತಾರೆ, ನೊಂದವರಿಗೆ ನ್ಯಾಯ ಕೊಡಿಸುವ ನಾಯಕತ್ವದ ಕೆಲಸಕ್ಕೆ ಶಕ್ತಿ ತುಂಬುತ್ತಾರೆ. ಮುಖ್ಯವಾಗಿ ಸೂರ್ಯ, ಅವರ ನಟನೆ ಬಗ್ಗೆ ಎರಡು ಮಾತಿಲ್ಲ. ಸೂಕ್ಷ್ಮ ಸಂವೇದನೆಯ ಅವರ ನಟನೆ, ಕೋರ್ಟ್ ಹಾಲ್ ನ ದೃಶ್ಯಗಳು, ಅಗತ್ಯ ಬಿದ್ದಾಗ ಮಾತು ಮತ್ತು ಅಗತ್ಯ ಬಿದ್ದಾಗ ಸೂಕ್ತ ಮೌನದ ಮೂಲಕ ಅಲ್ಲಿ ಅವರು ಕೇಸು ನಡೆಸುವ ವಿಧಾನ, ಆ ಹಾದಿಯಲ್ಲಿ ಅಡ್ವೊಕೇಟ್ ಜನರಲ್ (ರಮೇಶ್ ರಾವ್) ರನ್ನು ಅವರು ಮಣಿಸುವ ಪರಿ ನಿಜಕ್ಕೂ ರೋಮಾಂಚಕ.

ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರಗಳ ಪಿಹೆಚ್‌ಡಿ ಜೊತೆಗೆ ಕಾನೂನಿನಲ್ಲಿಯೂ ಬ್ಯಾರಿಸ್ಟರ್ ಪದವಿ ಪಡೆದಿದ್ದ ಬಾಬಾಸಾಹೇಬ್ ಅಂಬೇಡ್ಕರ್ ರು ಓರ್ವ ಶ್ರೇಷ್ಠ ವಕೀಲರು. ಹಾಗೆಯೇ ಅವರು ತಮ್ಮ ಜೀವನದುದ್ದಕ್ಕು ಅನುಸರಿಸುವ ವೃತ್ತಿ ಅದು ನ್ಯಾಯಾವಾದಿ ವೃತ್ತಿಯೇ ಆಗಿರುತ್ತದೆ. ಅಂದಹಾಗೆ ತಮ್ಮ ಸಾಮಾಜಿಕ ಹೋರಾಟಕ್ಕು ಕೂಡ ಅಂಬೇಡ್ಕರರು ಬಳಸಿದ್ದು ವಕೀಲಿಕೆಯ ಸಾಕ್ಷಿಬದ್ಧ ಶೈಲಿಯನ್ನೇ ಎಂಬುದು ಬಹುತೇಕರಿಗೆ ತಿಳಿದಿಲ್ಲ. ತಮ್ಮ ಕಕ್ಷಿದಾರರಿಗಾಗಿ ಬಾಬಾಸಾಹೇಬ್ ಅಂಬೇಡ್ಕರರು ತೆಗೆದುಕೊಳ್ಳುತ್ತಿದ್ದ ರಿಸ್ಕ್ , ಕೇಸ್ ಗೆಲ್ಲಲು ನಡೆಸುತ್ತಿದ್ದ ಅಧ್ಯಯನ ಅದೊಂದು ದಂತಕತೆ. ಸೂರ್ಯರ ನಟನೆಯಲ್ಲಿ ಅಂಬೇಡ್ಕರರ ಆ ನ್ಯಾಯಪರ ಹೋರಾಟದ ಮಾದರಿ ಕೋರ್ಟಿನ ಒಳಗೆ ಮತ್ತು ಹೊರಗೆ ಎರಡೂ ಬಗೆಯಲ್ಲು ಅಕ್ಷರಶಃ ಪ್ರೇಕ್ಷಕರ ಎದೆಯನ್ನು ತಾಕುತ್ತದೆ.

ಅಂದಹಾಗೆ ಬುಡಕಟ್ಟು ಆ ವ್ಯಕ್ತಿಗಳ ಮೇಲಿನ ದೌರ್ಜನ್ಯಕ್ಕೆ ನ್ಯಾಯ ದೊರಕಿತಾ? ದೌರ್ಜನ್ಯಕೋರ ಆ ಪೋಲಿಸ್ ಅಧಿಕಾರಿಗಳಿಗೆ ಶಿಕ್ಷೆಯಾಯಿತಾ? ಕೃತಕ ಫೈಟ್ ಮತ್ತೊಂದು ಮಗದೊಂದು ಎಲ್ಲಿಯೂ ಏನೂ ಇಲ್ಲದೆ ಹೇಗೆ ನಾಯಕ ಚಂದ್ರು (ಸೂರ್ಯ) ನ್ಯಾಯ ಕೊಡಿಸಿದ ಎಂಬುದನ್ನು ಗಾಢವಾಗಿ ಅನುಭವಿಸಲು ಪ್ರೇಕ್ಷಕರು ಚಿತ್ರವನ್ನು ಅಮೆಜಾನ್ ಪ್ರೈಮ್ ನಲ್ಲೇ ನೋಡಬೇಕು. ಸುದೀರ್ಘ ಎರಡು ಮುಕ್ಕಾಲು ಗಂಟೆಗಳ ಚಿತ್ರವಾದರೂ ಚಿತ್ರ ಎಲ್ಲಿಯೂ ಎದ್ದು ಹೋಗಲು ಬಿಡುವುದಿಲ್ಲ. ಆ ಮಟ್ಟಿಗೆ ಬೆಂಚಿನ ತುದಿಗೆ ಕೂರಿಸುವ ಮಾದರಿಯ ನಿರೂಪಣೆಯೊಂದಿಗೆ ಚಿತ್ರ ಸಾಗುತ್ತದೆ.

ಕೊನೆಯ ಮಾತು: ಚಿತ್ರ ನಿರ್ಮಾಣವೆಂಬುದು ಒಂದು ವೈಜ್ಞಾನಿಕ ಸಂಶೋಧನಾ ಕ್ರಿಯೆ ಮತ್ತು ಕ್ರಿಯೇಟಿವಿಟಿ. ಜೈಭೀಮ್ ಅಕ್ಷರಶಃ ಭಾರತದ, ಭಾರತೀಯರ ಚಿತ್ರ ನಿರ್ಮಾಣದ ಬೌದ್ಧಿಕ ಶಕ್ತಿಯ ಬಿಂಬಕವಾಗಿ ಮೂಡಿಬಂದಿದೆ. ಇದಕ್ಕೆ ಆಸ್ಕರ್ ಅವಾರ್ಡ್ ಕೂಡ ಬರಬಹುದು ಆ ಮಟ್ಟದ ರಿಚ್ ನೆಸ್, ಮೇಕಿಂಗ್ ಚಿತ್ರದಲ್ಲಿದೆ. ಆದರೆ ಇದಕ್ಕೆ ನಿಜವಾಗಿಯೂ ಸಲ್ಲಬೇಕಾದ ಅವಾರ್ಡ್? ಪ್ರತಿಯೊಬ್ಬ ಭಾರತೀಯನು ಈ ಚಿತ್ರವನ್ನು ನೋಡಿ ತನ್ನಲ್ಲಿ ಇರಬಹುದಾದ ದೌರ್ಜನ್ಯಕೋರ ಮನಸ್ಸನ್ನು ಪ್ರಶ್ನಿಸಿಕೊಳ್ಳುವುದಾಗಿದೆ, ಆತ್ಮಾವಲೋಕನ ಮಾಡಿಕೊಳ್ಳುವುದಾಗಿದೆ.

ಇತ್ತೀಚಿನ ಸುದ್ದಿ