ಡಾ.ರಾಜ್ ಕುಮಾರ್ ಜೊತೆಗೆ ಅಪ್ಪು: ಕಲಾವಿದನ ಚಿತ್ರಕ್ಕೆ ಮಾರುಹೋದ ಕನ್ನಡಿಗರು
ಸಿನಿಡೆಸ್ಕ್: ನಟ ಪುನೀತ್ ರಾಜ್ ಕುಮಾರ್ ಅವರು ನಿಧನರಾದ ನೋವಿನಲ್ಲಿ ಇಡೀ ಕರ್ನಾಟಕ ಇದೆ. ಕೆಲವು ಅಭಿಮಾನಿಗಳು ದುಡುಕಿನ ನಿರ್ಧಾರ ಕೂಡ ತೆಗೆದುಕೊಂಡಿರುವುದು ವರದಿಯಾಗಿದೆ. ಇದೇ ಸಂದರ್ಭದಲ್ಲಿ ಕಲಾವಿದರೊಬ್ಬರು ಪುನೀತ್ ರಾಜ್ ಕುಮಾರ್ ಅವರು ನಿಧನರಾದ ಬಳಿಕ ತಮ್ಮ ತಂದೆಯ ಜೊತೆಗೆ ಸಂತಸವಾಗಿದ್ದಾರೆ ಎಂಬ ಕಲ್ಪನೆಯ ಚಿತ್ರವನ್ನು ಬಿಡಿಸಿದ್ದು, ಈ ಚಿತ್ರ ಇದೀಗ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಎದೆಯಲ್ಲಿದ್ದ ನೋವನ್ನು ಕೊಂಚ ಮಟ್ಟಿಗೆ ಇಳಿಸುವಲ್ಲಿ ಯಶಸ್ವಿಯಾಗಿದೆ ಎಂದರೆ ತಪ್ಪಾಗಲಾರದು.
ಪುನೀತ್ ರಾಜ್ ಕುಮಾರ್ ಅವರು ಸ್ವರ್ಗ ಲೋಕದಲ್ಲಿ ತಮ್ಮ ತಂದೆ ಡಾ.ರಾಜ್ ಕುಮಾರ್ ಅವರ ಕಣ್ಣಿನ್ನು ಕೈಯಿಂದ ಮುಚ್ಚಿ ಸಂತೋಷದಿಂದಿರುವ ಚಿತ್ರ ಜನರ ಮನಸ್ಸಿಗೆ ಮುದ ನೀಡುವಂತಿದೆ. ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನದ ನೋವು ಎಲ್ಲರ ಎದೆಯಲ್ಲಿ ಹೊತ್ತಿ ಉರಿಯುತ್ತಿರುವ ಸಂದರ್ಭದಲ್ಲಿ ನೆಗೆಟಿವ್ ವಿಚಾರಗಳನ್ನು ಬದಿಗೊತ್ತಿ ಪಾಸಿಟಿವ್ ಆಗಿ ಯೋಚನೆ ಮಾಡಿಸಲು ಕಲಾವಿದ ಬಿಡಿಸಿರುವ ಚಿತ್ರ ಸಹಕಾರಿಯಾಗಿದೆ.
ಇನ್ನೂ ಈ ಚಿತ್ರಕ್ಕೆ ಕನ್ನಡ ಚಿತ್ರರಂಗದಲ್ಲಿಯೂ ಮೆಚ್ಚುಗೆ ವ್ಯಕ್ತವಾಗಿದೆ. ಡಾ.ರಾಜ್ ಕುಮಾರ್ ಅವರು ಅಭಿಮಾನಿಗಳನ್ನು ದೇವರು ಎಂದು ಕರೆದಿದ್ದರು. ಅದೇ ಹಾದಿಯಲ್ಲಿ ಅಪ್ಪು ಕೂಡ ಹೋಗುತ್ತಿದ್ದರು. ಅಭಿಮಾನಿಗಳೇ ನಮ್ಮನೆ ದೇವ್ರು ಎಂದು ಅಪ್ಪು ಕೂಡ ಸಾರಿ ಸಾರಿ ಹೇಳಿದ್ದರು. ಅವರ ನಿಧನದ ಸಂದರ್ಭದಲ್ಲಿ ಕೂಡ ಅಭಿಮಾನಿಗಳು ಆಸ್ಪತ್ರೆಯ ಬಳಿಗೆ ಓಡಿ ಬಂದ ದೃಶ್ಯ ಕಂಡರೆ ಅವರ ಮೇಲೆ ಎಷ್ಟು ಅಭಿಮಾನ ಇಟ್ಟುಕೊಂಡಿದ್ದರು ಎನ್ನುವುದು ತಿಳಿಯುತ್ತದೆ.
ಇನ್ನೂ ಪುನೀತ್ ಸಾವಿನ ಬಗ್ಗೆ ಅಭಿಮಾನಿಗಳು ಇದೀಗ ತನಿಖೆಯಾಗಬೇಕು ಎಂದು ಹೇಳುತ್ತಿದ್ದಾರೆ. ಯಾಕೆಂದರೆ, ದೊಡ್ಡ ದೊಡ್ಡ ಡಾಕ್ಟರ್ ಗಳಿದ್ದರೂ ಅಪ್ಪುವನ್ನು ಯಾಕೆ ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎನ್ನುವ ಪ್ರಶ್ನೆಯನ್ನು ಅಭಿಮಾನಿಗಳು ಕೇಳುತ್ತಿದ್ದಾರೆ. ಒಬ್ಬ ಅಭಿಮಾನಿ ಈ ಬಗ್ಗೆ ದೂರು ಕೂಡ ನೀಡಿದ್ದಾರೆ. ಇದೊಂದು ವೈದ್ಯಕೀಯ ನಿರ್ಲಕ್ಷ್ಯವೇ? ಸಮೀಪವೇ ರಾಮಯ್ಯ ಆಸ್ಪತ್ರೆ ಇದ್ದರೂ ವಿಕ್ರಂ ಆಸ್ಪತ್ರೆಗೆ ಅಪ್ಪುವನ್ನು ಕಳಿಸಿದ್ದು, ಯಾಕೆ ಎಂದು ಡಾ.ಶಿವರಾಜ್ ಕುಮಾರ್ ಅವರ ಬಳಿಯಲ್ಲಿ ಮಾಧ್ಯಮಗಳು ಕೂಡ ಪ್ರಶ್ನಿಸಿವೆ. ಆದರೆ, ಅಪ್ಪುವನ್ನು ಕಳೆದುಕೊಂಡಿರುವ ಶಾಕ್ ನಿಂದ ಅವರು ಇನ್ನೂ ಹೊರ ಬಂದಿಲ್ಲ. ಹಾಗಾಗಿ ನೊಂದಿರುವ ಜೀವ ಇನ್ನೇನು ಹೇಳಲು ಸಾಧ್ಯ ಅಲ್ಲವೇ? ಎನ್ನುವ ಅಭಿಪ್ರಾಯಗಳು ಇದೀಗ ಕೇಳಿ ಬಂದಿದೆ.
ನಿಧನರಾಗುವುದಕ್ಕೂ ಮೊದಲು ಅಪ್ಪು ಅವರಿಗೆ ಅನಾರೋಗ್ಯ ಕಾಡಿದೆ. ಈ ಬಗ್ಗೆ ಅವರು ವೈದ್ಯರನ್ನು ಕೂಡ ಸಂಪರ್ಕಿಸಿದ್ದರು ಎನ್ನುವ ಮಾಹಿತಿಗಳು ಕೂಡ ಇವೆ. ಆ ಸಂದರ್ಭದಲ್ಲಿ ವೈದ್ಯರಿಗೆ ಯಾಕೆ ಅಪ್ಪುವಿನ ಅನಾರೋಗ್ಯವನ್ನು ಕಂಡು ಹಿಡಿಯಲು ಸಾಧ್ಯವಾಗಲಿಲ್ಲ ಎನ್ನುವ ಪ್ರಶ್ನೆಗಳು ಕೂಡ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.