ಪುನೀತ್ ಡಾ.ರಮಣರಾವ್ ಕ್ಲಿನಿಕ್ ಗೆ ಬಂದಾಗ ಅಲ್ಲಿ ನಡೆದದ್ದೇನು?
ಬೆಂಗಳೂರು: ಪುನೀತ್ ರಾಜ್ ಕುಮಾರ್ ಅವರ ನಿಧನದ ಹಿನ್ನೆಲೆಯಲ್ಲಿ ಡಾ.ರಮಣರಾವ್ ಅವರ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ನಡುವೆ, ಘಟನೆ ನಡೆದ ದಿನ ಕ್ಲಿನಿಕ್ ನಲ್ಲಿ ಏನೇನು ನಡೆದಿತ್ತು ಎನ್ನುವುದನ್ನು ಇದೀಗ ಡಾ.ರಮಣರಾವ್ ಅವರೇ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಘಟನೆ ನಡೆದ ದಿನದಂದು 11:15ರಿಂದ 11:20ರ ಹೊತ್ತಿಗೆ ಪುನೀತ್ ರಾಜ್ ಕುಮಾರ್ ಅವರು ನಮ್ಮ ಕ್ಲಿನಿಕ್ ಗೆ ನಡೆದುಕೊಂಡೇ ಬಂದಿದ್ದಾರೆ. ಅವರು ಬಂದು ಕೇವಲ 1 ನಿಮಿಷ ಹೊರಗೆ ಕುಳಿತಿದ್ದಾರೆ. ನಾನು ಸಮಾಲೋಚನೆಗೆ ಬಂದಿದ್ದ ಇನ್ನೊಬ್ಬ ರೋಗಿಯನ್ನು ಹೊರಗೆ ಕಳುಹಿಸಿ ತಕ್ಷಣವೇ ಪುನೀತ್ ರಾಜ್ ಕುಮಾರ್ ಅವರನ್ನು ಒಳಕ್ಕೆ ಕರೆಸಿಕೊಂಡಿದ್ದೇನೆ.
ಅವರು ಬಂದ ಸಂದರ್ಭದಲ್ಲಿ ಅವರಿಗೆ ಬಳಲಿಕೆಯಾಗಲಿ, ಸುಸ್ತಾಗಲಿ ಇರಲಿಲ್ಲ. 4ರಿಂದ 5 ನಿಮಿಷದಲ್ಲಿ ಪರೀಕ್ಷೆ ಮುಗಿಸಿದ್ದೇನೆ. ಅವರ ಶ್ವಾಸಕೋಶ, ಹೃದಯ ಬಡಿತ ಎಲ್ಲವೂ ನಾರ್ಮಲ್ ಆಗಿತ್ತು. ಆದರೆ ವಿಪರೀತವಾಗಿ ಬೆವರುತ್ತಿದ್ದರು.
ಯಾಕೆ ಇಷ್ಟು ಬೆವರುತ್ತಿದ್ದೀರಿ ಎಂದು ಕೇಳಿದಾಗ ನಾನು ಈಗಷ್ಟೇ ಜಿಮ್ ನಲ್ಲಿ ವ್ಯಾಯಾಮ ಮಾಡಿ ಬಂದಿದ್ದೇನೆ. ಅದಕ್ಕೆ ಬೆವರುತ್ತಿದ್ದೇನೆ ಹಾಗಾಗಿ ಬೆವರುವುದು ನಾರ್ಮಲ್ ಎಂದು ಹೇಳಿದ್ದಾರೆ. ಇಸಿಜಿ ಮಾಡಿಸಿದೆ. ಈ ವೇಳೆ ಅವರ ಹೃದಯಕ್ಕೆ ಒತ್ತಡವಾಗುತ್ತಿರುವುದು ತಿಳಿದು ಬಂತು. ತಕ್ಷಣವೇ ಹೆಚ್ಚಿನ ಚಿಕಿತ್ಸೆಗೆ ಕರೆದುಕೊಂಡು ಹೋಗಬೇಕು ಎಂದು ಹೇಳಿದೆ.
ಆಗ ಅಶ್ವಿನಿ ಅವರು ಫೋನ್ ಮಾಡಲು ಹೊರಗೆ ಹೋದರು. ಈ ವೇಳೆ ಅಪ್ಪು ತಲೆ ಸುತ್ತು ಬರುತ್ತಿದೆ ಎಂದರು. ಆಗ ನಾನು ಅವರನ್ನು ಕುಳ್ಳಿರಿಸಿ, ತಲೆ ಕೆಳಗಡೆ ಇಡು, ನಿಂತುಕೊಳ್ಳಬೇಡ, ನಡೆಯಬೇಡ, ನಾವು ಕರೆದುಕೊಂಡು ಹೋಗುತ್ತೇವೆ ಎಂದು ಮೂವರ ಸಹಾಯದೊಂದಿಗೆ ಎತ್ತಿಕೊಂಡು ಹೋಗಿ ಕಾರಿನಲ್ಲಿ ಕೂರಿಸಿದ್ದೇವೆ. ಆ ವೇಳೆ ಪುನೀತ್ ಅವರು ನಾರ್ಮಲ್ ಆಗಿದ್ದರು, ನಮ್ಮ ಮಾತುಗಳಿಗೆ ಪ್ರತಿಕ್ರಿಯಿಸುತ್ತಿದ್ದರು. ಪಲ್ಸ್ ಕೂಡ ಸಹಜವಾಗಿತ್ತು. ಬಳಿಕ ಅವರು ವಿಕ್ರಂ ಆಸ್ಪತ್ರೆಗೆ ಹೊರಟರು.
ನಮ್ಮದು ಸಣ್ಣ ಕ್ಲಿನಿಕ್ ಅಷ್ಟೆ ನಮ್ಮಿಂದ ಅಷ್ಟು ಮಾತ್ರವೇ ಮಾಡಲು ಸಾಧ್ಯ. ಜೊತೆಗೆ ಹೃದಯದಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಎಂದು ಬಾಯಲ್ಲಿಟ್ಟುಕೊಳ್ಳಲು ಮಾತ್ರೆ ಕೂಡ ಕೊಟ್ಟಿದ್ದೇನೆ. ಇನ್ನೂ ಸಿಪಿಆರ್ ಟೆಸ್ಟ್ ಮಾಡಿಸಬಹುದಿತ್ತು ಎನ್ನಲು ಪುನೀತ್ ಅವರ ಹೃದಯ ಬಡಿತ ಇಲ್ಲಿದ್ದಾಗ ಸಹಜವಾಗಿತ್ತು.ಅದು ಉಸಿರಾಟ ಮತ್ತು ಪಲ್ಸ್ ರೇಟ್ ಕಡಿಮೆ ಇದ್ದವರಿಗೆ ಮಾತ್ರವೇ ಮಾಡಿಸುವುದು ಎಂದು ಡಾ.ರಮಣರಾವ್ ಹೇಳಿದರು.
ಆಂಬುಲೆನ್ಸ್ ನಲ್ಲಿ ಯಾಕೆ ಕಳುಹಿಸಲಿಲ್ಲ ಎಂದರೆ, ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗುವಷ್ಟರಲ್ಲಿ 10—15 ನಿಮಿಷ ಹಿಡಿಯುತ್ತದೆ. ಕಾರಿನಲ್ಲಿ ಬೇಗ ತಲುಪಬಹುದು ಎನ್ನುವ ದೃಷ್ಠಿಯಿಂದ ಕಾರಿನಲ್ಲಿಯೇ ಕಳುಹಿಸಲಾಗಿದೆ ಎಂದು ಅವರು ಹೇಳಿದರು.
ಈ ಪರಿಸ್ಥಿತಿಯಲ್ಲಿ ನನ್ನ ಮಗ ಇರುತ್ತಿದ್ದರೆ ನಾನು ಏನು ಮಾಡುತ್ತಿದ್ದೆನೋ ಅದನ್ನೇ ಪುನೀತ್ ರಾಜ್ ಕುಮಾರ್ ಅವರಿಗೂ ಮಾಡಿದ್ದೇನೆ. ನನ್ನ ಕಡೆಯಿಂದ ಯಾವುದೇ ವ್ಯತ್ಯಯವಾಗಿಲ್ಲ. ಅವರ ಕುಟುಂಬವನ್ನು ಗಮನದಲ್ಲಿಟ್ಟುಕೊಂಡು ಕೊಂಡು ಕೆಲವೊಂದು ವಿಚಾರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಹಾಗಾಗಿ ಹೆಚ್ಚೇನು ಹೇಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka