ಪರಿಪೂರ್ಣ ಕಲಾವಿದ ಸೃಜನಶೀಲತೆಯ ಮೇರು-ಶಂಕರ್ ನಾಗ್ - Mahanayaka
6:18 AM Thursday 12 - December 2024

ಪರಿಪೂರ್ಣ ಕಲಾವಿದ ಸೃಜನಶೀಲತೆಯ ಮೇರು-ಶಂಕರ್ ನಾಗ್

shankarnag
10/11/2021

  • ನಾ ದಿವಾಕರ

ಸಿನಿಮಾ ಎಂದರೆ ಕೇವಲ ಸೆಲ್ಯುಲಾಯ್ಡ್ ಪರದೆ ಅಥವಾ ಚಲನ ಚಿತ್ರ ಎಂದರೆ ಕಥಾನಾಯಕ/ನಾಯಕಿ, ಒಂದು ಕಥಾ ಹಂದರ, ಚಿತ್ರಕ್ಕೆ ತಕ್ಕಂತಹ ಚಿತ್ರಕತೆ, ಸಂಗೀತ ಮತ್ತು ಕೆಲವು ಮನರಂಜನೆಯ ದೃಶ್ಯಗಳು ಇಷ್ಟೇ ಅಲ್ಲ ಎಂದು ನಿರೂಪಿಸಿದ ಹಲವಾರು ಚಿತ್ರ ನಿರ್ದೇಶಕರು ಭಾರತೀಯ ಚಿತ್ರರಂಗದಲ್ಲಿ ಆಗಿ ಹೋಗಿದ್ದಾರೆ. ಸತ್ಯಜಿತ್ ರೇ ಅವರಿಂದ ಅಡೂರ್ ಗೋಪಾಲಕೃಷ್ಣನ್‍ವರೆಗೆ, ಬಸು ಭಟ್ಟಾಚಾರ್ಯ ಅವರಿಂದ ದಕ್ಷಿಣದ ಬಾಲಚಂದರ್‍ವರೆಗೆ ಹಲವಾರು ಖ್ಯಾತನಾಮರು ರಜತ ಪರದೆಯ ಮೇಲೆ ಒಂದು ಹೊಸ ಬದುಕನ್ನೇ ಸೃಷ್ಟಿಸಿರುವ ಉದಾಹರಣೆಗಳು ನಮ್ಮ ಮುಂದೆ ಹೇರಳವಾಗಿವೆ. ನಟನೆ ಎನ್ನುವ ಕಲಾಭಿವ್ಯಕ್ತಿಯನ್ನೇ ವಿಭಿನ್ನವಾಗಿ ವ್ಯಾಖ್ಯಾನಿಸಿದ ಮತ್ತು ತಮ್ಮ ನಿರ್ದೇಶನದ ಮೂಲಕ ಎತ್ತಿ ತೋರಿಸಿದ ಹಲವಾರು ನಿರ್ದೇಶಕರನ್ನೂ ಸಹ ಭಾರತೀಯ ಚಿತ್ರರಂಗ ಕಂಡಿದೆ. ಪರದೆಯ ಮೇಲೆ ಮೂಡುವ ಚಿತ್ರಣಗಳೇ ಒಂದು ಚಲನಚಿತ್ರವಾಗುವುದಿಲ್ಲ, ಪ್ರೇಕ್ಷಕನ ಮನದಲ್ಲಿ ಉಳಿಯುವಂತಹುದೇ ಪರಿಪೂರ್ಣವಾದ ಚಲನ ಚಿತ್ರ ಎನಿಸಿಕೊಳ್ಳುತ್ತದೆ ಎಂದು ಖ್ಯಾತ ನಿರ್ದೇಶಕ-ನಿರ್ಮಾಪಕ ಗುರುದತ್ ಒಂದು ಸಂದರ್ಭದಲ್ಲಿ ಹೇಳುತ್ತಾರೆ.

ಕನ್ನಡದಲ್ಲಿ ಇದನ್ನು ಸಾಕಾರಗೊಳಿಸಿದವರು ದಿವಂಗತ ಶಂಕರ್ ನಾಗ್. ತಮ್ಮ 37ನೆಯ ವಯಸ್ಸಿನಲ್ಲೇ ವಾಹನ ಅಪಘಾತವೊಂದರಲ್ಲಿ ಅಕಾಲಿಕ ಮರಣಕ್ಕೆ ತುತ್ತಾದ ಶಂಕರ್ ನಾಗ್ ಬದುಕಿದ್ದ ಅಲ್ಪ ಕಾಲದಲ್ಲೇ ಮಾಡಿದ ಸಾಧನೆ ಶಿಖರಪ್ರಾಯ. ಸಾಧನೆಯ ಹಾದಿಯಲ್ಲಿ ಯೋಚಿಸಿದ್ದ ಹಲವಾರು ಯೋಜನೆಗಳನ್ನು ನಡುವಲ್ಲೇ ಬಿಟ್ಟು ಹೋಗುವಷ್ಟರಲ್ಲೇ ಶಂಕರ್‍ನಾಗ್ ಕನ್ನಡ ಚಿತ್ರರಂಗಕ್ಕೆ ಒಂದು ಹೊಸ ಆಯಾಮವನ್ನು ನೀಡುವುದರಲ್ಲಿ ಯಶಸ್ವಿಯಾಗಿದ್ದರು ಎಂದರೆ ಅತಿಶಯೋಕ್ತಿಯೇನಲ್ಲ. ಉತ್ತರ ಕನ್ನಡದ ಹೊನ್ನಾವರ ತಾಲ್ಲೂಕಿನ ಮಲ್ಲಾಪುರದಲ್ಲಿ ನವಂಬರ್ 9 1954ರಂದು ಜನಿಸಿದ ಶಂಕರ್ ನಾಗ್ ಆಕಸ್ಮಿಕವಾಗಿ ಬಣ್ಣ ಹಚ್ಚಿದವರಲ್ಲ. ಅಥವಾ ಅವರ ಸೋದರ ಅನಂತನಾಗ್ ಅವರ ನೆರಳಿನಲ್ಲೇ ಬೆಳೆದುಬಂದವರೂ ಅಲ್ಲ. ಶಂಕರ್ ಒಬ್ಬ ಹುಟ್ಟು ಕಲಾವಿದರಾಗಿದ್ದರು. ಮರಾಠಿ ರಂಗಭೂಮಿಯಲ್ಲೇ ತಮ್ಮ ರಂಗಭೂಮಿಯ ನಂಟನ್ನು ಬೆಳೆಸಿಕೊಂಡು ಬಂದಿದ್ದ ಶಂಕರ್ ನಾಗ್ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದು 1978ರಲ್ಲಿ ತೆರೆಕಂಡ ಗಿರೀಶ್ ಕಾರ್ನಾಡ್ ನಿರ್ದೇಶನದ ಒಂದಾನೊಂದು ಕಾಲದಲ್ಲಿ ಚಿತ್ರದ ಮೂಲಕ.

ಸಾಮಾನ್ಯವಾಗಿ ಚಿತ್ರರಂಗದಲ್ಲಿ, ವಿಶೇಷವಾಗಿ ವಾಣಿಜ್ಯ ಚಿತ್ರಗಳಲ್ಲಿ, ಒಂದು ಸ್ಥಿರ ನೆಲೆ ಗಳಿಸುವುದಕ್ಕೇ ಒಂದು ದಶಕದ ಸಮಯ ಬೇಕಾಗುತ್ತದೆ. ಆದರೆ ತಾವಿದ್ದ 12 ವರ್ಷಗಳ ಅವಧಿಯಲ್ಲೇ ಶಂಕರ್ ನಾಗ್ ಒಬ್ಬ ನಟನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿ ಮತ್ತು ಎಲ್ಲಕ್ಕಿಂತಲೂ ಮಿಗಿಲಾಗಿ ಪರಿಪೂರ್ಣ ಕಲಾವಿದನಾಗಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಒಬ್ಬ ಚಿತ್ರನಟನ ಜವಾಬ್ದಾರಿ ರಜತ ಪರದೆಯೊಂದಿಗೇ ಕೊನೆಗಾಣುವುದಿಲ್ಲ, ಅದನ್ನೂ ಮೀರಿದ ಸೃಜನಶೀಲ ಪ್ರಯತ್ನಗಳು, ಸಾಮಾಜಿಕ ಜವಾಬ್ದಾರಿಗಳು ಅವನನ್ನು ಒಂದು ಪರಿಪೂರ್ಣ ವ್ಯಕ್ತಿಯಾಗಿ ರೂಪಿಸುತ್ತದೆ ಎನ್ನುವುದನ್ನು ಕೇವಲ 12 ವರ್ಷಗಳಲ್ಲೇ ನಿರೂಪಿಸಿದವರು ಶಂಕರ್ ನಾಗ್. ಎಲ್ಲ ನಟರೂ ಈ ಚೌಕಟ್ಟಿಗೆ ಒಳಪಡುವುದಿಲ್ಲ ಎನ್ನುವುದನ್ನೂ ಗಮನಿಸಬೇಕು. ನಿರ್ದೇಶಕನ ಅಣತಿಯಂತೆ ನಟಿಸುವುದು ಒಂದು ಪರಿ, ತಮ್ಮ ವ್ಯಕ್ತಿಗತ ವರ್ಚಸ್ಸನ್ನು ಹೆಚ್ಚಿಸುವಂತಹ ಕತೆಗಳನ್ನೇ ಆಯ್ಕೆ ಮಾಡಿಕೊಂಡು, ತೆರೆಯ ಮೇಲಿನ ಪಾತ್ರಧಾರಿಯ ವೈಭವೀಕರಣದಿಂದ ತಮ್ಮ ವ್ಯಕ್ತಿಗತ ವರ್ಚಸ್ಸಿಗೆ ಮೆರುಗು ತಂದುಕೊಳ್ಳುವುದು ಮತ್ತೊಂದು ಪರಿ.

ಈ ಎರಡೂ ವಿಧಾನಗಳನ್ನು ಮೀರಿ ನಿಂತವರು ಪರಿಪೂರ್ಣ ಕಲಾವಿದರಾಗಿ ಹೊರಹೊಮ್ಮುತ್ತಾರೆ. ತೆರೆಯ ಮೇಲೆ, ತೆರೆಯ ಹಿಂದೆ ಮತ್ತು ಸಾರ್ವಜನಿಕರ ನಡುವೆ ಸಾಮಾಜಿಕ ಕಳಕಳಿಯಿಂದ ಮತ್ತು ನಾಗರಿಕ ಕಾಳಜಿಯಿಂದ ಕೆಲವು ಕಲಾತ್ಮಕ ಚಿತ್ರಗಳನ್ನು ನೀಡುವುದರ ಮೂಲಕವೋ, ನಾಟಕಗಳನ್ನು ಪ್ರದರ್ಶಿಸುವ ಮೂಲಕವೋ ತಮ್ಮ ಸೃಜನಶೀಲತೆಯನ್ನು ಕಂಡುಕೊಳ್ಳುವುದು ಇಂತಹ ಕಲಾವಿದರು ಮಾತ್ರವೇ. ಶಂಕರ್ ನಾಗ್ ಇಂತಹ ಒಬ್ಬ ಸೃಜನಶೀಲ ಕಲಾವಿದರಾಗಿದ್ದರು. ಅವರು ನಟಿಸಿದ್ದು 98 ಚಿತ್ರಗಳು. ಒಂದಾನೊಂದು ಕಾಲದಲ್ಲಿ ಚಿತ್ರವು ಅವರಲ್ಲಿನ ಒಬ್ಬ ಅಪ್ಪಟ ಕಲಾವಿದನ್ನು ಪರಿಚಯಿಸಿದಂತೆಯೇ, ಆಟೋರಾಜ, ಆರದಗಾಯ, ಸೀತಾರಾಮು, ಮೂಗನ ಸೇಡು, ಸಾಂಗ್ಲಿಯಾನಾ, ಸಿಬಿಐ ಶಂಕರ್, ನ್ಯಾಯ ಎಲ್ಲಿದೆ, ಮುನಿಯನ ಮಾದರಿ ಮುಂತಾದ ಚಿತ್ರಗಳು ಅವರಲ್ಲಿ ಅಡಗಿದ್ದ ನಾಯಕನಟನ ಮೆರುಗನ್ನು ಪರಿಚಯಿಸಿದ್ದವು. ಕಮರ್ಷಿಯಲ್ ಚಿತ್ರಗಳನ್ನೇ ನೆಚ್ಚಿಕೊಂಡು ತಮ್ಮ ಸೃಜನಶೀಲತೆಯನ್ನು ಪರದೆಯ ಮೇಲೆ ಮೂಡಿಸುವ ಕಲೆಯೂ ಸಹ ಎಲ್ಲರಿಗೂ ಸಿದ್ಧಿಸುವುದಿಲ್ಲ. ಈ ನಿಟ್ಟಿನಲ್ಲಿ ಅಪ್ರತಿಮ ಸಾಧನೆ ಮಾಡಿದವರು ಶಂಕರ್ ನಾಗ್.

ಚಿತ್ರರಂಗಕ್ಕೆ ಪ್ರವೇಶಿಸಿದ ಎರಡನೆ ವರ್ಷದಲ್ಲೇ ಅವರು ನಿರ್ಮಿಸಿ, ನಿರ್ದೇಶಿಸಿದ ಮಿಂಚಿನ ಓಟ ಅವರಲ್ಲಿನ ಸೃಜನಶೀಲತೆಗೆ ಒಂದು ಸಾಕ್ಷಿ. ಮೂವರು ದರೋಡೆಕೋರರ ಬದುಕನ್ನು ಚಿತ್ರಿಸುವ ಒಂದು ಸಾಧಾರಣ ಕಥಾಹಂದರಕ್ಕೆ ಸಾಮಾಜಿಕ ಮತ್ತು ಮಾನವೀಯ ಸ್ಪರ್ಶ ನೀಡುವ ಮೂಲಕ ಶಂಕರ್ ನಾಗ್ ಮಿಂಚಿನ ಓಟ ಚಿತ್ರವನ್ನು ಕನ್ನಡದ ಮೇರು ಚಿತ್ರವನ್ನಾಗಿ ಮಾಡಿದ್ದರು. ಸಾಮಾಜಿಕವಾಗಿ ಒಪ್ಪಲಾಗದ, ಕಾನೂನಾತ್ಮಕವಾಗಿ ಅಪರಾಧದ ಚೌಕಟ್ಟಿಗೆ ಒಳಪಡುವ ಕಳ್ಳರ ಪಾತ್ರವನ್ನು ತೆರೆಯ ಮೇಲೆ ಬಿಂಬಿಸುವಾಗ, ಅವರ ಬದುಕಿನ ಹಿಂದಿರುವ ಕರಾಳ ಛಾಯೆಯನ್ನು ಮುನ್ನೆಲೆಗೆ ತಂದು, ಪ್ರೇಕ್ಷಕರಲ್ಲಿ ಸಂಚಲನ ಮೂಡಿಸಿದ್ದು ಈಚಿತ್ರದ ಒಂದು ಹೆಗ್ಗಳಿಕೆ. ಇಂತಹುದೇ ಮತ್ತೊಂದು ಪ್ರಯತ್ನವನ್ನು ಅವರ ಆ್ಯಕ್ಸಿಡೆಂಟ್ ಚಿತ್ರದಲ್ಲಿ ಕಾಣಬಹುದಾಗಿತ್ತು. ಇತ್ತೀಚೆಗೆ ನಡೆದ ಲಖೀಂಪುರ ಹತ್ಯೆಗಳನ್ನು ಬಹುಪಾಲು ಹೋಲುವ ಈ ಚಿತ್ರದಲ್ಲಿ ಶಂಕರ್ ನಾಗ್ ಮುಖ್ಯ ಪಾತ್ರಧಾರಿಯಾದರೂ ಅವರು ಆ ಚಿತ್ರದ ಹೀರೋ ಅಲ್ಲ. ಏಕೆಂದರೆ ಆ ಚಿತ್ರದಲ್ಲಿ ಕತೆ ಮತ್ತು ಸನ್ನಿವೇಶಗಳೇ ಹೀರೋ ಸ್ಥಾನವನ್ನು ತುಂಬಿದ್ದವು.

1984ರಲ್ಲಿ ಚಿತ್ರ ಬಿಡುಗಡೆಯಾದ ಕೆಲವೇ ದಿನಗಳ ನಂತರ ಪ್ರಧಾನಿ ಇಂದಿರಾಗಾಂಧಿ ಹತ್ಯೆಯಾಗಿತ್ತು. ಈ ಚಿತ್ರ ರಾಜಕೀಯ ನಾಯಕ ಹತ್ಯೆಯೊಂದಿಗೆ ಕೊನೆಯಾಗಬೇಕಿತ್ತು. ಆದರೆ ಇಂದಿರಾ ಹತ್ಯೆಯ ಸುದ್ದಿ ಕೇಳಿದ ಕೂಡಲೇ ಅಂತಿಮ ದೃಶ್ಯವನ್ನು ಬದಲಿಸಿ, ಕೊಲೆ, ಹತ್ಯೆಗಳಿಂದ ನ್ಯಾಯ ಸಾಧಿಸಿದಂತಾಗುವುದಿಲ್ಲ ಎಂಬ ಸಂದೇಶದೊಂದಿಗೆ ಚಿತ್ರ ಕೊನೆಯಾಗುತ್ತದೆ. ಇದು ಶಂಕರ್ ಅವರಲ್ಲಿದ್ದ ಸಾಮಾಜಿಕ ಪ್ರಜ್ಞೆಯ ಸಂಕೇತ. ಸೃಜನಶೀಲತೆಯ ದ್ಯೋತಕ. ಆರ್ ಕೆ ನಾರಾಯಣ್ ಅವರ ಮಾಲ್ಗುಡಿ ಡೇಸ್ ಕತೆಯನ್ನು ಕಿರುತೆರೆಯ ಮೇಲೆ ಧಾರಾವಾಹಿಯಾಗಿ ಪ್ರವಹಿಸುವಂತೆ ಮಾಡಿದ ಕೀರ್ತಿಯೂ ಶಂಕರ್ ನಾಗ್‍ಗೆ ಸಲ್ಲಬೇಕು. ಈ ಧಾರಾವಾಹಿಯನ್ನು ಕೇವಲ ಜನಪ್ರಿಯತೆಯ ದೃಷ್ಟಿಯಿಂದ ನೋಡದೆ, ಒಂದು ಉತ್ತಮ ಕೃತಿಯನ್ನು ಹೇಗೆ ತೆರೆಯ ಮೇಲೆ ಪ್ರದರ್ಶಿಸಲು ಸಾಧ್ಯ, ಜನರಿಗೆ ಮುಟ್ಟಿಸಲು ಸಾಧ್ಯ ಎಂದು ನಿರೂಪಿಸುವ ಶಂಕರ್ ನಾಗ್ ಅವರ ಪ್ರತಿಭೆಯ ಮೂಲಕ ನೋಡಬೇಕು. ಸ್ವಾಮಿ ಅಂಡ್ ಫ್ರೆಂಡ್ಸ್ ಆ ಕಾಲಘಟ್ಟದಲ್ಲಿ ಸಂಚಲನ ಮೂಡಿಸುವಂತೆಯೇ ಈಗಲೂ ಮೂಡಿಸುವ ಶಕ್ತಿ ಹೊಂದಿದೆ. ಇದರ ಶ್ರೇಯ ಶಂಕರ್‍ಗೆ ಸಲ್ಲುತ್ತದೆ.

ಸ್ಟಾರ್ ಗಿರಿ ಅಥವಾ ತಾರಾ ವರ್ಚಸ್ಸು ಶಂಕರ್‍ನಾಗ್ ಅವರಿಗೆ ಒಲಿದು ಬಂದಿದ್ದರೆ ಅದು ಈ ಕಲಾತ್ಮಕತೆಯ ಮೂಲಕ ಎಂದು ನಿಸ್ಸಂಶಯವಾಗಿ ಹೇಳಬಹುದು. ಅವರ “ ನೋಡಿ ಸ್ವಾಮಿ ನಾವಿರೋದೆ ಹೀಗೆ ” ಚಿತ್ರವೂ ಮಿಂಚಿನ ಓಟದಂತೆಯೇ ಮಿಂಚಿದ ಮತ್ತೊಂದು ಚಿತ್ರ. “ ಕಣ್ಣೀರು ಹಾಕುವುದೇ ನಟನೆಯಲ್ಲ ” ಎಂದು ನಾಸಿರುದ್ದಿನ್ ಷಾ ಒಂದು ಸಂದರ್ಭದಲ್ಲಿ ಹೇಳುತ್ತಾರೆ. ಹೌದು, ನಟನೆ ಎಂದರೆ ಪ್ರೇಕ್ಷಕರನ್ನು ನಗಿಸಿ, ಅಳಿಸಿ, ಮನರಂಜನೆ ನೀಡುವುದು ಮಾತ್ರವೇ ಅಲ್ಲ, ಅದನ್ನೂ ಮೀರಿದ ಒಂದು ಕಲಾಭಿವ್ಯಕ್ತಿ ಒಬ್ಬ ನಟನಿಂದ ಹೊರಬರುವುದಾದರೆ ಅದನ್ನು ಪ್ರಬುದ್ಧತೆ ಎನ್ನಬಹುದು. ಈ ವಾಸ್ತವವನ್ನು ನಿರೂಪಿಸಿದವರೂ ಶಂಕರ್ ನಾಗ್. ಹಾಗಾಗಿಯೇ ಆವರೆಗೂ ಕನ್ನಡದ ಮೇರು ನಟರೂ ಯೋಚಿಸಲಾಗದಿದ್ದ ಒಂದು ಮಹತ್ತರ ಕೆಲಸವನ್ನು ಶಂಕರ್ ನಾಗ್ ಸಂಕೇತ್ ಸ್ಟುಡಿಯೋ ನಿರ್ಮಾಣದ ಮೂಲಕ ಮಾಡಿದ್ದರು. ಕೇವಲ ಹತ್ತು ವರ್ಷಗಳ ಅವಧಿಯಲ್ಲಿ ಒಬ್ಬ ನಟ ತನ್ನದೇ ಆದ ಸ್ಟುಡಿಯೋ ಒಂದನ್ನು ನಿರ್ಮಿಸಿ, ಕನ್ನಡ ಚಿತ್ರರಂಗಕ್ಕೆ ಅರ್ಪಿಸಿರುವುದು ಅವರ ಮೇರು ಸಾಧನೆ ಎಂದೇ ಹೇಳಬಹುದು.

ಡಾ ರಾಜ್ ಕುಮಾರ್ ಅವರನ್ನು, ಅವರ ಎಂದಿನ ಹೀರೋ ಇಮೇಜಿನಿಂದ ಹೊರತಂದು, ಜನಕ್ಕೆ ಮೆಚ್ಚುಗೆ ಆಗುವ ಹಾಗೆ ಮಾಡಿದ ಚಿತ್ರ “ ಒಂದು ಮುತ್ತಿನ ಕಥೆ ”. ಈ ಚಿತ್ರದ ಮೂಲಕ ಕಮರ್ಷಿಯಲ್ ಚೌಕಟ್ಟಿನಲ್ಲೇ ಇಂತಹ ಒಂದು ಸಂದೇಶಾತ್ಮಕ ಚಿತ್ರಗಳನ್ನು ನೀಡಬಹುದು ಎಂದು ನಿರೂಪಿಸಿದ್ದು ಶಂಕರ್ ಅವರ ಹೆಗ್ಗಳಿಕೆ. ಈ ಚಿತ್ರದಲ್ಲಿನ ಕಡಲ ನೀರಿನೊಳಗೆ ಚಿತ್ರೀಕರಣ ನಡೆಸುವ ದೃಶ್ಯಗಳು ಎಂದೆಂದಿಗೂ ಅಮರ ಎನ್ನಬಹುದು. ಒಂದಾನೊಂದು ಕಾಲದಲ್ಲಿ ಚಿತ್ರದ ಗಂಡುಗಲಿ ಒಂದೇ ರೀತಿಯ ಪಾತ್ರಗಳಿಗೆ ಒಗ್ಗಿಕೊಳ್ಳಲಿಲ್ಲ. ಹಾಗೆಯೇ ಅವರು ನಿರ್ದೇಶಿಸಿದ ಎಂಟು ಚಿತ್ರಗಳೂ ಸಹ ಒಂದೇ ರೀತಿಯಲ್ಲಿ ಹೊರಬರಲಿಲ್ಲ. ಏಕತಾನತೆಯಿಲ್ಲದ ಒಂದು ಕಲಾಭಿವ್ಯಕ್ತಿಯನ್ನು ಡಾ ರಾಜ್ ಅವರಿಂದಲೂ ಹೊರಹೊಮ್ಮಿಸಿದ ಶ್ರೇಯ ಶಂಕರ್ ನಾಗ್ ಅವರಿಗೆ ಸಲ್ಲಬೇಕು. ಶಂಕರ್ ಸ್ಟಾರ್‍ಗಿರಿಗೆ ಹಂಬಲಿಸದಿದ್ದರೂ “ ಆಟೋ ರಾಜ ” ಅವರನ್ನು ಒಮ್ಮೆಲೆ ಸ್ಟಾರ್ ಮಾಡಿಬಿಟ್ಟಿತ್ತು. ಸಾಧಾರಣ ಕಥಾ ಹಂದರ ಹೊಂದಿದ್ದ ಈ ಚಿತ್ರವನ್ನು ಒಂದು ಶ್ರಮಿಕ ವರ್ಗದ ಅಸ್ಮಿತೆಯ ಸಂಕೇತದಂತೆ ಮಾಡಿದ್ದು ಶಂಕರ್ ನಾಗ್ ಅವರ ಸಹಜಾಭಿನಯ. ಅವರ ನಡಿಗೆಯ ಶೈಲಿ, ಫೈಟಿಂಗ್ ಶೈಲಿ ಹಲವಾರು ಯುವ ನಾಯಕರಿಗೆ ಮಾದರಿಯಾಗಿದ್ದೂ ಹೌದು.

ಕಲಾತ್ಮಕ ಚಿತ್ರಗಳು ಹಿಂಬದಿಗೆ ಸರಿಯುತ್ತಿದ್ದ ಸಂದರ್ಭದಲ್ಲಿ, ಕಮರ್ಷಿಯಲ್ ಚಿತ್ರಗಳೊಂದೇ ಕನ್ನಡ ಚಿತ್ರರಂಗದ ಜೀವಾಳ ಎನ್ನುವಂತಹ ಪರಿಸ್ಥಿತಿಯಲ್ಲಿ ವಿಭಿನ್ನ ಯಶಸ್ವಿ ಪ್ರಯೋಗಗಳನ್ನು ಮಾಡಿದ್ದು ಶಂಕರ್ ನಾಗ್ ಅವರ ಹೆಗ್ಗಳಿಕೆ. ಅವರ ಸೃಜನಶೀಲತೆಯನ್ನು ಗುರುತಿಸಬೇಕಿರುವುದೂ ಇಲ್ಲಿಯೇ. ಇದರೊಟ್ಟಿಗೆ ಅವರ ಆಲೋಚನೆಯ ಮೂಸೆಯಲ್ಲಿದ್ದ ಮೆಟ್ರೋ ರೈಲು ಯೋಜನೆ, ಮುಂತಾದ ಯೋಜನೆಗಳು ಅವರ ಕಾಲಾನಂತರದಲ್ಲಿ ಸರ್ಕಾರಗಳ ಕಣ್ತೆರೆಸಿದ್ದವು. ಇಂತಹ ಮೇರು ನಟನ, ಸೃಜನಶೀಲ ಕಲಾವಿದನ ಜನ್ಮದಿನವನ್ನು ಇಂದು ನಾಡಿನಾದ್ಯಂತ ಆಚರಿಸಲಾಗುತ್ತಿದೆ. ಬಹುಶಃ ಶಂಕರ್ ನಾಗ್ ಈವರೆಗೆ ನಮ್ಮ ನಡುವೆ ಇದ್ದಿದ್ದರೆ, ಕನ್ನಡ ಚಿತ್ರರಂಗ ಭಿನ್ನವಾಗಿಯೇ ಕಾಣುತ್ತಿತ್ತು. ಪರದೆಯಿಂದಾಚೆಗೆ ಮತ್ತು ತನ್ನ ಹೀರೋ ಇಮೇಜಿನಿಂದಾಚೆಗೆ ಯೋಚಿಸುವ ಒಬ್ಬ ಮೇರು ನಟನನ್ನು ಕನ್ನಡ ಚಿತ್ರರಂಗ ಕಳೆದುಕೊಂಡಿದೆ. ಅವರ ಜನ್ಮದಿನದಂದು ಶಂಕರ್ ನಾಗ್ ಅವರನ್ನು ಸ್ಮರಿಸುವುದೆಂದರೆ ಅವರು ಬಿಟ್ಟುಹೋದ ಹೆಜ್ಜೆ ಗುರುತುಗಳನ್ನು ಗಮನಿಸುವುದೇ ಆಗಿದೆ. ಈ ಹೆಜ್ಜೆ ಗುರುತುಗಳನ್ನು ಅನುಸರಿಸುವುದೇ ಶಂಕರ್ ನಾಗ್ ಅವರಿಗೆ ನಾವು ಸಲ್ಲಿಸಬಹುದಾದ ಭಾವಪೂರ್ಣ, ಅಭಿಮಾನಪೂರ್ಣ ಶ್ರದ್ಧಾಂಜಲಿ.

ನಮ್ಮನ್ನಗಲಿದ್ದರೂ ನಮ್ಮ ನಡುವೆ ಜೀವಂತವಾಗಿ, ಜೀವಂತಿಕೆಯಿಂದಿರುವ ಶಂಕರ್ ನಾಗ್‍ಗೆ ಜನ್ಮ ದಿನದ ಶುಭಾಶಯಗಳನ್ನು ಕೋರುವುದು ಸಹಜವೇ ಆಗಿರಲು ಸಾಧ್ಯ.

ಇತ್ತೀಚಿನ ಸುದ್ದಿ