ಅಶ್ವಿನಿ ಅಳುತ್ತಾ “ಹಿ ಇಸ್ ನೋ ಮೋರ್” ಎಂದಾಗ ಹುಚ್ಚನಂತೆ ಓಡಾಡಿದ್ದೆ | ಅಪ್ಪು ಸಾವಿನ ಸುದ್ದಿ ತಿಳಿದಾಗ ಶಿವಣ್ಣನ ಸ್ಥಿತಿ ಏನಾಗಿತ್ತು?
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಿಧನರಾದ ಹಿನ್ನೆಲೆಯಲ್ಲಿ ಇನ್ನೂ ಕೂಡ ರಾಜ್ಯದಲ್ಲಿ ಜನತೆಯ ಮನಸ್ಸು ದುಃಖದ ಕಾರ್ಮೋಡ ಕವಿದಂತೆ ಇದೆ. ಪುನೀತ್ ಯಾರು? ಒಬ್ಬ ನಟ, ಒಬ್ಬ ನಟ ನಿಧನರಾದಾಗ ಎಲ್ಲೋ ನಮ್ಮ ಕುಟುಂಬದ ಒಬ್ಬ ವ್ಯಕ್ತಿಯನ್ನೇ ಕಳೆದುಕೊಂಡಷ್ಟು ದುಃಖವನ್ನು ರಾಜ್ಯದ ಜನತೆ ತೋರಿಸಿದ್ದರೆಂದರೆ, ಅಪ್ಪು ಅದೆಷ್ಟು ಪ್ರೀತಿ ಸಂಪಾದಿಸಿದ್ದರು ಎನ್ನುವುದನ್ನು ಊಹಿಸಲೂ ಸಾಧ್ಯವಿಲ್ಲ.
ಅಪ್ಪು ಅಣ್ಣ ನಟ ಶಿವರಾಜ್ ಕುಮಾರ್ ಅವರು ಕೂಡ ಇದರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಪ್ಪು ಇಷ್ಟೊಂದು ಜನಪರವಾದ ಕೆಲಸಗಳನ್ನು ಮಾಡುತ್ತಿದ್ದ ಎನ್ನುವುದು ನನಗೂ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. ಪುನೀತ್ ರಾಜ್ ಕುಮಾರ್ ಅವರು ತಮ್ಮ ತಂದೆಯ ಮಾತುಗಳನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದರು. ಡಾ.ರಾಜ್ ಕುಮಾರ್ ಅವರು ನಿಧನರಾದ ಬಳಿಕವೂ ಅವರ ಪ್ರತಿಯೊಂದು ಮಾತನ್ನೂ ನೆನಪಿನಲ್ಲಿಟ್ಟುಕೊಂಡು ಅದನ್ನು ಪಾಲಿಸುತ್ತಿದ್ದರು. ಹೀಗಾಗಿಯೇ ರಾಜ್ ಕುಮಾರ್ ಅವರು ಹೇಳಿದಂತೆ, ನಾವು ಬಲಗೈಯಲ್ಲಿ ಮಾಡಿದ ಸಹಾಯ ಬಲಗೈಗೆ ಗೊತ್ತಾಗ ಬಾರದು ಅನ್ನುತ್ತಿದ್ದರಂತೆ. ಇದನ್ನು ಚಾಚೂ ತಪ್ಪದೇ ಪುನೀತ್ ಮಾಡುತ್ತಿದ್ದರು. ಒಬ್ಬರಿಗೆ ಮಾಡಿದ ಸಹಾಯದ ಬಗ್ಗೆ ಸಾರ್ವಜನಿಕವಾಗಿ ಅವರು ಎಂದಿಗೂ ಮಾತನಾಡಿಯೇ ಇರಲಿಲ್ಲ.
ಅಪ್ಪುವಿನ ಸಾವಿನ ಸುದ್ದಿಯಿಂದ ಶಿವರಾಜ್ ಕುಮಾರ್ ಗೆ ಸುನಾಮಿ ಬಡಿದಂತಾಗಿತ್ತು!
ಪುನೀತ್ ರಾಜ್ ಕುಮಾರ್ ಅವರು ನಿಧನರಾದ ದಿನವೇ ಶಿವರಾಜ್ ಕುಮಾರ್ ಅವರ ಭಜರಂಗಿ –2 ಚಿತ್ರ ಬಿಡುಗಡೆಯಾಗಿತ್ತು. ಪುನೀತ್ ರಾಜ್ ಕುಮಾರ್ ಅಂದು ಭಜರಂಗಿ –2 ಸಿನಿಮಾ ನೋಡಲು ಸಿದ್ಧತೆ ಕೂಡ ನಡೆಸುತ್ತಿದ್ದರು. ಆದರೆ ಪ್ರಕೃತಿಯ ಆಟವೇ ಬೇರೆಯಾಗಿತ್ತು.
ಇನ್ನೊಂದೆಡೆ, ಭಜರಂಗಿ –2 ಚಿತ್ರ ಬಿಡುಗಡೆಯಾಗುವ ಹಿನ್ನೆಲೆಯಲ್ಲಿ ನಟ ಶಿವರಾಜ್ ಕುಮಾರ್ ಅವರು ಥಿಯೇಟರ್ ಗೆ ಹೋಗಿ ಸಿನಿಮಾ ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಳಿಕ ದೇವಸ್ಥಾನಕ್ಕೆ ಹೋಗಿ ಮನೆಗೆ ಹಿಂದಿರುಗಿದ್ದರು. ಬ್ರೇಕ್ ಫಾಸ್ಟ್ ಮಾಡಿ, ಮನೆಯಲ್ಲಿ ಸುಮ್ಮನೆ ಕುಳಿತಿದ್ದರು. ಈ ವೇಳೆ ಸಿನಿಮಾ ಬಿಡುಗಡೆ ಬಗ್ಗೆ ಕೆಲವರು ಕರೆ ಮಾಡುತ್ತಿದ್ದರು.
ಈ ವೇಳೆ ಪುನೀತ್ ಗೆ ಹುಷಾರಿಲ್ಲ ಎಂದು ಫೋನ್ ಬಂದಿದೆ. ಏನೋ ಸಣ್ಣ ಪುಟ್ಟದಾಗಿ ಹುಷಾರಿಲ್ಲವಾಗಿರಬೇಕು ಎಂದು ಶಿವರಾಜ್ ಕುಮಾರ್ ಅಂದುಕೊಂಡರಂತೆ. ಆದರೂ, ಪುನೀತ್ ಪತ್ನಿ ಅಶ್ವಿನಿ ಅವರಿಗೆ ಕರೆ ಮಾಡಿದಾಗ, ಅಶ್ವಿನಿ ಅಳುತ್ತಾ, ಹಿ ಇಸ್ ನೋ ಮೋರ್(ಅವರು ಇನ್ನಿಲ್ಲ) ಎಂದು ಹೇಳಿದ್ದಾರೆ. ಆ ಮಾತನ್ನು ಕೇಳಿ ಶಿವರಾಜ್ ಕುಮಾರ್ ಅವರ ಮನಸ್ಸಿಗೆ ತೀವ್ರವಾಗಿ ಆಘಾತವಾಗಿದೆ. ಆ ಮಾತನ್ನು ಕೇಳಲು ಕೂಡ ಅವರಿಂದ ಸಾಧ್ಯವಾಗಲಿಲ್ಲವಂತೆ.
ಪುನೀತ್ ಇನ್ನಿಲ್ಲ ಎಂಬ ವಾಕ್ಯ ದೊಡ್ಡ ಸುನಾಮಿ ಹೊಡೆದಂತೆ ಅವರಿಗೆ ಭಾಸವಾಗಿತ್ತಂತೆ. ಈ ವೇಳೆ ಏನು ಮಾಡಬೇಕು ಎನ್ನುವುದು ತೋಚದೇ ಅವರು, ಮನೆಯಲ್ಲಿ ಆಚೆ ಈಚೆ ನಡೆಯುತ್ತಾ, ಹುಚ್ಚನಂತೆ ಓಡಾಡಿದ್ದರಂತೆ. ತಕ್ಷಣವೇ ಆಸ್ಪತ್ರೆಯತ್ತ ಹೊರಟು ಬಂದಿದ್ದಾರಂತೆ. ತಾನು ಕೇಳಿದ ಸುದ್ದಿ ಸುಳ್ಳಾಗಲಿ. ಆ ರೀತಿ ಏನೂ ಆಗಿರದಿರಲಿ ಎನ್ನುತ್ತಾ ಆಸ್ಪತ್ರೆಯ ಬಳಿಗೆ ಶಿವರಾಜ್ ಕುಮಾರ್ ಆಗಮಿಸಿದ್ದರಂತೆ. ಆದರೆ, ಆ ಸುದ್ದಿ ಸತ್ಯವಾಗಿತ್ತು. ಅಪ್ಪು ಇನ್ನೆಂದೂ ಬಾರದ ಲೋಕಕ್ಕೆ ಹೊರಟು ಹೋಗಿದ್ದರು.
ನಟ ಶಿವರಾಜ್ ಕುಮಾರ್ ಅವರು ಇನ್ನೂ ಕೂಡ ಅಪ್ಪುವಿನಿ ನಿಧನದ ಶಾಕ್ ನಿಂದ ಹೊರ ಬಂದಿಲ್ಲ. ಆದರೆ, ರಾಜ್ಯದ ಜನತೆ ಪುನೀತ್ ಮೇಲೆ ತೋರಿಸುತ್ತಿರುವ ಪ್ರೀತಿ ಇಂದು ಪುನೀತ್ ಕುಟುಂಬಕ್ಕೆ ದೊಡ್ಡ ಬಲದಂತಾಗಿದೆ. ಮಾಧ್ಯಮವೊಂದರ ಜೊತೆಗೆ ಪುನೀತ್ ನಿಧನದ ಬಗ್ಗೆ ಮಾತನಾಡಿದ ನಟ ಶಿವರಾಜ್ ಕುಮಾರ್ ಅವರು ಅಂದು ನಡೆದ ಘಟನೆಗಳನ್ನು ವಿವರಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG