ರಿಪಬ್ಲಿಕ್ ಟಿವಿಯ ವಿತರಣಾ ಮುಖ್ಯಸ್ಥನ ಬಂಧನ | ಟಿ ಆರ್ ಪಿ ಹಗರಣದ ಸುಳಿಯಲ್ಲಿ ರಿಪಬ್ಲಿಕ್ ಟಿವಿ
ಮುಂಬೈ: ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿಯ ಬಲಪಂಥೀಯ ಪತ್ರಕರ್ತ ಅರ್ನಾಬ್ ಗೋಸ್ವಾಮಿಯನ್ನು ಪೊಲೀಸರು ಬಂಧಿಸಿದ ಬಳಿಕ, ಇದೀಗ ಟಿ ಆರ್ ಪಿ ಹಗರಣಕ್ಕೆ ಸಂಬಂಧಿಸಿದಂತೆ ವಿವಾದಿತ ರಿಪಬ್ಲಿಕ್ ಟಿವಿಯ ಇನ್ನೋರ್ವನನ್ನು ಬಂಧಿಸಲಾಗಿದೆ.
ರಿಪಬ್ಲಿಕ್ ಟಿವಿಯ ವಿತರಣಾ ಮುಖ್ಯಸ್ಥ ಘಾನಶ್ಯಾಮ್ ಸಿಂಗ್ ಬಂಧಿತ ಆರೋಪಿಯಾಗಿದ್ದಾನೆ. ಈತನ ಬಂಧನದೊಂದಿಗೆ ಟಿ ಆರ್ ಪಿ ಹಗರಣಕ್ಕೆ ಸಂಬಂಧಿಸಿದಂತೆ ಒಟ್ಟು 12 ಖದೀಮರ ಬಂಧನವಾದಂತಾಗಿದೆ.
ರಿಪಬ್ಲಿಕ್ ಟಿವಿಯನ್ನು ಯಾರೂ ನೋಡದೇ ಇದ್ದರೂ ಕೂಡ, ರಿಪಬ್ಲಿಕ್ ಟಿವಿ ಚಾನೆಲ್ ನ್ನು ಸುಮ್ಮನೆ ಆನ್ ಮಾಡಿಡಲು ಹಣ ನೀಡಲಾಗಿತ್ತು ಎಂದು ಆರೋಪಿಸಲಾಗಿತ್ತು. ಟಿ ಆರ್ ಪಿ ಹಗರಣ ಹಾಗೂ ರಿಪಬ್ಲಿಕ್ ಟಿವಿ ರಾಜಕೀಯ ನಾಟಕೀಯ ಬಣ್ಣ ಪಡೆದುಕೊಂಡಿದೆ. ಅರ್ನಾಬ್ ಗೋಸ್ವಾಮಿ ಬಿಜೆಪಿ ಪಕ್ಷಕ್ಕೆ ನೇರವಾಗಿ ಬೆಂಬಲ ಸೂಚಿಸುವ ಮೂಲಕ ಪತ್ರಿಕಾ ಧರ್ಮವನ್ನೇ ಮರೆತಂತೆ ವರ್ತಿಸುತ್ತಿದ್ದರು. ಇದರ ವಿರುದ್ಧ ಸಾರ್ವಜನಿಕರಿಂದಲೂ ತೀವ್ರ ಆಕ್ರೋಶಗಳು ಕೇಳಿ ಬಂದಿದ್ದವು. ಆದರೆ ಟಿ ಆರ್ ಪಿಯಲ್ಲಿ ಕೂಡ ಸುಳ್ಳನ್ನು ಸೃಷ್ಟಿಸುವ ಮೂಲಕ ವಿವಿಧ ಮಾಧ್ಯಮಗಳ ಕೆಂಗಣ್ಣಿಗೆ ಗೋಸ್ವಾಮಿ ಕಾರಣವಾಗಿದ್ದರು.
ಇನ್ನೂ ರಿಪಬ್ಲಿಕ್ ಟಿವಿ ವಿರುದ್ಧ ಆರೋಪಗಳು ಸುಳ್ಳು ಎಂದು ಬಿಜೆಪಿ ಪರ ನಿಲುವಿನ ಅಧಿಕಾರಿಗಳು ಹೇಳಿದ್ದು, ರಾಜಕೀಯದ ಭಾಗವಾಗಿ ರಿಪಬ್ಲಿಕ್ ಚಾನೆಲ್ ನ್ನು ಮುಂಬೈ ಪೊಲೀಸರು ಉದ್ದೇಶ ಪೂರ್ವಕವಾಗಿ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.