ಮಾರಮ್ಮ, ಮಹಾಕಾಳಿಯೂ ಮಾಂಸಾಹಾರಿಗಳಲ್ಲವೇ? | ಹಂಸಲೇಖರನ್ನು ವಿಲನ್ ಮಾಡಿದ ಮಾಧ್ಯಮಗಳು
- ಗಣೇಶ್ ಕೆ.ಪಿ.
“ಅನ್ಯಾಯ ಮಾಡಿದವ ಅನ್ನ ತಿಂದ ,ಸತ್ಯ ಹೇಳಿದವ ಸತ್ತೇ ಹೋದ” ಎನ್ನುವ ಮಾತು ಪ್ರಸ್ತುತ ನಿಜವಾಗ್ತಿದೆಯೋ ಏನೋ ಅನ್ನುವಂತಹ ಅನುಮಾನಗಳು ಸದ್ಯಮೂಡಿವೆ. ಖ್ಯಾತ ಸಂಗೀತಗಾರ ಹಂಸಲೇಖ ಅವರು ನೀಡಿದ ಹೇಳಿಕೆಯನ್ನು ಮುಂದಿಟ್ಟು ಕೊಂಡು ಕೆಲವರು ದೇಶದ ಬಹುಸಂಖ್ಯಾತ ಮಾಂಸಾಹಾರಿಗಳನ್ನು ಅತ್ಯಂತ ನಿಕೃಷ್ಟ ಪದಗಳಿಂದ ನಿಂದಿಸುತ್ತಿರುವುದು ನಿಜಕ್ಕೂ ಹೀನಾಯ ಎಂದೇ ಹೇಳಬಹುದು.
ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಮಾಂಸಾಹಾರಿ ಹಾಗೂ ಸಸ್ಯಾಹಾರಿಗಳ ಪರ ವಿರೋಧಗಳ ಚರ್ಚೆಗೆ ಕಾರಣವಾಗಿದೆ. ಹಂಸಲೇಖ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ತಕ್ಷಣವೇ, ಬಹುತೇಕ ಪಾಲು ಮಾಂಸಹಾರಿ ವಿರೋಧಿಗಳೇ ಸಂಪಾದಕರಾಗಿರುವ ಸುದ್ದಿ ಮಾಧ್ಯಮಗಳು ಹಂಸಲೇಖ ಅವರನ್ನು ‘ನಾತ ಬ್ರಹ್ಮ, ಮಾಂಸಲೇಖ’ ಎಂದು ಅವಮಾನಿಸಿದವು. ಈ ಮೂಲಕ ತಮ್ಮ ಮಾಂಸಹಾರಿ ವಿರೋಧಿ ಮನೋಭಾವವನ್ನು ತೋರಿದವು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಿಧನರಾದ ಸಂದರ್ಭದಲ್ಲಿ, ಅವರ ಕುಟುಂಬಸ್ಥರು ಅಭಿಮಾನಿಗಳಿಗಾಗಿ ನಡೆಸಿದ ಅನ್ನ ಸಂತರ್ಪಣೆಯಲ್ಲಿ ನಾನ್ ವೆಜ್ ಮಾಡಿರುವುದಕ್ಕೂ ಕೆಲವು ಚಾನೆಲ್ ಗಳು ಕೊಂಕು ಮಾತುಗಳನ್ನಾಡಿರುವುದು ಕೂಡ ಆ ಸಂದರ್ಭದಲ್ಲಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಹಂಸಲೇಖ ಅವರು ಮಾಂಸಾಹಾರವಾಗಿರುವ ಕುರಿಯ ರಕ್ತ ಫ್ರೈ, ಲಿವರ್ ಹೀಗೆ ವಿವಿಧ ರೀತಿಯ ರುಚಿಕರ ಮಾಂಸಹಾರಗಳ ಬಗ್ಗೆ ಮಾತನಾಡಿದ್ದೇ ತಪ್ಪು. ಅವರು ರಾಕ್ಷಸರಂತೆ ಮಾತನಾಡಿದರು ಎಂಬ ಭಾವನೆಗಳನ್ನು ಸುದ್ದಿವಾಹಿನಿಗಳು ಸೃಷ್ಟಿಸುವ ಮೂಲಕ ಒಂದು ವರ್ಗದ ಸಂಸ್ಕೃತಿಯನ್ನು ಮಾಂಸಾಹಾರಿಗಳ ಮೇಲೆ ಹೇರಲು ಪ್ರಯತ್ನಿಸಿರುವುದು ನಿಜಕ್ಕೂ ದುರಂತವಾಗಿದೆ.
ಹಂಸಲೇಖ ಎಲ್ಲೂ ತಪ್ಪು ಮಾತನಾಡಿಲ್ಲ. ಪೇಜಾವರರು ದಲಿತರ ಮನೆಗೆ ಭೇಟಿ ನೀಡಬಹುದು. ಆದರೆ, ದಲಿತರು ಅವರಿಗೆ ಕೋಳಿ ಕೊಟ್ಟರೆ ಅವರು ತಿನ್ನಕ್ಕಾಗುತ್ತಾ? ಕುರಿಯ ರಕ್ತ ಫ್ರೈ ಮಾಡಿಕೊಟ್ರೆ ತಿನ್ನಕ್ಕಾಗುತ್ತಾ? ಎಂದಷ್ಟೇ ಪ್ರಶ್ನಿಸಿದ್ದಾರೆ. ಪೇಜಾವರರು ಸಸ್ಯಹಾರಿಗಳು, ಅವರು ಮಾಂಸಾಹಾರಿಗಳ ಮನೆಗೆ ಬರಬಹುದು ಆದರೆ ಮಾಂಸಾಹಾರ ತಿನ್ನಲು ಸಾಧ್ಯವಿಲ್ಲ. ಯಾಕೆಂದರೆ, ಇಲ್ಲಿ ಭಿನ್ನವಾದ ಸಂಸ್ಕೃತಿ ಇದೆ ಎನ್ನುವುದನ್ನು ಹಂಸಲೇಖ ಹೇಳಿದರು. ಹಾಗಾಗಿ ಕೇರಿಗೆ ಭೇಟಿ ಎನ್ನುವುದು ಒಂದು ದೊಡ್ಡ ವಿಚಾರ ಅಲ್ಲ. ಅದರಿಂದ ಏನೂ ಉಪಯೋಗವಿಲ್ಲ ಎನ್ನುವುದಷ್ಟೇ ಹಂಸಲೇಖರ ವಾದವಾಗಿತ್ತು. ಒಂದು ವೇಳೆ ಹಂಸಲೇಖ ಅವರು, ಪೇಜಾವರರು ದಲಿತರ ಮನೆಗೆ ಬಂದರೆ, ಕೋಳಿ ಮಾಂಸ ತಿನ್ನಬೇಕು ಎಂದು ಹೇಳಿಕೆ ನೀಡಿದ್ದರೆ ಅದೊಂದು ವಿವಾದ ಎಂದು ಹೇಳಬಹುದಿತ್ತು. ಆದರೆ, ಇದ್ಯಾವುದನ್ನೂ ಹೇಳದೇ ಒಂದು ಇದ್ದರೂ, ಜವಾಬ್ದಾರಿಯುತ ಮಾಧ್ಯಮಗಳು ಒಬ್ಬ ಹಿರಿಯ ಸಂಗೀತಗಾರನನ್ನು ಅತ್ಯಂತ ನಿಕೃಷ್ಟವಾಗಿ, ಒಬ್ಬ ವಿಲನ್ ಆಗಿ ಬಿಂಬಿಸಿದ್ದು ಮಾತ್ರ ಕರ್ನಾಟಕದ ದುರಂತ ಎಂದೇ ಹೇಳಬೇಕು.
ಕರ್ನಾಟಕದಲ್ಲಿ ಎಷ್ಟೋ ದೇವಸ್ಥಾನಗಳಲ್ಲಿ ಮಾಂಸಹಾರವೇ ಪ್ರಧಾನ ಭೋಜನವಾಗಿದೆ ಎನ್ನುವುದನ್ನು ಎಲ್ಲರೂ ತಿಳಿದುಕೊಳ್ಳಬೇಕು. ಮಾರಮ್ಮ, ಮಹಾಕಾಳಿಯ ಆಹಾರ ಮಾಂಸಹಾರ. ಮಾರಮ್ಮ, ಕಾಳಿ ಮಾತೆಗೆ ಕುರಿ, ಕೋಳಿ, ಹಂದಿ, ಆಡುಗಳ ರಕ್ತ ಎಂದರೆ ಪಂಚಪ್ರಾಣ ಎಂದು ಭಕ್ತರು ನಂಬುತ್ತಾರೆ. ಹಾಗಾಗಿಯೇ ಕುರಿ, ಕೋಳಿಗಳನ್ನು ಅರ್ಪಿಸುತ್ತಾರೆ. ರಾಜ್ಯದ ನಾನಾ ಮೂಲೆಗಳಲ್ಲಿಯೂ ಮಾಂಸಹಾರಿ ಮೂಲದ ದೇವಸ್ಥಾನಗಳಿವೆ. ಕರಾವಳಿ ಭಾಗಕ್ಕೆ ಬಂದರೆ ದೈವಾರಾಧನೆ ಇದೆ. ಇಲ್ಲಿನ ದೈವಸ್ಥಾನಗಳಲ್ಲಿ ಮಾಂಸಹಾರವೇ ಪ್ರಧಾನ ಆಹಾರ. ಕಲ್ಲುರ್ಟಿ, ಕಲ್ಕುಡ, ಗುಳಿಗ, ಚಾಮುಂಡಿ, ರಕ್ತ ಚಾಮುಂಡಿ, ಕೊರಗಜ್ಜ ಹೀಗೆ ನೂರಾರು, ಸಾವಿರಾರು ದೈವಗಳು ತುಳುನಾಡಿನಲ್ಲಿವೆ. ಇಲ್ಲಿ ಎಲ್ಲ ಕಡೆಗಳಲ್ಲಿಯೂ ಮಾಂಸಾಹಾರವೇ ಪ್ರಧಾನ ಆಹಾರ. ಹೀಗಿರುವಾಗ, ಮಾಂಸಾಹಾರಿಗಳ ಆಹಾರದ ಬಗ್ಗೆ ಸ್ಪಷ್ಟತೆ ಇಲ್ಲದೇ ಒಂದು ಜವಾಬ್ದಾರಿಯುತ ಮಾಧ್ಯಮವಾಗಿ ಮಾಧ್ಯಮಗಳು ಹಂಸಲೇಖ ಅವರನ್ನು ಒಬ್ಬ ವಿಲನ್ ಎಂಬಂತೆ ಬಿಂಬಿಸಿದ್ದು ಎಷ್ಟು ಸರಿ? ಎನ್ನುವುದನ್ನು ಇದೀಗ ಜನರು ಪ್ರಶ್ನಿಸುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಸಿನಿಮಾಗೆ ಪ್ರೇರಣೆಯಾದ ಪಾರ್ವತಿ ಅಮ್ಮಾಳ್ ಅವರ ಹೆಸರಿಗೆ 10 ಲಕ್ಷ ರೂ. ಠೇವಣಿ ಇಡಲಿರುವ ನಟ ಸೂರ್ಯ!
ಬೆಂಗಳೂರಿನ ಫ್ಲ್ಯಾಟ್ ನಲ್ಲಿ ಬೆಂಕಿ ಅವಘಡ | ಫ್ಲ್ಯಾಟ್ ನಿಂದ ಹೊರಗೆ ಓಡಿ ಬಂದ ನಿವಾಸಿಗಳು
ಬೈಕ್—ಲಾರಿ ಮಧ್ಯೆ ಭೀಕರ ಅಪಘಾತ: ಬೈಕ್ ಸವಾರನ ದಾರುಣ ಸಾವು
ಲೈಂಗಿಕ ದೌರ್ಜನ್ಯ: ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾದ ಬೆನ್ನಲ್ಲೇ ಶಿಕ್ಷಕನ ಸಹಿತ ಇಬ್ಬರ ಬಂಧನ!
ಶಾಕಿಂಗ್ ನ್ಯೂಸ್: 2 ಡೋಸ್ ಕೊವಿಡ್ ಲಸಿಕೆ ಪಡೆದಿದ್ದರೂ ವ್ಯಕ್ತಿ ಕೊರೊನಾಕ್ಕೆ ಬಲಿ