ಕಪ್ಪದ ಮಾನಿ ಹಂದ್ರನ ಬೇಟಿ/ ಪೊದು ಸಂಬಂಧ/ಮದುವೆ: ತುಳುನಾಡಿನ ಅವಳಿ ವೀರರು ಕಾನದ-ಕಟದರು: ಸಂಚಿಕೆ: 07 - Mahanayaka
12:58 AM Wednesday 11 - December 2024

ಕಪ್ಪದ ಮಾನಿ ಹಂದ್ರನ ಬೇಟಿ/ ಪೊದು ಸಂಬಂಧ/ಮದುವೆ: ತುಳುನಾಡಿನ ಅವಳಿ ವೀರರು ಕಾನದ-ಕಟದರು: ಸಂಚಿಕೆ: 07

kanada katada
22/11/2021

  • ಸತೀಶ್ ಕಕ್ಕೆಪದವು

ಸ್ವಭಾವದಲ್ಲಿ ಹತ್ತೂರ ಮಂದಿಯ ಹೊಗಳಿಕೆಗೆ ಪಾತ್ರಳಾದ ಬಾಲೆ ಬೊಲ್ಲೆಯು ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ಇದೇ ಅಂತರಂಗದ ಶುದ್ಧಿ, ಇದೇ ಬಹಿರಂಗ ಶುದ್ಧಿ ಎಂಬುದಾಗಿ ಬದುಕಿ ಬಾಳಿದ್ದನ್ನು ಕಾಣಬಹುದಾಗಿದೆ. ಕಳ್ಳತನ ಮಾಡದೆ, ಕೊಲೆ ಮಾಡದೆ, ಮೋಸ ಮಾಡದೆ, ಮತ್ತೊಬ್ಬರ ಬಯಸದೆ, ಅಮಾಲು ವ್ಯಸನಿಯಾಗದೆ ಬಾಳಿ ಶೀಲವತಿ ಎನಿಸಿರುವುದು ಹೆಮ್ಮೆಯ ವಿಚಾರವೇ ಆಗಿದೆ.

” ಪುಲ್ಯನ ಕಾಂಡೆನೆ ಲಕ್ಯೆರ್ ಬೈದೆದಿ ದೇಯಿಲ….‌‌

ಪುಲ್ಯನ ಕಾಂಡೆನೆ ಲಕ್ಯಲ್ ಬೊಲ್ಲೆ ಪೊಂಜೊವು….

ಕುತ್ತ ಅಟ್ಟೊದ ಕಾಂಟ್ಯನೆ ಕೊರ್ಯೆರ……

ಪಿಂಚೀಲ್ಲ ಕತ್ತಿನೆ ಕೊರ್ಯೆರ ಬೈದೆದಿ…..‌‌

ಕತ್ತಿನೆ ಕಾಂಟ್ಯನೆ ಪತ್ತೊಂದು ಪಿದಡ್ಯೆರ…..

ಕಂತೆ ಪಜಿರ್ ನೆ ಕೆತ್ತೊಡು ಪಂಡ್ ದೆ……

ಇರ್ಂದಲ ಪಟ್ಟೊದ ಬುಟ್ಟಿದ ಮಾನಿಲೆ…..

ಸೇರ್ ದ್ ಸೇರಿಗೆದೊಟ್ಟುಗೆ ಬರುವೆರ..‌‌‌‌‌….‌‌

ಎರ್ಮಲ ಪದವುಗು ಬುಟ್ಟಿದ ಮಾನಿಲು…..

ಅಲೇರ ವಲಚ್ಚಿಲ್ಗ್ ಬುಟ್ಟಿದ ಮಾನಿಲು….. ಸುಬ್ಬಿಗುಡ್ಡೆಗ್ ಬುಟ್ಟಿದ ಮಾನಿಲು……..”

ಹೀಗೆ ಒಂದು ದಿನ ಸುಬ್ಬಿಗುಡ್ಡೆಯಲ್ಲಿ ಕಿಜನೊಟ್ಟು ಬರ್ಕೆಯ ಮೂಲದ ಮಂದಿಯ ಒಡಗೂಡಿ ಸೊಪ್ಪು ಕಟ್ಟಿಗೆಯ ಸಲುವಾಗಿ ಬೊಲ್ಲೆಯು ಬಂದಿರುತ್ತಾಳೆ. ಹಿರಿಯವ್ವ ಬೊಮ್ಮಿ ಹಾಗೆಯೇ ಬೈದೆದಿ ದೇಯಿಯ ಸಲಹೆಯಂತೆ ಸೊಪ್ಪು ಕಡಿದು, ಮಾದೇರು ಬೂರು ಸಹಾಯದಿಂದ ಸೊಪ್ಪು ಕಟ್ಟುವ ಕಲೆಯನ್ನು ಅತಿ ಸುಲಭವಾಗಿ ಕಲಿಸಿಕೊಡುತ್ತಾರೆ‌. ಹಿರಿಯರ ಅನುಭವದ ಕಲೆಯನ್ನು ಮೊದ ಮೊದಲು  ಕಷ್ಟ ಎನಿಸಿದರೂ ಅತಿ ಬೇಗನೆ ಕಲಿತುಕೊಂಡು ಕೆಲಸದಲ್ಲೂ ಮುಂಚೂಣಿಗೆ ಬರಲು ಪ್ರಯತ್ನಿಸುತ್ತಿದ್ದಳು.

ಅಂದು, ಬೋಲ್ತೆರ್ ಸೀಮೆಯ ಬಂಗಾಡಿ ಅರಸರ ಕಪ್ಪದ ಮಾನಿ, ಪಾಲೆದನ್ನಾಯ ಸಂತಾನದ ಕೊನೆಯ ಕೊಂಡಿ  ಈಂದೊಟ್ಟು ಹಂದ್ರನು ಬೋಲ್ತೆರ್, ಪೊಟ್ಟುಕೆರೆ, ವೇಣೂರು ಪಲ್ಗುಣಿ ದಾಟಿ, ಮಲ್ಲತಾರ್, ಎಲ್ಯತಾರ್, ಪೀಂಚಿಲ ತಾರ್ ದಾಟಿಕೊಂಡು ಬೆದ್ರ ಕಡೆಪಲ್ಲ ಸಾಲ್ಮರ ಒಳ ದಾರಿಯಲ್ಲಿ ನಡೆದು ತೋಡಾರು, ಮಿಜಾರುಗಳಲ್ಲಿ ನಡೆದು ಸುಬ್ಬಿಗುಡ್ಡೆಯ ಕಾಲುದಾರಿಯ ಮೂಲಕ ಹೆಜ್ಜೆ ಹಾಕುತ್ತಾನೆ. ಆ ಹೊತ್ತಿಗೆ ರೂಪವತಿ ಬೊಲ್ಲೆಯು ಹಂದ್ರನ ಕಣ್ಣಿಗೆ ಬೀಳುತ್ತಾಳೆ. ಕಪ್ಪ ವಸೂಲಿಯ ತರಾತುರಿಯಲ್ಲಿ ಜವಾಬ್ದಾರಿ ನಡಿಗೆಯನ್ನು ಹಾಕುತ್ತಿದ್ದ ಹಂದ್ರನ ನಡಿಗೆ ಒಂದು ಕ್ಷಣ ಹಿಂದೆ ಸೆಳೆದಂತಾಗುತ್ತದೆ. ಹಸನ್ಮುಖಿಯ ಸೌಂದರ್ಯ ರಾಶಿ ಆತನನ್ನು ಆಕರ್ಷಿಸಿ, ಮುಂದೆ ಹೆಜ್ಜೆ ಹಾಕಲು ಮನಸ್ಸು ಒಪ್ಪಲಿಲ್ಲ. ಹೇಗಾದರೂ ಮಾಡಿ ಪರಿಚಯ ಮಾಡಿಕೊಳ್ಳುವ ಹಂಬಲದಿಂದ ಸೊಪ್ಪು ಕಟ್ಟಿಗೆ ಜೋಡಿಸುತ್ತಿರುವ ಊಳಿಗದವರಲ್ಲಿ ಗುರುತು ಪರಿಚಯ ಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ. ದಣಿವು ನಿವಾರಿಸಲು ಮರದ ನೆರಳನ್ನು ಆಶ್ರಯಿಸಿ ಬಾಯಾರಿಕೆಗೆ ನೀರು ಕೇಳಿ ಪಡೆದು ನೀರಡಿಕೆ ದೂರವಾಗಿಸಿ, ಹಿರಿಯರಿಂದ ವೀಳ್ಯದೆಲೆ ಜಗಿದು ಮೆಲ್ಲಗೆ ಸುಖ ಕಷ್ಟಗಳ ಹರಟೆ ಶುರುಮಾಡುತ್ತಾನೆ. ಸಂಭಾಷಣೆಯ ನಡುವೆ ಸೊಬಗಿನ ಯುವತಿಯ ಬಗೆಗಿನ ಹಿನ್ನೆಲೆಯನ್ನು ಅರಿತು ಮದುವೆ ಮಾಡಿಕೊಳ್ಳುವ ಬಯಕೆಯನ್ನು ವ್ಯಕ್ತಪಡಿಸುತ್ತಾನೆ. ಹಂದ್ರನ ಸೌಜನ್ಯತೆಗೆ ಹಿರಿಯರು ಒಪ್ಪಿಗೆ ಸೂಚಿಸುವ ಮುಖಭಾವ ತೋರಿದರೂ ಹೆಣ್ಣಿಗೆ “ತಮೆರಿ” ( ಜವಾಬ್ದಾರಿಯ ವ್ಯಕ್ತಿ  ) ಪಾಂಬಲಜ್ಜಿಗ ಪೂಂಬಲಕರಿಯರೊಡನೆ ಮಾತುಕತೆ ನಡೆಸಿದ ಬಳಿಕ ಮುಂದಿನ ಆಲೋಚನೆ ಮಾಡುವುದಾಗಿ ತಿಳಿಸುತ್ತಾರೆ.

ಮುಂದಕ್ಕೆ ಗುರ್ಕಾರನ ನೇತೃತ್ವದಲ್ಲಿ ಕಿಜನೊಟ್ಟು ಬರ್ಕೆಯ ಪಾಂಬಲಜ್ಜಿಗ ಪೂಂಬಲಕರಿಯರ ಬಿಡಾರದಲ್ಲಿ ಬಾಲೆ ಬೊಲ್ಲೆಯ  ಹೆಣ್ಣು ನೋಡುವ ಕ್ರಮವನ್ನು ಮಾಡಲು ಸಜ್ಜಾಗುತ್ತಾರೆ. “ಬರಿಬಂದ್ರ” ಪರಸ್ಪರ ತಿಳಿಯುವುದರೊಂದಿಗೆ ಮೊದಲ್ಗೊಂಡು ವೀಳ್ಯದೆಲೆ ಬದಲಾಯಿಸಿಕೊಂಡು ಹಿರಿಯರ ಸಮ್ಮುಖದಲ್ಲಿ ಮಾತುಕತೆ ನಡೆಸಿ ಬೊಲ್ಲೆಯನ್ನು ಮದುವೆ ಮಾಡಿಕೊಡಲು ಒಪ್ಪಿಕೊಳ್ಳುತ್ತಾರೆ.

ಹಾಗೆಯೇ ದಿನಗೊತ್ತು ಪಡಿಸಿ ಈಂದೊಟ್ಟು ಹಂದ್ರನ ಮನೆ ಬಾಗಿಲು ( ಇಲ್ಲ್ ಬಾಕಿಲ್ ) ನೋಡುವ ಕ್ರಮವನ್ನು ಹಿರಿಯರ ನೇತೃತ್ವದಲ್ಲಿ ಗಂಡಸರು ಹೆಂಗಸರು ನೆರವೇರಿಸುತ್ತಾರೆ. ಅಂತು ಕಪ್ಪದ ಮಾನಿ ಹಂದ್ರನ ಪರಿಸರ, ಸೌಜನ್ಯತೆ, ಸ್ವಾಭಿಮಾನಕ್ಕೆ ತಕ್ಕುದಾದ ಹುಡುಗಿ ಬೊಲ್ಲೆ ಎಂಬುದನ್ನು ಅರಿತ ಹಿರಿಯರು ಹೆಣ್ಣು ಕೊಡಲು ಒಪ್ಪಿಕೊಂಡು ಮುಂದಕ್ಕೆ      “ನಿಶ್ಚಯ”ದ ದಿನವನ್ನು ಗುರುತಿಸಿ ಕಿಜನೊಟ್ಟು ಬರ್ಕೆಯತ್ತ ಆಹ್ವಾನಿಸುತ್ತಾರೆ. ಮುಂದಿನ ದಿನಗಳಲ್ಲಿ ನಿಶ್ಚಿತಾರ್ಥವಾಗಿ ” ತೆರವುದ ಪಣವು” ವಧುವಿಗೆ ವರನು ತೆತ್ತು ಮದುವೆಗೆ ಬದ್ಧನಾಗುವುದನ್ನು ಹಿರಿಯರು ಸಮ್ಮತಿಸುತ್ತಾರೆ.

ಮದುವೆ ಸಂಭ್ರಮದ ಹಿಂದಿನ ದಿನ, ಹಸಿ ಚಪ್ಪರದಡಿಯಲ್ಲಿ “ಪಾಲೆ ಹಾಕುವುದು” ಎಂಬ ಸಂಪ್ರದಾಯದಂತೆ ವಿಧಿ ವಿಧಾನಗಳು, ಮದುರಂಗಿ ಶಾಸ್ತ್ರ ಮುಗಿಸಿಕೊಂಡು ಮಾರನೆಯ ದಿನ  ಮನ್ಸರ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಸತ್ಯವತಿ ಬೊಲ್ಲೆ ಹಾಗು ಕಪ್ಪದ ಮಾನಿ ಹಂದ್ರನ ಕೈಜೋಡಿಸಿ ಮದುವೆಯ ಸಂಭ್ರಮದ ವಿಧಿ ವಿಧಾನಗಳು ಹಿರಿಯರ/ ಗುರ್ಕಾರರ ಮಾರ್ಗದರ್ಶನ ದಂತೆ ನಡೆಯುತ್ತದೆ.

” ಆರ್ಕೂರು ಬಾರ್ಕೂರುದಕುಲು, ಬಂಗಾಡಿ ಸಾರ ಸೀಮೆದಕುಲು, ಅರುವ ಮಾಗನೆದಕುಲು, ಪುತ್ತೆ ಪುಚ್ಚೇರಿದಕುಲು, ಚೌಕ ಬುದ್ಯಂತೆರ್, ತಲ ಬುದ್ಯಂತೆರ್,   ಇತ್ತಿ ಬಿನ್ನೆರ್,

ಬತ್ತಿ ದಿಬ್ಬನೆರ್, ಲೇಸಿ ದೆತ್ತಿ ಕರ್ತವೆರ್,  ಪತ್ತಪ್ಪೆ ಬಾಲೆಲು, ಪದ್ನಾಜಿ ಬರಿತಕ್ಲೆ ಸೇರಿಗೆಡ್ ಪರ್ಕೆದನ್ನಾಯ ಸಂತಾನೊದ ಬೊಲ್ಲೆ ಬೊಕ್ಕ ಪಾಲೆದನ್ನಾಯ ಸಂತಾನೊದ ಹಂದ್ರನ ಕೈಗೋಡ್ಯವ ಪನ್ಪೆರ್ ಯೆ….” ಎಂಬುದಾಗಿ ಗುರ್ಕಾರ /ಬೊಟ್ಯದ ಸ್ವರ ಕೂಗಿ ಕರೆದಾಗ ನೆರೆದ ಸರ್ವರೂ “ಎಡ್ಡೆ ಪನ್ಪೆರ್ಯೆ ” ಎಂಬುದಾಗಿ ಎರಡೂ ಕೈಗಳನ್ನು ಮೇಲೆತ್ತಿ ಶುಭ ಹಾರೈಸಿ ಮದುಮಗಳು ಮದುಮಗ ರಿಗೆ ಶುಭ ಕಾಮನೆಗಳನ್ನು ಬಯಸುತ್ತಾರೆ. ಜೊತೆಗೆ ಹಿರಿಯ ಕಿರಿಯ ಗಂಡು ಹೆಣ್ಣುಗಳೆಲ್ಲರೂ ಸೇರಿ ದುಡಿ ಪಾಡ್ದನ ರಾಗ ರಂಗಿತಕ್ಕೆ ಹೆಜ್ಜೆ ಹಾಕಿ ಮದುವೆ ಸಂಭ್ರಮವನ್ನು ಸಂಭ್ರಮಿಸುತ್ತಾರೆ. ಬಿಳಿ ಪಂಚೆ ತಲೆಗೊಂದು ರುಮಾಲು ಸುತ್ತಿದ ಗುರ್ಕಾರರ ಗಣತೆ ಮೇಲ್ ಸ್ತರದಲ್ಲಿ ಇತ್ತು.   “ದುಡಿಯೊಡನೆ ದುಡುಕಾಡಿ ಕೆಡುಕಾದಿತು ನಿಮಗೆ, ದುಡಿಯರ್ಥ ಬಲ್ಲಿರಾ ನೀವು ?! ನಡೆ ನುಡಿಯ ಸಾರವನು ಸಾರುತಿದೆ ಈ ದುಡಿಯು, ವಾದನಕೆ ಮೂಲವು ಇದುವು ! ” ಸಾಹಿತ್ಯಿಕ ಸಾಲುಗಳು ಅರ್ಥಗರ್ಭಿತ ವಾದುದು. ಹಿರಿಯರಾದ ಪಿ.ಡೀಕಯ್ಯರವರು ಸಾರುವಂತೆ “ದುಡಿ ಅದುರೊಡು, ನುಡಿ ಉದುರೊಡು ” ಎಂಬ ಮಾತನ್ನು ಯಾರೂ ಅಲ್ಲಗಳೆಯುಂತಿಲ್ಲ.”ದುಡಿ” ಅಂದರೆ “ತುಟಿ” ಎಂಬುದಾಗಿ ಅರ್ಥ. ಜಗತ್ತಿನ ಪ್ರತಿಯೊಂದು ಜೀವ ಜಂತುವು ತನ್ನದೇ ಆದ ಭಾಷೆಯಲ್ಲಿ “ದುಡಿ” ಅದುರಿಸುತ್ತದೆ. ತಮ್ಮದೇ ಆದ ಭಾಷೆಯಲ್ಲಿ “ನುಡಿ” ಉದುರಿಸುತ್ತದೆಂಬ ಸೂಕ್ಷ್ಮತೆಯನ್ನು ನಾವೆಲ್ಲರೂ ಅರ್ಥೈಸಿಕೊಳ್ಳಬೇಕಾಗಿದೆ.

ಅಂತು ದುಡಿ ಪಾಡ್ದನ ಪದರಂಗಿತದೊಂದಿಗೆ ಮದುವೆಯು ಸಂಭ್ರಮದ ವಾತಾವರಣದಲ್ಲಿ ಮುಗಿದು ಹೋಗಿತ್ತು.  ( ಮುಂದಿನ ಸಂಚಿಕೆ: ಬಂಗಾಡಿ ಚಾವಡಿಯಲ್ಲಿ ವೀಳ್ಯದೆಲೆ ಸಮರ್ಪಿಸುವ ( ಬೂಡುಡು ಬಚ್ಚಿರೆ ದೀಪುನ) ಕ್ರಮ )

ಹಿಂದಿನ ಸಂಚಿಕೆಗಳು:

ತುಳುನಾಡಿನ ಅಪ್ರತಿಮ ಅವಳಿ ವೀರರು ಕಾನದ-ಕಟದರು | ಸಂಚಿಕೆ-01

ಸಮಾಜ ಪರಿವರ್ತನಾ ಚಳುವಳಿಯಲ್ಲಿ ಕಾನದ– ಕಟದರ ಹೆಜ್ಜೆ ಗುರುತು:

ಬೊಲ್ಲೆಯ ಜನ್ಮ ವೃತ್ತಾಂತ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 03

ಬೊಲ್ಲೆಯ ನಾಮಕರಣ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 04

ಸ್ವಾಭಾವಿಕ ಸ್ವಭಾವ ಬೆಳೆಸಿಕೊಂಡ ಸತ್ಯದಪ್ಪೆ ಬೊಲ್ಲೆ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 05

ಸತ್ಯದಪ್ಪೆ ಬೊಲ್ಲೆಯ ನೀರ ಮದುವೆ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 06

ಇತ್ತೀಚಿನ ಸುದ್ದಿ