ಡಾ.ಅಂಬೇಡ್ಕರರ ಕಣ್ಣೀರು ಒರೆಸುವ ಕೈಗಳು ಯಾರವು?
- ಪರಶುರಾಮ್. ಎ
ಡಾ.ಬಿ.ಆರ್.ಅಂಬೇಡ್ಕರರು ಕಣ್ಣೀರು ಹಾಕಿದ್ದರೆ! ಅವರ ಕಣ್ಣೀರನ್ನು ಒರೆಸುವ ಕೈಗಳು ಇಡೀ ಭಾರತದಲ್ಲಿ ಇನ್ನೂ ಸಿಕ್ಕಿಲ್ಲವೇ? ಹಾಗಾದರೆ ಎಂತಹ ದೊಡ್ಡ ಅಪಚಾರದಲ್ಲಿ ಭಾರತೀಯರಾದ ನಾವುಗಳು ಇನ್ನೂ ಋಣಭಾರ ಹೊತ್ತಿದ್ದೇವೆಂದು ಊಹಿಸಿಕೊಳ್ಳಿ. ಬಾಲ್ಯದಲ್ಲಿ ಶಿಕ್ಷಣಕ್ಕಾಗಿ ಅಪ್ಪನಿಂದ ಸ್ಪೂರ್ತಿ ಪಡೆದು, ದೇಶ ವಿದೇಶಗಳಲ್ಲಿ ವಿದ್ಯಾಭ್ಯಾಸ ಮುಗಿಸಿ ಬಂದು, ತನ್ನ ಎದುರಾಳಿ ಸಂಚುಕೋರರ ವಿರುದ್ಧ ಅವಿಶ್ರಾಂತ ಹೋರಾಡಿ ಸಂವಿಧಾನ ರಚನಾ ಸಭೆಗೆ ಹೋಗಿ ಭಾರತದ ಸಂವಿಧಾನ ರಚಿಸಿ ಭಾರತದ ಪ್ರತಿಯೊಬ್ಬ ವ್ಯಕ್ತಿಗೂ ಮಾನವಹಕ್ಕುಗಳು, ಮತದಾನದ ಹಕ್ಕು, ಆರ್ಥಿಕ ಸಾಮಾಜಿಕ ರಾಜಕೀಯ ಇತರೆ ಎಲ್ಲಾ ರೀತಿಯ ಹಕ್ಕುಗಳು ದೊರಕುವಂತೆ ಮಾಡಿದ ಮಹಾನ್ ಚೇತನಕ್ಕೆ ಕಣ್ಣೀರು ಹಾಕುವಂತ ನೋವಿತ್ತೇ? ಡಾ.ಅಂಬೇಡ್ಕರರು ಕಣ್ಣೀರು ಹಾಕಿದ್ದರೆ? ಹೌದು. ಕಣ್ಣೀರು ಇಟ್ಟಿದ್ದರು ಒಂದಲ್ಲ ಹಲವು ಬಾರಿ ಕಣ್ಣೀರಿಟ್ಟಿದ್ದರು. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವಾಗ ಮಕ್ಕಳ ಸಾವನ್ನು ನೆನೆದು. ತನ್ನ ಸರ್ವಾಂಗೀಣ ಶಕ್ತಿಯಾಗಿ ತನ್ನೆಲ್ಲಾ ಸಾಧನೆಗೆ ಸಹಕರಿಸಿ ಭಾರತದ ಜನತೆಗಳೇ ನಮ್ಮ ಮಕ್ಕಳು: ಶೋಷಿತರ ವಿಮೋಚನೆಯಲ್ಲಿಯೇ ನಮ್ಮ ಸುಖವಿದೆಯೆಂದು ಡಾ.ಅಂಬೇಡ್ಕರರ ಓದಿಗೆ ಸಹಕರಿಸಿ ಸ್ಪೂರ್ತಿ ನೀಡಿದ ಮಾತೆ ರಮಾಬಾಯಿಯವರು ತೀರಿ ಹೋದಾಗಲೂ ಬಿಕ್ಕಿ ಬಿಕ್ಕಿ ಅತ್ತಿದ್ದರು ಡಾ.ಅಂಬೇಡ್ಕರ್.
ಡಾ.ಬಿ.ಆರ್.ಅಂಬೇಡ್ಕರರು ತಮ್ಮ ಇಡೀ ಸಂಘರ್ಷಮಯ ಬದುಕಿನುದ್ದಕ್ಕೂ ನೋವನ್ನು ನುಂಗುತ್ತ ಅದನ್ನು ಸಮಾಜಕ್ಕೆ ತೋರಿಸಿಕೊಳ್ಳದೆ ತಾನೊಬ್ಬ ದೈತ್ಯ ಬಲಶಾಲಿ ಧೈರ್ಯ ಹೋರಾಟಗಾರ ಎಂದು ನಿರೂಪಿಸಿದರು. ಅದಕ್ಕೆ ಕಾರಣ ಎಲ್ಲಿ ತಾನು ನೋವಿನಿಂದ ಖಿನ್ನತೆ ಅಥವಾ ಮೈಮರೆತು ಇಡೀ ಸಮಾಜವನ್ನು ಮೈಮರೆಯುವಂತೆ ಮಾಡುವೆನೊ ಎಂಬ ಭಯದಿಂದ. ತಮ್ಮ ಜೀವನದಲ್ಲಿ ಹಲವಾರು ಬಾರಿ ಕಣ್ಣೀರಿಟ್ಟಿರುವ ಸಂದರ್ಭಗಳನ್ನು ಲೇಖಕರಾದ ಮಲ್ಕುಂಡಿ ಮಹಾದೇವ ಸ್ವಾಮಿಯವರು “ಅಂಬೇಡ್ಕರರು ಕಣ್ಣೀರಿಟ್ಟ ಕ್ಷಣಗಳು” ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಈ ಪುಸ್ತಕ ಪ್ರತಿ ಅಧ್ಯಾಯಗಳು ಓದುವಾಗ ಓದುಗನ ಮತ್ತು ಭಾರತೀಯನ ಎದೆಯಲ್ಲಿ ನೋವು ಅಪಾರವಾಗಿ ಆವರಿಸಿ, ಭಾರತೀಯರು ಅಂಬೇಡ್ಕರರ ನೋವಿಗೆ ಹೇಗೆ ಕಾರಣರಾದರು ಎಂದು ಎಚ್ಚರಿಸುತ್ತದೆ ಸಹ.
ಅದರಂತೆ ಆ ನೋವಿನ ಔಷಧಿಯನ್ನು ಡಾ.ಅಂಬೇಡ್ಕರರೇ ಕಂಡಿದ್ದರು. ಅದರ ಬಗ್ಗೆ ಭರವಸೆಯನ್ನು ಹೊಂದಿದ್ದರು. ಭಾರತದ ಭವ್ಯ ಭವಿಷ್ಯದ ಬಗ್ಗೆ ಕನಸು ಕಂಡು ತಮಗಿದ್ದ ಅಪಾರ ನೋವುಗಳನ್ನು ಮರೆತಿದ್ದರು. ತಮ್ಮ ಇಡೀ ಬದುಕಿನಲ್ಲಿ ಸಂಘರ್ಷದ ಹಾದಿಯಲ್ಲಿ ತಮಗಿದ್ದ ನೋವಿನ ಬಗ್ಗೆ ಹೆಚ್ಚು ಎಲ್ಲಿಯೂ ದಾಖಲಿಸಲಿಲ್ಲ. ಇಂತಹ ನೋವುಗಳಲ್ಲಿ ಬಂದ ಕಣ್ಣೀರು ಒರೆಸುವ ಕೈಗಳು ಸಹ ಅವರಿಗೆ ಇರಲಿಲ್ಲ. ತಮ್ಮ ಎಲ್ಲಾ ನೋವುಗಳಲ್ಲಿ 1956ರ ಜುಲೈ 31 ಮಂಗಳವಾರದಂದು ಸಂಜೆ 5:30 ತಮ್ಮ ಆಪ್ತ ಕಾರ್ಯದರ್ಶಿ ರತ್ತುರವರಿಗೆ ಕೆಲವು ಪತ್ರಗಳನ್ನು dictate ಮಾಡಿದ ಅಂಬೇಡ್ಕರರು ಇದ್ದಕ್ಕಿದ್ದಂತೆ upset ಆದರು. ಕೆಲ ಹೊತ್ತು ಏನೂ ಮಾತಾಡದ ಅಂಬೇಡ್ಕರರ ಈ ವರ್ತನೆ ರತ್ತುರವರಿಗೆ ಗಾಬರಿಯಾಯಿತು. ರತ್ತುರವರು ಅಂಬೇಡ್ಕರರ ಕಾಲನ್ನು ನಿಧಾನವಾಗಿ ಒತ್ತುತ್ತಾ ಸಾವಧಾನವಾಗಿ ನಿಮ್ಮ ನೋವಿಗೆ ಕಾರಣವಾದರೂ ಏನು ದಯವಿಟ್ಟು ಸತ್ಯ ತಿಳಿಸಿ ಸಾಹೇಬ್. ಇತ್ತೀಚೆಗೆ ನೀವು ಬಹಳ ದುಃಖಿತರಾಗುವಿರಿ. ಖಿನ್ನರಾಗಿದ್ದೀರಿ. ಅಳುತ್ತ ಇರುವಿರಿ ಯಾಕೆ ಕಾರಣ ಹೇಳಿ ಸಾಹೇಬ್? ಎಂದು ಕೇಳಿಯೇ ಬಿಟ್ಟರು. ಆದಿನ ಬಹುಶಃ ರತ್ತುರವರು ಅಂಬೇಡ್ಕರರ ಬಳಿ ಈ ಮಾತು ಕೇಳದಿದ್ದರೆ ಉತ್ತರ ಸಿಗುತ್ತ ಇರಲಿಲ್ಲವೇನೊ: ರತ್ತುರವರು ಅಂಬೇಡ್ಕರರ ಕೊನೆಯ ದಿನಗಳು ಎಂಬ ಪುಸ್ತಕದಲ್ಲಿ ದಾಖಲಿಸದೇ ಹೋಗಿದ್ದರೆ ಅಂಬೇಡ್ಕರರ ನೋವು ಏನು ಎಂಬುದು ನಮಗೂ ತಿಳಿಯುತ್ತಿರಲಿಲ್ಲ.
ರತ್ತುರವರ ಪ್ರಶ್ನೆಗೆ ಉತ್ತರವಾಗಿ ಅಂಬೇಡ್ಕರರು: ನನ್ನ ದುಃಖಕ್ಕೆ ಕಾರಣ ನನ್ನ ನೋವಿನ ಮೂಲ ನಿಮಗೆ ಅರ್ಥವಾಗುವುದಿಲ್ಲ, ನನ್ನ ಮನಸ್ಸಿನಲ್ಲಿ ಕೊರೆಯುತ್ತಿರುವ ಮೊದಲ ಚಿಂತೆ ನನ್ನ ಜೀವನದಲ್ಲಿ ನನ್ನ ಗುರಿಯನ್ನು ಮುಟ್ಟಲಾಗಲಿಲ್ಲವಲ್ಲ ಎಂಬುದು. ಏನೆಂದರೆ ನನ್ನ ಜೀವನದ ಅವಧಿಯಲ್ಲಿ ನನ್ನ ಜನರು ಈ ದೇಶದ ಆಳುವ ವರ್ಗವಾಗುವುದನ್ನು ನಾನು ನೋಡಬಯಸಿದ್ದೆ. ರಾಜಕೀಯ ಅಧಿಕಾರವನ್ನು ಸಮಾನತೆಯ ಆಧಾರದ ಮೇಲೆ ಇತರ ಜಾತಿ ಜನರ ಸಂಖ್ಯಾನುಗುಣವಾಗಿ ಜೊತೆಯಾಗಿ ಹಂಚಿಕೊಳ್ಳುವುದನ್ನು ನಾನು ಬಯಸಿದ್ದೆ, ಆದರೆ ಸದ್ಯ ಅಂತಹ ಸಾಧ್ಯತೆ ನನಗೀಗ ಕಾಣುತ್ತಿಲ್ಲ.(ಯೋಚಿಸಿ ಡಾ.ಅಂಬೇಡ್ಕರರು ಅರವತ್ತೈದು ವರ್ಷಗಳ ಹಿಂದೆ ಈ ಮಾತು ಹೇಳಿದ್ದರು ಇಂದಿಗೂ ಇದು ಸಾಧ್ಯವಾಗಿದೆಯ?) ಅದು ಅಲ್ಲದೇ ಅಂತಹ ಪ್ರಯತ್ನ ಮಾಡಲು ನನ್ನ ಅನಾರೋಗ್ಯ ಪೀಡಿತ ನಿಶ್ಯಕ್ತ ನಿರಾಸೆ ನನ್ನನ್ನು ಕಾಡುತ್ತಿದೆ. ನಾನು ಇದುವರೆಗೆ ಶ್ರಮಿಸಿ ಹೋರಾಡಿ ಪಡೆದು ಕೊಂಡ ಹೋರಾಟದ ಫಲವನ್ನು ನನ್ನ ಸಮುದಾಯದ ಕೆಲವೇ ಕೆಲವು ಮಂದಿ ಅನುಭವಿಸಿ ಮಜಾ ಮಾಡುತ್ತಿದ್ದಾರೆ. ಉಳಿದ ಶೋಷಿತರ ಪರವಾಗಿ ಕಾಳಜಿ, ಅನುಕಂಪ ಹೊಂದದೇ ಮೈಮರೆತು ಬದುಕುತ್ತಿದ್ದಾರೆ. ವಯಕ್ತಿಕ ಹಿತಾಸಕ್ತಿಯ ಸಾಧಿಸಿಕೊಂಡು ತಮ್ಮಷ್ಟಕ್ಕೆ ಬದುಕುವ ಅವರು ಒಂದರ್ಥದಲ್ಲಿ ನನ್ನ ಎಲ್ಲಾ ನಿರೀಕ್ಷೆ ಹುಸಿಗೊಳಿಸಿದರು. ಅವರಲ್ಲಿ ಯಾರೂ ಸಮುದಾಯದ ಸೇವೆ ಮಾಡಲು ಮುಂದೆ ಬರುತ್ತಿಲ್ಲ. ಒಟ್ಟಾರೆ ಅವರು ವಿನಾಶದ ಹಾದಿಯತ್ತ ಸಾಗುತ್ತಿದ್ದಾರೆ. (ಡಾ.ಅಂಬೇಡ್ಕರರ ಹೋರಾಟದ ಫಲ ಪಡೆದು ಸರ್ಕಾರಿ ನೌಕರಿ, ಹುದ್ದೆ, ವಿದ್ಯೆ, ಅಧಿಕಾರ, ಹಣ ಗಳಿಸುವವರಿಗೆ ಇಂದಿಗೂ ಈ ಮಾತು ಎಚ್ಚರಿಸುತ್ತವೆ). ಈ ಕಾರಣದಿಂದ ನಾನೂ ಇನ್ನೂ ಮುಂದೆ ಹಳ್ಳಿ ಹಳ್ಳಿಗಳಲ್ಲಿ ಶೋಷಣೆಯನ್ನು ಅನುಭವಿಸುತ್ತಿರುವ ಆರ್ಥಿಕ ದುಸ್ಥಿತಿಯಲ್ಲಿ ಇನ್ನೂ ಹಾಗೆಯೇ ಇರುವ ಅನಕ್ಷರಸ್ಥ ವಿಶಾಲ ಸಮುದಾಯದತ್ತ ಗಮನ ಹರಿಸಬೇಕೆಂದು ಇದ್ದೇನೆ. ಆದರೆ ನನಗೆ ಸಮಯ ಹೆಚ್ಚು ಇಲ್ಲ. ಇದಕ್ಕಾಗಿ ನನ್ನ ಆರೋಗ್ಯ ಸಹ ಸಹಕರಿಸುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಅಷ್ಟೇ ಅಲ್ಲದೇ ಅಂಬೇಡ್ಕರರಿಗೆ ಮತ್ತೊಂದು ನೋವು ಇತ್ತು ತಮ್ಮ ಜೀವಿತಾವಧಿಯಲ್ಲಿ ತಾವು ಬರೆದ “ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್ ” “ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ” ಮತ್ತು “ಹಿಂದೂ ಧರ್ಮದ ಒಗಟುಗಳು ” ಕೃತಿಗಳು ಇನ್ನೂ ಪ್ರಕಟಗೊಂಡಿಲ್ಲ. ನನ್ನ ನಂತರದಲ್ಲಿ ಈ ಪುಸ್ತಕಗಳು ಪ್ರಕಟಗೊಳ್ಳುವ ಸಾಧ್ಯತೆ ನನಗಿಲ್ಲ ಎಂದು ಆತಂಕಿತರಾದರು. (ನಂತರದ ದಶಕದಲ್ಲಿ ಈ ಪುಸ್ತಕ ಪ್ರಕಟಣೆಗೊಂಡವು, ಆದರೆ ಅಂಬೇಡ್ಕರರು ಬದುಕಿದ್ದಾಗ ಅವು ಪ್ರಕಟಗೊಂಡಿದ್ದರೆ ಈ ನೋವು ಕಡಿಮೆಯಾಗುತ್ತಿತ್ತು ಅಲ್ಲದೇ ಆನಂದ ಹೊಂದುತ್ತಿದ್ದರು). ಮುಂದುವರೆದು ನನ್ನ ನಂತರ ಈ ಶೋಷಿತ ಸಮುದಾಯದಿಂದ ಯಾರಾದರೂ ಮುಂದೆ ಬಂದು ನನ್ನ ಚಳುವಳಿಯ ಮುನ್ನಡೆಸುವರೆಂದು ನಾನು ಬಯಸಿದ್ದೆ ಆದರೆ ಅಂತಹವರು ಯಾರು ಕಾಣುತ್ತಿಲ್ಲ!. ಯಾರಲ್ಲಿ ನಾನು ನಂಬಿಕೆ- ವಿಶ್ವಾಸ ಇಟ್ಟಿದ್ದೆನೊ ಅವರು ಈ ಜವಾಬ್ದಾರಿ ಮರೆತಿದ್ದಾರೆ. ತಮ್ಮಲ್ಲಿಯೇ ನಾಯಕತ್ವ ಮತ್ತು ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದಾರೆ. ಇಂತಹವರ ಮೇಲೆ ಹೇಸಿಗೆಯಾಗುತ್ತಿದೆ ಎಂದರು. ಸ್ವಲ್ಪ ಕಾಲ ನಂತರ ” ನಾನಕ್ ಚಂದ್ ಈ ಜನರಿಗೆ ಹೇಳು ಇದುವರೆಗೂ ಏನನ್ನು ಸಾಧಿಸಿರೆವೆನೊ ಅದೆಲ್ಲವೂ ನನ್ನ ಶತ್ರುಗಳ ವಿರುದ್ಧ ಶ್ರಮದಿಂದ ಹೋರಾಡಿ ಅನಿಯಮಿತ ಸಮಸ್ಯೆ ಅನುಭವಿಸಿ ಪಡೆದಿದ್ದೇನೆ. ತುಂಬಾ ಶ್ರಮವಹಿಸಿ ನಾನು ಈ ಹೋರಾಟದ ವಿಮೋಚನಾ ರಥವನ್ನು ಎಳೆದು ತಂದಿದ್ದೇನೆ. ಏನೇ ಅಡೆತಡೆಗಳು ಬರಲಿ ಸಮಸ್ಯೆ ಏರುಪೇರು ಬಂದರೂ ಈ ರಥ ಮುನ್ನಡೆಯ ಬೇಕು. ಸಾಧ್ಯವಾದರೆ ಈ ವಿಮೋಚನಾ ರಥವನ್ನು ಮುಂದಕ್ಕೆ ಎಳೆಯಿರಿ ಇಲ್ಲವಾದರೆ ಎಲ್ಲಿದೆಯೋ ಅಲ್ಲಿಯೇ ಬಿಡಲಿ. ಯಾವುದೇ ಕಾರಣಕ್ಕೂ ಹಿಂದೆ ಸರಿಯಲು ಬಿಡಬಾರದು ಎಂದು ಹೇಳು ಅವರಿಗೆ ಹೇಳು ಹೋಗಿ ಹೇಳು ಎನ್ನುತ್ತ ತಮ್ಮ ನೋವನ್ನು ಬಿಚ್ಚಿಟ್ಟರು.
ಈಗ ಪ್ರಶ್ನೆ ಏನೆಂದರೆ ಬಾಬಾಸಾಹೇಬರ ಕೊನೆಯ ಸಂದೇಶವಾದ ಈ ಮಾತು ಈ ದೇಶದ ಶೋಷಿತರ- ದಲಿತ ಸಮುದಾಯಕ್ಕೆ ಅರ್ಥವಾಗಿದೆಯ? ಅರ್ಥ ಆದವರು ಅಂಬೇಡ್ಕರರ ಕಣ್ಣೀರು ಒರೆಸುವ ಕಾರ್ಯಕ್ಕೆ ಮುಂದಾದರ? ಬಹುಶಃ ಇಲ್ಲವೇ ಇಲ್ಲ. ಕಾರಣ ಬಾಬಾಸಾಹೇಬರ ಸಂದೇಶವನ್ನು ಮರೆತ ಈ ಜನ ಅಂಬೇಡ್ಕರರ ನೋವನ್ನು ಹೇಗೆ ಶಮನಮಾಡಿಯಾರು? ಆದರೆ 1980ರ ದಶಕದಲ್ಲಿ ಈ ದೇಶದ ಉತ್ತರ ಪ್ರದೇಶ ರಾಜ್ಯದಲ್ಲಿ ಬಹುಜನ ಸಮಾಜ ಪಕ್ಷ ಕಟ್ಟಿ 400ಕ್ಕೂ ಹೆಚ್ಚು ಜಾತಿಗಳು ಬೆಸೆಯುತ್ತ ಒಗ್ಗೂಡಿಸಿ ಚುನಾವಣೆಯ ಎದುರಿಸಿ ಸ್ವತಂತ್ರವಾಗಿ ಮುಖ್ಯಮಂತ್ರಿಯಾಗುವ ಮೂಲಕ ಅಂಬೇಡ್ಕರರ ಕನಸು ನನಸು ಮಾಡಿ ರಾಜಕೀಯ ಅಧಿಕಾರವನ್ನು ಸಮಾನತೆಯ ಆಧಾರದ ಮೇಲೆ ಇತರರ ಜೊತೆಗೆ ಹಂಚಿಕೊಂಡು ಸ್ವತಂತ್ರವಾಗಿ ರಾಜ್ಯಾಧಿಕಾರ ನಡೆಸಿದ ದಾದಾಸಾಹೇಬ್ ಕಾನ್ಷಿರಾಂರು ಕೊಂಚ ಮಟ್ಟಿಗಾದರೂ ಅಂಬೇಡ್ಕರರ ನೋವು ಇಳಿಸಿದರು.
ಕಾನ್ಷಿರಾಂರು ಇತರೆ ಪಕ್ಷಗಳ ಅಧಿಕಾರ ಲಾಬಿಗೆ ಮರುಳಾಗದೆ ನಾನು ಈ ದೇಶದ ಪ್ರಧಾನಿ ಹುದ್ದೆಗಿಂತ ಕಡಿಮೆ ಬೆಲೆಗೆ ರಾಜಿಯಾದರೆ ಅದು ಡಾ.ಅಂಬೇಡ್ಕರಿಗೆ ಮತ್ತು ಅಂಬೇಡ್ಕರವಾದಕ್ಮೆ ಮಾಡುವ ವಂಚನೆ ಎಂದು ಭಾವಿಸಿದ್ದರು. ಈ ಭಾವನೆ ಇಂದಿನ ಯಾವ ದಲಿತ ಸಂಘಟನೆ- ರಾಜಕೀಯ ಪಕ್ಷಗಳಲ್ಲಿದೆ? ಉಹುಂ ಇಲ್ಲ. ಅಂಬೇಡ್ಕರರ ಕೊನೆಯ ಸಂದೇಶವನ್ನು ಮತ್ತು ನೋವನ್ನು ಮರೆತ ಈ ಸಂಘಟನೆ, ಒಕ್ಕೂಟ, ಪರಿಷತ್ತು, ಪಕ್ಷಗಳು ತಾವು ಮೈಮರೆತು ಇಡೀ ಸಮುದಾಯವನ್ನು ಮೈಮರೆಸಿದ್ದಾರೆ. ಹೀಗಾದರೆ ಅಂಬೇಡ್ಕರರ ನೋವಿಗೆ ಅವರ ಕಣ್ಣೀರು ಒರೆಸುವ ಕೈಗಳಾದರು ಯಾರವು? ಮಾನ್ಯವಾರ್ ಕಾನ್ಷಿರಾಂರು ಅಲ್ಪ ಮಟ್ಟಿಗೆ ಅಂಬೇಡ್ಕರರ ಮುಖದಲ್ಲಿ ನಗು ಮೂಡಿಸಿದರು ಎಂದೇ ಹೇಳಬಹುದು. ಅಂತಹ ಗಟ್ಟಿತನವನ್ನು ಜಾತಿ,ಜನ,ಜನಾಂಗಗಳನ್ನು ಒಗ್ಗೂಡಿಸಿ ರಾಜ್ಯಾಧಿಕಾರವನ್ನು ಹಿಡಿದು ಅಂಬೇಡ್ಕರರ ನೋವನ್ನು ಕಡಿಮೆ ಮಾಡಬಲ್ಲ, ಇತಿಹಾಸ ನಿರ್ಮಿಸಬಲ್ಲ ನಾಯಕನು ಯಾರೂ ಭಾರತದಲ್ಲಿ ಸಿಗುವುದಿಲ್ಲ. ರಾಜಕೀಯ ದಾಳವಾಗಿ, ಬಾಯಿ ಕಟ್ಟಿದ ನಾಯಿಗಳಂತೆ ಕೇವಲ ಬಾಲ ಅಲ್ಲಾಡಿಸುತ್ತ ಬದುಕುತ್ತಾರೆ. ಡಾ.ಅಂಬೇಡ್ಕರರು ತಮ್ಮ ಜೀವಮಾನವಡಿ ಯಾರನ್ನು ವಿರೋಧಿಸಿದರು ಅವರ ಜೊತೆಯಲ್ಲಿಯೇ ಕೇವಲ ಗಂಜಿಯಷ್ಟಿನ ಅಧಿಕಾರಕ್ಕಾಗಿ ಹಂಬಲಿಸಿ ಅಂಬೇಡ್ಕರಿಗೆ ಮೋಸ ಮಾಡುತ್ತಲೇ ಬಂದಿದ್ದಾರೆ. ಉದಾಹರಣೆಗೆ ಈಗಿನ ಕೊಳ್ಳೇಗಾಲದ ಶಾಸಕರು. ಒಂದು ಹಂತದವರೆಗೆ ಅಂಬೇಡ್ಕರರ ಸಿದ್ದಾಂತ ಚಳವಳಿಯಲ್ಲಿ ಪ್ರತಿಪಾದಿಸಿ ನಂತರ ವಿರೋಧಿಸುವವರೊಂದಿಗೆ ಸೇರಿದ್ದಾರೆ. ಇದೊಂದು ನಾಚಿಕೆಗೇಡಿನ ಸಂಗತಿ.
ಇನ್ನಾದರೂ ಡಾ.ಅಂಬೇಡ್ಕರರ ನೋವನ್ನು ಕಡಿಮೆ ಮಾಡಲು ಅವರ ಧೀಮಂತ ಆತ್ಮಕ್ಕೆ ಸ್ವಲ್ಪವಾದರೂ ಶಾಂತಿ ದೊರಕಿಸಲು ಈಗಿನ ಹೊಸ ತಲೆಮಾರುಗಳ ಬಹಜನ ಸಮುದಾಯ ಚಿಂತಿಸಿ ಅರಿತು ಮುನ್ನಡೆಯುವ ಜವಾಬ್ದಾರಿ ಹೊತ್ತಿದೆ. ಜಾತಿ ಜನಸಂಖ್ಯೆ ಹಲವಾರು ಭಿನ್ನತೆ ಭಿನ್ನಾಭಿಪ್ರಾಯಗಳು ಬದಿಗಿಟ್ಟು ಒಂದಾಗಿ ಸಮಾನತೆಯ ಅಡಿಯಲ್ಲಿ ರಾಜಕೀಯ ಅಧಿಕಾರ ಗಳಿಸುವ ನಿಟ್ಟಿನಲ್ಲಿ ಯೋಜನೆ ಮತ್ತು ಶ್ರಮವನ್ನು ಬಳಸಿ ಮುನ್ನಡೆಯಬೇಕಿದೆ. ಈ ಮೂಲಕ ಅಂಬೇಡ್ಕರರ ಕಣ್ಣೀರು ಒರೆಸುವ ಕೈಗಳು ನಾವಾಗುವ, ಹಿಂದಿನ ತಲೆಮಾರು ಮರೆತ ಈ ಮಹೋನ್ನತ ಜವಾಬ್ದಾರಿ ಇನ್ನಾದರೂ ನಾವು ಹೊತ್ತು ಅಂಬೇಡ್ಕರರಿಗೆ ಋಣ ಸಂದಾಯ ಮಾಡೊಣವೆಂದು ಆಶಿಸುತ್ತೇನೆ.
ಜೈಭೀಮ್ | ಜೈಭಾರತ್
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka