ಅಪ್ಪೆ ಸಾಲೊದ ಪನ್ನಿ/ ಬಂಗಾಡಿಗೆ ಪ್ರಯಾಣ | ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 12 - Mahanayaka
2:03 AM Wednesday 11 - December 2024

ಅಪ್ಪೆ ಸಾಲೊದ ಪನ್ನಿ/ ಬಂಗಾಡಿಗೆ ಪ್ರಯಾಣ | ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 12

kanada katada
30/12/2021

  • ಸತೀಶ್ ಕಕ್ಕೆಪದವು

“ಅಪ್ಪೆ ಸಾಲೊದ ಪನ್ನಿ ಪಡೆವೊಂದು ಮುಟ್ಟಲೆನ್ ಬಂಗಾಡಿ ಬೆಡಿಗುತ್ತುಗು ಬೆರಿಪಾಡಿ ಪೊರ್ತು” ಈ ನುಡಿಕಟ್ಟಿನ ಮಾತನ್ನು ಅವಲೋಕಿಸಿದಾಗ, ದೇಯಿಬೈದೆದಿಯ ಆಶ್ರಯದಲ್ಲಿ ಬೆಳೆಯುತ್ತಿದ್ದ ಸತ್ಯದಪ್ಪೆ ಬೊಲ್ಲೆ ಹಾಗು ಆಕೆಯ ಅವಳಿ ಮಕ್ಕಳು ಕಾನದ ಕಟದರು ನೆಮ್ಮದಿಯ ಜೀವನ ನಡೆಸುತ್ತಿದ್ದರು ಎಂಬುದನ್ನು ತಿಳಿಯಬಹುದಾಗಿದೆ. ದಿನದಿಂದ ದಿನಕ್ಕೆ ದೈಹಿಕವಾಗಿ ದಷ್ಟ ಪುಷ್ಟವಾಗಿ ಪೌಷ್ಟಿಕವಾಗಿ ಬೆಳೆಯುತ್ತಿರು ಕಾಲದಲ್ಲಿ ಕಿಜನೊಟ್ಟು ಬರ್ಕೆಯಿಂದ ಪಾಂಬಲಜ್ಜಿಗ ಪೂಂಬಲಕರಿಯರ ಆಗಮನವಾಗುತ್ತದೆ. ಅತಿಥಿಗಳಾದ ಪಾಂಬಲಜ್ಜಿಗ ಪೂಂಬಲಕರಿಯರನ್ನು ಔಚಿತ್ಯವಾಗಿ ಸ್ವಾಗತಿಸಿ ಬೆಲ್ಲ ನೀರು ಕೊಟ್ಟು ದಣಿವಾರುತ್ತಿದ್ದಂತೆ ಕುಶಲೋಪಾದಿಗಳನ್ನು ದೇಯಿಬೈದೆದಿಯು ಹಂಚಿಕೊಳ್ಳಲು ಬಯಸುತ್ತಾರೆ. ಆಗ ಪಾಂಬಲಜ್ಜಿಗ ಪೂಂಬಲಕರಿಯರು ಮನದಾಳದ ಇಂಗಿತವನ್ನು ಬೈದೆದಿಯಲ್ಲಿ  ಹೇಳಿಕೊಳ್ಳುತ್ತಾರೆ. “ದಿಕ್ಕು ದೆಸೆ ಇಲ್ಲದ ನಮ್ಮ ವಂಶದ ಕುಡಿ ಬಾಲೆ ಬೊಲ್ಲೆಯನ್ನು

ಮೂಲಕ್ಕೆ ಪಡೆದು ಮಗಳಂತೆ ಸಾಕಿ ಸಲಹಿದಿರಿ. ಈಗ ಈಕೆಯು ಇಬ್ಬರು ಮಕ್ಕಳ ಹೆತ್ತಬ್ಬೆ. ಮಕ್ಕಳು ಬೆಳವಣಿಗೆಯ ಹಂತದಲ್ಲಿದ್ದಾರೆ. ಅತ್ತ ಬಂಗಾಡಿಯಲ್ಲಿ ಸತ್ಯದಪ್ಪೆ ಬೊಲ್ಲೆಯನ್ನು ಕೈಹಿಡಿದ ಹಂದ್ರ ಅಕಾಲಿಕ ಮರಣವನ್ನು ಅಪ್ಪುತ್ತಾನೆ. ಇಷ್ಟಲ್ಲದೆ ವಯೋಮಾನದ ಅಂಚಿಗೆ ತೆರಳುತ್ತಿರುವ ಪಾಂಬಲಜ್ಜಿಗ ಪೂಂಬಲಕರಿಯರಿಗೆ “ಒಲೆಗೆ ಬೆಂಕಿಗೆಯಿಡಲು, ಬಿಸಿ ನೀರು ಕಾಯಿಸಲು” ಬಾಲೆ ಬೊಲ್ಲೆಯ ಇರುವಿಕೆಯ ಅವಶ್ಯಕತೆ ಇದೆ ಎಂಬುದನ್ನು ಸ್ಪಷ್ಟ ಪಡಿಸುತ್ತಾರೆ.

“ನಿಮ್ಮ ಮೂಲ ಚಾಕಿರಿ ಪದ್ದತಿಯನ್ನು ಗೌರವಯುವಾಗಿ ಪಾಲಿಸಿಕೊಂಡು ಬರುತ್ತೇವೆ.  ನಮ್ಮ ಜೊತೆಗೆ ಬೊಲ್ಲೆಯನ್ನೂ,ಅವಳಿ ಮಕ್ಕಳು ಕಾನದ ಕಟದರನ್ನೂ ಕಳುಹಿಸಿ ಕೊಡಬೇಕಾಗಿ ವಿನಂತಿಸಿಕೊಳ್ಳುತ್ತೇನೆ” ಅನ್ನುತ್ತಾರೆ. ಈ ಮಾತನ್ನು ಆಲಿಸಿದ ದೇಯಿಬೈದೆದಿಯು ತುಂಬಾ ದುಃಖಿಸುತ್ತಾಳೆ. ಜೊತೆಗೆ ಕಂಬನಿಯನ್ನು ಸೆರಗಿನಂಚಿನಿಂದ ಒರೆಸಿಕೊಳ್ಳುತ್ತಾ ತನ್ನ ಬೇಡಿಕೆಯನ್ನು ಮುಂದಿಡುತ್ತಾಳೆ. “ಬಾಲೆ ಬೊಲ್ಲೆಯನ್ನು ಮೂಲಕ್ಕೆ ಪಡೆದು ಬೆಳೆಸಿದೆ, ಈಗ ಆಕೆಯನ್ನು ಕಳುಹಿಸಿ ಕೊಟ್ಟರೆ ಏಕಾಂಗಿಯಾಗಿ ಕೊರಗಬೇಕಾಗುತ್ತದೆ, ಹಾಗಾಗಿ ಅವಳಿ ಮಕ್ಕಳು ಕಾನದ ಕಟದರನ್ನು ಇಲ್ಲಿಯೆ ಬಿಟ್ಟು ಹೋಗಿರಿ” ಎಂಬುದಾಗಿ ಮನದಿಂಗಿತವನ್ನು ವ್ಯಕ್ತಪಡಿಸುತ್ತಾಳೆ. ಮೊದಲು ಒಲ್ಲದ ಮನಸ್ಸಿನಿಂದ ಮರುಗಿದರೂ ಹೆತ್ತವ್ವ ಬೊಲ್ಲೆಯು ಬೈದೆದಿಯ ಮಾತಿಗೆ ಕಟ್ಟು ಬೀಳುತ್ತಾಳೆ. ತನ್ನಷ್ಟೇ ಜವಾಬ್ದಾರಿಯಿಂದ

ಮಕ್ಕಳನ್ನು ಸಾಕಿ ಸಲಹುವ ಭರವಸೆಯಿಂದ ಬೊಲ್ಲೆಯು ಸಮ್ಮತಿಸುತ್ತಾಳೆ. ಪಾಂಬಲಜ್ಜಿಗ ಪೂಂಬಲಕರಿಯರು ತಲೆದೂಗಿಸಿ ಸಮ್ಮತಿಸುತ್ತಾರೆ. ದೇಯಿಬೈದೆದಿಯನ್ನು ಸಮಧಾನ  ಪಡಿಸಿ ಬೊಲ್ಲೆಯನ್ನು ಕರೆದು ಕೊಂಡು ಕಿಜನೊಟ್ಟು ಬರ್ಕೆಯತ್ತ ಸಾಗುತ್ತಾರೆ. ಇತ್ತ ಕಾನದ ಕಟದರು ದೇಯಿ ಬೈದೆದಿಯ ಆಶ್ರಯದಲ್ಲಿ ಬೆಳೆಯುತ್ತಿರುತ್ತಾರೆ.

ದಿನ ಕಳೆದಂತೆ, ದೇಯಿಬೈದೆದಿಯು ಅನಾರೋಗ್ಯದಿಂದ ಬಳಲಿ  ಇಹಲೋಕ ತ್ಯಜಿಸುತ್ತಾಳೆ. ಆ ಕಾರಣದಿಂದಾಗಿ ಕಾನದ ಕಟದರು ದಿಕ್ಕು ದೆಸೆ ಇಲ್ಲದವರಾಗಬಾರದು, ಸ್ವತಃ ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳುದು ಸೂಕ್ತವೆಂದು ನಿರ್ಧರಿಸುತ್ತಾರೆ. ಸ್ವಾಭಿಮಾನದ ಬದುಕು, ಸ್ವಾವಲಂಬನೆಯ ಬದುಕಿನತ್ತ ಆಲೋಚನೆ ಮಾಡಬೇಕಾಗುತ್ತದೆ. ಅನಾದಿಕಾಲದಿಂದಲೂ ಮೂಲಕ್ಕೆ ಕುಳಿತು, ಜೀತ ಮಾಡಿಕೊಂಡು, ಊಳಿಗ ಮಾಡಿಕೊಂಡು ಬದುಕು ನಿರ್ವಹಣೆ ಮಾಡಿದಂತಹ ಪೂರ್ವಿಕರಂತೆ ನಮ್ಮ ಬದುಕು ಆಗಬಾರದು. ಬದಲಾಗಿ ಬದಲಾವಣೆಯು ನಮ್ಮಿಂದಲೇ ಆರಂಭವಾಗಬೇಕು ಎಂಬ ನಿಟ್ಟಿನಲ್ಲಿ ಯೋಚನೆ ಯೋಜನೆಗಳನ್ನು ರೂಪಿಸಲು ಮುಂದಾಗುತ್ತಾರೆ. ತುಳುನಾಡಿನಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಲು ಯೋಜನೆ ಹಾಕುತ್ತಾರೆ. ತಾವು ಇಡುವ ಪ್ರತಿ ಹೆಜ್ಜೆಗಳೂ ಇತಿಹಾಸದ ಮೈಲುಗಲ್ಲುಗಳಾಗಿ ಕಾಣುವಂತಾಗಬೇಕು. ಮುಂದಿನ ಪೀಳಿಗೆಗೆ ಮಾದರಿಯ ಬದುಕಾಗಬೇಕು. ಅಂಧ ಆಚರಣೆಗಳಿಂದ ಜನತೆಯನ್ನು ಮುಕ್ತಗೊಳಿಸಲು ಯೋಚಿಸಬೇಕು. ಆಂಗೀಕ  ಶಕ್ತಿಯಿಂದ ಶ್ರಮ ಮೌಲ್ಯವನ್ನು ಇತಿಹಾಸದ ಪುಟಗಳಲ್ಲಿ ದಾಖಲಿಸಬೇಕು. ತುಲುವ ಸಾಂಸ್ಕೃತಿಕ ಮೌಲ್ಯಗಳನ್ನು ಉಳಿಸಿ ಬೆಳೆಸುವ ಮುಖೇನ ಮೂಲ ಜನರ ಹಕ್ಕು ಅಧಿಕಾರ ಗಳನ್ನು ಗಳಿಸಿ ಕೊಡುವವರಾಗ ಬೇಕು.

ತುಳುನಾಡಿನಲ್ಲಿ ಇತಿಹಾಸ ಪುರುಷರಾಗಿ ಮೆರೆಯಬೇಕು. ಹೀಗೆ ಹತ್ತು ಹಲವು ಧ್ಯೇಯೋದ್ದೇಶಗಳನ್ನು ಅವಳಿ ವೀರರು ಕಾನದ ಕಟದರು ಚರ್ಚಿಸಿಕೊಂಡು ಮೂಡಣ ದಿಕ್ಕಿನತ್ತ ಪ್ರಯಾಣ ಬೆಳೆಸುತ್ತಾರೆ. ದಾರಿ ನಡುವೆ ತಮ್ಮ ತಾಯಿ ಸತ್ಯದಪ್ಪೆ ಬೊಲ್ಲೆಯ ಕಿವಿ ಮಾತು ನೆನಪಿಗೆ ಬರುತ್ತದೆ. ತಾಯಿ ಬೊಲ್ಲೆಯ ಮದುವೆಯಾದ ಹೊಸದರಲ್ಲಿ ಬಂಗಾಡಿಬೂಡುವಿನಲ್ಲಿ “ಬಚ್ಚಿರೆ ದೀಪುನ ಕ್ರಮ” ಮಾಡಿದಾಗ ಬಂಗಾರದ ಕೊತ್ತಂಬರಿ ಸರ ಕೊಟ್ಟ ಬಲ್ಲಾಳರು ಇನ್ನೇನು ಬೇಕು ಬೊಲ್ಲೆ ಎಂದು ಕೇಳಿದಾಗ ತಾಯಿ ಬೊಲ್ಲೆಯು ಹೇಳಿದ ಮಾತುಗಳು ಬಲ್ಲಾಳರಿಗೆ ಸಾಲದ ರೂಪದಲ್ಲಿ ಇನ್ನೂ ಬಾಕಿ ಇದೆ. “ಅಪ್ಪೆ ಸಾಲೊದ ಪನ್ನಿ” ಯನ್ನು ಕೇಳಿ ಪಡೆಯಬೇಕೆಂಬ ಹಂಬಲದಿಂದ ಅತ್ತ ಸಾಗುತ್ತಾರೆ.

ಬಂಗಾಡಿ ಬೂಡುವಿನ ಮುಂಭಾಗದಲ್ಲಿರುವ ಬಾಕಿಮಾರ್ ಗದ್ದೆಯ “ಗೆಂದ ತಾರೆದ ಕಟ್ಟಪುನಿ” ಯಲ್ಲಿ ಅವಳಿ ವೀರರು ಬರುವುದನ್ನು ಮೇಲುಪ್ಪರಿಗೆಯಲ್ಲಿ ಕುಳಿತು ನೋಡುತ್ತಿದ್ದ ಬಲ್ಲಾಳರು ಸೋಜಿಗದಿಂದ “ಜೋಡಿ ಗೆಂದಾಳಿ” ತೆಂಗಿನ ಮರಗಳೇ

ಬೂಡಿನತ್ತ ನಡೆದು ಬರುತ್ತಿದ್ದವೋ ಎಂಬುದಾಗಿ ಬಾಸಗೊಂಡರು.

ಬಂಗಾಡಿ ಬೀಡಿನ ಮೊಗಸಾಲೆಗೆ ಆಗಮಿಸಿದ ಅವಳಿ ವೀರರನ್ನು ನೋಡಿದ ಬಂಗಾಡಿಯ ಬಲ್ಲಾಳರು ಒಮ್ಮೆಗೆ ದಂಗಾಗುತ್ತಾರೆ. ಬಂಗಾಡಿಯ ಚಾವಡಿಗೆ ತಲೆ ತಗ್ಗಿಸಿ ಬಲ್ಲಾಳರ ಮುಂದೆ ನಿಲ್ಲುತ್ತಾರೆ. ನಿಂತ ಯುವಕರನ್ನು ದಿಟ್ಟಿಸಿ ನೋಡಿದ ಬಲ್ಲಾಳರು ಗತ್ತಿನಿಂದ ಮೀಸೆಯನ್ನೊಮ್ಮೆ ನೇವರಿಸಿ ನೀವು ಯಾರು? ನಿಮ್ಮ ಹೆತ್ತವರು ಯಾರು?

ನೀವು ಬಂದಿರುವ ಉದ್ದೇಶವಾದರು ಏನು? ಎಂಬುದಾಗಿ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸುತ್ತಾರೆ. ಎಲ್ಲಾ ಪ್ರಶ್ನೆಗಳಿಗೆ ಸಾವದಾನದಿಂದ ಉತ್ತರಿಸಿದ ಕಾನದ ಕಟದರು ಕಿಜನೊಟ್ಟು ಬರ್ಕೆಯ ಮೂಲದ ಮಾನ್ಯರಾದ ಕಾನದ ಕಟದರು ನಾವು ಎನ್ನುತ್ತಾರೆ.

ಕಿಜನೊಟ್ಟು ಬರ್ಕೆಯ ಮೂಲದ ಮಕ್ಕಳೆಂದು ಅರಿತ ಬಲ್ಲಾಳರು ತಕ್ಷಣವೇ ಬೊಲ್ಲೆಯ ಮಕ್ಕಳೆಂದು ಒಮ್ಮೆಗೆ ಆಶ್ಚರ್ಯ ಪಡುತ್ತಾರೆ. ಬಂಗಾಡಿಯಲ್ಲಿ ತೊಟ್ಟಿಲ ಮಕ್ಕಳನ್ನು ನೋಡಿದ ಬಳಿಕ ಇಷ್ಟೊಂದು ಗಟ್ಟಿ ಮುಟ್ಟಾದ ಯುವಕರಂತೆ ಕಂಗೊಳಿಸಿರುವುದು ಬಲ್ಲಾಳರಿಗೆ ಆಶ್ಚರ್ಯವನ್ನೇ ತಂದೊಡ್ಡಿತು. ಅಂತು ಹರ್ಷ ಭೀತಿಗಳ ನಡುವೆಯೇ ಬಂದ ಉದ್ದೇಶವನ್ನು ಕೇಳಿಯೆ ಬಿಡುತ್ತಾರೆ.

ಸೌಮ್ಯ ಸ್ವಾಭಾವದ ಕಾನದನು ಹೆತ್ತಬ್ಬೆ ಬೊಲ್ಲೆಯ ಮದುವೆಯಾದ ದಿನಮಾನಗಳನ್ನು ನೆನಪಿಸಿಕೊಂಡು ತಾಯಿ ಬೊಲ್ಲೆಗೆ ಭವಿಷ್ಯದಲ್ಲಿ ಕೊಡಲು ಸಿದ್ದನಿದ್ದೇನೆ ಎಂಬ ಬಲ್ಲಾಳರ ಮಾತು, ಇನ್ನೂ ಸಾಲದ ರೂಪದಲ್ಲಿ ಇದೆ.ಅದನ್ನು ಪಡೆದು ನಿಮ್ಮ ಮೌಲ್ಯ ಭರಿತ ಮಾತಿಗೆ ಚ್ಯುತಿ ಬರ ಬಾರದೆಂದು ಬಗೆದು ಬಂದಿರುವ ಹಿನ್ನೆಲೆಯನ್ನು ಸ್ಪಷ್ಟ ಪಡಿಸುತ್ತಾರೆ. ಇದಕ್ಕೆ ಉಬ್ಬು ಏರಿಸಿ, ಮೀಸೆ ಚಿವುಟಿ ಹಿಂದೆ ಮುಂದೆ ಆಲೋಚನೆ ಮಾಡದೆ ಕಾನದನ ಅರಿಕೆಯನ್ನು ಮುಂದಿಡಲು ಸೂಚಿಸುತ್ತಾನೆ. ಆಗ ಕಾನದನು ಬಂಗಾಡಿ ಬೂಡುವಿಗೆ ತಿಲಕದಂತಿದ್ದ “ಬಾಕಿಮಾರ್ ಗದ್ದೆಯ ಗೆಂದಾಳಿ ತಾರೆದ ಕಟ್ಟಪುಣಿ”ಯನ್ನು ಬಿಟ್ಟು ಕೊಡಲು ವಿನಂತಿ ಮಾಡಿಕೊಳ್ಳುತ್ತಾನೆ. ಇದನ್ನು ಕೇಳಿದ ಬಲ್ಲಾಳರ ಕೋಪ ನೆತ್ತಿಗೇರಿ ಕಾನದ ಕಟದರನ್ನು ಹೀನಾಯವಾಗಿ ಕೆಟ್ಟ ಪದಗಳಿಂದ ಬೈಯುತ್ತಾನೆ.

ದಿವಂಗತ ಸಿರಿನಾತ್ ಮಂಗಲ್ಪಾಡಿರವರು ಬರೆದಿರುವ ಕಾನದ ಕಟದ ಯಕ್ಷಗಾನ ಪ್ರಸಂಗದ ಸಾಹಿತ್ಯ ಸಾಲುಗಳನ್ನು ಉಲ್ಲೇಖಿಸುವುದು ಬಹಳ ಸೂಕ್ತ ಎನಿಸುತ್ತದೆ.”ಮಾರಿ ಮನ್ಸರೆ ದಿಕ್ಕನಕುಲೆ ಬಾರಿಪಾತೆರ ‌ ಪಂಡರತ್ತಯ!

ಏರವುಜಿ ದಂಡಿಗೆ ನಾಯಿಲೆ ನಿಕುಲೆಗ್! ಪೋಲೆಯಪಿರ” ಎನ್ನುವಲ್ಲಿಯೂ ಮಾನಾದಿಗೆಯ ಮನ್ಸರಾದ ಕಾನದ ಕಟದರನ್ನು ಕೀಳು ರೀತಿಯಲ್ಲಿ ಉಚ್ಚರಿಸಿ,ಉದ್ಗರಿಸಿ ಹೀಯಾಳಿಸಿರುವುದನ್ನು ಕಾಣಬಹುದು ” ನನ್ನ ಬೀಡಿಗೆ ಬರಲು ನಿನ್ನ ಗದ್ದೆ ಬದುವ ?!” ಇಲ್ಲಿಯೂ ಅಧಿಕಾರದ ಸಂಕೇತವಾಗಿ ಈ ಮಾತನ್ನು ಕೇಳಿದ್ದಾರೆ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಬಹುಶಃ  ಪ್ರಸ್ತುತ ದಿನಗಳಾಗಿದ್ದಲ್ಲಿ ಜಾತಿನಿಂದನೆ ಮೊಕದ್ದಮೆ ಹೂಡಿ ಅಂತವರನ್ನು ಜೈಲಿಗಟ್ಟುವ ಅವಕಾಶವನ್ನು ಬೋಧಿಸತ್ವ ಪರಮ ಪೂಜ್ಯ ಬಾಬಾ ಸಾಹೇಬ್ ಡಾ.ಭೀಮರಾವ್ ಅಂಬೇಡ್ಕರ್ ರವರು ಒದಗಿಸಿರುವುದನ್ನು ಅಸ್ಪಶ್ಯರೆಲ್ಲರೂ ನೆನಪಿಸಲೇ ಬೇಕು. ಅಣ್ಣನ ಮಾತಿಗೆ ಸಿಟ್ಟಿಗೇರಿದ ಬಲ್ಲಾಳರನ್ನು ಕಂಡ ಕಟದನು ” ಬಲ್ಲಾಳ ಉಲ್ಲಾಯ ನೀವು  ತಿರುಗುವ ಬೆಳ್ಳಿಯ ಕುದುರೆಯನ್ನು ಬಿಟ್ಟುಕೊಡಿ” ಎಂಬುದಾಗಿ ಸಿಟ್ಟಿನ ಉದ್ಗಾರದಿಂದ ಕೇಳುವನು. ಬಲ್ಲಾಳರು ಸಿಟ್ಟಿನಿಂದ “ಎಲವೋ ಮತಿವಿಕಲ, ನನ್ನ ಮಾನಹಾನಿ ಮಾಡುವ ಯತ್ನದಲ್ಲಿ ಬಂದಿರುವಿರೇನೋ, ಕೇಳುವ ಅತಿನಲ್ಲೂ ಒಂದು ನ್ಯಾಯವಿರಬೇಕು.ಅದನ್ನು ಆಲೋಚಿಸಿ ಪ್ರಜ್ಞೆಯಿಂದ ಕೇಳಿ” ಎಂಬುದಾಗಿ ಉಗ್ರತೆಯಲ್ಲಿ ಉಬ್ಬೇರಿಸುವರು.

ಹಾಗಾದರೆ “ಕೇಳಿದ್ದನ್ನು ಕೊಡುವ ಶಕ್ತಿ ಹಾಗು ಕೊಟ್ಟ ಮಾತನ್ನು ನಡೆಸಿಕೊಡುವ ಧರ್ಮವೂ ನಿಮಗಿಲ್ಲ ಎಂದು ನಾವು ಭಾವಿಸಿದ್ದೇವೆ. ಇನ್ನು ನಾವಾಗಿ ಕೇಳುವುದಕ್ಕೆ ಯಾವ ಅರ್ಥವೂ ಬರಲಾರದು. ಹಾಗಾಗಿ ತಾವು ಏನು ಕೊಡ ಬಯಸುವಿರೋ ಅದನ್ನ ಸ್ವೀಕರಿಸುವ ಹೃದಯ ವೈಶಾಲ್ಯತೆ,  ತಾಕತ್ತು ನಮಗಿದೆ. ಯಾವುದನ್ನು ತಾವುಗಳು ಕೊಡಬಯಸುವಿರೋ ನಾವು ಪಡೆಯಲು ತಯಾರಿದ್ದೇವೆ” ಎಂಬುದಾಗಿ ಕಾನದ ಕಟದರು ಬಲ್ಲಾಳರ ಸಮ್ಮುಖದಲ್ಲಿ ವಿವರಿಸುತ್ತಾರೆ.

ಮತ್ತೆ ಬಲ್ಲಾಳರು ಕಾನದ ಕಟದರನ್ನು ಕರೆದು ” ಈಗ ನನ್ನ ಮನಸ್ಸು ಸಂತೋಷ ಪಡುತ್ತಿದೆ. ನಿಮಗೆ ಮೆಚ್ಚುಗೆಯಿಂದ ಏಳೇಳು ಮಣ ಭಾರದ ಎರಡು ಬೆಳ್ಳಿಯ ಮುಟ್ಟಲೆಗಳನ್ನು ನಿಮ್ಮ ತಲೆಗೇರಿಸುತ್ತಿದ್ದೇನೆ. ಇಷ್ಟೇ ಅಲ್ಲದೆ ಅಂದು ಮಂತ್ರಿ ಬುದ್ಯಂತರು ಬೊಲ್ಲೆಗೆ ಕೊಡಲು ಬಯಸಿದ್ದ ‘ಕೋಡಿಕೊಡಂಗೆದ ಮಿತ್ತಮೆಯಿತ ಮೂಜಿಮುಡಿ ಕಂಡ ಮಲ್ಪಿನಾತ್ ಮಲ್ಲ ಜಾಗ’ ವನ್ನು ಪಡೆದುಕೊಳ್ಳಲು ಆಜ್ಞಾಪಿಸುತ್ತಾರೆ.

ಬಂಗಾಡಿ ಬೆಡಿಗುತ್ತು ಚಾವಡಿ ಇಳಿಯುತ್ತಾ “ಬೆರಿ ಪಾಡ್ದ್ ಜತ್ತಿ ಕಾನದ ಕಟದೆರ್ ನನ ದುಂಬುಗು ವಾ ಕಾರ್ನೊಗ್ಲ ಬಂಜಿ ಪಾಡ್ದ್ ಚಾವಡಿಗ್ ಬರಯ” ಎಂಬುದಾಗಿ ವಾಕನ್ನು ಉಚ್ಚರಿಸುವ ಮೂಲಕ ಅಲ್ಲಿಂದ ಹೊರಟು ನಿಲ್ಲುತ್ತಾರೆ.

ಬೆಳ್ಳಿಯ ಮುಟ್ಟಲೆ ತಲೆಗೇರಿಸಿದ ವೀರ ಪುರುಷರು ಎದೆಗುಂದದೆ ಮುಟ್ಟಲೆಯ ಮರ್ಮವನ್ನು ಬನ್ನಿಸುತ್ತಾರೆ. ಮೂಲದ ಮಾನ್ಯರು/ಮಾನಿಲು ಯಾವ ಕಾಲಕ್ಕೂ ಉದ್ಧಾರ ಆಗಬಾರದು, ಉಲ್ಲವರ ಕಾಲಡಿಯಲ್ಲಿ ಊಳಿಗ ಮಾಡಿಯೇ ಬದುಕಬೇಕು ಎಂಬ ಸಂಕೇತವೇ ಈ ಮುಟ್ಟಲೆ ! ಮುಟ್ಟಲೆ ಪಾಲೆದಾಂಡ ದಾನೆ, ಬೊಲ್ಲಿದಾಂಡ ದಾನೆ, ಮುಟ್ಟಲೆ ಮುಟ್ಟಲೆನೆ!!

ಈ ಕಾನದ ಕಟದರ ನುಡಿಯನ್ನು ಯುವ ಜನತೆ ಅರ್ಥೈಸಿಕೊಳ್ಳಬೇಕಾಗಿದೆ. ಕಾನದ ಕಟದರ ಹಾದಿ ಹಿಡಿಯಬೇಕಾಗಿದೆ.

ಹ… ಒಂದು ವಿಚಾರ ಮರೆತೆ……

ಇತ್ತೀಚಿಗೆ ನನ್ನ ಸ್ನೇಹಿತರೊಡಗೂಡಿ ಅದೇ ಕೋಡಿ ಕೊಡಂಗೆ ಬೋರುಗುಡ್ಡೆ ( ಮೂಜಿ ಮುಡಿ ಕಂಡೊಲು ) ಯನ್ನು ನೋಡಲು, ಸಂಶೋಧನೆ ಮಾಡಲು, ಕಾನದ ಕಟದರ ಕಥೆಯನ್ನು ಸಂಗ್ರಹಿಸಲು ಹೋಗಿದ್ದೆ. ಸುಮಾರು ಎಂಟರಿಂದ ಹತ್ತು ಕಿಲೋಮೀಟರ್ ಗಳಷ್ಟು ನಡೆದು ಪತ್ತೆ ಹಚ್ಚಿದೆವು.

ದಿಡುಪೆಯಿಂದ   ಸಾಗಿದ ನಾವು ಮಲ್ಲ ಚೀಂಪುಲಣ್ಣನ ಸಹಕಾರದಿಂದ ಕಡ್ತಿಕಲ್ಲ್ ಗಡಿಯ ಸಮೀಪ ಹೆಜ್ಜೆ ಹಾಕಿದೆವು. ದುಂಬುದ ದಿನೊಟು ಬಚ್ಚಿರೆ ಬಜ್ಜೈ ದೀದ್ ಮನದಾನಿ ಪೋನಗ ಬಂಗಾರ್ ಕೊನಪೆದೆರ್ಗೆ….. ಹೀಗೆ ಕಥೆ ಹೇಳುತ್ತಾ ಮುನ್ನಡೆದೆವು. ಹೆಬ್ಬಾರ್ಥಿ ಕಲ್ಲು/  ಶೃಂಗ ರುಷಿ ಧನುರ್ವಿದ್ಯೆ ಕಲಿಸುತ್ತಿದ್ದ ಗುರುಮಠ/ ಸಂಕಮಲೆ ಹಾವು ಇರುತ್ತಿದ್ದ ತಂಪಾದ ಗುಹೆ, ತೀರ್ಥಗುಂಡಿ,  ರಾಮ ಲಕ್ಷ್ಮಣ ಪೆಲತ್ತ ಮರ,  ನೆಲಗುರಿ ಮಾಡಿ ಅಡುಗೆ ಮಾಡಿ ಉಂಡ ಸ್ಥಳ,  ಬಲ್ಲಾಳರಾಯನ ದುರ್ಗಾ ಹಾಗು ಹೆಬ್ಬಾರ್ಥಿಕಲ್ಲಿಗಿರುವ ಸಂಬಂಧ,  ಹಾಗೆಯೆ ಮುನ್ನಡೆದು, ಕಾನದ ಕಟದರು ನೆಟ್ಟ ವೀಳ್ಯದೆಲೆಯ ಬುಡದಲ್ಲಿನ  ಕಾಂಡದಿಂದ ಕಲಸೆ ನಿರ್ಮಾಣ ಮಾಡಿರುವ ವಿಶೇಷತೆ(ಬಚ್ಚಿರೆ ಬೂರುದ ದಂಡ್ ದ ಕಲಸೆ ) ಇಲ್ಲಿದೆ. ಕಾನದ ಕಟದರ ಗುಡಿಸಲಿನ ಪಂಚಾಂಗದ ಕುರುಹುಗಳು ನೀರುಗುಂಡಿ ಇತ್ಯಾದಿಗಳು……….

ಹೀಗೆ ಹಲವು ವಿಚಾರಗಳ ಸಂಗ್ರಹ ಮಾಡಿದೆ. ದಟ್ಟಡವಿಯ ನಡುವೆ ಒಂದೆಡೆ ಆನೆಗಳ ಕಾಟ, ಇನ್ನೊಂದೆಡೆ ಕಾಡು ಹಂದಿಗಳ ಓಡಾಟ….. ಮನಸ್ಸೊಳಗೆ ಡವ ಡವ….  ಅಂತು ಇಂತು ತುಳುನಾಡಿನ ಅವಳಿ ವೀರರು ಅಗೆದು ಮಾಡಿದ ಕೋಡಿ ಕೊಡಂಗೆಯ ಬೋರು ಗುಡ್ಡೆಯ ಮೂರುಮುಡಿ ಗದ್ದೆ ಸಿಕ್ಕಿದಾಗ ನನಗಾದ ಸಂತೋಷಕ್ಕೆ ಮಿತಿಯೇ ಇಲ್ಲ. ಮೈಕೈ ರೋಮಾಂಚನಗೊಂಡಿತು. ಕಣ್ಣಂಚಿನಲ್ಲಿ ಆನಂದಭಾಷ್ಪ ಹರಿಯಿತು. ಗದ್ದೆಗೆ ನಮಸ್ಕರಿಸಿ ಗದ್ದೆಗೆ ಇಳಿದ ಒಂದು ಕ್ಷಣದಲ್ಲಿ….. ಕಾನದ ಕಟದರ ಹೆಜ್ಜೆಗಳೇ ಅಲ್ಲಲ್ಲಿ ಕಾಣುತ್ತಿದ್ದಂತೆ ಬಾಸವಾಗುತ್ತಿತ್ತು. ತುಳುನಾಡಿಗೆ ಅತಿಕಾರ ಬಿದೆ ತಂದು ಪ್ರಥಮ ಬಾರಿಗೆ ಬಿತ್ತಿದ ಪುಣ್ಯ ಸ್ಥಳ ಇದೇ ಆಗಿದೆ. ಕಳೆದ ಇಪ್ಷತ್ತು ವರ್ಷಗಳಿಂದ  ಸಂದಿ ಪಾಡ್ದನ ಕರುಂಗೋಲು ಗಳಿಂದ ಬಲ್ಲಂತಹ ನನಗೆ ಈ ಗದ್ದೆಯನ್ನು ಕಾಣಬೇಕೆಂಬ ಕನಸು ನನಸ್ಸಾಗಲು ಸಹಕರಿಸಿದ ಸ್ನೇಹಿತರಿಗೆ ಈ ಮೂಲಕ ಅಭಿನಂದನೆಗಳು.

ಒಟ್ಟಿನಲ್ಲಿ ಮುಟ್ಟಲೆ ಎನ್ನುವುದು ಊಳಿಗದ ಸಂಕೇತ ಎನ್ನುವುದು ಕೆಲವರ ವಾದ, ಇನ್ನು ಕೆಲವರಲ್ಲಿ ಅಧಿಕಾರದ ಸಂಕೇತ ಎಂಬುದು ಇನ್ನೊಂದು ವಾದ. ಈ ನಡುವೆ ಬಲ್ಲಾಳರು ದುಡಿಯುವ ವರ್ಗ ಎಂಬ ಕಾರಣಕ್ಕೆ ಮುಟ್ಟಲೆ ಕೊಟ್ಟರೂ ಧನಾತ್ಮಕವಾಗಿ ಸ್ವೀಕರಿಸಿ ಬದುಕಿ ಬಾಳಿ ತೋರಿಸಿದರು ಎನ್ನುವುದೇ ನಮಗೆ ಕಾಣಸಿಗುವ ಆದರ್ಶ. ಅನಾದಿಕಾಲದಿಂದಲೂ  ಸಮಾಜ ಗುರುತಿಸಿರುವ ಮಾನಿಯೆರ್, ಮಾನ್ಯೆರ್, ಮನುಷ್ಯೆರ್, ಮನ್ಸೆರ್ ಉಚ್ಚಾರಣೆಯನ್ನು ಗೌರವಯುತವಾಗಿ ಸ್ವೀಕರಿಸಿ, ನರಮಾನಿಲು / ಮಾನಿಲು ಎಂಬ ಪದಕ್ಕೆ ಪರ್ಯಾಯ ಪದವೇ ಮನ್ಸೆರ್ ಎಂಬುದನ್ನು ಬಲ್ಲಾಳರಿಗೂ ಹಾಗೆಯೇ ಅನೇಕ ಸಂದರ್ಭಗಳಲ್ಲಿ ಪ್ರಜ್ಞೆಯನ್ನು ಮೂಡಿಸಿರುವ ಸನ್ನಿವೇಶಗಳನ್ನು ಅನೇಕ ಕಡೆಗಳಲ್ಲಿ ಗಮನಿಸಬಹುದು. ತುಳುನಾಡಿನ ಅನೇಕ ಶಬ್ದಗಳು ಇತಿಹಾಸದಲ್ಲಿ ಅಳಿವಿನ ಅಂಚಿನಲ್ಲಿರುವುದನ್ನು ಕಾಣಬಹುದು. ಈ ಪದಗಳಿಗೆ ಗೌರವ ಕೊಡುವ, ಸ್ವಾಭಿಮಾನ ತುಂಬಿಸುವ, ಧನಾತ್ಮಕ ಚಿಂತನೆಗಳನ್ನು ಮಾಡುವ ಯುವಕರ ದಂಡು ತಯಾರಾಗ ಬೇಕಾಗಿದೆ. ತುಳು ನೆಲ, ತುಳು ಭಾಷೆ, ತುಳು ಸಂಸ್ಕೃತಿ ತುಳು ಇತಿಹಾಸ ಉಳಿದಾಗ ಮಾತ್ರ ನಾವೆಲ್ಲರೂ ತುಳುವರು ಅನಿಸುತ್ತೇವೆ. ಸತ್ಯ ದೈವಗಳ , ಇತಿಹಾಸ ಪುರುಷರ ಮಾತು ಅಜರಾಮರವಾಗುತ್ತದೆ ಎಂಬುದು ನನ್ನ ಅನಿಸಿಕೆ.

ಮುಂದಿನ ಸಂಚಿಕೆಯಲ್ಲಿ: ಜನನ ಕುಲ್ಕುಂದದ ಜಾತ್ರೆ/ಎರುಕನಡನ ಬೇಟಿ/ ಕಾರಿ ಕಬಿಲನ ಜೋಡಿ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಹಿಂದಿನ ಸಂಚಿಕೆ:

ಕಾನದ-ಕಟದರ ಬಾಲ್ಯ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 11

ಇತ್ತೀಚಿನ ಸುದ್ದಿ