ಪಂಥದಿಂದ ಸಂಸ್ಕೃತಿಯೆಡೆಗೆ – ಹಿಂದುತ್ವದ ಜಾತಿ ಕರಾಮತ್ತು
ಮೂಲ : From cult to culture- Hindutva’s caste masterstroke
ದೇವ್ದತ್ ಪಟ್ಟನಾಯಕ್- ದ ಹಿಂದೂ 2-1-22
ಜಾತ್ಯತೀತ ಮೌಲ್ಯಗಳ ಪ್ರತಿಪಾದಕರು ಹಿಂದೂ ಮತ್ತು ಹಿಂದುತ್ವವಾದಿಯ ನಡುವಿನ ವ್ಯತ್ಯಾಸವನ್ನು ಗುರುತಿಸಲು ಆರಂಭಿಸಿರುವ ಹಿನ್ನೆಲೆಯಲ್ಲಿ ಬೌದ್ಧಿಕ ವಲಯದಲ್ಲಿ ಸಂಚಲನ ಉಂಟಾಗುತ್ತಿದೆ. ಈ ಸೂಕ್ಷ್ಮ ಆಧ್ಯಾತ್ಮಿಕ ವ್ಯತ್ಯಾಸಗ್ರಹಿಕೆಗಳು ವಾಸ್ತವಿಕ ನೆಲೆಯಲ್ಲಿ ಹೇಗೆ ಅಪ್ರಸ್ತುತವೆನಿಸುತ್ತದೆ ಎನ್ನುವುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಚರ್ಚೆಯಲ್ಲಿ ತೊಡಗಿರುವ ಹಿಂದೂ ಸಮುದಾಯದ ಮೇಲ್ಪದರದ ಗಣ್ಯ ಬುದ್ಧಿಜೀವಿಗಳೇ ಮತ್ತೊಂದು ನೆಲೆಯಲ್ಲಿ ನಿಂತು ಇಸ್ಲಾಂ ಮತವನ್ನು ಇಸ್ಲಾಂವಾದದಿಂದ ಬೇರೆಯಾಗಿಯೇ ನೋಡಬೇಕು ಎಂದು ವಾದಿಸುತ್ತಾರೆ. ಅಷ್ಟೇ ಅಲ್ಲದೆ ಭಾರತದ ಮೇಲೆ ಆಕ್ರಮಣ ಮಾಡಿದವರನ್ನು ಪರ್ಷಿಯನೀಕರಣಗೊಂಡ ತುರುಕರು ಎಂದು ಪರಿಗಣಿಸಬೇಕೇ ಹೊರತು ಮುಸ್ಲಿಂ ಸೇನಾನಿಗಳು ಎಂದು ಭಾವಿಸಬಾರದು ಎಂದೂ ವಾದಿಸುತ್ತಾರೆ.
ಮತ ಅಥವಾ ಧರ್ಮ ಎನ್ನುವ ಪದವು ಹೆಚ್ಚು ಜನಪ್ರಿಯತೆ ಗಳಿಸಿದ್ದು 19ನೆಯ ಶತಮಾನದಲ್ಲಿ. ಏಕದೈವವಾದದ ಪೌರಾಣಿಕ ನೆಲೆಯಲ್ಲಿ, ವಿಜ್ಞಾನದ ಪ್ರಭಾವ ಹೆಚ್ಚಾಗುತ್ತಿದ್ದ ಸಂದರ್ಭದಲ್ಲೂ ಸಹ ದೈವತ್ವವನ್ನು ವಾಸ್ತವ ಎಂದು ಒಪ್ಪಿಕೊಳ್ಳುವ ಒಂದು ಮನಸ್ಥಿತಿಯನ್ನು ಮತ ಎಂದು ವ್ಯಾಖ್ಯಾನಿಸಲಾಗಿತ್ತು. ಬಹುಪಾಲು ವಸಾಹತು ದಾಳಿಕೋರರಿಗೆ ಇದ್ದುದು ಒಂದೇ ಮತ- ಅವರ ದೃಷ್ಟಿಕೋನದ ಕ್ರೈಸ್ತ, ಕ್ಯಾಥೊಲಿಕ್ ಅಥವಾ ಪ್ರೊಟೆಸ್ಟಂಟ್ ಮತ. ಯಹೂದ್ಯ ಮತವನ್ನು ಗತಕಾಲದ ಮತ ಎಂದೇ ಪರಿಭಾವಿಸಿದ ವಸಾಹತು ಶಕ್ತಿಗಳು ಇಸ್ಲಾಂ ಮತವನ್ನು , ಸಮಾನ ಬೇರುಗಳನ್ನು ಹೊಂದಿದ್ದರೂ ಸಹ, ಪಾಷಂಡ ಮತ ಎಂದೇ ಭಾವಿಸಿದ್ದರು. ವಸಾಹತು ದಾಳಿಕೋರರು ವಸಾಹತೀಕರಣಗೊಳಿಸಿದ ಭೌಗೋಳಿಕ ರಾಷ್ಟ್ರಗಳಲ್ಲಿನ ಜನತೆಯ ನಂಬಿಕೆ ಮತ್ತು ಶ್ರದ್ಧೆಯನ್ನು ವಿಗ್ರಹಾರಾಧನೆ ಎಂದೋ ಅಥವಾ ಅಧಾರ್ಮಿಕ ಅಥವಾ ನಾಸ್ತಿಕತೆ ಎಂದೇ ಪರಿಗಣಿಸುತ್ತಿದ್ದರು. ಹಾಗಾಗಿ ಈ ಶ್ರದ್ಧಾನಂಬಿಕೆಗಳಿಗೆ ಮಾನ್ಯತೆಯನ್ನೇ ನೀಡದೆ, ಮೂಢನಂಬಿಕೆಗಳೆಂದು ಪರಿಗಣಿಸುತ್ತಿದ್ದರೇ ಹೊರತು ಮತ ಅಥವಾ ಧರ್ಮ ಎಂದು ಪರಿಗಣಿಸುತ್ತಿರಲಿಲ್ಲ.
ಆದರೆ ಈ ಸಂದರ್ಭದಲ್ಲಿ ಜಪಾನಿನ ಮಾರುಕಟ್ಟೆಗಳು ಮಿಷನರಿ ಚಟುವಟಿಕೆಗಳನ್ನು ಹೆಚ್ಚಾಗಿ ಪ್ರೋತ್ಸಾಹಿಸುತ್ತಿರಲಿಲ್ಲವಾಗಿ ಈ ಮಾರುಕಟ್ಟೆಗಳನ್ನು ತಲುಪುವುದು ವಸಾಹತು ಶಕ್ತಿಗಳಿಗೆ ಕಷ್ಟವಾಗತೊಡಗಿತ್ತು. ಈ ಸಂದರ್ಭದಲ್ಲೇ “ ಇತರ ಜನಸಮುದಾಯಗಳ ಮತಗಳನ್ನು ಗೌರವಿಸುವ ” ಚಿಂತನೆಯೂ ರಾಜಕೀಯವಾಗಿ ಪ್ರಚಲಿತವಾಗಿ ಮಾನ್ಯತೆ ಪಡೆದಿತ್ತು. ಅಂದರೆ, 19ನೆಯ ಶತಮಾನದಲ್ಲಿ ಮಾರುಕಟ್ಟೆಯ ಅನಿವಾರ್ಯತೆಗಳ ಕಾರಣದಿಂದಲೇ ಯೂರೋಪಿನ ವಸಾಹತುಶಾಹಿಗಳು ಬಹುವಿಧದ ಮತಗಳ ಔಚಿತ್ಯವನ್ನು ಮಾನ್ಯ ಮಾಡಬೇಕಾಗಿತ್ತು.
ಭಾರತದ ಅಸ್ಮಿತೆ
ಹಾಗಾಗಿ, ಇದೇ ಕಾಲಘಟ್ಟದಲ್ಲಿ ಯೂರೋಪ್ ಖಂಡವು ಬುದ್ಧನನ್ನು ಶೋಧಿಸಿದ್ದೇ ಅಲ್ಲದೆ ವ್ಯಾಪಕವಾಗಿ ಸ್ವೀಕರಿಸಿದ್ದು ಕಾಕತಾಳೀಯ ಎನಿಸುವುದಿಲ್ಲ. ಭಾರತದಲ್ಲಿನ ಹಿಂದೂ ಧರ್ಮದ ಜಾತಿ ವ್ಯವಸ್ಥೆಯನ್ನು ಸಮರ್ಥವಾಗಿ ಎದುರಿಸಲು ಭಾರತದಲ್ಲೇ ಉಗಮಿಸಿದ ಒಂದು ಅದ್ಭುತ ಪ್ರತಿ ಚಿಂತನೆ ಬೌದ್ಧ ಧಮ್ಮ ಎಂದು ಭಾರತೀಯರಿಗೆ ಅರ್ಥಮಾಡಿಸಲಾಯಿತು. ಈ ಸಂದರ್ಭದಲ್ಲೇ ಹಿಂದೂ ಧರ್ಮ ಮತ್ತು ಹಿಂದುತ್ವ ಎಂಬ ಪದಗಳೂ ಉದ್ಭವಿಸಿದವು. ಹಿಂದೂ ಧರ್ಮ ಪದವನ್ನು ಸಮಾಜ ಸುಧಾರಣೆಯಲ್ಲಿ ವಿಶ್ವಾಸ ಹೊಂದಿದ್ದ ರಾಜಾರಾಮ್ ಮೋಹನ್ ರಾಯ್ 19ನೆಯ ಶತಮಾನದ ಆರಂಭದಲ್ಲೇ ಬಳಸಲಾರಂಭಿಸಿದ್ದರು. ಹಿಂದುತ್ವ ಪದವನ್ನು 19ನೆಯ ಶತಮಾನದ ಅಂತ್ಯದ ವೇಳೆಗೆ , ಸಮಾಜ ಸುಧಾರಣೆಯನ್ನು ವಿರೋಧಿಸುತ್ತಿದ್ದ ಚಂದ್ರನಾಥ ಬಸು ಬಳಸಲಾರಂಭಿಸಿದ್ದರು.
ಈ ಅವಧಿಗೂ ಮುನ್ನ ಭಾರತದಲ್ಲಿ ಅಸ್ಮಿತೆಗಳು ಜಾತಿ, ಬುಡಕಟ್ಟು ಮತ್ತು ಪ್ರಾಂತ್ಯಗಳನ್ನು ಆಧರಿಸಿದ್ದವು. ಮೀನುಗಾರರನ್ನು ಮೀನುಗಾರ ಜಾತಿಗೆ ಸೇರಿದವರೆಂದೇ ಗುರುತಿಸಲಾಗುತ್ತಿತ್ತು. ಈ ಜಾತಿಯ ಜನರು ಯಾರನ್ನು ಆರಾಧಿಸುತ್ತಿದ್ದರು ಎನ್ನುವುದು ಅಪ್ರಸ್ತುತವಾಗಿತ್ತು. ಭೂಮಾಲೀಕರನ್ನು ಮುಸ್ಲಿಮರು, ರಜಪೂತರು, ಬ್ರಾಹ್ಮಣರು, ಠಾಕೂರರು, ಕಾಯಸ್ಥರು ಹೀಗೆ ಜಾತಿ ಆಧಾರಿತ ಭೂಮಾಲೀಕರಾಗಿಯೇ ಕಾಣಲಾಗುತ್ತಿತ್ತು. ಈ ಸಂದರ್ಭದಲ್ಲೇ ಬ್ರಿಟೀಷರು ಜನಗಣತಿಯ ಸಾಧನವನ್ನು ಬಳಸಿಕೊಳ್ಳುವ ಮೂಲಕ ಮತ ಅಥವಾ ಧರ್ಮವನ್ನು ವಿಧ್ಯುಕ್ತವಾಗಿ ವರ್ಗೀಕರಿಸುವುದರಲ್ಲಿ ಯಶಸ್ವಿಯಾಗಿದ್ದರು. ಬ್ರಿಟೀಷರು ಹೇಳುವವರೆಗೂ ಹಿಂದೂಗಳಿಗೆ ಒಂದು ಕೇಂದ್ರೀಕೃತ ಸಾಂಸ್ಥಿಕ ಮತ ಎನ್ನುವುದು ಇರಲಿಲ್ಲ.
ಕ್ರೈಸ್ತ ಮತದಲ್ಲಿ ಪಾದ್ರಿಗಳು ಮತ್ತು ಪ್ರವಾದಿಗಳು ದೈವೀಕ ನಿಯಮಗಳನ್ನು ಹೇರಿದಂತೆಯೇ ಬ್ರಾಹ್ಮಣರು ಜಾತಿ ಶ್ರೇಣೀಕರಣವನ್ನು ಹೇರಲು ಹಿಂದೂ ಧರ್ಮವನ್ನು ಬಳಸಿಕೊಂಡರು ಎಂದು ಅರ್ಥಮಾಡಿಸಲಾಯಿತು. ಮತ ಅಥವಾ ಧರ್ಮದ ಬಗ್ಗೆ ಬ್ರಿಟೀಷರು ಬಳಸಿದ ಈ ಪರಿಭಾಷೆಯೇ ಅವರಿಗೆ ಭಾರತದಲ್ಲಿ ವಸಾಹತು ಆಳ್ವಿಕೆಯನ್ನು ಸಮರ್ಥಿಸಿಕೊಳ್ಳಲು ನೆರವಾಯಿತು. ಹಾಗೆಯೇ ಹಿಂದೂಗಳನ್ನು ಮುಸಲ್ಮಾನರಿಂದ ರಕ್ಷಿಸುವ, ಕೆಳಜಾತಿಯ ಹಿಂದೂಗಳನ್ನು ಮೇಲ್ಜಾತಿಯ ಹಿಂದೂಗಳಿಂದ ರಕ್ಷಿಸುವ ಒಂದು ಸಾಧನವಾಗಿ ಈ ಪರಿಭಾಷೆಯನ್ನು ಬಳಸಲಾಯಿತು. ನಂತರದ ಕಾಲಘಟ್ಟದಲ್ಲಿ ಮುಸ್ಲಿಮರನ್ನು ಬಲಿಷ್ಠ ಹಿಂದೂ ಮೇಲ್ಪದರದ ಗಣ್ಯರಿಂದ ಸಂರಕ್ಷಿಸುವ ಸಲುವಾಗಿ ಮೇಲ್ಪದರದ ಗಣ್ಯ ಮುಸಲ್ಮಾನರು ಭಾರತವನ್ನು ವಿಭಜಿಸಲೂ ಇದು ನೆರವಾಯಿತು. ಇದೇ ಪರಿಭಾಷೆಯನ್ನು ಬಳಸುವ ಮೂಲಕವೇ ಇಂದು ಮಾರ್ಕ್ಸ್ ವಾದಿಗಳು ಮತ್ತು ಜಾತಿ ವಿರೋಧಿ ಗುಂಪುಗಳು ಹಿಂದೂಗಳನ್ನು ವಿಭಜಿಸಲು ಅಥವಾ ಭಾರತವನ್ನೇ ವಿಭಜಿಸಲು ಯತ್ನಿಸುತ್ತಿದ್ದಾರೆ, ಇವರಿಂದ ಭಾರತವನ್ನು ರಕ್ಷಿಸಿ ಐಕ್ಯತೆಯನ್ನು ಸಾಧಿಸಬೇಕು ಎಂದು ಹೇಳಲಾಗುತ್ತಿದೆ.
ಮತ ಅಥವಾ ಧರ್ಮದ ಮಸೂರದಿಂದಲೇ ಇದನ್ನು ನೋಡಿದಾಗ ವಿಭಜನೆಯ ಪೂರ್ವದ ಭಾರತವೂ ಸಹ ಹಿಂದೂ ಬಾಹುಳ್ಯದ ದೇಶವೇ ಆಗಿತ್ತು. ಜಾತಿಯ ಮಸೂರದಿಂದ ನೋಡಿದರೆ ಭಾರತ ಎಲ್ಲ ಕಾಲಕ್ಕೂ ಅನೇಕ ಅಲ್ಪಸಂಖ್ಯಾತ ಸಮುದಾಯಗಳನ್ನೊಳಗೊಂಡ ಪ್ರದೇಶದಂತೆಯೇ ಕಾಣುತ್ತದೆ. ರಾಜಕಾರಣಿಗಳಿಗೆ ಮತ ಅಥವಾ ಧರ್ಮ ಎನ್ನುವುದು ಜಾತಿಗಿಂತಲೂ ಹೆಚ್ಚು ಅನುಕೂಲಕರವಾಗಿ ಕಾಣುತ್ತದೆ ಏಕೆಂದರೆ ಪ್ರಜಾಪ್ರಭುತ್ವದಲ್ಲಿ ಸಂಖ್ಯಾಬಲವೇ ಮುಖ್ಯವಾಗುತ್ತದೆ. ಮೇಲ್ಪದರದ ಗಣ್ಯ ಹಿಂದೂಗಳ ವಿರುದ್ಧ ಹೋರಾಡುತ್ತಿರುವವರೆಗೂ ಮುಸ್ಲಿಂ ರಾಜಕಾರಣಿಗಳು ಉತ್ತರ ಭಾರತದ ಮೇಲ್ಪದರದ ಗಣ್ಯ ಮುಸಲ್ಮಾನರನ್ನು ಒಗ್ಗೂಡಿಸಿ ಪಾಕಿಸ್ತಾನವನ್ನು ಸೃಷ್ಟಿಸುವುದರಲ್ಲಿ ಯಶಸ್ವಿಯಾಗಿದ್ದರು. ಆದರೆ ಅಲ್ಲಿ ಬಂಗಾಲದ ಮೇಲ್ಪದರದ ಗಣ್ಯರು ಪಂಜಾಬಿನ ಗಣ್ಯರೊಡನೆ ಸಮನ್ವಯ ಸಾಧಿಸಲು ಸಾಧ್ಯವಾಗಲಿಲ್ಲ. ಇದರ ಪರಿಣಾಮವೇ ಪಾಕಿಸ್ತಾನ ಇಬ್ಭಾಗವಾಗಿ ಬಾಂಗ್ಲಾದೇಶ ಸೃಷ್ಟಿಯಾಗಿತ್ತು.
ಜಾತಿಯನ್ನು ಕುರಿತು ಮಾತನಾಡುವಾಗ
ಈಗ ಈ ಎರಡೂ ದೇಶಗಳಲ್ಲಿ ಮತ್ತೊಂದು ವಿಭಜನೆಯ ಭೀತಿ ಕಾಡುತ್ತಿದೆ. ಕಾರಣವೇನೆಂದರೆ ದಕ್ಷಿಣ ಏಷಿಯಾದ ಜನರು, ಅವರು ಅನುಸರಿಸುವ ಮತ ಅಥವಾ ಧರ್ಮ ಯಾವುದೇ ಆದರೂ, ಆಳವಾದ ಜಾತಿ ಮತ್ತು ಬುಡಕಟ್ಟು ಬೇರುಗಳನ್ನು ಹೊಂದಿದ್ದಾರೆ. ಆದರೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಮುಸ್ಲಿಂ ಸಮುದಾಯಗಳ ನಡುವೆ ಜಾತಿಯ ಸುತ್ತಲಿನ ವಾದ ಪ್ರತಿವಾದಗಳನ್ನು ನಿರ್ಬಂಧಿಸುವುದು, ಪ್ರತಿರೋಧಿಸುವುದು ಸುಲಭವಾಗುತ್ತದೆ ಏಕೆಂದರೆ ಜಾತಿಯ ಪರಿಕಲ್ಪನೆ ಹಿಂದೂ ಮತಕ್ಕೆ ಸಂಬಂಧಿಸಿರುವುದೇ ಹೊರತು ದಕ್ಷಿಣ ಏಷಿಯಾಗೆ ಸಂಬಂಧಿಸಿರುವುದಲ್ಲ. ಇದಕ್ಕೆ ಪ್ರತಿಯಾಗಿ ಸಾಕಷ್ಟು ಪುರಾವೆಗಳು ಲಭ್ಯವಿದ್ದರೂ ಬೌದ್ಧಿಕ ವಲಯದಲ್ಲಿ ಈ ವಾದ ಪ್ರತಿವಾದಗಳನ್ನು ಮಂಡಿಸುವ ಪ್ರಯತ್ನವನ್ನು ಚಿಂತಕರು ಮಾಡುವುದು ಅಪರೂಪ.
ಜಾತಿಯಿಂದ ಹೊರತಾಗಿ ಹಿಂದೂ ಎನ್ನುವುದರ ಅಸ್ತಿತ್ವವೇನಾದರೂ ಇರಲು ಸಾಧ್ಯವೇ ? ಜಾತಿಯನ್ನು ಕುರಿತು ಮಾತನಾಡದ ಹಿಂದೂಗಳನ್ನು ಜಾತಿಯನ್ನು ನಿರಾಕರಿಸುವ ಮೇಲ್ಪದರದ ಗಣ್ಯ ಹಿಂದೂ ಎಂದು ಪರಿಗಣಿಸಲಾಗುತ್ತದೆ. ಅದೇ ಸಮಯದಲ್ಲಿ ಒಬ್ಬ ಹಿಂದೂ ಜಾತಿಯನ್ನು ಕುರಿತು ಮಾತನಾಡಿದಾಗ, ಅದು ಕೇವಲ ದಬ್ಬಾಳಿಕೆ, ಶೋಷಣೆ ಮತ್ತು ಜಾತಿ ವಿನಾಶದ ನೆಲೆಯಲ್ಲೇ ಮಾತನಾಡಬೇಕಾಗುತ್ತದೆ. ಜಾತಿಯನ್ನು ಕುರಿತ ಮತ್ತಾವುದೇ ರೀತಿಯ ಚರ್ಚೆಯನ್ನು, ಉದಾಹರಣೆಗೆ ಸಾಂಸ್ಕೃತಿಕ ಹಾಗೂ ಕಸುಬು ಆಧಾರಿತ ವೈವಿಧ್ಯತೆಯನ್ನು ಕುರಿತ ಚರ್ಚೆಯನ್ನು ಮಂಡಿಸಿದಾಗ ಅಂಥವರನ್ನು ಜಾತಿಯನ್ನು ಅನುಮೋದಿಸುವ ಮತಾಂಧರೆಂದು ಭಾವಿಸಲಾಗುತ್ತದೆ. ಹಾಗಾಗಿ ಎಲ್ಲ ಚರ್ಚೆ, ವಾದ ಪ್ರತಿವಾದಗಳ ಸಂದರ್ಭದಲ್ಲೂ ಸಹ, ಹಿಂದೂ ಮತ ಅಥವಾ ಧರ್ಮ ಜಾತಿಯಿಂದ ಹೊರತಾದುದಲ್ಲ ಎಂಬ ಅಭಿಪ್ರಾಯವನ್ನು ದೃಢೀಕರಿಸಲಾಗುತ್ತದೆ.
ರಾಜಕಾರಣಿಗಳಿಗೆ ಜಾತಿಯ ಪ್ರಶ್ನೆಯನ್ನು ಬಳಸಿಕೊಳ್ಳುವುದು ಒಂದು ಸಮಸ್ಯೆ ಎನಿಸಲೇ ಇಲ್ಲ ಏಕೆಂದರೆ ಅದು ಮತ ಗಳಿಸಲು ನೆರವಾಗುತ್ತದೆ ಮತ್ತು ಅಲ್ಪಸಂಖ್ಯಾತ ಹಕ್ಕುಗಳ ಆಧಾರದಲ್ಲಿ ಇದನ್ನು ಯಾವುದೇ ಸಂದರ್ಭದಲ್ಲಾದರೂ ಸಮರ್ಥಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಇಸ್ಲಾಂಗೆ ಸಂಬಂಧಿಸಿದಂತೆ ರಾಜಕಾರಣಿಗಳು ಮತ ಅಥವಾ ಧರ್ಮದ ಪ್ರಶ್ನೆಯನ್ನೇ ಬಳಸಿಕೊಂಡು, ಮತ್ತದೇ ಅಲ್ಪಸಂಖ್ಯಾತರ ಹಕ್ಕುಗಳ ಆಧಾರದ ಮೇಲೆ ಸಮರ್ಥಿಸಿಕೊಳ್ಳಲಾರಂಭಿಸಿದರು. ಆದರೆ ಹಿಂದೂಗಳಿಗೆ ಸಂಬಂಧಿಸಿದಂತೆ ಮತ ಅಥವಾ ಧರ್ಮವನ್ನು ಹೊರತರುವುದರಿಂದ ಹೆಚ್ಚಿನ ಪ್ರಯೋಜನವಾಗಲಿಲ್ಲ. ಇಸ್ಲಾಂ ಭೀತಿಯನ್ನು ಹೊರತುಪಡಿಸಿದರೆ ಹಿಂದೂಗಳನ್ನು ಒಂದುಗೂಡಿಸಲು ಮತ್ತಾವುದೇ ಬಲವಾದ ಕಾರಣಗಳೂ ಇರಲಿಲ್ಲ.
ಒಂದು ಪ್ರಬಲ ಶಕ್ತಿ
ಮಂಡಲ್ ಆಯೋಗ ಈ ಸನ್ನಿವೇಶದಲ್ಲಿ ಪರಿವರ್ತನೆ ತಂದಿತ್ತು. ಈ ಆಯೋಗವು ತನ್ನ ವರದಿಯಲ್ಲಿ, ಭಾರತದ ಶೇ 50ಕ್ಕೂ ಹೆಚ್ಚು ಜಾತಿಗಳು ಹಿಂದುಳಿದ ಸಮುದಾಯಗಳಾಗಿದ್ದು ಇವರು ಮೇಲ್ಪದರದ ಗಣ್ಯ ವರ್ಗಕ್ಕೂ ಸೇರದೆ, ಪರಿಶಿಷ್ಟರ ಗುಂಪಿಗೂ ಸೇರದೆ, ಸವರ್ಣೀಯರೂ ಅಲ್ಲದೆ ಅವರ್ಣೀಯರೂ ಅಲ್ಲದೆ ಇರುವುದಾಗಿ ಹೇಳಿತ್ತು. ಈ ಪ್ರಬಲ ಹಿಂದುಳಿದ ಸಮುದಾಯಗಳಿಗೆ ಅವರ ಜಾತಿಯ ಪೂರ್ವೇತಿಹಾಸವನ್ನು ನೆನಪಿಸುವುದೇ ಅಲ್ಲದೆ ಹಿಂದೂ ಪರಂಪರೆಗೆ ಸೇರುವ ಹೆಮ್ಮೆಯ ಭಾವನೆಯನ್ನು ಮೂಡಿಸುವ ಮೂಲಕ ಹಿಂದುತ್ವ ಒಂದು ಪ್ರಬಲ ಶಕ್ತಿಯಾಗಿ ರೂಪುಗೊಂಡಿತ್ತು.
ಇದು ಹಿಂದುತ್ವದ ಚಾತುರ್ಯ ಅಥವಾ ಕರಾಮತ್ತು ಎಂದು ಹೇಳಬಹುದು. ಇಂದು ಹಿಂದೂ ಧರ್ಮವನ್ನು ಕುರಿತು ಮಾತನಾಡುವಾಗ ಜಾತಿಶ್ರೇಣಿಯ ಮಧ್ಯಭಾಗದಲ್ಲಿರುವ ನಿರ್ಲಕ್ಷಿತರನ್ನು ಕುರಿತು ಮಾತನಾಡಲಾಗುತ್ತದೆ. ಒಂದೆಡೆ ಅಸಂಖ್ಯಾತ ಕೋಟ್ಯಂತರ ಭಾರತೀಯರಿಗೆ, ಅವರು ಸಾಂಸ್ಥಿಕ ನೆಲೆಗಳಿಂದ ಅಥವಾ ಉದ್ಯೋಗದಿಂದ ವಂಚಿತರಾಗುತ್ತಿರುವುದು ಅವರ ಪ್ರತಿಭೆಯ ಕಾರಣದಿಂದ ಅಲ್ಲ ಬದಲಾಗಿ ಅವರ ಪೂರ್ವಿಕರು ಜಾತಿ ವ್ಯವಸ್ಥೆಯನ್ನು ಸಾಂಸ್ಥೀಕರಿಸಿ ಅದರಿಂದ ಹೆಚ್ಚಿನ ಪ್ರಯೋಜನ ಪಡೆದಿದ್ದುದರಿಂದ ಎಂದು ಹೇಳಲಾಗುತ್ತಿದೆ. ಅವರ ಪೂರ್ವಿಕರು ಮಾಡಿದ ಅಪರಾಧಗಳಿಗಾಗಿ ಈಗ ಬೆಲೆ ತೆರಬೇಕಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇದು ಸಾಮಾಜಿಕ ನ್ಯಾಯದ ಚೌಕಟ್ಟಿನಲ್ಲಿ ತರ್ಕಬದ್ಧವಾಗಿಯೂ, ನೈತಿಕವಾಗಿಯೂ, ವಿವೇಕಯುತವೂ ಆಗಿ ಕಾಣುತ್ತದೆ. ಆದರೆ ಇದು ಅವರ ಆಕ್ರೋಶವನ್ನು ತಣಿಸುವುದಿಲ್ಲ. ಯಾರಿಗೂ ಜಾತಿಯಿಂದ ಹೊರಬರಲು ಪ್ರೇರೇಪಿಸುವುದಿಲ್ಲ, ಬದಲಾಗಿ ಇನ್ನೂ ಹೆಚ್ಚು ಜಾತಿಗೆ ಅಂಟಿಕೊಳ್ಳುವಂತೆ ಮಾಡುತ್ತದೆ.
ಮತ್ತೊಂದೆಡೆ ಸವಲತ್ತು ವಂಚಿತ ಜನಸಮುದಾಯಗಳು ಜಾತಿ ಪ್ರಜ್ಞೆಯನ್ನು ಬಿಟ್ಟುಕೊಡುತ್ತವೆ ಎಂಬ ಬೌದ್ಧಿಕ ವಲಯದ ಗ್ರಹಿಕೆ ಆಧಾರರಹಿತವಾದದ್ದು. ಶಿಕ್ಷಣ ಮತ್ತು ಉದ್ಯೋಗಾವಕಾಶಗಳಿಗೆ ನೆರವಾಗುವಂತಹ ಪ್ರಮಾಣಪತ್ರ ಪಡೆಯಲು ಜನರು ತಮ್ಮ ಜಾತಿ ಅಸ್ಮಿತೆಗೆ ಅಂಟಿಕೊಳ್ಳುತ್ತಾರೆ. ಮೇಲ್ಪದರದ ಗಣ್ಯರ ವಲಯದಲ್ಲಿ ಪ್ರವೇಶ ಪಡೆಯುವ ಸಂದರ್ಭದಲ್ಲಿ ಇದನ್ನು ಮರೆಮಾಚಬಹುದಷ್ಟೆ. ಭಾರತದ ಬೃಹತ್ ಜನಸಂಖ್ಯೆಯ ದೃಷ್ಟಿಯಿಂದ ನೋಡಿದಾಗ ಎಲ್ಲರಿಗೂ ಸಕಾರಾತ್ಮಕ ತಾರತಮ್ಯದ ನೀತಿಗಳ ಪ್ರಯೋಜನ ಆಗಲಿಕ್ಕಿಲ್ಲ. ಸಂಪತ್ತು, ಅಧಿಕಾರ ಮತ್ತು ಶಿಕ್ಷಣದಿಂದ ವಂಚಿತರಾಗಿರುವ ಬಹುಸಂಖ್ಯೆಯ ಜನರು ತಮ್ಮ ಜಾತಿ ಅಸ್ಮಿತೆಗಳಲ್ಲೇ ಸಾಂತ್ವನ ಕಂಡುಕೊಳ್ಳುತ್ತಾರೆ. ಏಕೆಂದರೆ ಅವರ ಕೌಟುಂಬಿಕ ಹಿನ್ನೆಲೆ ಮತ್ತು ಚರಿತ್ರೆಯನ್ನು ಪ್ರತಿನಿಧಿಸಲು ಇದು ಪೂರಕವಾಗಿರುತ್ತದೆ. ಹಿಂದುತ್ವ ಇದನ್ನು ಅನುಮೋದಿಸುತ್ತದೆ. ಇದನ್ನು ಸಿನಿಕತನ ಎಂದು ಆಕ್ಷೇಪಿಸಬಹುದಾದರೂ, ಈ ಅನುಮೋದನೆ ವಾಸ್ತವವಾದದ್ದು ಮತ್ತು ಇದು ಮತದಾರರ ಮನಸು ಗೆಲ್ಲುತ್ತದೆ.
ಹಿಂದೂ ಮತ ಬ್ಯಾಂಕುಗಳು
ಮೇಲ್ಪದರದ ಗಣ್ಯ ಹಿಂದೂಗಳನ್ನು ಜಾತಿ ಎನ್ನುವುದು ಮುಜುಗರಕ್ಕೀಡುಮಾಡುತ್ತದೆ. 19ನೆಯ ಶತಮಾನದಲ್ಲಿ ಧರ್ಮ ವಿನಾಶವನ್ನು ಪ್ರತಿಪಾದಿಸಿದ ಚಿಂತಕರು ನೈತಿಕವಾದ ಮೇಲರಿಮೆಯನ್ನು ಹೊಂದಿದ್ದಂತೆಯೇ, 21ನೆಯ ಶತಮಾನದಲ್ಲಿ ಲಿಂಗ ವಿನಾಶವನ್ನು ಪ್ರತಿಪಾದಿಸಿದ ಚಿಂತಕರು ನೈತಿಕ ಮೇಲರಿಮೆ ಹೊಂದಿದ್ದಂತೆಯೇ ಇಂದು ಜಾತಿ ವಿನಾಶವನ್ನು ಪ್ರತಿಪಾದಿಸುವ ಚಿಂತಕರು ನೈತಿಕ ಮೇಲರಿಮೆಯನ್ನು ಹೊಂದಿರುತ್ತಾರೆ. ಆದರೆ ಜಾತಿ ವಿರೋಧಿ ಸಂಘರ್ಷಗಳು ಹೆಚ್ಚು ಹೆಚ್ಚಾಗಿ ಹಿಂದೂ ವಿರೋಧಿಯಾಗಿಯೇ ಕಾಣುವುದರಿಂದ ಅದು ಸಹಜವಾಗಿ ಹಿಂದೂ ರಾಷ್ಟ್ರ ವಿರೋಧಿಯಾಗಿ, ಅಂತಿಮವಾಗಿ ದೇಶ ವಿರೋಧಿಯಾಗಿ ಕಾಣುತ್ತದೆ. ಏತನ್ಮಧ್ಯೆ ಜಾತಿಯ ವಾಸ್ತವತೆಯನ್ನು ಅನುಮೋದಿಸುವ ಮೂಲಕ ಹಿಂದೂ ಮತಬ್ಯಾಂಕುಗಳನ್ನು ಯಶಸ್ವಿಯಾಗಿ ಬಲಪಡಿಸಿರುವ ಹಿಂದುತ್ವ ಅದಕ್ಕೆ ಆಧಾರವಾಗಿರುವ ಇಸ್ಲಾಂ ಭೀತಿಯನ್ನು ಮತ್ತಷ್ಟು ಬಲಪಡಿಸುವ ಮೂಲಕ ಈ ಮನಸ್ಥಿತಿಯನ್ನು ರಾಷ್ಟ್ರೀಯತೆಯೊಂದಿಗೆ ಸಮೀಕರಿಸುವುದರಲ್ಲಿ ಯಶಸ್ವಿಯಾಗಿದೆ.
ಜಾತ್ಯತೀತತೆಯ ಮೌಲ್ಯಗಳು ಅತಿ ಹೆಚ್ಚು ಮತಗಳನ್ನು ಹೊಂದಿರುವ ಹಿಂದೂಗಳ ಹೃದಯವನ್ನು ಗೆಲ್ಲಲಾಗುವುದಿಲ್ಲ ಎಂಬ ವಾಸ್ತವವನ್ನು ಬಹುತೇಕ ರಾಜಕಾರಣಿಗಳು ಬಲ್ಲವರಾಗಿದ್ದಾರೆ. ಇಸ್ಲಾಂ ಭೀತಿ ಅಥವಾ ಜಾತಿಯ ಮೂಲಕ ತಮ್ಮ ಅಸ್ಮಿತೆಯನ್ನು ಕಂಡುಕೊಳ್ಳಲು ನಿರಾಕರಿಸುವ ಹಿಂದೂಗಳಲ್ಲಿ ಒಂದು ಹೊಸ ಮತಬ್ಯಾಂಕ್ ಸೃಷ್ಟಿಯಾಗುತ್ತಿರುವುದನ್ನು ಇವರು ಗಮನಿಸುತ್ತಿದ್ದಾರೆ. ಈ ಹೊಸ ಮತಬ್ಯಾಂಕನ್ನು ಸೃಷ್ಟಿಸುವ ಪ್ರಕ್ರಿಯೆಯೇ ಹಿಂದುತ್ವ ಸಿದ್ಧಾಂತಿಗಳನ್ನು ಜಾಗೃತಗೊಳಿಸಿದೆ. ಹಾಗೆಯೇ ಒಂದು ಸಮಯದಲ್ಲಿ ಜಾತಿ ದೃಷ್ಟಿಕೋನದ ಮೂಲಕವೇ ಹಿಂದೂ ಧರ್ಮವನ್ನು ವ್ಯಾಖ್ಯಾನಿಸುವ ವಿಶೇಷ ಹಕ್ಕು ಹೊಂದಿರುವುದಾಗಿ ಭಾವಿಸಿದ್ದ ಜಾತ್ಯತೀತ ಚಿಂತಕರಿಗೂ ಇದು ಎಚ್ಚರಿಕೆಯ ಗಂಟೆಯಾಗಿದೆ.
ಅನುವಾದ : ನಾ ದಿವಾಕರ
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka