ಪ್ರಭಾಕರ್ ಭಟ್ ವಿರುದ್ಧ ಎಫ್ ಐ ಆರ್ ದಾಖಲಿಸಲು ಸುಪ್ರೀಂ ಕೋರ್ಟ್ ಗೂ ಹೋಗಲು ಸಿದ್ಧ | ಎಸ್ ಡಿಪಿಐ - Mahanayaka
11:14 AM Thursday 12 - December 2024

ಪ್ರಭಾಕರ್ ಭಟ್ ವಿರುದ್ಧ ಎಫ್ ಐ ಆರ್ ದಾಖಲಿಸಲು ಸುಪ್ರೀಂ ಕೋರ್ಟ್ ಗೂ ಹೋಗಲು ಸಿದ್ಧ | ಎಸ್ ಡಿಪಿಐ

20/11/2020

ಉಳ್ಳಾಲ: ಉಳ್ಳಾಲವನ್ನು ಪಾಕಿಸ್ತಾನ ಎಂದು ಹೇಳಿರುವ ಪಾಕಿಸ್ತಾನ ಏಜೆಂಟರಾಗಿರುವ ಕಲ್ಲಡ್ಕ ಭಟ್ ವಿರುದ್ಧ ಸರ್ವೋಚ್ಛ ನ್ಯಾಯಾಲಯಕ್ಕೆ ಹೋಗಿಯಾದರೂ ಎಫ್ ಐ ಆರ್ ದಾಖಲಿಸುವುದು ಖಚಿತ ಎಂದು ಸೋಷಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಹೇಳಿದ್ದಾರೆ.

ಉಳ್ಳಾಲ ಪ್ರದೇಶವನ್ನು ಪಾಕಿಸ್ತಾನ ಎಂದು ಹೇಳಿ ಅವಮಾನಗೊಳಿಸಿದ ದೇಶವಿರೋಧಿ ಹೇಳಿಕೆ ನೀಡಿದ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಬಂಧಿಸುವಂತೆ ಆಗ್ರಹಿಸಿ ಮಾಸ್ತಿಕಟ್ಟೆ ಜಂಕ್ಷನ್ ನಲ್ಲಿ ಗುರುವಾರ ಸಂಜೆ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ನಕಲಿ ಜಾತ್ಯತೀತ ಮುಖವಾಡದವರ ಪ್ರೋತ್ಸಾಹದಿಂದ ಕಲ್ಲಡ್ಕ ಭಟ್ ನಿರಂತರವಾಗಿ ಅಶಾಂತಿ ಸೃಷ್ಟಿಸುವ ಮಾತುಗಳನ್ನಾಡುತ್ತಿದ್ದಾರೆ. ಉಳ್ಳಾಲ ಪಾಕಿಸ್ತಾನ ಎಂದ ಭಟ್ ವಿರುದ್ಧವೇ ಸ್ವಕ್ಷೇತ್ರದ ಶಾಸಕರಿಗೆ ಪೊಲೀಸ್ ಇಲಾಖೆಯಲ್ಲಿ ದೂರು ನೀಡಲು ಅಸಾಧ್ಯವಾಗಿದೆ. ಜಾತ್ಯತೀತ ಮುಖವಾಡ ತೋರಿಸಿಕೊಂಡು ಕೋಮುವಾದವನ್ನು ಶಾಸಕರು ವಿರೋಧಿಸುತ್ತಿಲ್ಲ ಎಂದು ರಿಯಾಝ್ ಆಕ್ರೋಶ ಹೊರಹಾಕಿದರು.

ಬಾಬರಿ ಮಸೀದಿ, ಎನ್ ಆರ್ ಸಿ, ಸಿಎಎ ಪರವಾಗಿ ಮಾತನಾಡಿದರೆ ದೇಶದ್ರೋಹ ಪ್ರಕರಣ ದಾಖಲಾಗುತ್ತದೆ. ಆದರೆ ಪಾಕಿಸ್ತಾನದ ಏಜೆಂಟ್ ಆಗಿರುವ ಕಲ್ಲಡ್ಕ ಭಟ್‍ ಗೆ ಮತ್ತು ಪೊಲೀಸ್ ಇಲಾಖೆಗೆ ಸಂಬಂಧ ಇದ್ದಂತೆ ಕಾಣುತ್ತಿದೆ. ಸಂಘಪರಿವಾರದ ಗರಡಿಯಲ್ಲಿ ಬೆಳೆದ ಪ್ರಧಾನಿಯೇ ಪಾಕಿಸ್ತಾನದ ಬಿರಿಯಾನಿ ತಿಂದವರು. ಅವರಿಗೆ ಬುದ್ಧಿ ಹೇಳುವ ನೈತಿಕತೆ ಕಲ್ಲಡ್ಕ ಭಟ್ ಗಿಲ್ಲ. ಉಳ್ಳಾಲದಲ್ಲಿ ಪಂಚವಾರ್ಷಿಕವಾಗಿ ಆಚರಿಸುವ ದರ್ಗಾ ಉರೂಸ್ ಕಾರ್ಯಕ್ರಮದಲ್ಲಿ ಪ್ರತಿ ಧರ್ಮದವರು ಭಾಗವಹಿಸಿ ಸೌಹಾರ್ದತೆಗೆ ಸಾಕ್ಷಿಯಾಗುತ್ತಾರೆ. ಪ್ರತಿ ಧರ್ಮದವರನ್ನು ವೇದಿಕೆಯಲ್ಲಿ ಕೂರಿಸಿ ಗೌರವ ನೀಡಲಾಗುತ್ತಿದೆ. ಅಂತಹ ಸಾಮರಸ್ಯವಿರುವ ಉಳ್ಳಾಲವನ್ನು ಪಾಕಿಸ್ತಾನಕ್ಕೆ ಹೋಲಿಕೆ ಮಾಡಲಾಗುತ್ತಿದೆ. ಎಸ್ ಡಿಪಿಐ ಮನಸ್ಸು ಮಾಡಿದರೆ ಉಳ್ಳಾಲದಲ್ಲಿ ಹಿಂದೂ, ಮುಸಲ್ಮಾನ, ಕ್ರೈಸ್ತ ,ದಲಿತ ನನ್ನು ಕೂಡಾ ಶಾಸಕನಾಗಿ ಮಾಡಿ ತೋರಿಸುತ್ತದೆ ಎಂದು ಅವರು ಸವಾಲು ಹಾಕಿದರು.

ಇತ್ತೀಚಿನ ಸುದ್ದಿ