ಡಿಜೆ ಮಾರಾಮಾರಿ: ರಸ್ತೆಯಲ್ಲೇ ಹೊಡೆದುಕೊಂಡ ಎರಡು ಗುಂಪುಗಳು
ವಿಜಯಪುರ: ಟ್ರಾಕ್ಟರ್ ನಲ್ಲಿ ಡಿಜೆ ಹಾಕಿಕೊಂಡು ಸಂಚರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳು ರಸ್ತೆಯಲ್ಲಿಯೇ ಹೊಡೆದಾಟ ನಡೆಸಿದ್ದು, ಘಟನೆ ನಡೆದು ಮೂರು ದಿನಗಳಾದರೂ ಇನ್ನೂ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.
ವಿಜಯಪುರ ಜಿಲ್ಲೆಯ ಕಲಕೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಟ್ರ್ಯಾಕ್ಟರ್ನಲ್ಲಿ ಜೋರಾಗಿ ಡಿಜೆ ಸಾಂಗ್ ಹಾಕಿಕೊಂಡು ಬಾಷಾಸಾಬ್ ವಠಾರ್ ಅವರ ಪೇಂಟ್ ಅಂಗಡಿ ಮುಂದೆ ಸಂಚರಿಸಿದ್ದ ವೇಳೆ, ಡಿಜೆ ಬಂದ್ ಮಾಡು ಎಂದು ಬಾಷಾಸಾಬ್ ಅವಾಜ್ ಹಾಕಿದ್ದಾರೆ ಎನ್ನಲಾಗಿದೆ. ಈ ವೇಳೆ ಇದನ್ನು ನಿರ್ಲಕ್ಷ್ಯಿಸಿದ ಟ್ರ್ಯಾಕ್ಟರ್ನಲ್ಲಿದ್ದ ಗುಂಪು ಬಾಷಾ ಹಾಗೂ ಆತನ ಸ್ನೇಹಿತರೊಂದಿಗೆ ಮಾತಿನ ಜಗಳಕ್ಕೆ ಇಳಿದಿದ್ದಾರೆ. ಈ ವೇಳೆ ಜಗಳ ದೊಡ್ಡದಾಗಿ ಹೊಡೆದಾಟ ನಡೆದಿದೆ ಎನ್ನಲಾಗಿದೆ.
ಈ ಹೊಡೆದಾಟದ ಪರಿಣಾಮ ಬಾಷಾಸಾಬ್ ವಠಾರ್, ಮಹ್ಮದ್ ನಾಸೀರ್, ಮಹ್ಮದ್ ಶರೀಫ್ ಮೂವರು ತೀವ್ರವಾಗಿ ಗಾಯಗೊಂಡಿದ್ದು, ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ಪ್ರಕರಣ ದಾಖಲಾಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.