ಗಟ್ಟದ ಗಡಿಯಲ್ಲಿ ಚೌಂಡಿಯ ತಡೆ/ ಕಾನದ-ಕಟದರ ಸಾಮಾರ್ಥ್ಯ ಪ್ರದರ್ಶನ/ ತುಳುನಾಡಿನಲ್ಲಿ ಚೌಂಡಿ, ಚೌಂಡಿ ಗುಳಿಗನಿಗೆ ನಿಲೆ: ಸಂಚಿಕೆ: 15
- ಸತೀಶ್ ಕಕ್ಕೆಪದವು
ಇಕ್ಕೇರಿ ನಾಯಕರ ಗೌರವಕ್ಕೆ ಪಾತ್ರರಾದ ತುಳುನಾಡಿನ ವೀರರು ಕಾನದ ಕಟದರು ಅತಿಕಾರ ತಳಿಯ ಕುರುಂಟನ್ನು ಹೆಗಲಿಗೇರಿಸಿ ಬರುತ್ತಿರುವುದನ್ನು ದೂರದಿಂದಲೇ ಗಮನಿಸಿದ ಗಟ್ಟದ ಗಡಿಯ ಚೌಂಡಿಯು ತನ್ನ ಬಲಗೈ ಬಂಟನೆನಿಸಿರುವ “ಗುಳಿಗ” ನನ್ನು ಕರೆದು ಅಪರಿಚಿತರು ಈರ್ವರು ಬರುತ್ತಿರುವುದನ್ನು ತೋರಿಸಿ ಕೊಡುತ್ತಾಳೆ. ದೇಹದ ಆಕೃತಿಯಲ್ಲಿ ದೈತ್ಯನೆನಿಸಿ, ಬಲಿಷ್ಠ ತೋಳುಗಳನ್ನು ಹೊಂದಿದ್ದು, ಕೆಂಗಣ್ಣುಗಳನ್ನು ಹೊಂದಿದ್ದು, ಕಚ್ಚೆ ಮುಂಡಾಸುನ್ನು ಧರಿಸಿದ “ಗುಳಿಗ”ನನ್ನು ಕಂಡರೆ ಯಾರೊಬ್ಬರೂ ಒಂದು ಗಳಿಗೆ ಭಯಭೀತರಾಗುವುದರಲ್ಲಿ ಎರಡು ಮಾತಿಲ್ಲ!
“ಉಂಡೆದುರುಟು ಉಂಡು ಆಯಿನ ತುಂಡು ರಡ್ಡ್ ಗೆ ಗುಳಿಗ ಸಕ್ತಿಲ, ಧರ್ಮ ದಂಕುನ ನಡೆನ್ ತೂಂಡ, ಪಾಡುವೆ ದೃಷ್ಟಿ” ನುಡಿಗಟ್ಟು ಗುಳಿಗನ ಬಗೆಗಿನ ತಾಕತ್ತು, ಶೌರ್ಯ ಧೈರ್ಯಗಳನ್ನು ಬಿಂಬಿಸುತ್ತದೆ. ಕಾಣುವುದಕ್ಕೆ ವಿಕಾರತೆಯಿಂದ ಕೂಡಿದ್ದರೂ ಒಳ ಮನಸ್ಸು ಧರ್ಮ ರಕ್ಷಣೆಯ ಮನೋಭಾವವನ್ನು “ಗುಳಿಗ” ಹೊಂದಿದ್ದ ಎಂಬುದನ್ನು ನಾವು ಅರ್ಥಮಾಡಿಕೊಳ್ಳ ಬೇಕಾಗುತ್ತದೆ. ಗಟ್ಟದ ಗಡಿಯ ‘ಬುಲೆತಪ್ಪೆ,ನಿಲೆತಪ್ಪೆ, ಕಲೆತಪ್ಪೆ ಚೌಂಡಿ’ ಯ ಆಪ್ತ ಸೇವಕನಾಗಿ, ಮಾತೃ ನುಡಿಯನ್ನು ಎಳ್ಳಷ್ಟೂ ತಪ್ಪದೆ ಪಾಲಿಸಿಕೊಂಡು ಬರುವಂತಹ ಪ್ರಾಮಾಣಿಕ ಚರ್ಯೆಯನ್ನು ಹೊಂದಿರುವ ಗಂಭೀರ ಸ್ವರೂಪಿಯೇ ‘ಗುಳಿಗ’ . ಈತನನ್ನು ಕರೆದು ಗಟ್ಟದ ಪಚ್ಚೆ ಪೈರುಗಳನ್ನು ಕಾಯುವ ಹೊಣೆಗಾರಿಕೆಯನ್ನು ಹೊತ್ತಿರುವ ಹಸಿರವ್ವ ಚೌಂಡಿಯು ದಷ್ಟಪುಷ್ಟ ಮೈಕಟ್ಟುವಿನ ಶೂರತನದ ಗಂಡುಗಲಿಗಳ ಬರುವಿಕೆಯನ್ನು ತೋರಿಸಿ, ಅಡ್ಡಲಾಗಿ ನಿಂತು ಹೆಗಲಿಗೇರಿಸಿದ “ಕುರುಂಟು”ವಿನಲ್ಲಿ ಏನಿದೆ ಎಂಬುದನ್ನು ಪರಿಪರಿಯಿಂದ ಪ್ರಶ್ನಿಸಲು, ಉತ್ತರವನ್ನು ಪಡೆಯಲು ಅಪ್ಪಣೆಯಿತ್ತು ಕಳುಹಿಸುತ್ತಾಳೆ. ಅವಳಿ ವೀರರು ಕಾನದ-ಕಟದರ ಮುಂದೆ ಅಡ್ಡಲಾಗಿ ನಿಂತು, ತನ್ನ ವೀರ ವೇಷ, ಕೆಂಗಣ್ಣುಗಳನ್ನು ಪ್ರದರ್ಶಿಸುತ್ತಾ , ಇದು ಗಟ್ಟದ ಗಡಿ, ನಾವು ಹಚ್ಚ ಹಸಿರಾದ ಬೆಳೆಯನ್ನು ಕಾಯುವ ಜವಾಬ್ದಾರಿಯನ್ನು ಹೊಂದಿರುತ್ತೇವೆ. ಎಲವೋ ಪುರುಷರೇ ಹೆಗಲಿಗೇರಿಸಿದ ಕುರುಂಟುವಿನಲ್ಲಿ ಏನಿದೆ ? ಒಂದೆಜ್ಜೆಯನ್ನಿಡಲೂ ಬಿಡಲಾರೆ, ಕಾಲು ಕಡಿದು ಕೈಯಲ್ಲಿ ಕೊಟ್ಟೇನು, ಜಾಗೃತೆ…. ಎಂಬುದಾಗಿ ಬೆದರಿಕೆಯ ಮಾತುಗಳನ್ನು ಆಡುತ್ತಾನೆ. ಗುಳಿಗನ ದರ್ಪದ ಮಾತುಗಳಿಗೆ ಜಗ್ಗದೆ ಬಗ್ಗದೆ ಕಾನದ ಕಟದರು ಎದುರು ನಿಲ್ಲುತ್ತಾರೆ. ಮಾತಿಗೆ ಮಾತು ಬೆಳೆದು ದೊಡ್ಡ ಜಗಳವೇ ನಡೆಯುತ್ತದೆ. ಗುಳಿಗನು ತಮ್ಮ ಆಯುಧ ಬರ್ಚಿಯನ್ನು ಕೈಗೆತ್ತಿಕೊಂಡು ಕಾನದ ಕಟದರನ್ನು ಈಯಲು ಮುಂದಾಗುತ್ತಾನೆ. ಅಣ್ಣ ತಮ್ಮ ಕಾನದ-ಕಟದರು ಎದುರಾಳಿ ಗುಳಿಗನ ಆಯುಧವನ್ನು ಬಲವಾಗಿ ಹಿಡಿದು, ಮುಷ್ಟಿಗುದ್ದುವಿನಲ್ಲಿ ಸಹಿಸಲಾರದಷ್ಟು ಏಟು ಕೊಡುತ್ತಾ, ಕಾನದ ಕಟದರ ತಂಟೆಗೆ ಬರದ ರೀತಿಯಲ್ಲಿ ಪರಿಣಾಮವನ್ನು ಬೀರುತ್ತಾರೆ.
ಅವಳಿ ವೀರರ ಮುಷ್ಟಿ ಗುದ್ದಿನ ಪೆಟ್ಟನ್ನು ಸಹಿಸದ ಗುಳಿಗ ಕಾಲಿಗೆ ಬುದ್ದಿಹೇಳಿ ತನ್ನ ಒಡತಿ ಹಸಿರವ್ವ ಚೌಂಡಿಗೆ ನಡೆದ ಘಟನಾವಳಿಗಳ ಚಿತ್ರಣವನ್ನು ಬಿಚ್ಚಿಡುತ್ತಾನೆ. ಆಗಷ್ಟೆ ದೂರದಿಂದ ಗಮನಿಸಿದ ಚೌಂಡಿಯು ಬಿಗಿಕಚ್ಚೆಯುಡುಪು ಧರಿಸಿ ಖಡ್ಗಧಾರಿಣಿಯಾಗಿ ಕಾನದ ಕಟದರ ಮುಂದೆ ನಿಲ್ಲುತ್ತಾಳೆ. ಅಜಾನುಬಾಹು ವೀರರ ಸೌಂದರ್ಯದ ಸೊಬಗಿಗೆ ಒಂದು ಕ್ಷಣಕ್ಕೆ ಚೌಂಡಿಯು ಮನದೊಳಗೆ ಮುಜುಗರ ಗೊಂಡರೂ, ತನ್ನ ವೀರತನ, ಜವಾಬ್ದಾರಿ, ತನ್ನೊಳಗಿನ ಶೌರ್ಯದ ಕಿಚ್ಚು ಮೊದಲಾದವುಗಳಿಂದ ಹಿಂದೇಟು ಹಾಕದೆ ಕುರುಂಟು ಹೆಗಲೇರಿಸಿದ ಯುವಕರನ್ನು ವಿಮರ್ಶಿಸುತ್ತಾಳೆ. ಹೆಣ್ಣು ಎಂಬುದಕ್ಕಾಗಿ ಹೆಣ್ತನಕ್ಕೆ ಎಲೆತಗ್ಗಿಸಿ ತುಳುನಾಡಿನ ಮೂಲದವರು ಸತ್ಯದಪ್ಪೆ ಬೊಲ್ಲೆಯ ಅವಳಿ ಮಕ್ಕಳು, ತಮ್ಮ ಯೋಚನೆ ಯೋಜನೆಗಳನ್ನು ಸಮಗ್ರವಾಗಿ ವಿವರಿಸಿ, “ಇಕ್ಕೇರಿಯ ನಾಯಕರಿಂದ ಅತಿಕಾರ/ಅತ್ಯರ ತಳಿಯನ್ನು ಪಡೆದು ತುಳುನಾಡಿನಲ್ಲಿ ಮಹತ್ಕಾರ್ಯಕ್ಕೆ ಇಳಿದಿದ್ದೇವೆ. ದಯವಿಟ್ಟು ದಾರಿ ಬಿಟ್ಟು ಕೊಡು…..” ಎಂಬುದಾಗಿ ವಿನಂತಿಸಿಕೊಳ್ಳುತ್ತಾರೆ. ಕಾನದ ಕಟದರ ಮಾತನ್ನು ಕೇಳಿದಾಗ ಸಿಟ್ಟು ನೆತ್ತಿಗೇರಿದಷ್ಟು ತಾಪದಿಂದ “ಅತಿಕಾರ/ಅತ್ಯರ ತಳಿಯು ಸತ್ಯವಂತರು ಬೆಳೆಯಬಲ್ಲ. ಬೆಳೆ, ಸತ್ಯವಂತರಲ್ಲದೆ ಆ ತಳಿಯು ನಿಮ್ಮ ಜೊತೆಗೆ ಹೊರಡಲಾರದು. ಇದೆನೋ ನಿಮ್ಮ ಕುಹಕ ನೀತಿಯೇ ಆಗಿರಬೇಕು. ಕದ್ದು ವಂಚನೆ ಮಾಡುವ ನಿಮ್ಮ ಬುದ್ದಿ ನನ್ನೆದುರು ನಡೆಯಲಾರದು. ಮರ್ಯಾದೆಯಿಂದ ಹೊತ್ತ ಹೊರೆಯನ್ನು ಕೆಳಗಿರಿಸಿ, ಕ್ಷಮೆಯಾಚಿಸಿ ಹಿಂತಿರುಗಿರಿ. ಇಲ್ಲವಾದಲ್ಲಿ ಗಟ್ಟದ ಚೌಂಡಿಯ ಬಲಕಾರ್ನಿಕ ತೋರ್ಪಡಿಸಬೇಕಾದೀತು; ಎಚ್ಚರಿಕೆ, ಎಂಬುದಾಗಿ ಗದರಿಸುವಳು. ಕಾನದ ಕಟದರು ಎಳ್ಳಷ್ಟೂ ಅದುರದೆ ತಮ್ಮ ತೋಳ್ಬಲದಿಂದಲೇ ಕಾದಾಟ ನಡೆಸುತ್ತಾರೆ. ಹೆಣ್ಣೆಂಬ ಗೌರವದಿಂದ ಕದನ ಆರಂಭವಾದರೂ, ಯಾರಿಗೂ ಸೋಲಾಗದ, ಯಾರಿಗೂ ಗೆಲುವಾಗದ ಸಂಘರ್ಷ ಅನೇಕ ತಾಸುಗಳೇ ನಡೆದು ಹೋದವು. ಕೊನೆಯದಾಗಿ ಸೋಲು ಗೆಲುವುಗಳ ಫಲಿತಾಂಶ ಕಾಣದೆ, ಗಟ್ಟದ ಹಸಿರವ್ವ ಚೌಂಡಿಯು ಮತ್ತೆ ಅವಳಿ ವೀರರನ್ನು ಕರೆದು ನಮ್ಮೊಳೊಗೆ ಜಗಳಬೇಡ, ನೀವೇನೂ ಸಾಮಾನ್ಯರಲ್ಲ. ಅಸಮಾನ್ಯರೇ ಸರಿ, ಆ ಕಾರಣದಿಂದಲೇ ಅತಿಕಾರ/ ಅತ್ಯರ ತಳಿ ಹೊರಟು ಬಂದಿದೆ. ನಿಮ್ಮ ಇಚ್ಚೆಯಂತೆ ತುಳುನಾಡಿನಲ್ಲಿ ಬಿತ್ತಿ ಬೆಳೆಯಲು ನನ್ನ ಸಂಪೂರ್ಣ ಸಹಕಾರ ಇದೆ. ಈ ಸಂದರ್ಭವನ್ನೇ ದೈವಗಳ ನುಡಿಗಟ್ಟಿನಲ್ಲಿ “ಗಡಿ ಗಟ್ಟಡ್ ಚೌಂಡಿ, ಸಮಬಲೊಕು ಒಲಿದ್, ನಿಲೆಟೊರಿಪಿ ಪುರಪುಂದ್ ಸುರಿಯ ಕೊರಿ ಪೊರ್ತು…….” ಎಂಬುದಾಗಿ ಬನ್ನಿಸಲಾಗುತ್ತದೆ. ಹಾಗೆಯೇ ಜೋಡಿ ಸುರಿಯಗಳನ್ನು ಅಪ್ರತಿಮ ವೀರರು ಕಾನದ-ಕಟದರ ಕೈಗಿರಿಸಿ, ಮುಂದಕ್ಕೆ ನೀವು ನೆಲೆಗೊಳ್ಳಲು ಬಯಸುವ ಪುಣ್ಯ ಸ್ಥಳಗಳಲ್ಲಿ ಚೌಂಡಿ, ಚೌಂಡಿ ಗುಳಿಗನಿಗೂ ಸ್ಥಾನಮಾನ ಕಲ್ಪಿಸಲು ಅವಕಾಶ ಮಾಡಿಕೊಡಿ” ಎಂಬುದಾಗಿ ಅರಿಕೆಯ ಮಾತುಗಳನ್ನಾಡಿ, ಹಾರೈಸಿ ವೀರ ಪುರುಷರಾದ ಕಾನದ-ಕಟದರನ್ನು ತುಳುನಾಡಿಗೆ ಕಳುಹಿಸಿ ಕೊಡುತ್ತಾಳೆ.
( ಮುಂದಿನ ಸಂಚಿಕೆಯಲ್ಲಿ: ಬಂಗಾಡಿಯ ಕೋಡಿ ಕೊಡಂಗೆ ಬೋರು ಗುಡ್ಡೆಯಲ್ಲಿ ಅತಿಕಾರ ತಳಿಯನ್ನು ಪ್ರಥಮವಾಗಿ ಬಿತ್ತಿದ ಕಾನದ-ಕಟದರು.)
ಹಿಂದಿನ ಸಂಚಿಕೆ:
ಇಕ್ಕೇರಿಯತ್ತ ಕಾನದ – ಕಟದರ ಪಯಣ/ ತುಳುನಾಡಿಗೆ ಅತಿಕಾರ/ ಅತ್ಯರ ಬಿದೆ/ತಳಿಯ ಪರಿಚಯ: ಸಂಚಿಕೆ: 14
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka