ಧರ್ಮ-ದೇವರುಗಳನ್ನು ಮನುಷ್ಯರು ರಕ್ಷಿಸಬೇಕಾ ?
- ಡಾ.ಶಿವಕುಮಾರ.
ಗೌತಮ ಬುದ್ಧನು ದೇಹತ್ಯಾಗ ಮಾಡುವ ಸಂದರ್ಭದಲ್ಲಿ ಶಿಷ್ಯರು ಕೇಳುತ್ತಾರೆ : ಭಗವಾನ್ ನೀವು ಹೋದ ನಂತರ ನಿಮ್ಮ ಧಮ್ಮವನ್ನು ಮುನ್ನಡೆಸುವವರು ಯಾರು? ನಿಮ್ಮ ಧಮ್ಮಕ್ಕೆ ಉತ್ತರಾಧಿಕಾರಿ ಯಾರು? ಎಂದು. ಆಗ ಬುದ್ಧನು ನಾನು ಯಾವ ಉತ್ತರಾಧಿಕಾರಿಯನ್ನೂ ನೇಮಿಸುವುದಿಲ್ಲ, ಉತ್ತರಾಧಿಕಾರಿಯ ಸಹಾಯದಿಂದ ನನ್ನ ಧಮ್ಮ ಉಳಿಯಬೇಕೇ? ನನ್ನ ಧಮ್ಮಕ್ಕೆ ಧಮ್ಮವೇ ಉತ್ತರಾಧಿಕಾರಿ, ಎನ್ನುತ್ತಾನೆ.
ಇದೊಂದು ದಿವ್ಯ ಸಂದೇಶ. ಉತ್ತರಾಧಿಕಾರಿಯ ಸಹಾಯದಿಂದ ಧರ್ಮ ಉಳಿಯಬೇಕು ಎನ್ನುವುದಾದರೆ ಧರ್ಮ ದುರ್ಬಲ ಎಂದಂತಾಯಿತು. ಅಸತ್ಯ ಎಂದಂತಾಯಿತು. ಅದು ಯಾರದೇ ಸಹಾಯದಿಂದ ಉಳಿಯಬೇಕೇ?, ಅದು ಸತ್ಯವಾಗಿದ್ದರೆ, ಶಕ್ತವಾಗಿದ್ದರೆ ಉಳಿಯಲಿ, ಇಲ್ಲದಿದ್ದರೆ ಅಳಿಯಲಿ ಎಂಬುದು ಗೌತಮ ಬುದ್ಧನ ಮಾತಿನ ಅರ್ಥ. ಬುದ್ಧನು ಯಾಕೆ ಇಂದಿಗೂ ಪ್ರಸ್ತುತವಾಗುತ್ತಾನೆ ಎಂದರೆ ಇಂತಹ ವೈಜ್ಞಾನಿಕ ಚಿಂತನೆಗಳಿಂದ!
ಈ ಉದಾಹರಣೆಯನ್ನು ಈಗ ಯಾಕೆ ಹೇಳಬೇಕಾಯಿತೆಂದರೆ, ಇಂದು ಎಲ್ಲೆಡೆ “ಧರ್ಮರಕ್ಷಣೆ” ಎಂಬ ಮಾತು ಚರ್ಚೆಯಾಗುತ್ತಿದೆ, “ನಮ್ಮ ಧರ್ಮವನ್ನು, ದೇವರುಗಳನ್ನು ರಕ್ಷಿಸಬೇಕು, ಅದಕ್ಕಾಗಿ ಶಸ್ತ್ರ ಹಿಡಿಯಲೂ ನಾವು ಸಿದ್ದರಿರಬೇಕು, ತ್ಯಾಗ-ಬಲಿದಾನ ಮಾಡಬೇಕು” ಎಂದೆಲ್ಲಾ ಕೆಲವರು ಮಾತನಾಡುತ್ತಿದ್ದಾರೆ. ಇದರಲ್ಲಿ ಪ್ರಮುಖ ಧರ್ಮೀಯರೆಲ್ಲ ಇದ್ದಾರೆ. ಧರ್ಮರಕ್ಷಣೆಗಾಗಿ ಹಣಕಾಸು ನೆರವು ನೀಡುವ ಜನರೂ ಇಂದು ಹೆಚ್ಚಾಗಿದ್ದಾರೆ.
ಇಲ್ಲಿ ಬುದ್ಧನ ಮಾತು ಹೆಚ್ಚು ಪ್ರಸ್ತುತವಾಗುತ್ತಿದೆ. ದೇವರು, ಧರ್ಮಗಳನ್ನು ನರಮನುಷ್ಯರು ಏಕೆ ರಕ್ಷಿಸಬೇಕು? ಅವು ದುರ್ಬಲವೇ? ಅದಕ್ಕೆ ಸ್ವಂತ ಶಕ್ತಿಯಿಂದ ಉಳಿಯುವ ಸಾಮಥ್ರ್ಯವಿಲ್ಲವೇ? ಹುಲುಮನುಜರ ಖಡ್ಗಗಳಿಂದ, ಹಣದಿಂದ ಅವು ಉಳಿಯಬೇಕು ಎನ್ನುವುದಾದರೆ ಅವು ಸತ್ಯವಲ್ಲ, ಶಕ್ತವಲ್ಲ ಎಂದಂತಾಗಲಿಲ್ಲವೇ?
ದಯಮಾಡಿ ಎಲ್ಲ ಧರ್ಮಗಳ ಗುರುಗಳು, ಮುಂಖಂಡರು ಬುದ್ಧನಷ್ಟು ಧೈರ್ಯವನ್ನು ಇಂದು ತೋರಬೇಕು. ತಮ್ಮ ಧರ್ಮ-ದೇವರುಗಳನ್ನು ರಕ್ಷಿಸಿಕೊಳ್ಳುವ ಕೆಲಸವನ್ನು ಮನುಷ್ಯರಿಗೆ ವಹಿಸುವುದನ್ನು ಬಿಡಬೇಕು. ಯಾವುದು ಸತ್ಯವೋ, ಯಾವುದು ಜನರಿಗೆ ಉಪಕಾರಿಯೋ ಅದು ಉಳಿಯುತ್ತದೆ. ಅಲ್ಲದ್ದು ಅಳಿಯುತ್ತದೆ. ಇದು ಪ್ರಕೃತಿಯ ನಿಯಮ ಕೂಡ ಹೌದು. ಮನುಷ್ಯರಿಗೆ ಆಹಾರ, ಶಿಕ್ಷಣ, ವೈದ್ಯಕೀಯ ಸೌಲಭ್ಯ ಮುಂತಾದ ಮೂಲಭೂತ ಸೌಕರ್ಯನೀಡಿ, ಅವರನ್ನು ರಕ್ಷಿಸಲು ಎಲ್ಲರೂ ಕೆಲಸ ಮಾಡೋಣ. ಇಲ್ಲಿ ಒಬ್ಬ ಮನುಷ್ಯನ ದಬ್ಬಾಳಿಕೆಯಿಂದ ಇನ್ನೊಬ್ಬ ಮನುಷ್ಯನನ್ನು ರಕ್ಷಿಸಲು ಕಂಕಣಬದ್ಧರಾಗೋಣ. ದೇವರು-ಧರ್ಮಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ಬುದ್ಧನಂತೆ ಅವುಗಳಿಗೇ ಬಿಡೋಣ.
ಇಷ್ಟು ದೊಡ್ಡತನವನ್ನು ಎಲ್ಲ ಧರ್ಮದ ಮುಖಂಡರೂ ಇಂದು ತೋರಿದರೆ ಕರ್ನಾಟಕದ/ಭಾರತದ ಸಮಾಜ ಆರೋಗ್ಯಕರವಾಗುತ್ತದೆ. ಅಭಿವೃದ್ಧಿಯೂ ಆಗುತ್ತದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka