ಜೊತೆಯಾಗಿ ಸಾಯುಲು ಸಿದ್ಧರಾದರು, ಆದರೆ ಯುವತಿ ಎಸ್ಕೇಪ್ ಆದಳು | ಹೇಗೋ ಬದುಕಿ ಬಂದ ಯುವಕ ಸೇಡು ತೀರಿಸಿಕೊಂಡ
ಅನಂತಪುರ: ಮೂರು ವರ್ಷಗಳ ಪ್ರೀತಿಯನ್ನು ಬಿಡಲಾಗದೇ ಇಬ್ಬರು ಪ್ರೇಮಿಗಳು ಆತ್ಮಹತ್ಯೆಗೆ ಮುಂದಾಗಿದ್ದಾರೆ. ಆದರೆ ಈ ಸಂದರ್ಭದಲ್ಲಿ ಯುವಕ ವಿಷ ಸೇವಿಸುತ್ತಿದ್ದಂತೆಯೇ ಯುವತಿ ಸ್ಥಳದಿಂದ ಪರಾರಿಯಾಗಿದ್ದಳು. ಆದರೆ ಅದು ಹೇಗೋ ಬದುಕಿ ಬಂದ ಯುವಕ, ಆ ಬಳಿಕ ಯುವತಿಯ ಮೇಲೆ ಸೇಡು ತೀರಿಸಲು ಆರಂಭಿಸಿದ್ದ.
ಶಾಹಿದಾ ಬೇಗಂ(19) ಹಾಗೂ ರಘು ಎಂಬಾತ ಮೂರು ವರ್ಷಗಳಿಂದಲೂ ಪ್ರೀತಿಸುತ್ತಿದ್ದರು. ಆದರೆ ಮನೆಯವರು ಇವರ ಮದುವೆಗೆ ಒಪ್ಪಲಿಲ್ಲ. ಜೊತೆಗೆ ಇವರ ಪ್ರೀತಿ ವಿಚಾರ ತಿಳಿಯುತ್ತಿದ್ದಂತೆಯೇ ಇಬ್ಬರ ಮನೆಯವರು ಕೂಡ ಬೇರೆಯವರ ಜೊತೆಗೆ ಮದುವೆ ಮಾಡಲು ನಿರ್ಧರಿಸಿದ್ದರು.
ಮನೆಯವರ ಈ ನಿರ್ಧಾರದಿಂದ ಬೇಸತ್ತ ಈ ಪ್ರೇಮಿಗಳು ಜೊತೆಯಾಗಿ ಸಾಯಲು ನಿರ್ಧರಿಸುತ್ತಾರೆ. ಅಂತೆಯೇ ಒಂದಾಗಿ ವಿಷ ಸೇವಿಸಲು ಅವರು ನಿರ್ಧರಿಸುತ್ತಾರೆ. ಈ ಸಂದರ್ಭದಲ್ಲಿ ರಘು ವಿಷ ಸೇವಿಸುತ್ತಿದ್ದಂತೆಯೇ ಶಾಹಿದಾ ಬೇಗಂ ಸ್ಥಳದಿಂದ ಪರಾರಿಯಾಗಿದ್ದಳು. ಈ ಸಂದರ್ಭ ಹೇಗಾದರೂ ಬದುಕಲೇ ಬೇಕು ಎಂದು ನಿರ್ಧರಿಸಿದ ರಘು, ಅಲ್ಲಿಂದ ಆಸ್ಪತ್ರೆ ಸೇರಿದ್ದ. ಅಲ್ಲಿಂದ ಈ ಕಥೆ ಹೊಸ ತಿರುವು ಪಡೆದುಕೊಂಡಿತು.
ರಘುವನ್ನು ನಡು ದಾರಿಯಲ್ಲಿ ಬಿಟ್ಟು ಬಂದ ಶಾಹಿದಾ ತನ್ನ ಮನೆಯವರು ತೋರಿಸಿದ ಹುಡುಗನ ಜೊತೆಗೆ ಮದುವೆ ಮಾಡಲು ನಿರ್ಧರಿಸಿದಳು. ಇತ್ತ ರಘು ಆಸ್ಪತ್ರೆಯಲ್ಲಿ ಅದು ಹೇಗೋ ಪ್ರಾಣಾಪಾಯದಿಂದ ಪಾರಾಗಿ ತನ್ನ ಮನೆ ಸೇರಿಕೊಂಡ. ಶಾಹಿದಾ, ಮದುವೆಯಾಗಲು ಒಪ್ಪಿಕೊಂಡಿರುವುದು ಅವನ ಆಕ್ರೋಶವನ್ನು ಇನ್ನಷ್ಟು ಹೆಚ್ಚಿಸಿತ್ತು.
ಕೆಲವು ದಿನಗಳ ನಂತರ ಶಾಹಿದಾಳನ್ನು ರಘು ಹಿಂದಿನಂತೆಯೇ ಚೆನ್ನಾಗಿ ಮಾತನಾಡಿಸಲು ಆರಂಭಿಸಿದ್ದ. ನ.17ರಂದು ನಿನ್ನ ಜೊತೆಗೆ ಮಾತನಾಡಬೇಕು ಎಂದು ಹೇಳಿ ಮನೆಯಿಂದ ಕರೆದುಕೊಂಡು ಹೋಗಿದ್ದ. ಆ ಬಳಿಕ ರಾತ್ರಿ 11 ಗಂಟೆಯ ವೇಳೆ ರಘು ಒಬ್ಬನೇ ಮನೆಗೆ ಹಿಂದಿರುಗಿದ್ದ. ಪೋಷಕರು ಶಾಹಿದಾ ಎಲ್ಲಿ ಎಂದು ಪ್ರಶ್ನಿಸಿದಾಗ ಅವನು ಉತ್ತರಿಸಲೇ ಇಲ್ಲ.
ನ.19ರಂದು ಯುವತಿ ಮನೆಯವರು ಅನುಮಾನಗೊಂಡು, ರಘು ಮತ್ತು ಶಾಹಿದಾ ನಾಪತ್ತೆಯಾಗಿದ್ದಾರೆ ಎಂದು ದೂರು ನೀಡುತ್ತಾರೆ. ಈ ವೇಳೆ ರಘುನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಾರೆ. ಈ ವೇಳೆ ಶಾಹಿದಾಳನ್ನು ತಾನು ಹತ್ಯೆ ಮಾಡಿದ್ದೇನೆ ಎಂದು ರಘು ಪೊಲೀಸರಿಗೆ ಹೇಳಿದ್ದಾನೆ. ಬಳಿಕ ಪೊಲೀಸರು ಶೋಧ ನಡೆಸಿದ್ದು, ಈ ವೇಳೆ ಯುವತಿಯ ಮೃತದೇಹ ಕಣೆಕಲ್ಲು ಮಂಡಲದ ತುಂಬಿಗನೂರು ಸಮೀಪದ ಹೆಚ್ಎಲ್ಸಿ ಕಾಲುವೆಯಲ್ಲಿ ದೊರಕಿದೆ. ಅಂತೂ ಒಂದು ಪ್ರೇಮ ಪ್ರಕರಣ ದುರಂತವಾಗಿ ಅಂತ್ಯಕಂಡಿದೆ.