ದೆಹಲಿ ಚಲೋ: ಪೊಲೀಸರ ಜಲಫಿರಂಗಿಯನ್ನು ತಡೆದು ಹೀರೋ ಆಗಿದ್ದ ಯುವಕನ ಮೇಲೆ ಕೊಲೆ ಯತ್ನ ಕೇಸ್
ನವದೆಹಲಿ: ಕೃಷಿ ಮಸೂದೆಯನ್ನು ವಿರೋಧಿಸಿ ನಡೆದ ದೆಹಲಿ ಚಲೋ ರಾಲಿಯ ವೇಳೆ ಪೊಲೀಸರ ಜಲಫಿರಂಗಿಯನ್ನು ತಡೆದು ಸಾಮಾಜಿಕ ಜಾಲತಾಣಗಳಲ್ಲಿ ಹೀರೋ ಆಗಿದ್ದ, ಯುವ ರೈತ ಮುಖಂಡನ ವಿರುದ್ಧ ಹತ್ಯೆಗೆ ಯತ್ನ ಆರೋಪದಲ್ಲಿ ದೂರು ದಾಖಲಿಸಲಾಗಿದೆ.
26 ವರ್ಷದ ನವದೀಪ್ ಸಿಂಗ್ ವಾಟರ್ ಕ್ಯಾನೋನ್ನ್ನು ಹತ್ತಿ ರೈತರ ಮೇಲೆ ಬೀಳುತ್ತಿದ್ದ ಜಲಫಿರಂಗಿಯನ್ನ ನಿಲ್ಲಿಸಿದ್ದರು. ಬುಧವಾರ ನಡೆದಿದ್ದ ಈ ಘಟನೆ ರಾಷ್ಟ್ರಮಟ್ಟದಲ್ಲಿ ಭಾರೀ ಸುದ್ದಿ ಮಾಡಿತ್ತು.
ಇನ್ನೂ ಈ ಸಂಬಂಧ ಪ್ರತಿಕ್ರಿಯಿಸಿರುವ ನವದೀಪ್, ನಾನು ನನ್ನ ತಂದೆ ಜೈದೀಪ್ ಸಿಂಗ್ ಅವರ ಜೊತೆಗೆ ವ್ಯವಸಾಯ ಮಾಡುತ್ತಿದ್ದೇನೆ. ನನ್ನ ಓದಿನ ಜೊತೆಗೆ ವ್ಯವಸಾಯ ಮುಂದುವರಿಸುತ್ತಿದ್ದೇನೆ. ರೈತರಿಗೆ ಆಗಿರುವ ಅನ್ಯಾಯವನ್ನು ಪ್ರಶ್ನಿಸಲು ನಾವು ಈ ಪ್ರತಿಭಟನೆಯನ್ನು ಭಾಗಿಯಾಗಿದ್ದೇವೆ ಎಂದು ತಿಳಿಸಿದ್ದಾರೆ.
ನಾವು ಯಾವುದೇ ಅಕ್ರಮ ಮಾಡಿಲ್ಲ. ನಾವು ಶಾಂತಿಯುತವಾಗಿ ಪ್ರತಿಭಟಿಸುತ್ತಿರುವಾಗ ನಮ್ಮನ್ನು ಪೊಲೀಸರು ಜಲಫಿರಂಗಿ ಮೂಲಕ ತಡೆದಿದ್ದಾರೆ. ಸರ್ಕಾರವನ್ನು ಪ್ರಶ್ನಿಸುವ ಹಕ್ಕು ನಮಗೆ ಇಲ್ಲವೇ? ಯಾವುದೇ ಜನ ವಿರೋಧಿ ಕಾನೂನುಗಳು ಬಂದಾಗಲೂ ಪ್ರತಿಭಟಿಸುವ ಹಕ್ಕು ನಮಗಿದೆ ಎಂದ ಅವರು, ಪ್ರತಿಭಟನೆಗೆ ನಿರ್ಬಂಧ ಮಾಡುತ್ತಿರುವುದನ್ನು ವಿರೋಧಿಸಿದರು.