ಮುಗಿಯಿತೇ ಮಾಧ್ಯಮ ಬಹಿಷ್ಕಾರ ಅಭಿಯಾನ? - Mahanayaka
5:59 AM Thursday 12 - December 2024

ಮುಗಿಯಿತೇ ಮಾಧ್ಯಮ ಬಹಿಷ್ಕಾರ ಅಭಿಯಾನ?

ban media
22/03/2022

ಮಾಧ್ಯಮಗಳು ಪಕ್ಷಪಾತ ಧೋರಣೆ ತಾಳುತ್ತಿದೆ. ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದೆ. ನಮ್ಮ ಕಾರ್ಯಕ್ರಮಗಳನ್ನು ಉದ್ದೇಶ ಪೂರ್ವಕವಾಗಿ ಪ್ರಸಾರ ಮಾಡದೇ ಅವಮಾನಿಸುತ್ತಿದೆ. ನಮ್ಮ ಧರ್ಮವನ್ನು ಟಾರ್ಗೆಟ್ ಮಾಡ್ತಿದೆ. ಒಂದೇ ಪಕ್ಷದ ಪರವಾಗಿ ಮಾತನಾಡುತ್ತದೆ ಎಂದು ಮಾಧ್ಯಮಗಳ ಮೇಲೆ ಸಾಲು ಸಾಲು ಆರೋಪಗಳನ್ನು ಮಾಡುತ್ತಾ, ಮಾಧ್ಯಮಗಳನ್ನು ಬಹಿಷ್ಕರಿಸಲು ಸಾಕಷ್ಟು ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಗಳು ನಡೆಯುತ್ತಿರುತ್ತವೆ. ಆದರೆ, ಇಂತಹ ಅಭಿಯಾನಗಳು ಹೆಚ್ಚು ಕಾಲ ಉಳಿಯಲು ಸಾಧ್ಯವೇ ಆಗಿಲ್ಲ.

ಸಿಎಎ-ಎನ್ ಆರ್ ಸಿ ಹೋರಾಟ

ದೇಶದಲ್ಲಿ ಸಿಎಎ -ಎನ್ ಆರ್ ಸಿ ಸಂಬಂಧ ಹೋರಾಟಗಳು ಆರಂಭವಾದ ಸಮಯದಲ್ಲಿ ಮಾಧ್ಯಮಗಳು ಮುಸ್ಲಿಮರನ್ನು ಟಾರ್ಗೆಟ್ ಮಾಡುತ್ತಿದೆ. ಏಕಪಕ್ಷೀಯವಾಗಿ ಒಂದು ಪಕ್ಷದ ಪರವಾಗಿ ವರದಿ ಮಾಡುತ್ತಿದೆ ಎಂದು ದೇಶಾದ್ಯಂತ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕದಲ್ಲಿಯೂ ಮಾಧ್ಯಮಗಳ ವಿರುದ್ಧ ಮುಸ್ಲಿಮರು, ಅಲ್ಪಸಂಖ್ಯಾತರು, ಪ್ರಗತಿಪರರು, ಕಾಂಗ್ರೆಸಿಗರು, ದಲಿತರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿಯೂ ಮಾಧ್ಯಮಗಳ ಬಹಿಷ್ಕಾರಕ್ಕೆ ಕರೆ ನೀಡಲಾಗಿತ್ತು. ಸಾಕಷ್ಟು ಸಂಖ್ಯೆಯ ಜನರು “ನಮಗೆ ನಾವೇ ಮಾಧ್ಯಮ” ಎಂಬೆಲ್ಲ ವಿನೂತನ ಹ್ಯಾಶ್ ಟ್ಯಾಗ್ ಗಳನ್ನು ಬಳಸಿ, ಸಾಮಾಜಿಕ ಜಾಲತಾಣಗಳಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದ್ದರು. ಆದರೆ ಫಲಿತಾಂಶ ಏನಾಯ್ತು? ಎಂದು ಕೇಳಿದರೆ,  ಕೊವಿಡ್ ಆಗಮನವಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಈ ಅಭಿಯಾನ ಜನಪ್ರಿಯತೆ ಕಳೆದುಕೊಂಡು ಬಿಟ್ಟಿತು.

ತಬ್ಲಿಘ್ ಜಮಾಅತ್:

ಕೊವಿಡ್ ಸಂದರ್ಭದಲ್ಲಿ ತಬ್ಲಿಘ್ ಜಮಾಅತ್ ನ ಕಾರ್ಯಕ್ರಮವನ್ನು ಮುಂದಿಟ್ಟುಕೊಂಡು ಮಾಧ್ಯಮಗಳು, ಮುಸ್ಲಿಮರ ವಿರುದ್ಧ ದ್ವೇಷ ಸೃಷ್ಟಿಯಾಗುವ ಸನ್ನಿವೇಶವನ್ನು ಸೃಷ್ಟಿಸಿತ್ತು. ಈ ಸಂದರ್ಭದಲ್ಲಿ ಹಲವೆಡೆಗಳಲ್ಲಿ ಮುಸ್ಲಿಮರ ಮೇಲೆ ಹಲ್ಲೆ, ದೌರ್ಜನ್ಯಗಳಾಗಿದ್ದವು. ಈ ಘಟನೆಗೆ ಸಂಬಂಧಿಸಿದಂತೆ ಕೆಲವು ಸಮಯಗಳ ಬಳಿಕ ಕೆಲವು ಮಾಧ್ಯಮಗಳು ತಮ್ಮ ವರದಿ ಸುಳ್ಳು, ತಪ್ಪು ಸಂದೇಶ ಎಂದು ಒಪ್ಪಿಕೊಂಡು ನ್ಯಾಯಾಲಯಕ್ಕೆ ದಂಡಕಟ್ಟಿದ ಘಟನೆಗಳು ಕೂಡ ನಡೆದಿತ್ತು. ಈ ವೇಳೆ ಮುಸ್ಲಿಮರು, ನಮ್ಮ ವಿರುದ್ಧ ಇರುವ ಚಾನೆಲ್ ಗಳನ್ನು‌ ನಾವು ಬಹಿಷ್ಕರಿಸುತ್ತೇವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸಿದರು. ಸ್ವಲ್ಪ ಸಮಯ ಈ ಅಭಿಯಾನ ನಡೆದು ಬಳಿಕ ತಣ್ಣಗಾಯ್ತು. ಈ ವಿವಾದ ಮುಗಿದು ಬೇರೆಯೇ ವಿವಾದಗಳು ಆರಂಭವಾದಾಗ ಜನ ಅದನ್ನು ಮರೆತು ಬಿಟ್ಟರು.

ವಿಧಾನ ಸೌಧ, ಹೈಕೋರ್ಟ್ ಚಲೋ:

ಮಲ್ಲಿಕಾರ್ಜುನ ಗೌಡ ಎಂಬ ರಾಯಚೂರಿನ ನ್ಯಾಯಾಧೀಶರೊಬ್ಬರು ಸಂವಿಧಾನ ದಿನಾಚರಣೆಯ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವ ಚಿತ್ರವನ್ನು ತೆರವುಗೊಳಿಸಿದರ ವಿರುದ್ದ ವಿವಿಧ ಸಂವಿಧಾನಪರ ಸಂಘಟನೆಗಳು ವಿಧಾನ ಸೌಧ, ಹೈಕೋರ್ಟ್ ಚಲೋ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ಪ್ರತಿಭಟನೆಯಲ್ಲಿ ಲಕ್ಷಾಂತರ ಜನರು ಸೇರಿದ್ದು, ಇಡೀ ಬೆಂಗಳೂರು ನೀಲಿಮಯವಾಗಿತ್ತು. ಇಷ್ಟೊಂದು ದೊಡ್ಡ ಪ್ರತಿಭಟನೆಯ ಬಗ್ಗೆ ಮಾಧ್ಯಮಗಳು ಉದ್ದೇಶ ಪೂರ್ವಕವಾಗಿ ಎಂಬಂತೆಯೇ ವರದಿ ಮಾಡದೇ, ನಿರ್ಲಕ್ಷಿಸಿದ್ದವು. ಆ ಬಳಿಕ ದಲಿತರ, ಅಂಬೇಡ್ಕರ್ ವಾದಿಗಳ ಕಾರ್ಯಕ್ರಮಗಳನ್ನು ವರದಿ ಮಾಡಬಾರದು ಎಂದು ಕೆಲವೊಂದು ಪತ್ರಕರ್ತರು ಗುಂಪುಕಟ್ಟಿಕೊಂಡು ಮೊದಲೇ ನಿರ್ಧಾರ ತೆಗೆದುಕೊಂಡಿದ್ದರು ಎನ್ನುವ ಮಾತುಗಳು ಕೂಡ ಕೇಳಿ ಬಂದಿದ್ದವು.

ಈ ಸಂದರ್ಭದಲ್ಲಿ ರಾಜ್ಯಾದ್ಯಂತ ಮಾಧ್ಯಮಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ವೇಳೆ ಕೆಲವರು ನಮ್ಮ ಪರವಾಗಿ ಇರದ ಮಾಧ್ಯಮಗಳನ್ನು ಬಹಿಷ್ಕಾರ ಮಾಡುವುದಾಗಿ ಭಾವೋದ್ವೇಗದ ಮಾತುಗಳನ್ನಾಡಿದರು. ಸಾಕಷ್ಟು ಕಡೆಗಳಲ್ಲಿ ಬ್ಯಾನರ್ ಹಾಕಿ ಮಾಧ್ಯಮಗಳ ವಿರುದ್ಧ ಬಹಿರಂಗವಾಗಿ ಜನರು ಆಕ್ರೋಶ ವ್ಯಕ್ತಪಡಿಸಿದರು. ಆದರೆ, ಇದರ ಬೆನ್ನಲ್ಲೇ ಸೃಷ್ಟಿಯಾದ ಹಿಜಾಬ್ ವಿವಾದದ ನಡುವೆ ಜನರ ಗಮನ ಬೇರೆಡೆಗೆ ಸೆಳೆಯಿತು.

ಮಾಧ್ಯಮ ಅನಿವಾರ್ಯ: ಆದರೆ…

ಮಾಧ್ಯಮಗಳ ಏಕಪಕ್ಷೀಯ ನಿಲುವುಗಳು ಹಲವು ಪ್ರಶ್ನೆಗಳನ್ನು ಸೃಷ್ಟಿರುವುದು ನಿಜ. ಏಕಪಕ್ಷೀಯವಾಗಿರುವ ಮಾಧ್ಯಮಗಳು ಸರಿದಾರಿಗೆ ಬರಬೇಕಾದರೆ, ಪರ್ಯಾಯ ಚಾನೆಲ್ ಗಳು ಬರಲೇ ಬೇಕಿದೆ ಎನ್ನುವ ಅಭಿಪ್ರಾಯಗಳು ಕೂಡ ಸುಳ್ಳಲ್ಲ. ಮಾಧ್ಯಮಗಳು ಪಕ್ಷದ ವಿಚಾರವಾಗಿ ಯಾರನ್ನು ಬೇಕಾದರೂ ಬೆಂಬಲಿಸಲಿ. ಇದನ್ನು ಯಾರೂ ಪ್ರಶ್ನಿಸುತ್ತಿಲ್ಲ. ಆದರೆ, ರಾಜಕಾರಣಿಗಳಿಗೆ ಅನುಕೂಲವಾಗಿಸಲು ಧರ್ಮದಂತಹ ಸೂಕ್ಷ್ಮವಿಚಾರಗಳನ್ನು ವೈಭವೀಕರಿಸುತ್ತಿರುವುದು, ಮಾಧ್ಯಮಗಳೇ ಅಸ್ಪೃಷ್ಯತೆಯಂತಹ ಆಚರಣೆಗಳಿಗೆ ಮುಂದಾಗುವುದು, ಜನರು ನಡುವೆ ಧ್ವೇಷದ ಮನೋಭಾವಗಳನ್ನು ಸೃಷ್ಟಿಸುತ್ತಿರುವುದು ಎಲ್ಲರ ನೋವಿಗೆ ಕಾರಣವಾಗಿದೆ.

ಬಡಾಯಿ ಕೊಚ್ಚಿಕೊಳ್ಳುವುದೇ ಸಾಧನೆ

ಹೈಕೋರ್ಟ್ ಚಲೋ, ವಿಧಾನಸೌಧ ಚಲೋ ಬೃಹತ್ ಪ್ರತಿಭಟನೆ ವರದಿ ಮಾಡದೇ ಮಾಧ್ಯಮಗಳು ನಿರ್ಲಕ್ಷಿಸಿದ ಬಳಿಕ ಅದಾಗ ತಾನೇ ಹೋರಾಟ ಉತ್ಸಾಹದಲ್ಲಿದ್ದವರು “ನಮ್ಮದೇ ಒಂದು ಮಾಧ್ಯಮ ಬರಬೇಕು” ಎಂದು ಚರ್ಚೆ ಮಾಡಲು ಆರಂಭಿಸಿದ್ದರು. ಇದೇ ಸಂದರ್ಭದಲ್ಲಿ ಎಲ್ಲ ಮಾಧ್ಯಮಗಳಿಗೆ ಪರ್ಯಾಯವಾಗಿ ನಮ್ಮದೇ ಒಂದು ಚಾನೆಲ್ ಬರಬೇಕು. ಸರ್ಕಾರಿ ನೌಕರರಾದ ನಾವು ನಮ್ಮ ತಿಂಗಳ ವೇತನದಲ್ಲಿ ಮಾಧ್ಯಮಕ್ಕೆ ನೆರವು ನೀಡುತ್ತೇವೆ ಎಂದು ಕೆಲವು ದಲಿತ ನೌಕರರು ಫೇಸ್ ಬುಕ್ ನಲ್ಲಿ ಗೀಚಿಕೊಂಡಿದ್ದರು. ಇನ್ನು ಕೆಲವರು ನಮ್ಮ ಒಂದು ತಿಂಗಳ ವೇತನವನ್ನು ಸಂಪೂರ್ಣವಾಗಿ ನೀಡುತ್ತೇವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಡಾಯಿಕೊಚ್ಚಿಕೊಂಡರು. ಕೆಲವು ದಿನಗಳ ಬಳಿಕ ಆಕ್ರೋಶ ತಣಿಯಿತು. ಇನ್ನೊಂದು ಬಾರಿ ಅವಮಾನವಾದಾಗ ಮತ್ತೊಮ್ಮೆ ಪರ್ಯಾಯ ಮಾಧ್ಯಮದ ನೆನಪಾಗುತ್ತದೆ. ಮಾಧ್ಯಮ ಬಹಿಷ್ಕಾರದ ಬಣ್ಣ ಬಣ್ಣದ ಟ್ರೋಲ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸುತ್ತದೆ. ಮತ್ತೆ ಕೆಲವು ದಿನಗಳ ಬಳಿಕ ಮರೆತು ಬಿಡುತ್ತಾರೆ.

ರಂಗನಾಥ್ ಭಾರದ್ವಾಜ್ ನುಡಿದ ಸತ್ಯವಾದ ಮಾತು!

ಟಿವಿ9ನ ರಂಗನಾಥ್ ಭಾರದ್ವಾಜ್ ಅವರು ಇತ್ತೀಚೆಗೆ ಹಿಜಾಬ್ ಹೋರಾಟಗಾರ್ತಿಯೊಬ್ಬರ ಜೊತೆಗಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡುತ್ತಾ, “ನಿಮ್ಮ ಬೇಳೆ ಬೇಯಿಸಿಕೊಳ್ಳಲು ನೀವು ಮಾಧ್ಯಮಕ್ಕೆ ಬರ್ತಿರಿ” ಎಂದು ಹೇಳಿದರು. ಅವರು ಯಾವ ಉದ್ದೇಶದಿಂದ ಹೇಳಿದರೋ ಗೊತ್ತಿಲ್ಲ. ಆದರೆ, ಆ ಮಾತು ಸತ್ಯ ಎನ್ನುವುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲೇ ಬೇಕಾಗಿದೆ. ಸುದ್ದಿಗಳನ್ನು ನೋಡಲು ದೊಡ್ಡ ಮಾಧ್ಯಮಗಳೇ ಇಂದು ಎಲ್ಲರಿಗೂ ಬೇಕು. ಅದು ಅನಿವಾರ್ಯ ಕೂಡ. ರಾಜ್ಯಮಟ್ಟದಲ್ಲಿ ಒಂದು ಚಾನೆಲ್ ಮಾಡಬೇಕಾದರೆ, ಅದರ ಪಾಡು ಅಷ್ಟಿಷ್ಟಲ್ಲ. ಇಂದು ಸಂವಿಧಾನದ ಪರವಾಗಿರುವ ಸಾಕಷ್ಟು ಸಣ್ಣ ಸಣ್ಣ ಮಾಧ್ಯಮಗಳು ಆರ್ಥಿಕ ಸಂಕಷ್ಟಕ್ಕೊಳಗಾಗಿ ಮುಚ್ಚಿ ಹೋಗುವ ಸ್ಥಿತಿಯಲ್ಲಿದ್ದರೂ, ತಮ್ಮ ಶಕ್ತಿ ಮೀರಿ ಮಾಧ್ಯಮವನ್ನು ಮುನ್ನಡೆಸುತ್ತಿವೆ. ನಿಜವಾಗಿಯೂ ಮಾಧ್ಯಮ ಬೇಕು ಎಂದು ಸರ್ಕಾರಿ ನೌಕರರಿಗೆ ಕಾಳಜಿ ಇರುತ್ತಿದ್ದರೆ, ಇಂತಹ ಮಾಧ್ಯಮಗಳನ್ನು ಪ್ರಾಮಾಣಿಕವಾಗಿ ಬೆಂಬಲಿಸುತ್ತಿದ್ದರು. ಆದರೆ, ನನಗೆ ತಿಂಗಳಲ್ಲಿ 1 ಲಕ್ಷ ಸಂಬಳ ಇದೆ, ಎಂದು ತೋರಿಸಿಕೊಳ್ಳಲು, ಬಡಾಯಿಕೊಚ್ಚಿಕೊಳ್ಳಲು ಸಾಮಾಜಿಕ ಜಾಲತಾಣಗಳಲ್ಲಿ ಗೀಚಿಕೊಂಡು ಅಮಾಯಕ ಯುವಕರನ್ನು ಭ್ರಮಾಲೋಕದಲ್ಲಿ ತೇಲಾಡಿಸುವವರಿಗೆ ಏನನ್ನಬೇಕೋ….!

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ