ಲವ್ ಜಿಹಾದ್ ಕಾನೂನು ಜಾರಿಯ ಬಳಿಕ ಉತ್ತರ ಪ್ರದೇಶದಲ್ಲಿ ಮೊದಲ ಪ್ರಕರಣ ದಾಖಲು
ಲಕ್ನೋ: ಹಿಂದೂ ಯುವತಿಯರು ಮುಸ್ಲಿಮರನ್ನು ವಿವಾಹವಾಗಿ ಮತಾಂತರಗೊಳ್ಳುವುದನ್ನು ತಪ್ಪಿಸಲು ಉತ್ತರ ಪ್ರದೇಶ ಸರ್ಕಾರವು ತಂದಿರುವ ಮತಾಂತರ ನಿಷೇಧ ಕಾಯ್ದೆ ಜಾರಿಯಾದ ಬಳಿಕ ಇದೀಗ ಮೊದಲ ಕೇಸ್ ದಾಖಲಾಗಿದೆ.
ಬಲವಂತದ ಅಥವಾ ಮೋಸದಿಂದ ಮತಾಂತರ ಮಾಡುವುದನ್ನು ನಿಷೇಧಿಸುವ ಸುಗ್ರೀವಾಜ್ಞೆಗೆ ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು ಶನಿವಾರವಷ್ಟೇ ಅಂಕಿತ ಹಾಕಿದ್ದರು. ಇದಾದ ಬಳಿಕ, ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಮೊದಲ ಪ್ರಕರಣ ದಾಖಲಾಗಿದೆ.
ಶರೀಫ್‌ನಗರ ಗ್ರಾಮದ ಟೀಕಾರಾಮ್ ಎಂಬವರು ಉವೇಶ್ ಅಹ್ಮದ್ ಎಂಬಾತನ ವಿರುದ್ಧ ದೂರು ದಾಖಲು ಮಾಡಿದ್ದು, ತಮ್ಮ ಮಗಳಿಗೆ ಆಮಿಷ ಒಡ್ಡಿ ಉವೇಶ್ ಅಹ್ಮದ್ ಎಂಬಾತ ಮತಾಂತರಕ್ಕೆ ಪ್ರಯತ್ನ ಮಾಡುತ್ತಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಇನ್ನೂ ಈ ಸಂಬಂಧ ಪ್ರತಿಕ್ರಿಯಿಸಿರುವ ಪೊಲೀಸರು, ಯುವಕನು ಯುವತಿಯನ್ನು ಮತಾಂತರ ಮಾಡಲು ಬಲವಂತ ಮಾಡಿದ್ದಾನೋ ಇಲ್ಲವೋ ಗೊತ್ತಿಲ್ಲ, ಆದರೆ ಇವರಿಬ್ಬರೂ ಪರಿಚಿತರೇ ಆಗಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಉತ್ತರಪ್ರದೇಶ ಸರ್ಕಾರದ ಈ ಹೊಸ ಕಾನೂನಿನಿಂದಾಗಿ ಇದೀಗ ರಾಜ್ಯದ ಪೊಲೀಸರು ಯಾರದ್ದೋ ವೈಯಕ್ತಿಕ ವಿಚಾರಕ್ಕೆ ಮೂಗು ತೂರಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ.