ನಿನ್ನ ತಂಗಿಯ ಬಟ್ಟೆ ಸರಿ ಇಲ್ಲದಿದ್ದರೂ ನಿನಗೆ ಅತ್ಯಾಚಾರ ಮಾಡಬೇಕು ಎಂದನಿಸುತ್ತದೆಯೇ? - Mahanayaka
11:59 AM Sunday 22 - December 2024

ನಿನ್ನ ತಂಗಿಯ ಬಟ್ಟೆ ಸರಿ ಇಲ್ಲದಿದ್ದರೂ ನಿನಗೆ ಅತ್ಯಾಚಾರ ಮಾಡಬೇಕು ಎಂದನಿಸುತ್ತದೆಯೇ?

16/10/2020

ನಿನ್ನ ತಂಗಿಯ ಬಟ್ಟೆ ಸರಿ ಇಲ್ಲದಿದ್ದರೆ, ನಿನಗೆ ಅತ್ಯಾಚಾರ ಮಾಡಬೇಕು ಎಂದು ಅನ್ನಿಸುತ್ತದೆಯೇ? ಈ ಪ್ರಶ್ನೆಯನ್ನು ಬಹುತೇಕ ಪುರುಷರಿಗೆ ಇಂದು ಮಹಿಳೆಯರಾದ ನಾವು ಕೇಳಬೇಕಿದೆ. ಪ್ರಾಣಿಗಳು ಬೆತ್ತಲೆ ಇದ್ದರೂ ತನ್ನ ಸಮುದಾಯದ ಇನ್ನೊಂದು ಪ್ರಾಣಿಯನ್ನು ಅತ್ಯಾಚಾರ ಮಾಡುವುದಿಲ್ಲ. ಆದರೆ ಮನುಷ್ಯ. ಅದರಲ್ಲೂ ಗಂಡು ಜಾತಿಯಂತೂ, ತಾನು ಹುಟ್ಟಿರುವುದೇ ಹೆಣ್ಣನ್ನು ಗಮನಿಸಲು ಅದರಲ್ಲೂ ಆಕೆಯ ಅಂಗಾಂಗಗಳ ಮೇಲೆ ಕಣ್ಣಿಡಲು ಎಂಬಂತೆ ವರ್ತಿಸುತ್ತಿದೆ.

ನಮ್ಮ ಮನಸ್ಥಿತಿಗಳು ಎತ್ತ ಸಾಗುತ್ತಿವೆ ಎಂದರೆ, ಅತ್ಯಾಚಾರವನ್ನೂ ಸಕ್ರಮಗೊಳಿಸಬೇಕು ಎಂದು ಪರೋಕ್ಷವಾಗಿ ವಾದ ಮಾಡುವಷ್ಟು. ಒಂದು ಕಾಲವಿತ್ತು. ಅತ್ಯಾಚಾರ ನಡೆಯಿತು ಎಂಬ ಸುದ್ದಿ ಕಿವಿಗೆ ಬಿದ್ದಾಗಲೇ, ಜನರ ಮನಸ್ಸಿನಲ್ಲಿ ಆಕ್ರೋಶ ಬುಗಿಲೆದ್ದು, ಜನ ರಸ್ತೆಗೆ ಬರುತ್ತಿದ್ದರು. ಆದರೆ, ಆ ಕಾಲ ಅಂತೂ ಈಗ ಬಹಳ ದೂರವಾಗಿದೆ ಬಿಡಿ. ಅತ್ಯಾಚಾರ ನಡೆಸಿ, ನಾಲಿಗೆ ಕತ್ತರಿಸಿ, ಬೆನ್ನುಮೂಳೆ ಮುರಿದು ಘೋರವಾಗಿ ಹತ್ಯೆ ನಡೆಸಿದ್ದರೂ, ಆಕೆಯ ಮೇಲೆ ಅತ್ಯಾಚಾರವೇ ನಡೆದಿಲ್ಲ ಎಂದು ವಾದಿಸುವಷ್ಟರ ಮಟ್ಟಿಗೆ ಈ ಗಂಡು ಜಾತಿ ಬೆಳೆದು ಬಿಟ್ಟಿದೆ. ಗಂಡು ಜಾತಿ ಎಂದರೆ, ಎಲ್ಲರನ್ನೂ ಹೇಳುತ್ತಿಲ್ಲ. ಆದರೆ, ಅತ್ಯಾಚಾರವನ್ನು ಬೆಂಬಲಿಸುವವನ ಕೆನ್ನೆಗೆ ಬಾರಿಸಿ, ಪ್ರಶ್ನಿಸಲು ಯೋಗ್ಯತೆ ಇಲ್ಲದವರನ್ನು ಹೇಗೆ ತಾನೆ ಗಂಡು ಎಂದು ನಾನು ಹೇಳಲಿ?

ಪ್ರತಿ ಬಾರಿ ಅತ್ಯಾಚಾರ ನಡೆದಾಗಲೂ ಹೆಣ್ಣಿನ ಮೇಲೆಯೇ ಗಂಡು ಜಾತಿ ದೂರು ಹಾಕುತ್ತಿದೆ. ಆಕೆ ಸರಿಯಾಗಿ ಬಟ್ಟೆ ಧರಿಸಿಲ್ಲ, ಅರ್ಧ ಬಟ್ಟೆ ಧರಿಸಿ ಹೋದರೆ, ಅತ್ಯಾಚಾರ ನಡೆಯದೇ ಇರುತ್ತದೆಯೇ ಎಂದು ಪ್ರಶ್ನಿಸುತ್ತಾರೆ. ಅರ್ಧಂಬರ್ಧ ಬಟ್ಟೆ ಧರಿಸುವವರನ್ನು ನಾನಂತೂ ಸಮರ್ಥಸುವುದಿಲ್ಲ. ಆದರೆ, ದೇಶದಲ್ಲಿ ನಡೆದ ಬಹುತೇಕ ಅತ್ಯಾಚಾರ ಪ್ರಕರಣಗಳಲ್ಲಿ ಹಳ್ಳಿಗಾಡಿನ, ಮೈತುಂಬಾ ಬಟ್ಟೆ ಹಾಕಿಕೊಂಡು ಓಡಾಡುತ್ತಿರುವವರ ಅತ್ಯಾಚಾರವೇ ನಡೆಯುತ್ತಿದೆ. ಪಬ್, ಬಾರ್ ಗಳಲ್ಲಿ ಮತ್ತಿನಲ್ಲಿ ತೇಲಾಡುತ್ತಾ, ಅರ್ಧಂಬರ್ಧ ಬಟ್ಟೆ ಹಾಕಿಕೊಂಡು ಜಾಲಿ ಮಾಡುವ ಹುಡುಗಿಯರೆಲ್ಲರೂ ಮೇಲ್ವರ್ಗದ ಶ್ರೀಮಂತರೇ ಆಗಿರುವುದರಿಂದ ಅವರು ಸೇಫ್ ಆಗಿ ಮನೆ ತಲುಪುತ್ತಾರೆ. ಶ್ರೀಮಂತರ ಮಕ್ಕಳ ತಪ್ಪಿಗೆ ಈ ಹಳ್ಳಿ ಪ್ರದೇಶದ ಮಕ್ಕಳ ಮೇಲೆ ಗೂಬೆ ಕೂರಿಸಲಾಗುತ್ತದೆ. ಅಷ್ಟಕ್ಕೂ  ಮಹಿಳೆ ಸರಿಯಾಗಿ ಬಟ್ಟೆ ಧರಿಸದಿದ್ದಾಗ ಆಕೆಯ ಅಂಗಾಂಗ ಕಂಡಾಗ ಪುರುಷನಾದ ನೀನು ಕಾಮೋದ್ರೇಕಗೊಳ್ಳುತ್ತಿದ್ದೀಯೇ ಎಂದಾದರೆ, ನಿನ್ನ ಮನೆಯಲ್ಲಿ ನಿನ್ನ ಮಗಳು ಎಷ್ಟು ಸುರಕ್ಷಿತ ಎಂದು ಹೆಣ್ಣು ಜಾತಿ ಆಲೋಚಿಸಲೇ ಬೇಕಲ್ಲವೇ?

ತೊಟ್ಟಿಲಲ್ಲಿ ಮಲಗಿರುವ,  ಹುಟ್ಟಿ ಒಂದೆರಡು ದಿನಗಳಾಗಿರುವ ಪುಟ್ಟ ಮಗುವಿನ ಅಂಗಾಂಗಗಳನ್ನು ನೋಡಿದಾಗಲೇ ಉದ್ರೇಕಗೊಂಡು ಅತ್ಯಾಚಾರ ಮಾಡುವ ನೀನು, ಇನ್ನು ಬೀದಿಯಲ್ಲಿ ಹೋಗುವ ಹೆಣ್ಣು ಮಕ್ಕಳನ್ನು ಬಿಡುತ್ತೀಯೇ? ಒಂದಂತೂ ತಿಳಿದುಕೋ, ಅತ್ಯಾಚಾರ ಮಾಡುವವನು ನಿಜವಾದ ಗಂಡಲ್ಲ, ಹಾಗೆಯೇ ಅತ್ಯಾಚಾರವನ್ನು ನೋಡಿ ಸುಮ್ಮನಿರುವವನೂ ನಿಜವಾದ ಗಂಡಲ್ಲ. ಅತ್ಯಾಚಾರವನ್ನು ಪ್ರಶ್ನಿಸುವವನು, ನಿಜವಾದ ಗಂಡು, ಅವನು ನಿಜವಾದ ಪುರುಷೋತ್ತಮ.

ವಿಡಿಯೋ ನೋಡಿ..

ಇತ್ತೀಚಿನ ಸುದ್ದಿ