ಬುದ್ಧನು ಇಲ್ಲದಿದ್ದರೆ..?
ನನಗೆ ಆಗಾಗ ನೋವಾಗುತ್ತದೆ
ಸಂಕಟ, ಆತಂಕ, ದುಗುಡ
ಬುದ್ಧ ಎಂದರೆ
ಸಮಾಧಾನ ಆಗುತ್ತದೆ
ಕುಂದಿದ ಶಕ್ತಿ
ಮತ್ತೆ ಬರುತ್ತದೆ
ಬುದ್ಧನೂ ಇಲ್ಲದಿದ್ದರೆ…?
ನನಗೆ ಆಗಾಗ ಅತೀವ ದುಃಖವಾಗುತ್ತದೆ
ಗುಡಿಯ ಆಚೆ ನಿಂತಾಗ
ನನ್ನಣ್ಣಂದಿರು ನನ್ನಂತೆ ಆಚೆ
ನಿಂತಾಗ
ಏಕೆಂಬ ಕಾರಣ ಅರಿಯದೆ
ಕೈಮುಗಿಯುತ್ತಿರುವಾಗ
ಈಗೀಗ
ದೂರದಲ್ಲೆಲ್ಲೊ ಅಲ್ಲೆಲ್ಲ ವಿಹಾರಗಳು
ಕಾಣುತ್ತಿವೆ
ಸ್ಪರ್ಶಿಸಿ ಖುಷಿ ಪಡುವೆ
ಹತ್ತಿರ ಹೋಗಿ ಬುದ್ಧನ…
ಬುದ್ಧನೂ ಇಲ್ಲದಿದ್ದರೆ..?
ನನಗೆ ಆಗಾಗ
ಪಲ್ಸ್ ರೇಟ್ ಹೆಚ್ಚಾಗುತ್ತದೆ
ಬಿಪಿ ಶುಗರ್ ಏರುಪೇರಿನ ಟೆಂಪರೇಚರ್
ಬುದ್ಧ ಎಂದಾಗ
ಅರೆಕ್ಷಣ ನೆಮ್ಮದಿಯಾಗುತ್ತದೆ
ಏನಾಗಲ್ಲ ಬಿಡು ಎಂಬ
ಸಮಾಧಾನ
ಬುದ್ಧನೂ ಇಲ್ಲದಿದ್ದರೆ..?
ನನಗೆ ಆಗಾಗ ಸಹೋದ್ಯೋಗಿಗಳು
ನಾವು ಮೇಲ್ಜಾತಿ ಮೇಲ್ಜಾತಿ
ಒಟ್ಟಿಗೆ ಸೇರುವಾಗ
ಗಹಗಹಿಸಿ ನಗುವಾಗ
ಸಂಕಟವಾಗುತ್ತದೆ ಅಪಮಾನವಾಗುತ್ತದೆ ನಾನ್ಯಾವ ಜಾತಿ?
ಬುದ್ಧ ಹೇಳುತ್ತಾನೆ ನೀ ನನ್ನವ
ನನ್ನ ಧಮ್ಮದವ
ಮನಸ್ಸು ಮ್ಲಾನ ವದನವಾಗುತ್ತದೆ…
ಬುದ್ಧನೂ ಇಲ್ಲದಿದ್ದರೆ..?
ನನಗೆ ಆಗಾಗ
ವೇದನೆಯಾಗುತ್ತದೆ
ಕುಟುಂಬದ ಸದಸ್ಯರು ಇನ್ನಿಲ್ಲವಾದಾಗ
ಸ್ನೇಹಿತರು ಸಂಬಂಧಿಕರು
ಕಾಯಿಲೆ ಬಿದ್ದಾಗ
ಅವರೆಲ್ಲರಿಗು ಹೇಗೆ ಸಂತಾಪ ಸೂಚಿಸಲಿ
ಆರೋಗ್ಯಕ್ಕಾಗಿ ಹೇಗೆ ಪ್ರಾರ್ಥಿಸಲಿ
ಬುದ್ಧ ಹೇಳುತ್ತಾನೆ
ನನ್ನ ಹೆಸರೇಳು, ಒಳಿತಾಗುತ್ತದೆ…
ಬುದ್ಧನೂ ಇಲ್ಲದಿದ್ದರೆ..?
ನನಗೆ ಆಗಾಗ
ಅನಾಥ ಪ್ರಜ್ಞೆ ಕಾಡುತ್ತದೆ
ಬೇರೆಯವರು ಮಂತ್ರ, ಶಾಸ್ತ್ರ, ಶ್ಲೋಕ ಹೇಳುವಾಗ
ಸಂಸ್ಕೃತಿ, ಶಾಸ್ತ್ರೀಯ ಎಂದು ಹಾಡುವಾಗ
ಬುದ್ಧ ಹೇಳುತ್ತಾನೆ
ಪಾಳಿ ಮಂತ್ರಗಳ ಪಠಿಸು
ಧ್ಯಾನ, ಗಾಯನದ ಮೊರೆ ಹೋಗು
ಬುದ್ಧನೂ ಇಲ್ಲದಿದ್ದರೆ..?
ನಾನು ಆಗಾಗ ತಪ್ಪು ಮಾಡುತ್ತೇನೆ
ಸುಳ್ಳು, ವ್ಯಭಿಚಾರ, ಕಾಮ, ಕೊಲೆ, ಕಳ್ಳತನ
ಸರಿಪಡಿಸಿಕೊಳ್ಳನೋಡುತ್ತೇನೆ
ಬುದ್ಧ ಹೇಳುತ್ತಾನೆ
ನನ್ನ ಬಳಿ ಬಾ
ಪಂಚಶೀಲದ ಮೊರೆ ಹೋಗು
ಅಷ್ಟಾಂಗ ಮಾರ್ಗವ ಒಮ್ಮೆ ನೆನಪಿಸಿಕೊ
ಬುದ್ಧನೂ ಇಲ್ಲದಿದ್ದರೆ..?
- ರಘೋತ್ತಮ ಹೊ.ಬ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka