ಕೋಮುವಾದದ ಪ್ರಯೋಗಶಾಲೆಯಾಗಿ ಕರ್ನಾಟಕ: ಮುಸ್ಲಿಂ ಸಮಾವೇಶದಲ್ಲಿ ಕೇಳಿ ಬಂದ ಅಭಿಪ್ರಾಯಗಳೇನು? - Mahanayaka
2:14 PM Friday 20 - September 2024

ಕೋಮುವಾದದ ಪ್ರಯೋಗಶಾಲೆಯಾಗಿ ಕರ್ನಾಟಕ: ಮುಸ್ಲಿಂ ಸಮಾವೇಶದಲ್ಲಿ ಕೇಳಿ ಬಂದ ಅಭಿಪ್ರಾಯಗಳೇನು?

muslim samavesha
01/06/2022

ಮಂಗಳೂರು

“ಕರ್ನಾಟಕ ಈವರೆಗೆ ಕೋಮುವಾದದ ಪ್ರಯೋಗಶಾಲೆಯಾಗಿಲ್ಲ. ಆದರೆ ಆ ಪ್ರಯತ್ನಗಳು ನಡೆಯುತ್ತಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಸುಮಾರು 30-40 ವರ್ಷಗಳಿಂದ ಕೋಮುವಾದದ ಪ್ರಯೋಗಶಾಲೆಯಾಗಿದೆ. ಇದರ ನಷ್ಟವನ್ನು ನಾವು ನೋಡಿದಾಗ ಮುಂದೆ ಕರ್ನಾಟಕವೂ ಹೀಗೆ ಆದಾಗ ಉಂಟಾಗುವ ನಷ್ಟವನ್ನು ಅರ್ಥ ಮಾಡಿಕೊಳ್ಳಬಹುದು,” ಎಂದು ಹಂಪಿ ವಿ.ವಿಯ ನಿವೃತ್ತ ಪ್ರಾಧ್ಯಾಪಕರಾದ ಡಾ.ಚಂದ್ರ ಪೂಜಾರಿ ಹೇಳಿದರು.


Provided by

ಸಿಪಿಐಎಂ ಆಯೋಜಿಸಿದ್ದ ರಾಜ್ಯ ಮಟ್ಟದ ಮುಸ್ಲಿಂ ಸಮಾವೇಶದಲ್ಲಿ ನಡೆದ  “ಕೋಮುವಾದದ ಪ್ರಯೋಗಶಾಲೆಯಾಗಿ ಕರ್ನಾಟಕ” ಗೊಷ್ಠಿಯಲ್ಲಿ ವಿಷಯ ಮಂಡನೆ ಮಾಡಿ ಹಂಪಿ ವಿ.ವಿಯ ನಿವೃತ್ತ ಪ್ರಾಧ್ಯಾಪಕರಾದ ಡಾ.ಚಂದ್ರ ಪೂಜಾರಿಯವರು ಮಾತನಾಡಿದರು.

“ಸಾಮಾನ್ಯವಾಗಿ ಎಲ್ಲಾ ಪಕ್ಷಗಳು ಒಂದು ಸಮುದಾಯದ ಸಮಾವೇಶವನ್ನು ಮಾಡುವುದು ಚುನಾವಣೆ ಬಂದಾಗ. ಆದರೆ ಸಿಪಿಐಎಂ ಇಲ್ಲಿ ಮಾಡುತ್ತಿರುವುದು ವೋಟ್ ಬ್ಯಾಂಕ್ ಸಮಾವೇಶವಲ್ಲ. ಬರೀ ಸೋತವರ ಜೊತೆಯಲ್ಲಿ, ಪರವಾಗಿ ನಿಲ್ಲುವುದು ಸಿಪಿಐಎಂ ಪಕ್ಷದ ಉದ್ಧೇಶವಾಗಿದೆ ಎಂದು ನಾನು ಹಲವಾರು ಮಂದಿಯಲ್ಲಿ ಮಾತನಾಡಿದಾಗ ತಿಳಿದು ಬಂದಿದೆ. ಇದೇ ಕಾರಣಕ್ಕೆ ನಾನು ಇಲ್ಲಿ ಭಾಗಿಯಾಗಿದ್ದೇನೆ,” ಎಂದು ತಿಳಿಸಿದರು.

“20 ವರ್ಷದಿಂದ ಬಿಜೆಪಿ ಈ ಅವಿಭಜಿತ ಜಿಲ್ಲೆಯಲ್ಲಿ ಶಾಸಕ, ಸಂಸದ ಸೀಟು ಪಡೆಯುತ್ತಿದೆ. ಆದರೆ ದೊಡ್ಡ ಮಟ್ಟಿನ ಅಭಿವೃದ್ಧಿ ಆಗಿಲ್ಲ. ಬದಲಾಗಿ ಜನರು ಕೋಮುವಾದದ ನೆಲೆಯಲ್ಲಿಯೇ ಆಲೋಚನೆ ಮಾಡುವಂತಹ ಸ್ಥಿತಿ ನಿರ್ಮಾಣ ಮಾಡುವುದರಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಹಿಜಾಬ್, ಅಝಾನ್, ಹಲಾಲ್ ಎಂಬ ವಿಚಾರ ಮಂಗಳೂರಿನಲ್ಲೇ ಸೃಷ್ಟಿಯಾಗಿದೆ. ಈಗ ಕರ್ನಾಟಕವನ್ನು ಕೋಮುವಾದದ ಪ್ರಯೋಗಶಾಲೆಯನ್ನಾಗಿ ಮಾಡುವ ಪ್ರಯೋಗ ನಡೆಯುತ್ತಿದೆ. ಆ ಪ್ರಯೋಗದಲ್ಲಿ ಬಿಜೆಪಿ ಯಶಸ್ವಿಯಾಗುತ್ತದೆಯೇ ಎಂದು ಕಾದು ನೋಡಬೇಕಾಗಿದೆ.

ಅಭಿವೃದ್ಧಿ ವಿಚಾರದಲ್ಲಿ ನೋಡಿದಾಗ ಉತ್ತರ ಪ್ರದೇಶ ಪಾತಾಳದಲ್ಲಿದೆ. ಆದರೆ ಗೆಲುವು ಸಾಧಿಸಿದೆ. ಇದು ಭಾರೀ ದೊಡ್ಡ ಆಶ್ಚರ್ಯ. ಈ ಗೆಲುವಿಗೆ ಮುಖ್ಯ ಕಾರಣ ಮತಾಂತರ ನಿಷೇಧ, ಗೋ ಹತ್ಯೆ ನಿಷೇಧ ಎಂಬ ಕಾಯ್ದೆಗಳು ಆಗಿದೆ. ಈಗ ಕರ್ನಾಟಕದಲ್ಲೂ ಅದೇ ರೀತಿ ಮುನ್ನಡೆಯುವಂತೆ ಕಾಣುತ್ತಿದೆ,” ಎಂದು ಹೇಳಿದರು.

“ಹಿಜಾಬ್ ವಿಚಾರದಲ್ಲಿ ಕೋರ್ಟ್ ಕೇಳಬೇಕಾದದ್ದು ಸಮವಸ್ತ್ರಕ್ಕೂ ಶಿಕ್ಷಣಕ್ಕೂ ಸಂಬಂಧವಿದೆಯೇ ಎಂದು. ಆದರೆ ಕೋರ್ಟ್ ಧಾರ್ಮಿಕ ಪ್ರಶ್ನೆಯನ್ನು ಕೇಳಿದೆ. ಹಿಜಾಬ್‌ಗೂ ಇಸ್ಲಾಂಗೂ ಸಂಬಂಧ ಇದೆಯೇ ಎಂದು ಕೋರ್ಟ್ ಕೇಳಿದೆ. ಕೋಮುವಾದವನ್ನು ಹರಡುವಲ್ಲಿ ಕೋರ್ಟ್ ಕೂಡಾ ಈ ಮೂಲಕ ಭಾಗಿಯಾಗಿದೆ,” ಎಂದು ಆರೋಪ ಮಾಡಿದರು.

“ರಾಜ್ಯದಲ್ಲಿ ಪಠ್ಯ ಪುಸ್ತಕದ ಪರಿಷ್ಕರಣೆ ಮೂಲಕ ತಮ್ಮ ಕೋಮು ವಿಭಜನೆ ಮುಂದುವರಿಸಿದ್ದಾರೆ. ಮಕ್ಕಳನ್ನು ಸಣ್ಣ ವಯಸ್ಸಿನಲ್ಲೇ ಕೋಮುವಾದಿಗಳನ್ನಾಗಿ ಮಾಡುವ ಹುನ್ನಾರ ಇದರ ಹಿಂದೆ ಇದೆ. ಬ್ರಾಹ್ಮಣ್ಯ ತಿರಸ್ಕಾರ ಮಾಡುವ ಎಲ್ಲ ಪಠ್ಯ ತೆಗೆಯಲಾಗಿದೆ. ಬರೀ ಬಿಜೆಪಿ ತಮಗೆ ಬೇಕಾದ ಪಠ್ಯವನ್ನು ಉಳಿಸಿಕೊಂಡಿದೆ. ನೀತಿ ಪಾಠದಿಂದ ಕೋಮುವಾದ ನಿಲ್ಲದು. ಕೋಮುವಾದವನ್ನು ಸೃಷ್ಟಿ ಮಾಡಿದವರು ಚುನಾವಣೆಯಲ್ಲಿ ಸೋತಾಗ ಮಾತ್ರ ಕೋಮುವಾದಕ್ಕೆ ಕೊನೆ. ನಾವು ಆರ್ಥಿಕ ಕಾರಣಕ್ಕಾಗಿ ಕೋಮುವಾದವನ್ನು ವಿರೋಧ ಮಾಡಬೇಕಾಗಿದೆ. ಕೋಮುವಾದ ಹೆಚ್ಚಾದರೆ ಭಾರತದ ಸ್ಥಿತಿ ಶ್ರೀಲಂಕಾದಂತೆ ಆಗುತ್ತದೆ. ಕೋಮುವಾದ ಹೆಚ್ಚಾದರೆ ಅಲ್ಪಸಂಖ್ಯಾತ ರಿಗೆ ಮಾತ್ರ  ತೊಂದರೆ ಆಗುವುದಲ್ಲ, ಬಹುಸಂಖ್ಯಾತರಿಗೂ ತೊಂದರೆಯಾಗುತ್ತದೆ,” ಎಂದು ಅಭಿಪ್ರಾಯಿಸಿದರು.


ಭಾರತವನ್ನು ಹಿಂದೂ ದೇಶವನ್ನಾಗಿಸುವ ಉದ್ಧೇಶ: ಡಾ.ಕೆ.ಪ್ರಕಾಶ್‌

“ದೇಶವನ್ನು ಕೋಮುಗ್ರಸ್ತ ಮಾಡುವಲ್ಲಿ ಅತ್ಯಂತ ಜಾಸ್ತಿ ಪಾಲಿರುವುದು ಸಂಘಪರಿವಾರದ್ದು. ಆರ್‌ಎಸ್‌ಎಸ್‌ಗೆ ಇನ್ನೆರೆಡು ವರ್ಷ ಕಳೆದರೆ ನೂರು ವರ್ಷವಾಗುತ್ತದೆ. ಅವರ ಹಿಂದಿನ ಉದ್ದೇಶ ಈ ದೇಶವನ್ನು ಹಿಂದೂ ದೇಶವನ್ನಾಗಿ ಮಾಡುವುದು ಆಗಿದೆ. ಭಾರತದ ಜಾತ್ಯಾತೀತ ಮತ್ತು ಸಂವಿಧಾನದ ಬಗ್ಗೆ ಆರ್‌ಎಸ್‌ಎಸ್‌ಗೆ ಯಾವುದೇ ಗೌರವವಿಲ್ಲ. ಅವರ ಪ್ರಕಾರ ಹಿಂದೂ ದೇಶ ಪ್ರಾಚೀನ ಕಾಲದಲ್ಲಿ ಇತ್ತು. ಅದನ್ನು ಪರಕೀಯರು ನಾಶ ಮಾಡಿದ್ದಾರೆ. ಹಾಗಾಗಿ ನಾವು ಹಿಂದೂ ಧರ್ಮವನ್ನು ಪುನಃಸ್ಥಾಪನೆ ಮಾಡಬೇಕು ಎಂದು ಆರ್‌ಎಸ್‌ಎಸ್ ಹೇಳುತ್ತದೆ. ಇದಕ್ಕಾಗಿಯೇ ಭಾರತದ ಇತಿಹಾಸವನ್ನು ವೈಭವೀಕರಣ ಮಾಡುತ್ತಿದ್ದಾರೆ. ಅದರ ಭಾಗವಾಗಿಯೇ ಪಠ್ಯ ಪುಸ್ತಕದ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ಸಿಪಿಐಎಂ ಸಂಘಟಿಸಿರುವ ರಾಜ್ಯ ಮಟ್ಟದ ಮುಸ್ಲಿಂ ಸಮಾವೇಶದಲ್ಲಿ ಏರ್ಪಡಿಸಿದ್ದ “ಕೋಮುವಾದದ ಪ್ರಯೋಗಶಾಲೆಯಾಗಿ ಕರ್ನಾಟಕ” ಗೋಷ್ಠಿಯಲ್ಲಿ ವಿಷಯ ಮಂಡಿಸಿ ರಾಜಕೀಯ ವಿಶ್ಲೇಷಕರಾದ ಡಾ.ಕೆ.ಪ್ರಕಾಶ್‌ ಮಾತನಾಡಿದರು.

“ಪ್ರಸ್ತುತ ಸಮಾಜದಲ್ಲಿ ಎದುರಿಸುತ್ತಿರುವ ಸಮಸ್ಯೆಗಳಾದ ಮಹಿಳೆಯರ ಅಸಮಾನತೆ, ನಿರುದ್ಯೋಗ, ಶಿಕ್ಷಣ, ಅನಾರೋಗ್ಯದ ಸಮಸ್ಯೆ ಕಾರಣ ಮುಸ್ಲಿಮರೇ ಕಾರಣ ಎಂಬಂತೆ ಬಿಂಬಿಸಲಾಗುತ್ತಿದೆ. ಇದಕ್ಕಾಗಿ ಆರ್‌ಎಸ್‌ಎಸ್‌, ಬಿಜೆಪಿ ಹಲವಾರು ವಾದಗಳನ್ನು ಮಾಡಿದೆ. ಅದುವೇ ಸತ್ಯ ಎಂಬಂತೆ ನಂಬಿಸಲಾಗುತ್ತಿದೆ. ಈ ಎಲ್ಲಾ ಸಮಸ್ಯೆಗಳಿಗೆ ಭಾರತದ ಒಳಗೆ ಇರುವ ಶತ್ರುಗಳು ಕಾರಣ ಎಂದು ಕೂಡಾ ಹೇಳುತ್ತಾರೆ. ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಕಮ್ಯುನಿಷ್ಠರು ಶತ್ರುಗಳು ಎಂದು ಹೇಳುತ್ತಾರೆ. ಅವರನ್ನು ದ್ರೋಹಿಗಳು ಎಂಬಂತೆ ಬಿಂಬಿಸುತ್ತಿದ್ದಾರೆ,” ಎಂದು ತಿಳಿಸಿದರು.

“ರಾಜಕೀಯ ಲಾಭಕ್ಕಾಗಿ ಹಿಂದುತ್ವವನ್ನು  ಅಡಿಪಾಯವಾಗಿ ಕೆಲಸ ಮಾಡಲಾಗುತ್ತಿದೆ. ಸಮಾನತೆ, ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವಾಗ ಅದು ನಮ್ಮ ದೇಶದ ಮೂಲ ಸಂಸ್ಕೃತಿಯಲ್ಲ ಎಂದು ನಂಬಿಸುತ್ತಿದ್ದಾರೆ. ಜಾತ್ಯಾತೀತತೆ ಎಂಬ ಪರಿಕಲ್ಪನೆಯನ್ನೂ ಅವರು ವಿರೋಧಿಸುವುದು ಅವರು ಅದೇ ಕಾರಣಕ್ಕೆ. ಸಂವಿಧಾನದ ಮೂಲ ಆಧಾರ ಸ್ಥಂಭ ವಿದೇಶಿ ಕಲ್ಪನೆ ಎಂದು ಪ್ರತಿಪಾದನೆ ಮಾಡುತ್ತಿದ್ದಾರೆ. ಅದಕ್ಕಾಗಿ ಸಂವಿಧಾನವನ್ನು ಬದಲಾವಣೆ ಮಾಡಬೇಕು ಎಂದು ಪದೇ ಪದೇ ಜನರ ತಲೆಗೆ ತುಂಬಿಸುತ್ತಾರೆ.  ಈ ಸಂವಿಧಾನ ಬದಲಾವಣೆಗೆ ಅವರು ಪಡೆಯನ್ನು ಕಟ್ಟುತ್ತಾರೆ.
ಆರ್‌ಎಸ್‌ಎಸ್ ದಕ್ಷಿಣ ಭಾರತದಲ್ಲಿ ಕರ್ನಾಟಕವನ್ನು ಕೋಮುಪ್ರಯೋಗ ಶಾಲೆಯನ್ನಾಗಿ ಮಾಡಲು ಹೊರಟಿದೆ. ಮಕ್ಕಳಿಂದಲೇ ತಲೆಗೆ ಕೋಮು ದ್ವೇಷ ತುಂಬಿಸಲಾಗುತ್ತಿದೆ. ಹಾಗಾಗಿ ವಿದ್ಯಾರ್ಥಿಗಳ ನಡುವೆ ಹಿಜಾಬ್ ವಿಚಾರ ಹರಡಲಾಗಿದೆ. ಗಣ್ಯ ವ್ಯಕ್ತಿಗಳ ಮೂಲಕವೂ ಕೋಮು ದ್ವೇಷ ಹರಡಲಾಗುತ್ತಿದೆ. ದಲಿತ ಮತ್ತು ಬುಡಕಟ್ಟುಗಳ ನಡುವೆ ಎತ್ತಿಕಟ್ಟಿ ಅವರು ತಮ್ಮ ಕಾರ್ಯವನ್ನು ಸಾಧಿಸುತ್ತಿದ್ದಾರೆ. ಅದಕ್ಕೆ ಉದಾಹರಣೆ ಚಿತ್ರದುರ್ಗದ ನಾಯಕ ಸಮುದಾಯವನ್ನು ಹೈದರಾಳಲಿಯನ್ನು ತೋರಿಸಿ ಮುಸ್ಲಿಮರ ವಿರುದ್ದ ಎತ್ತಿಕಟ್ಟಿರುವುದು,” ಎಂದು ಹೇಳಿದರು.

ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಪಿಐಎಂ ರಾಜ್ಯ ಸಮಿತಿಯ ಸದಸ್ಯರಾದ ಮುನೀರ್ ಕಾಟಿಪಳ್ಳ, “ಕರಾವಳಿ ರೀತಿಯಲ್ಲಿ ಇಡೀ ಕರ್ನಾಟಕವನ್ನು ಕೋಮುವಾದದ ಪ್ರಯೋಗಶಾಲೆ ಮಾಡಿಲ್ಲ ಎಂಬುವುದು ನಿಜವೆ ಆಗಿದೆ. ಆದರೆ ಪ್ರಯೋಗಶಾಲೆಯನ್ನಾಗಿ ಮಾಡುವ ಕೆಲಸ ಪ್ರಾರಂಭ ಆಗಿದೆ. ಜಾತ್ಯತೀತ ಪಕ್ಷದಲ್ಲಿ ಗೆದ್ದವರು ಶಾಸನ ಸಭೆಗಳಲ್ಲಿ ಕೋಮುವಾದಿಗಳ ಜೊತೆಗೆ ಕೈಜೋಡಿಸಿದಾಗ ಯಾವುದೂ ಅಸಾಧ್ಯವಿಲ್ಲ. ಕೋಮುವಾದದ ವಿರುದ್ಧದ ಹೋರಾಟದಲ್ಲಿ ಕೇವಲ ಕೋಮುವಾದದ ಬಗ್ಗೆ ಮಾತ್ರವಲ್ಲದೆ, ಜನರ ಬದುಕಿನ ಪ್ರಶ್ನೆಗಳನ್ನೂ ಜೋಡಿಸುವ ಕೆಲಸ ಮಾಡಬೇಕು,” ಎಂದರು.

“ನಾರಾಯಣಗುರು ಸ್ಥಬ್ದಚಿತ್ರವನ್ನು ಮೋದಿ ಸರ್ಕಾರ ನಿರಾಕರಿಸಿದಾಗ, ಹಿಜಾಬ್ ವಿಚಾರವನ್ನು ಮುಂದೆ ತರಲಾಯಿತು. ಮುಸ್ಲಿಂ ಮತೀಯವಾದಿಗಳು ಬಹಳ ಹೆಚ್ಚಾಗಿ ಸಂಘಪರಿವಾರಕ್ಕೆ ಏನು ಬೇಕೋ ಅದನ್ನೇ ಮಾಡುತ್ತಿವೆ. ಹಿಂದೂ ಕೋಮುವಾದ ಕರಾವಳಿಯನ್ನು ಪ್ರಯೋಗ ಶಾಲೆಯನ್ನಾಗಿ ಮಾಡಿ ಸುಮಾರು ಮೂರು ದಶಕಗಳಾಗಿದೆ. ಆದರೆ ಈಗ ಮುಸ್ಲಿಂ ಕೋಮುವಾದಿಗಳು ಕೂಡಾ ಕರಾವಳಿಯನ್ನು ಪ್ರಯೋಗಶಾಲೆಯನ್ನಾಗಿ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತ ಕೋಮುವಾದ ಬಹುಸಂಖ್ಯಾತ ಕೋಮುವಾದಕ್ಕೆ  ಬಲನೀಡುತ್ತಿದೆ. ಇದಕ್ಕೆ ಪೂರಕವಾಗಿ ಪಿಎಫ್ಐ ಕೆಲಸ ಮಾಡುತ್ತಿದೆ,” ಎಂದು ತಿಳಿಸಿದರು.

“ಮಾಧ್ಯಮಗಳಿಗೆ ಆರ್‌ಎಸ್‌ಎಸ್‌ನ ಮತೀಯವಾದಕ್ಕೆ ಜಾತ್ಯತೀತರ ಪ್ರತಿಕ್ರಿಯೆಗಿಂತ ಮುಸ್ಲಿಂ ಮತೀಯವಾದದ ಪ್ರತಿಕ್ರಿಯೆ ಬೇಕಾಗಿದೆ. ಹಾಗಾಗಿಯೆ ಮಳಲಿ ಮಸೀದಿಯ ವಿಷಯದಲ್ಲಿ ಎಸ್‌ಡಿಪಿಐ ಮಾತನಾಡಿದಾಗ ಎಲ್ಲೋ ಮೂಲೆಯಲ್ಲಿ ಮಲಗಿದ್ದ ಪ್ರಮೋದ್ ಮುತಾಲಿಕ್ ಎದ್ದು ಪ್ರತಿಕ್ರಿಯೆ ನೀಡುತ್ತಾರೆ. ಕೋಮುವಾದಿಗಳನ್ನು ಕೇವಲ ಚುನಾವಣೆಯಿಂದ ಸೋಲಿಸಲು ಸಾಧ್ಯವಿಲ್ಲ. ಒಂದು ವೇಳೆ ಸೋತರೆ ಅವರು ದುಪ್ಪಟ್ಟು ಶಕ್ತಿಯಿಂದ ವಾಪಾಸು ಬರುತ್ತಾರೆ. ಅಲ್ಪಸಂಖ್ಯಾತ ಸಮುದಾಯಗಳು ಕೋಮುವಾದದ ವಿರುದ್ದ ಹೋರಾಟ ಮಾಡಬೇಕಾದರೆ ಜಾತ್ಯಾತೀತ ಶಕ್ತಿಗಳೊಂದಿಗೆ ಸೇರಬೇಕು,” ಎಂದರು.

ಗೋಷ್ಠಿಯನ್ನು ಸುನಿಲ್‌ ಕುಮಾರ್‌ ಬಜಾಲ್ ನಿರ್ವಹಿಸಿದರೆ ಇತ್ತೀಚೆಗೆ ಹಿಂದು ಮತಿಯವಾದಿಗಳಿಂದ ದಾಳಿಗೊಳಗಾಗಿದ್ದ ನಬಿಸಾಬ್ ಕಿಲ್ಲೇದ ಹಾಜರಿದ್ದರು.


ಗೋಷ್ಠಿ 2:

 ಕರ್ನಾಟಕದ ಮುಸ್ಲಿಮರ ಸ್ಥಿತಿಗತಿ

“ಧರ್ಮ ಎಂದಿಗೂ ಮನುಷ್ಯನ ಶೋಷಣೆಯ ಅಸ್ತ್ರವಾಗಬಾರದು, ಒಬ್ಬ ಧರ್ಮನಿರಪೇಕ್ಷ ಆಗದಿದ್ದರೆ ಇಸ್ಲಾಂ ಆಗಲು ಸಾಧ್ಯವಿಲ್ಲ. ಲಾಭಾಂಶ ಹಾಗೂ ಬಡ್ಡಿ ಹೆಚ್ಚಳ ಬಂಡವಾಳಶಾಹಿ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಕಾರ್ಲ್ ಮಾರ್ಕ್ಸ  ಹೇಳಿದ್ದಾರೆ. ಇದನ್ನೇ ಇಸ್ಲಾಂ ಕೂಡಾ ಹೇಳುತ್ತದೆ. ನಾವು ಯಾವುದೇ ವಿಚಾರವನ್ನು ಅಧ್ಯಯನದ ದೃಷ್ಟಿಯಿಂದ ನೋಡಬೇಕು. ರಾಜಕೀಯ ದೃಷ್ಟಿಯಿಂದ ನೋಡಬಾರದು,” ಎಂದು ಹಿರಿಯ ಪತ್ರಕರ್ತರು ಬಿಎಮ್ ಹನೀಫ್ ರವರು ಸಿಪಿಐಎಂ ಆಯೋಜಿಸಿದ್ದ ರಾಜ್ಯ ಮಟ್ಟದ ಮುಸ್ಲಿಂ ಸಮಾವೇಶದಲ್ಲಿ ನಡೆದ  “ಕರ್ನಾಟಕದ ಮುಸ್ಲಿಮರ ಸ್ಥಿತಿಗತಿ” ಗೋಷ್ಠಿಯಲ್ಲಿ ವಿಷಯ ಮಂಡನೆ ಮಾಡಿ ಮಾತನಾಡುತ್ತಾ ಹೇಳಿದರು. ಮುಸ್ಲಿಮರ ನೋವು ಇನ್ನೊಬ್ಬರ ನೋವು ಕೂಡಾ ಹೌದು. ಹಲವಾರು ಮಂದಿ ಮುಸ್ಲಿಮರೆಲ್ಲರೂ ಒಂದೇ ರೀತಿ, ಅವರ ಸಂಸ್ಕೃತಿ ಒಂದೇ ಅಂದು ಕೊಳ್ಳುತ್ತಾರೆ. ಆದರೆ ನೈಜವಾಗಿ ಆ ರೀತಿ ಇಲ್ಲ. ಮುಸ್ಲಿಮರಲ್ಲೂ ಹಲವಾರು ವ್ಯತ್ಯಾಸಗಳು ಇದೆ. ಮುಸ್ಲಿಮರ ಸಂಸ್ಕೃತಿ, ಆಹಾರ ಪದ್ಧತಿಯಲ್ಲಿ ವೈವಿಧ್ಯತೆ ಇದೆ. ಕರ್ನಾಟಕದಲ್ಲಿ ಹೇಗೆ ಬೇರೆ ಬೇರೆ ಸಂಸ್ಕೃತಿ ಇದೆಯೋ ಹಾಗೆಯೇ ಮುಸ್ಲಿಮರಲ್ಲಿದೆ. ಯಾವುದೆ ಧರ್ಮಕ್ಕೆ ಒಂದೇ ಸಂಸ್ಕೃತಿ ಇಲ್ಲ.  ಸಂಸ್ಕೃತಿ ಎನ್ನುವುದು ಪ್ರಾದೇಶಿಕವಾದುದು.  ಧರ್ಮ ಎಂಬುವುದು ಮನುಷ್ಯ ಹಾಗೂ ದೇವರ ನಡುವಿನ ಸಂವಾದ. ಈ ವ್ಯತ್ಯಾಸಗಳು ಗೊತ್ತಾದರೆ ಮಾತ್ರ ಸರಿಯಾದ ಉತ್ತರ ನೀಡಲು ಸಾಧ್ಯವಾಗುತ್ತದೆ. ಸಂಸ್ಕೃತಿ ಬದಲಾದಂತೆ ಮನುಷ್ಯ, ಮನುಷ್ಯನ ನಡುವೆ  ಬಿರುಕು ಸೃಷ್ಟಿಯಾಗುತ್ತದೆ,” ಎಂದು ತಿಳಿಸಿದರು.

“ಕರ್ನಾಟಕದಲ್ಲಿ ಧರ್ಮ ರಕ್ಷಣೆ ಮಾಡುವ ಕೆಲಸವನ್ನು ರಾಜಕಾರಣಿಗಳು ಮಾಡುತ್ತಿದ್ದಾರೆ. ತಾವು ನಿಜವಾಗಿ ಮಾಡಬೇಕಾದ ಕೆಲಸವನ್ನು ಮರೆತಿದ್ದಾರೆ. ಮಠಾಧೀಶರು ರಾಜಕೀಯ ಮಾತನಾಡುತ್ತಿದ್ದಾರೆ. ಪರಿಸ್ಥಿತಿಯು ಉಲ್ಟಾ ಆಗಿದೆ. ಇದು ಸಹಜ ಎಂಬಂತೆ ಬಿಂಬಿತವಾಗುತ್ತಿದೆ. ನೀವು ನಿಮ್ಮ ಸಾಮಾಜಿಕ ಪರಿಸ್ಥಿತಿಯ ಬಗ್ಗೆ ಮಾತನಾಡಲು ಸಾಧ್ಯವಾಗದಂತಹ ಸ್ಥಿತಿಯನ್ನು ಸರ್ಕಾರ ತಂದಿದೆ. ರಾಜ್ಯದಲ್ಲಿ ಕಾನೂನು ಸಂಪೂರ್ಣವಾಗಿ ಹದಗೆಟ್ಟಿದೆ, ದರಿದ್ರವಾಗಿದೆ,” ಎಂದು ಹೇಳಿದರು.

“ನಾವು ಈವರೆಗೂ ಬಿಜೆಪಿ, ಆರ್‌ಎಸ್‌ಎಸ್ ಟಿಪ್ಪು ಸುಲ್ತಾನನ ವಿರೋಧಿಗಳು ಎಂದು ತಿಳಿದಿದ್ದೆವು. ಆದರೆ ಅವರು ನಾರಾಯಣ ಗುರು, ಕುವೆಂಪು, ಬಸವಣ್ಣನ ವಿರೋಧಿಗಳು ಎಂದು ಪುಸ್ತಕ ಪರಿಷ್ಕರಣೆ ಮಾಡಿದಾಗ ಬಹಿರಂಗವಾಗಿದೆ. ನಿಜಾಂಶ ಈಗ ಹೊರಬರುತ್ತಿದೆ. ಆದರೆ ನಾವು ಈ ಸಂದರ್ಭದಲ್ಲಿ ಎಡವಬಾರದು. ಕೆಟ್ಟ ಮಾತಿಗೆ ಕೆಟ್ಟ ಮಾತು ಉತ್ತರವಲ್ಲ. ಶಿರವಸ್ತ್ರ (ಸ್ಕಾರ್ಪ್) ಧರಿಸದಿದ್ದರೆ ಧರ್ಮವೇನು ಕೊನೆಯಾಗಲ್ಲ. ಹಾಗೆಯೇ ಶಿರವಸ್ತ್ರ ಧರಿಸಿದರೆ ಶಿಕ್ಷಣಕ್ಕೆ ಏನು ತೊಂದರೆಯಾಗಲ್ಲ,” ಎಂದು ಅಭಿಪ್ರಾಯಪಟ್ಟರು.

ಸಾಚಾರ್ ವರದಿಯಲ್ಲಿ ಎಲ್ಲಾ ರಾಜ್ಯಗಳು ಅಲ್ಪಸಂಖ್ಯಾತ ಆಯೋಗವನ್ನು ರದ್ದು ಮಾಡಬೇಕು ಎಂದು ಹೇಳಿದೆ. ಈ ಸಮಿತಿಯು ಮುಸ್ಲಿಮರ ಸಾಮಾಜಿಕ, ಶೈಕ್ಷಣಿಕ ಸ್ಥಿತಿಯ ಬಗ್ಗೆ ಸಮೀಕ್ಷೆ ನಡೆಸಿದ್ದು ಈ ವೇಳೆ ಮುಸ್ಲಿಮರ ಸ್ಥಿತಿ ದಲಿತರಿಗಿಂತ ಕೆಳಗಿದೆ ಎಂದು ಬಹಿರಂಗವಾಗಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಮುಸ್ಲಿಂ ಆಯೋಗವನ್ನು ರದ್ದು ಮಾಡಿ, ಸಮಾನ ಪ್ರಾತಿನಿಧ್ಯದ ಆಯೋಗ ರಚನೆ ಆಗಬೇಕು ಎಂದು ಈ ವರದಿ ಹೇಳುತ್ತದೆ,” ಎಂದರು.

“ಕನ್ನಡದ ಸಂಸ್ಕೃತಿಯೆಂದರೆ ಬಸವಣ್ಣನ, ಶಿಶುನಾಳ ಷರೀಫರ,  ರೆವರೆಂಡ್ ಎಫ್ ಕಿಟ್ಟೆಲ್ ರ ಸಂಸ್ಕೃತಿ. ಕುವೆಂಪು ಕಟ್ಟಿದ ಸಂಸ್ಕೃತಿ, ಸಿನಿಮಾ ಮೂಲಕ ಕಟ್ಟಿದ ಸಂಸ್ಕೃತಿ, ರಾಜಕುಮಾರ್ ಕಟ್ಟಿದ ಸಂಸ್ಕೃತಿ,” ಎಂದು ಹೇಳಿದ ಬಿಎಮ್ ಹನೀಫ್, “ಕಮ್ಯೂನಿಸ್ಟ್ ಪಕ್ಷಗಳು ಕೊಮುವಾದದ ವಿರುದ್ಧ ಸ್ಪಷ್ಟ ಸೈದ್ಧಾಂತಿಕ ಹೋರಾಟ ಮಾಡುತ್ತಿವೆ. ಮುಸ್ಲಿಮರನ್ನು ಪ್ರತ್ಯೇಕವಾಗಿ ನೋಡದೆ ಅವರು ದೇಶದ ಆರ್ಥಿಕತೆಗೆ ನೀಡಿದ ಕೊಡುಗೆಗಳನ್ನು ನಾವು ನೋಡಬೇಕಾಗಿದೆ. ಜೀತಾದಾರಿಕೆಗೂ ಒಂದು ಇತಿಮಿತಿ ಇದೆ. ರಾಜಕೀಯ ಜೀತಾದಾರಿಕೆಯನ್ನು ಬಿಡಬೇಕು,” ಎಂದು ಹೇಳಿದರು.

ಗೋಷ್ಠಿಯಲ್ಲಿ ವಿಷಯ ಮಂಡಿಸುತ್ತಾ ಮಾತನಾಡಿದ ಚಿಂತಕರು, ಬರಹಗಾರರಾದ ಬಿ. ಪೀರ್ ಭಾಷಾ “ಪ್ರಭುತ್ವ ಬಹಳ ಸ್ಪಷ್ಟವಾಗಿ ಫ್ಯಾಸಿಸ್ಟ್ ಆಗಿದೆ. ಆದರೆ ಅದು ಮುಸಲೋನಿ ಮತ್ತು ಹಿಟ್ಲರ್ ಮಾಡಿದಂತೆ ಅಲ್ಲ. ನಾವು ಈಗಾಗಲೇ ಭಾರತೀಯ ಫ್ಯಾಸಿಸಂ ಗೆ ಒಳಗಾಗಿದ್ದೇವೆ. ಇದು ಪ್ರಯೋಗಶಾಲೆ ಮಾತ್ರವಲ್ಲ, ಇದು ಫ್ಯಾಸಿಸಂನ ಮುನ್ನಡೆಯಾಗಿದೆ. ಗೋಳ್ವಾಲಕರ್ ಬಹಳ ಸ್ಪಷ್ಟವಾಗಿ ಕಮ್ಯುನಿಷ್ಟರು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಈ ದೇಶದ ಒಳಗಿನ ಶತ್ರುಗಳು ಎಂದು ಹೇಳಿದ್ದಾರೆ. ಹೀಗಾಗಿ ಈ ಮೂವರೂ ಒಗ್ಗಟ್ಟಾಗಬೇಕು ಎಂಬುವುದು ನನ್ನ ಅನಿಸಿಕೆ,” ಎಂದರು.

“ಭಾರತದಲ್ಲಿ ಧಮನ ಎನ್ನುವುದು ವರ್ಗದ ಆಧಾರದಲ್ಲಿ ಮಾತ್ರವಲ್ಲ. ಜೊತೆಗೆ ಜಾತಿಯ ಆಧಾರದಲ್ಲೂ ಶೋಷಣೆ ನಡೆಯುತ್ತಿದೆ. ಭಾರತದ ಮುಸ್ಲಿಮರು ನೇರವಾಗಿ ಅರಬ್ ರಾಷ್ಟ್ರದಿಂದ ಬಂದವರು ಅಲ್ಲ. ಅವರು ಕೂಡಾ ಇಲ್ಲಿನ ಒಂದು ಕಾಲದ ಶೋಷಿತ ಸಮುದಾಯದವರೇ ಆಗಿದ್ದಾರೆ. ಭಾರತೀಯ ಮುಸ್ಲಿಮರು ಇಲ್ಲಿನ ಶೂದ್ರ ಸಂಸ್ಕೃತಿಯೊಂದಿಗೆ ಬೆಸೆದಿದ್ದಾರೆ.


ಮುಸ್ಲಿಮರು ಮನುವಾದ ವಿರುದ್ದ ಸಿಡಿದು ಬಂದವರಾಗಿದ್ದಾರೆ. ಆದ್ದರಿಂದಲೇ ಅವರನ್ನು ಕ್ರೂರವಾಗಿ ದಮನಿಸಲಾಗುತ್ತಿದೆ. ದಲಿತರನ್ನು ಸಾಂಸ್ಕೃತಿಕ ಅಸ್ತ್ರದ ಮೂಲಕ ನಿಯಂತ್ರಿಸಲಾಗುತ್ತಿದೆ. ಈ ಎರಡು ಸಮುದಾಯಗಳೆ ಭಾರತದ ಭವಿಷ್ಯವನ್ನು ನಿರ್ಮಾಣ ಮಾಡಬಹುದಾಗಿದೆ. ಹಿಂದೂ-ವರ್ಸಸ್ ಮುಸ್ಲಿಂ ಎಂಬ ದೃವೀಕರಣ ಮಾಡಲಾಗುತ್ತಿದೆ. ಹಿಂದೂ ಮೂಲಭೂತವಾದಕ್ಕೆ ಬೇಕಾಗಿದ್ದು ಮುಸ್ಲಿಂ ಮೂಲಭೂತವೇ  ಎಂಬ ವಿಚಾರದಲ್ಲಿ ಚಿಂತನೆ ನಡೆಸಬೇಕಾಗಿದೆ, ಎಚ್ಚರವಾಗಿರಬೇಕಾಗಿದೆ. ಮುಸ್ಲಿಮರು ಮತೀಯವಾದಿಗಳು ಆಗಬಾರದು. ಜನಚಳವಳಿ ಕೂಡಾ ಮುಸ್ಲಿಮರ ಜೊತೆಯಾಗಬೇಕು. ಮುಸ್ಲಿಮರು ಪ್ರಜಾಪ್ರಭುತ್ವದೆಡೆ ಹೆಜ್ಜೆ ಇರಿಸಬೇಕು ಎಂದರು.

“ಕೂಡಿಬಾಳುವುದು ನಮ್ಮ ನಾಡಿನಲ್ಲಿ ಇರುವ ಪರಂಪರೆ. ಹಿಂದೂ ಮುಸ್ಲಿಂ ನಾವು ಒಂದು ಕೂಡಿ ಬದುಕುತ್ತೇವೆ, ಅದರಿಂದಾಗಿ ಅವರ ಗಂಟು ಏನು ಹೋಗುತ್ತದೆ. ನಮ್ಮ ಭಾವಕೈತೆಯನ್ನು ಅವರು ಅಳಿಸಲು ಹೇಗೆ ಸಾಧ್ಯ,” ಎಂದ ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ ಸಾಹಿತಿಗಳೂ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕೆ. ನೀಲಾರವರು, “ನಿರುದ್ಯೋಗ, ಬಡತನ, ಬೆಲೆ ಏರಿಕೆ, ಕಳ್ಳಕೂಟ ಸೃಷ್ಟಿ ಮಾಡುತ್ತಾರೆ. ಇವೆಲ್ಲವನ್ನು ಮರೆ ಮಾಡಲು ಈಗ ಗಲಾಟೆಗಳನ್ನು ಸೃಷ್ಟಿ ಮಾಡುತ್ತಾರೆ. ಜಾಗತಿಕ ಮಟ್ಟದಲ್ಲಿ ಮಾಡಿದ ಷಡ್ಯಂತ್ರದಿಂದಾಗಿ ದಲಿತರು ಮತ್ತು ಮುಸ್ಲಿಮರು ಕಮ್ಯುನಿಷ್ಟರಿಂದ ದೂರ ಹೋಗುವಂತಾಯಿತು. ಪ್ರತಿ ಬಾರಿ ಕೋಮುವಾದಿಗಳು ಹೊಸ ಹೊಸ ಆಟ ಹೂಡುತ್ತಾರೆ. ನಾವೆಲ್ಲರೂ ಕೂಡಿ ಬದುಕಿದವರು. ಈ ಬಗ್ಗೆ ಬರೆದ ಪಾಠವನ್ನು ಪಠ್ಯಪುಸ್ತಕದಿಂದ ಕಿತ್ತು ಹಾಕಿದ್ದಾರೆ. ಎಷ್ಟು ವಿಭಜನೆ ಆಗಿದೆ ಎಂದರೆ ಭಾಷೆಯ ಆಧಾರದಲ್ಲಿ ನಮ್ಮನ್ನು ಒಡೆಯಲಾಗಿದೆ. ಹೆಣದ ಮೇಲೆ ರಾಜಕೀಯ ಮಾಡುವ ಪಕ್ಷಗಳು ಇವೆ. ನಾವು ಅದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಮನುಸ್ಮೃತಿಯನ್ನು ಜಾರಿಗೆ ತರಲು ಮುಂದಾಗಿದ್ದಾರೆ. ಜನತೆಯ ಹೆಣದ ಮೇಲೆ ರಾಜಕೀಯ ಮಾಡುವಂತಹ ಕ್ರೂರ ರಾಜಕೀಯ ಮಾಡುವವರನ್ನು ನಾವು ನಿರಾಕರಿಸಬೇಕು,” ಎಂದು ತಿಳಿಸಿದರು.

ಬಹುಸಂಖ್ಯಾತ ಕೋಮುವಾದವನ್ನು ತಡೆಯಲು, ಅಲ್ಪಸಂಖ್ಯಾತ ಕೋಮುವಾದಕ್ಕೆ ನೀರು ಎರೆಯುವುದು ನಾವು ಈಗ ನೋಡುತ್ತಿದ್ದೇವೆ. ಆದರೆ ಅದು ಉತ್ತಮ ಬೆಳವಣಿಗೆಯಲ್ಲ. ಕಮ್ಯುನಿಷ್ಟರು ನಾಸ್ತಿಕರು ಎಂದು ಸುಳ್ಳು ಹರಡುತ್ತಾರೆ. ಧರ್ಮ ಅವರವರ ಆಯ್ಕೆ, ಕಮ್ಯೂನಿಸ್ಟ್ ಪಕ್ಷವು ನೀವ್ಯಾಕೆ ದೇವರನ್ನು ನಂಬಿದ್ದೀರಿ ಎಂದು ಕೇಳುವುದಿಲ್ಲ. ಎನ್‌ಪಿಆರ್ ಮತ್ತು ಎನ್‌ಆರ್‌ಸಿ ವಿರೊಧಿಸಿದ ರೀತಿ ನಾವು ಸಾಚಾರ್ ವರದಿಯನ್ನು ಕೇಳಬೇಕು. ಮುಸ್ಲಿಮರ ಪ್ರಶ್ನೆ ಎಂದು ಏನು ತರುತ್ತಿದ್ದಾರೋ ಅದು ಮುಸ್ಲಿಮರ ಸಮಸ್ಯೆ ಅಲ್ಲ. ಅದು ದೇಶದ ಪ್ರಶ್ನೆ. ಲಕ್ಷ ಲಕ್ಷ ಜನ ಚಳವಳಿಯೊಂದಿಗೆ ಈ ಹಿಟ್ಲರ್ ವಾದಿಗಳನ್ನು ಹಿಮ್ಮೆಟ್ಟಿಸಲು ಸಾಧ್ಯವಾಗಬೇಕು ಎಂದರು. ಗೋಷ್ಠಿಯನ್ನು ಡಾ.ಜೀವನ್‌ರಾಜ್ ಕುತ್ತಾರ್ ನಿರ್ವಹಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ