ರೈತ ಮುಷ್ಕರದ ಪ್ರಭಾವವೂ ಆಳುವವರ ಕುತಂತ್ರಗಳೂ - Mahanayaka
11:10 PM Wednesday 11 - December 2024

ರೈತ ಮುಷ್ಕರದ ಪ್ರಭಾವವೂ ಆಳುವವರ ಕುತಂತ್ರಗಳೂ

former protest
04/06/2022

  • ಹಿಂದುತ್ವ ರಾಜಕಾರಣ ಮತ್ತು ಕಾರ್ಪೋರೇಟ್ ಮಾರುಕಟ್ಟೆಯ ಆರ್ಥಿಕತೆ ಒಂದಾಗಿಯೇ ಸಾಗುತ್ತದೆ.

ದೆಹಲಿಯ ಗಡಿಗಳಲ್ಲಿ ಒಂದು ವರ್ಷದ ಕಾಲ ನಡೆದ ರೈತರ ಮುಷ್ಕರ ಭಾರತದ ಆಳುವ ವರ್ಗಗಳಲ್ಲಿ ಸಂಚಲನ ಉಂಟುಮಾಡಿದಷ್ಟೇ ಆತಂಕಗಳನ್ನೂ ಸೃಷ್ಟಿಸಿತ್ತು. ಮೂರು ಕರಾಳ ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕೆಂಬ ಆಗ್ರಹದೊಂದಿಗೆ ದೇಶದ ಸಮಸ್ತ ರೈತಾಪಿಯನ್ನು ಪ್ರತಿನಿಧಿಸುವ 450ಕ್ಕೂ ಹೆಚ್ಚು ರೈತ ಸಂಘಟನೆಗಳು ನಡೆಸಿದ ಚಾರಿತ್ರಿಕ ಮುಷ್ಕರ ಅಂತ್ಯವಾಗಿದ್ದು, ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆದ ನಂತರವೇ ಎನ್ನುವುದು, ರೈತ ಸಮುದಾಯದ ಸಂಘಟನಾತ್ಮಕ ಶಕ್ತಿಯ ಸಂಕೇತ. ಆದರೆ ಈ ಕೃಷಿ ಕಾಯ್ದೆಗಳು ಈಗಾಗಲೇ ಜಾರಿಯಲ್ಲಿರುವ ಹಲವು ರಾಜ್ಯಗಳು, ಕರ್ನಾಟಕವನ್ನೂ ಸೇರಿದಂತೆ, ಹೊಸ ಕಾಯ್ದೆಯ ಅನುಸಾರವೇ ತಮ್ಮ ನೀತಿಗಳನ್ನು ರೂಪಿಸುತ್ತಿವೆ. ಕರ್ನಾಟಕದಲ್ಲಿ ಈ ಕಾಯ್ದೆಗಳನ್ನು ಮತ್ತು ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯುವಂತೆ ಪ್ರಬಲ ಹೋರಾಟಗಳು ರೈತರಿಂದಾಗಲೀ ಇತರ ಜನಾಂದೋಲನಗಳಿಂದಾಗಲೀ ರೂಪುಗೊಳ್ಳದಿರುವುದರಿಂದ ಈ ಪ್ರಶ್ನೆ ಇನ್ನೂ ಜೀವಂತವಾಗಿದೆ.

ಕೃಷಿ ಕಾಯ್ದೆಯ ವಿರುದ್ಧ ನಡೆದ ಒಂದು ವರ್ಷದ ಮುಷ್ಕರದ ಸಂದರ್ಭದಲ್ಲೂ ರೈತ ಸಮುದಾಯದ ಒಗ್ಗಟ್ಟನ್ನು ಭಗ್ನಗೊಳಿಸುವ ಹಲವು ಪ್ರಯತ್ನಗಳು ನಡೆದಿದ್ದವು. ಆದರೆ ಆ ಹೋರಾಟ ರಾಜಕೀಯ ಸ್ವರೂಪದ ಸಂಘರ್ಷವಾಗಿರಲಿಲ್ಲ. ಭಾರತದ ರೈತಾಪಿ ಸಮುದಾಯ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳು ಮತ್ತು ಬಿಕ್ಕಟ್ಟುಗಳ ನಡುವೆ ತಮ್ಮ ಮೂಲ ಅಸ್ತಿತ್ವವನ್ನೇ ಬುಡಮೇಲು ಮಾಡುವಂತಹ ಕಾರ್ಪೋರೇಟ್ ಪ್ರೇರಿತ ಕೃಷಿ ಕಾಯ್ದೆಯನ್ನು ರೈತರು ತಮ್ಮ ಸಾಂಘಿಕ, ಸಾಂಸ್ಥಿಕ ಮತ್ತು ರಾಜಕೀಯ ಅಸ್ಮಿತೆಗಳನ್ನು ಮರೆತು ವಿರೋಧಿಸಿದ್ದರು. ಹಾಗಾಗಿಯೇ ಈ ಮುಷ್ಕರದ ಬಗ್ಗೆ ಎಡಪಂಥೀಯ, ನಗರ ನಕ್ಸಲ್, ದೇಶದ್ರೋಹಿ, ಪಾಕಿಸ್ತಾನಿ, ಖಲಿಸ್ತಾನಿ, ತುಕಡೆತುಕಡೆ ಗ್ಯಾಂಗ್ ಇತ್ಯಾದಿ ಯಾವುದೇ ಟೀಕಾಸ್ತ್ರಗಳೂ ಫಲಕಾರಿಯಾಗಲಿಲ್ಲ. ಸ್ವತಂತ್ರ ಭಾರತದ ಇತಿಹಾಸದ ಒಂದು ಚಾರಿತ್ರಿಕ ಹೋರಾಟವಾಗಿ ರೈತ ಮುಷ್ಕರ ಯಶಸ್ವಿಯಾಗಿತ್ತು.

ಹಾಗೆಂದ ಮಾತ್ರಕ್ಕೆ ಈ ಚಳುವಳಿಯನ್ನು ಭಂಜಿಸುವ, ಭಗ್ನಗೊಳಿಸುವ ಅಥವಾ ದಿಕ್ಕು ತಪ್ಪಿಸುವ ತಂತ್ರಗಾರಿಕೆಗಳಿಗೇನೂ ಕಡಿಮೆ ಇರಲಿಲ್ಲ. ಮುಷ್ಕರ ಪರಾಕಾಷ್ಠೆ ತಲುಪಿದ್ದ ಸಂದರ್ಭದಲ್ಲೇ ರೈತರ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸುವ ಪ್ರಯತ್ನಗಳು ನಡೆದಿದ್ದವು ಮುಷ್ಕರದ ಸಂದರ್ಭದಲ್ಲಿ ಗಲಭೆ ಸೃಷ್ಟಿಸಿ ರೈತ ನಾಯಕರ ಮೇಲೆ ಗೂಬೆ ಕೂರಿಸುವ ಪ್ರಯತ್ನಗಳು ನಡೆದವು. ಕಳೆದ ವರ್ಷದ ಗಣರಾಜ್ಯೋತ್ಸವ ಸಂದರ್ಭದಲ್ಲಿ ಕೆಂಪುಕೋಟೆಯ ಸುತ್ತ ನಡೆದ ಬೆಳವಣಿಗೆಗಳು ಈ ಪ್ರಯತ್ನಗಳಲ್ಲೊಂದು. ಪಶ್ಚಿಮ ಉತ್ತರಪ್ರದೇಶದಲ್ಲಿ ರೈತ ಮುಷ್ಕರಕ್ಕೆ ಹೆಚ್ಚಿನ ಬೆಂಬಲ ವ್ಯಕ್ತವಾಗತೊಡಗಿದಂತೆಲ್ಲಾ ಕೇಂದ್ರ ಸರ್ಕಾರ ಚಿಂತೆಗೀಡಾಗಿದ್ದು ವಾಸ್ತವ. ಕ್ರಮೇಣ ರೈತ ಮುಷ್ಕರವು ದೇಶವ್ಯಾಪಿ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದಂತೆಯೇ ರಾಕೇಶ್ ಟಿಕಾಯತ್ ಅವರ ಒಂದೆರಡು ಕಂಬನಿ ರೈತಾಪಿ ಸಮುದಾಯದ ನಡುವೆ ಸಂಚಲನ ಮೂಡಿಸಿತ್ತು. ಮುಷ್ಕರ ಮತ್ತಷ್ಟು ತೀವ್ರತೆಯನ್ನು ಪಡೆದುಕೊಂಡಿದ್ದು ಈ ಹಂತದಲ್ಲೇ. ಈ ಬೆಳವಣಿಗೆಯ ನಂತರವೂ ಲಖೀಂಪುರ ಘಟನೆಯ ಮೂಲಕ ಮುಷ್ಕರವನ್ನು ಭಂಗಗೊಳಿಸುವ ಪ್ರಯತ್ನಗಳು ನಡೆದಿದ್ದನ್ನು ಗಮನಿಸಬೇಕು.

ಒಟ್ಟಾರೆಯಾಗಿ ನೋಡಿದರೆ, ಕೇಂದ್ರ ಬಿಜೆಪಿ ಸರ್ಕಾರ ತನ್ನ ಮಹತ್ವಾಕಾಂಕ್ಷೆಯ ಕೃಷಿ ಕಾಯ್ದೆಗಳನ್ನು ಸಂಪೂರ್ಣವಾಗಿ ಕೈಬಿಡುವ ಇಚ್ಚೆ ಹೊಂದಿಲ್ಲದಿರುವುದು ಸ್ಪಷ್ಟವಾಗುತ್ತದೆ. ರಾಜಕೀಯ ನೆಲೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಎಸ್ಪಿ ಒಳಗೊಂಡಂತೆ ಯಾವುದೇ ವಿರೋಧ ಪಕ್ಷಗಳೂ ಈ ಕಾಯ್ದೆಗಳ ವಿರುದ್ಧ ಪ್ರಬಲ ಜನಾಂದೋಲನ ರೂಪಿಸುವ ನಿಟ್ಟಿನಲ್ಲಿ ಆಲೋಚನೆಯನ್ನೂ ಮಾಡುತ್ತಿಲ್ಲ. ಮುಂದಿನ ಎರಡು ವರ್ಷಗಳ ತಮ್ಮ ಅಧಿಕಾರಾವಧಿಯಲ್ಲಿ ನರೇಂದ್ರ ಮೋದಿ ಸರ್ಕಾರ ಈಗ ರದ್ದಾಗಿರುವ ಕಾಯ್ದೆಗಳಲ್ಲೇ ಕೆಲವು ತಿದ್ದುಪಡಿಗಳನ್ನು ಮಾಡಿ, ಮೂಲ ಸ್ವರೂಪವನ್ನು ಯಥಾವತ್ತಾಗಿ ಉಳಿಸಿಕೊಂಡೇ ಮತ್ತೊಮ್ಮೆ ಜಾರಿಗೊಳಿಸುವ ಸಾಧ್ಯತೆಗಳಿವೆ. ಮತ್ತೊಮ್ಮೆ ಜಾರಿಯಾದರೂ ವಿರೋಧ ವ್ಯಕ್ತವಾಗುವುದು ರೈತ ಸಂಘಟನೆಗಳಿಂದಲೇ ಹೊರತು, ರಾಜಕೀಯ ಪಕ್ಷಗಳಿಂದಲ್ಲ ಎನ್ನುವ ವಾಸ್ತವವನ್ನೂ ಮೋದಿ ಸರ್ಕಾರ ಅರಿತಿದೆ.

ಹಾಗಾಗಿಯೇ ರೈತ ಸಮುದಾಯದಲ್ಲಿ ಚಾರಿತ್ರಿಕ ಮುಷ್ಕರದ ಸಂದರ್ಭದಲ್ಲಿ ಕಂಡುಬಂದಿದ್ದ ಐಕಮತ್ಯವನ್ನು ಭೇದಿಸಿ, ರೈತ ಸಂಘಟನೆಗಳ ನಡುವಿನ ಸಮನ್ವಯದ ನೆಲೆಗಳನ್ನು ಧ್ವಂಸಗೊಳಿಸಲು ಎಲ್ಲ ಪ್ರಯತ್ನಗಳನ್ನೂ ಮಾಡಲಾಗುತ್ತದೆ. ಈಗಾಗಲೇ ರೈತ ಮುಷ್ಕರದ ಮುಂದಾಳತ್ವ ವಹಿಸಿದ ಸಂಯುಕ್ತ ಕಿಸಾನ್ ಮೋರ್ಚಾದಲ್ಲಿ ಒಡಕು ಮೂಡಿದ್ದು ಒಂದು ಬಣ ಪ್ರತ್ಯೇಕ ಗುಂಪು ರಚಿಸಿದೆ. ಉತ್ತರಪ್ರದೇಶದ ಚುನಾವಣೆಗಳಲ್ಲಿ ರೈತ ಮುಷ್ಕರದ ಧ್ವನಿಯಾಗಿದ್ ಪಶ್ಚಿಮ ಉತ್ತರಪ್ರದೇಶದ ರೈತರು ಬಿಜೆಪಿ ಪರವಾಗಿಯೇ ಮತ ನೀಡಿದ್ದು, ಇಲ್ಲಿ ರೈತರ ಸಮಸ್ಯೆಗಿಂತಲೂ ಜಾತಿ ಸಮೀಕರಣವೇ ಪ್ರಧಾನ ಪಾತ್ರ ವಹಿಸಿದೆ. ರೈತ ಮುಷ್ಕರದಿಂದ ತಮ್ಮ ರಾಜಕೀಯ ಪ್ರಾಬಲ್ಯಕ್ಕೆ ಚ್ಯುತಿ ಉಂಟಾಗುವುದಿಲ್ಲ ಎಂಬ ಭರವಸೆಯೂ ಬಿಜೆಪಿಯಲ್ಲಿ ಮೂಡಿದೆ. ಪಂಜಾಬ್ ಚುನಾವಣೆಗಳಲ್ಲೂ ಸಹ ರೈತಾಪಿ ಸಮುದಾಯವು ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸುವ ಮೂಲಕ, ಕೃಷಿ ಕಾಯ್ದೆಗಳ ಪ್ರಭಾವವನ್ನು ಅಲ್ಲಗಳೆದಿದೆ. ಆಮ್ ಆದ್ಮಿ ಪಕ್ಷ ಈವರೆಗೂ ಕೇಂದ್ರದ ಕೃಷಿ ಕಾಯ್ದೆಯ ವಿರುದ್ಧ ತಾತ್ವಿಕವಾಗಿ ಅಥವಾ ರಾಜಕೀಯವಾಗಿ ಪ್ರಬಲ ವಿರೋಧ ವ್ಯಕ್ತಪಡಿಸದಿರುವುದನ್ನೂ ಗಮನಿಸಬೇಕಿದೆ.

ಈ ಹಿನ್ನೆಲೆಯಲ್ಲಿ ನೋಡಿದಾಗ, ರೈತ ಸಮುದಾಯ ದೆಹಲಿಯಲ್ಲಿ ಒಂದು ವರ್ಷದ ಕಾಲ ನಡೆದಂತಹ ಸುದೀರ್ಘ ಮುಷ್ಕರವನ್ನು ಮತ್ತೊಮ್ಮೆ ಹಮ್ಮಿಕೊಳ್ಳಲು ಸಾಧ್ಯವೇ ಎನ್ನುವ ಪ್ರಶ್ನೆ ಸಹಜವಾಗಿಯೇ ಕಾಡುತ್ತದೆ. ಈಗಾಗಲೇ ರೈತ ಸಂಘಟನೆಗಳ ನಡುವಿನ ಒಳಬಿರುಕುಗಳು ಕಾಣಿಸಿಕೊಳ್ಳುತ್ತಿದ್ದು ರಾಕೇಶ್ ಟಿಕಾಯತ್ ಅವರ ವಿರುದ್ಧವೂ ಪ್ರತಿರೋಧ ರೈತ ಸಮುದಾಯದ ನಡುವೆಯೇ ಕೇಳಿಬರುತ್ತಿದೆ. ಈ ವಿಘಟನೆಯ ನೆಲೆಗಳನ್ನು ಭದ್ರಪಡಿಸುವ ನಿಟ್ಟಿನಲ್ಲಿ ಬಿಜೆಪಿ ಮುಂದಿನ ದಿನಗಳಲ್ಲಿ ಕಾರ್ಯೋನ್ಮುಖವಾಗುತ್ತದೆ. ಕರ್ನಾಟಕದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಅವರ ಭ್ರಷ್ಟಾಚಾರದ ಹಗರಣ ರೈತ ಸಂಘಟನೆಗಳ ಸಾರ್ವಜನಿಕ ವಿಶ್ವಾಸಾರ್ಹತೆಗೂ ಕುಂದು ತಂದಿರುವುದು ಸ್ಪಷ್ಟ. ಕೋಡಿಹಳ್ಳಿ ಅವರನ್ನು ರೈತ ಸಂಘದ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಲಾಗಿದ್ದರೂ, ಕರ್ನಾಟಕದಲ್ಲೇ ರೈತ ಸಂಘಟನೆಗಳ ನಡುವೆ ಐಕಮತ್ಯವಾಗಲೀ, ಐಕ್ಯತೆಯಾಗಲೀ ಮೂಡಲು ಸಾಧ್ಯವಾಗಿಲ್ಲ. ಕೋಡಿಹಳ್ಳಿ ಪ್ರಕರಣದ ನಂತರ ಈ ವಿಘಟನೆ ಮತ್ತಷ್ಟು ಜಟಿಲವಾಗುವ ಸಾಧ್ಯತೆಗಳಿವೆ.

ಈ ಸಂದಿಗ್ಧತೆಯ ನಡುವೆಯೇ ರೈತ ನಾಯಕ ರಾಕೇಶ್ ಟಿಕಾಯತ್ ಬೆಂಗಳೂರಿಗೆ ಆಗಮಿಸಿ, ಕೋಡಿಹಳ್ಳಿ ಹಗರಣದ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ಮೇಲೆ ಉನ್ಮತ್ತ ವ್ಯಕ್ತಿಯೊಬ್ಬನಿಂದ ಹಲ್ಲೆ ನಡೆದಿರುವುದು ಅಕ್ಷಮ್ಯ ಎಂದು ದೂಷಿಸುವುದು ಕ್ಲೀಷೆ ಎನಿಸುತ್ತದೆ. ಇದು ಇಡೀ ರಾಜ್ಯವೇ ತಲೆತಗ್ಗಿಸುವಂತಹ ವಿಚಾರ. ರಾಜ್ಯ ಗೃಹಸಚಿವರು ಈ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ಹಲ್ಲೆ ಮಾಡಿದ ವ್ಯಕ್ತಿಗಳನ್ನು ಬಂಧಿಸಿ ಕ್ರಮ ಕೈಗೊಂಡಿದ್ದಾರೆ. ಆದರೆ ಈ ಘಟನೆಯನ್ನು ಪ್ರತ್ಯೇಕಿಸಿ ನೋಡುವುದಕ್ಕಿಂತಲೂ ರಾಜ್ಯದಲ್ಲೆಡೆ ವಿವಿಧ ಸಂದರ್ಭಗಳಲ್ಲಿ ನಡೆಯುತ್ತಿರುವ ಗುಂಪು ಹಲ್ಲೆಗಳನ್ನು, ದಾಂಧಲೆಗಳನ್ನು ಗಮನಿಸಿದಾಗ ರಾಜ್ಯದಲ್ಲಿ ಸರ್ಕಾರೇತರ ಗುಂಪುಗಳು, ರಾಜಕೀಯ ಪ್ರೇರಿತವಾಗಿ, ಸೈದ್ಧಾಂತಿಕ ಉನ್ಮಾದಕ್ಕೊಳಗಾಗಿ, ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸುತ್ತಿರುವುದನ್ನೂ ಸೂಕ್ಷ್ಮವಾಗಿ ಗಮನಿಸಬೇಕಿದೆ.

ರಾಕೇಶ್ ಟಿಕಾಯತ್ ಅವರಿಗೆ ಮಸಿ ಬಳಿದು ಹಲ್ಲೆ ನಡೆಸಿದ ವ್ಯಕ್ತಿಗಳು “ ಮೋದಿ ಮೋದಿ ” ಎಂದು ಕೂಗಿರುವುದು ಈ ರಾಜಕೀಯ ಉನ್ಮಾದದ ಸಂಕೇತವೇ ಆಗಿದೆ. ಈ ಹಲ್ಲೆಯ ಪ್ರೇರಣೆ ಒಂದು ರಾಜಕೀಯ ಪಕ್ಷ ಎನ್ನುವುದಕ್ಕಿಂತಲೂ, ರಾಜಕೀಯ ಪಕ್ಷಗಳು ಜನಸಾಮಾನ್ಯರ ನಡುವೆ ಸೃಷ್ಟಿಸುವ ಉನ್ಮಾದ ಮತ್ತು ಅದರಿಂದ ಉದ್ಭವಿಸುವಂತಹ ಅಸಹಿಷ್ಣುತೆಗಳು ಕಾರಣ ಎನ್ನಬಹುದು. ಇದೇ ರೀತಿಯ ರಾಜಕೀಯ ಉನ್ಮಾದವೇ ಲಖೀಂಪುರ ಖೇರಿ ಹತ್ಯೆಗಳಿಗೂ ಕಾರಣವಾಗಿದೆ. ಅಂದರೆ, ತಮ್ಮ ರಾಜಕೀಯ ನಾಯಕರನ್ನು ಅಥವಾ ತಮ್ಮ ಸರ್ಕಾರದ ಆಡಳಿತ ನೀತಿಗಳನ್ನು ವಿರೋಧಿಸುವ ದನಿಗಳನ್ನು ವಿಭಿನ್ನ ನೆಲೆಗಳಲ್ಲಿ ದಮನಿಸುವ ಒಂದು ರಾಜಕೀಯ ತಂತ್ರಗಾರಿಕೆಯನ್ನು ಇಲ್ಲಿ ಗಮನಿಸಬಹುದು. ಟಿಕಾಯತ್ ಅವರ ಮೇಲೆ ನಡೆದ ಹಲ್ಲೆ ರಾಜಕೀಯ ಪ್ರೇರಿತ ಎನ್ನುವುದಕ್ಕಿಂತಲೂ, ಅಧಿಕಾರ ರಾಜಕಾರಣ ಸೃಷ್ಟಿಸಿರುವ ಉನ್ಮತ್ತ ವಾತಾವರಣ ಮತ್ತು ಅಸಹಿಷ್ಣುತೆಯಿಂದ ಪ್ರೇರಿತವಾಗಿದೆ ಎನ್ನಬಹುದು.

ಈ ಅಸಹಿಷ್ಣುತೆಯೇ ಹಿಂದೂ ಯುವಜನರನ್ನು ಹಿಂಸೆಗೆ ಪ್ರಚೋದಿಸುತ್ತಿದೆ. ಹಿಜಾಬ್ ಮೂಲಕ ಶಾಲಾ ಅಂಗಳವನ್ನೂ ಪ್ರವೇಶಿಸಿರುವ ಈ ಅಸಹನೆಯ ನೆಲೆಗಳು ಹಲಾಲ್ ವಿವಾದದ ಮೂಲಕ ಮನೆಮನೆಯನ್ನೂ ತಲುಪಿವೆ. ಮುಸ್ಲಿಂ ವ್ಯಾಪಾರಿಗಳ ಮೇಲಿನ ದಾಳಿಗಳಿಂದ ಜಾತ್ರೆ, ಸಂತೆ ಮತ್ತು ರಥೋತ್ಸವಗಳನ್ನೂ ತಲುಪಿವೆ. ದೇವಾಲಯಗಳು ಇಂದು ಕೋಮು ಸಂಘರ್ಷದ ಕೇಂದ್ರ ಬಿಂದುಗಳಾಗಿ ಪರಿಣಮಿಸಿವೆ. ರಾಜ್ಯಾದ್ಯಂತ ಹಲವು ಮಸೀದಿಗಳು, ದರ್ಗಾಗಳು ಇಂದು ವಿವಾದದ ಕೇಂದ್ರಗಳಾಗಿವೆ. ಗೌರಿಬಿದನೂರು ಬಳಿ ಇರುವ ವಿದುರಾ಼ಶ್ವತ್ಥದಲ್ಲಿ ಇರುವ ಸ್ವಾತಂತ್ರ್ಯ ಹೋರಾಟದ ಗ್ಯಾಲರಿಯೂ ಸಹ ಈಗ ವಿವಾದದ ಕೇಂದ್ರ ಬಿಂದುವಾಗಿದೆ. ಈ ಯಾವುದೇ ಸಮಸ್ಯೆಗಳೂ ಸಹ ಪರಿಹರಿಸಲಾಗದಷ್ಟು ಜಟಿಲವೂ ಅಲ್ಲ, ಕ್ಲಿಷ್ಟವೂ ಅಲ್ಲ. ರಾಜ್ಯ ಸರ್ಕಾರಕ್ಕೆ ರಾಜ್ಯದಲ್ಲಿ ಒಂದು ಸಮನ್ವಯದ ಸೌಹಾರ್ದಯುತ ವಾತಾವರಣವನ್ನು ಕಾಪಾಡಿಕೊಳ್ಳುವ ಇಚ್ಚಾಶಕ್ತಿ ಇದ್ದರೆ, ಕಾನೂನು ಕೈಗೆತ್ತಿಕೊಳ್ಳುವ ಎಲ್ಲ ಸಂಘಟನೆಗಳನ್ನೂ ನಿಯಂತ್ರಿಸುವ ಮೂಲಕ ಮತ್ತು ವಿವಾದಾಸ್ಪದ ವಿಚಾರಗಳಿಗೆ ಸಂಬಂಧಪಟ್ಟ ವ್ಯಕ್ತಿ, ಸಂಘಟನೆಗಳೊಡನೆ ಸಮಾಲೋಚನೆ ನಡೆಸುವ ಮೂಲಕ ಶಾಂತಿ ಸ್ಥಾಪಿಸಲು ಸಾಧ್ಯ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ.

ಹಾಗಾಗಿಯೇ ರಾಜ್ಯಾದ್ಯಂತ ಹತ್ಯೆಗಳು, ಅತ್ಯಾಚಾರಗಳು, ಹಲ್ಲೆಗಳು ಹೆಚ್ಚಾಗುತ್ತಲೇ ಇವೆ. ಬೆಂಗಳೂರಿನಲ್ಲಿ ರೈತ ನಾಯಕ ಟಿಕಾಯತ್ ಮೇಲೆ ನಡೆದ ಹಲ್ಲೆಯೂ ಸಹ ಇದೇ ವಾತಾವರಣದಲ್ಲಿ ಸಂಭವಿಸಿರುವ ಒಂದು ಘಟನೆ. ಒಬ್ಬ ರಾಷ್ಟ್ರಮಟ್ಟದ ರೈತ ನಾಯಕ ಸಾರ್ವಜನಿಕವಾಗಿ ನಡೆಸುವ ಪತ್ರಿಕಾಗೋಷ್ಠಿಯ ಮೇಲೆ ಈ ರೀತಿಯ ಹಲ್ಲೆ ನಡೆಯುವುದು ಏನನ್ನು ಸೂಚಿಸುತ್ತದೆ ? ಹಲ್ಲೆಕೋರರಿಗೆ ಯಾರು ಕುಮ್ಮಕ್ಕು ನೀಡಿದರು ಎನ್ನುವುದಕ್ಕಿಂತಲೂ, ಯಾವ ರಾಜಕೀಯ ಶಕ್ತಿ ಇದರ ಹಿಂದಿದೆ ಎನ್ನುವುದಕ್ಕಿಂತಲೂ ಸಾರ್ವಜನಿಕ ಜೀವನದಲ್ಲಿ ಒಬ್ಬ ರಾಷ್ಟ್ರೀಯ ನಾಯಕನೂ ಸಹ ಸುರಕ್ಷತೆಯಿಂದ ಇರಲು ಸಾಧ್ಯವಿಲ್ಲ ಎನ್ನುವುದು ಮುಖ್ಯವಾಗುತ್ತದೆ. ಈ ಅಭದ್ರತೆಗೆ ಕಾರಣವನ್ನು ಕಾನೂನು ಸುವ್ಯವಸ್ಥೆಯ ನಿರ್ವಹಣೆಯಲ್ಲೇ ಕಾಣಬೇಕಿದೆ. ಹಿಂದೂಧರ್ಮ ರಕ್ಷಣೆಯ ನೆಪದಲ್ಲಿ ರಾಜ್ಯಾದ್ಯಂತ ಹಾವಳಿ ಸೃಷ್ಟಿಸುತ್ತಿರುವ ಕೆಲವೇ ಗುಂಪುಗಳನ್ನು ಸಮರ್ಥವಾಗಿ ನಿಯಂತ್ರಿಸಿದ್ದಲ್ಲಿ ಇಂತಹ ದಾಳಿಗಳನ್ನು ತಡೆಗಟ್ಟುವುದು ಸುಲಭವಾಗುತ್ತಿತ್ತು. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಸೋತಿದೆ.

ರೈತ ಸಮುದಾಯದ ಒಗ್ಗಟ್ಟನ್ನು ಭಂಗಗೊಳಿಸುವುದರೊಂದಿಗೇ, ಕೃಷಿ ಕಾಯ್ದೆಗಳ ವಿರುದ್ಧ ಸದಾ ಸಂಘರ್ಷಕ್ಕೆ ಸನ್ನದ್ಧವಾಗಿರುವ ರೈತ ಸಮುದಾಯದ ಪ್ರತಿರೋಧದ ದನಿಯನ್ನು ದಮನಿಸುವ ಒಂದು ತಂತ್ರಗಾರಿಕೆಯಾಗಿ ಟಿಕಾಯತ್ ಮೇಲಿನ ದಾಳಿಯನ್ನು ನೋಡಬಹುದು. ಸೈದ್ಧಾಂತಿಕ ಉನ್ಮಾದಕ್ಕೊಳಗಾದ ಒಂದು ಸಮಾಜದಲ್ಲಿ ಒಂದು ಹಂತದಲ್ಲಿ ಈ ಉನ್ಮಾದವನ್ನು ಸೃಷ್ಟಿಸಿದ ಶಕ್ತಿಗಳೂ ಸಹ ನಿಸ್ಸಹಾಯಕವಾಗಿಬಿಡುತ್ತವೆ, ಉನ್ಮತ್ತರನ್ನು ನಿಯಂತ್ರಿಸುವ ತಮ್ಮ ಅಂತಃಶಕ್ತಿಯನ್ನು ಕಳೆದುಕೊಂಡುಬಿಡುತ್ತವೆ. ರಾಜಕೀಯ ಅಧಿಕಾರಕ್ಕಾಗಿ ಸೃಷ್ಟಿಸಲಾಗುವ ಈ ಉನ್ಮಾದ ಮತ್ತು ಭಾವಾತಿರೇಕಗಳು ಕೆಲವೊಮ್ಮೆ ಹಿಡಿತ ತಪ್ಪಿಹೋದಾಗ, ಸಮಾಜದ ಅಸಹಾಯಕ ವರ್ಗಗಳು ಈ ಉನ್ಮಾದಕ್ಕೆ ಬಲಿಯಾಗಬೇಕಾಗುತ್ತದೆ. ಈ ಅಪಾಯವನ್ನು ಕರ್ನಾಟಕ ಎದುರಿಸುತ್ತಿದೆ. ಸಂದರ್ಭ

ಕೃಷಿ ಕಾಯ್ದೆಗಳು ಪುನಃ ಜಾರಿಯಾದ ಪಕ್ಷದಲ್ಲಿ ರೈತ ಸಮುದಾಯದಿಂದ ಎದುರಾಗಬಹುದಾದ ಪ್ರತಿರೋಧವನ್ನು ಭಗ್ನಗೊಳಿಸುವ ಎಲ್ಲ ಪ್ರಯತ್ನಗಳೂ ರಣತಂತ್ರದ ರೂಪದಲ್ಲಿ ಕಾರ್ಯಗತವಾಗುತ್ತಿರುತ್ತವೆ. ಟಿಕಾಯತ್ ಮೇಲಿನ ದಾಳಿ ಈ ಪ್ರಯತ್ನಗಳ ಒಂದು ಸಾರ್ವಜನಿಕ ಸ್ವರೂಪ. ಅಂದರೆ, ಜನಸಾಮಾನ್ಯರೂ ಸಹ ಈ ರೈತ ಸಂಘಟನೆಗಳ ಪ್ರತಿರೋಧವನ್ನು ವಿರೋಧಿಸುತ್ತಿವೆ ಎಂದು ಬಿಂಬಿಸುವ ಒಂದು ಪ್ರಯತ್ನವನ್ನು ಇಲ್ಲಿ ಕಾಣಬಹುದು. ಟಿಕಾಯತ್ ಮೇಲೆ ನಡೆದ ಹಲ್ಲೆಯನ್ನು ಹಸಿರು ಮತ್ತು ಕೇಸರಿಯ ನಡುವಿನ ಸಂಘರ್ಷ ಎನ್ನುವುದಕ್ಕಿಂತಲೂ ಕಾರ್ಪೋರೇಟ್ ಮಾರುಕಟ್ಟೆ ಪ್ರೇರಿತ ಆಡಳಿತ ವ್ಯವಸ್ಥೆ ಮತ್ತು ಈ ವ್ಯವಸ್ಥೆಯ ಆಡಳಿತ ನೀತಿಗಳನ್ನು ವಿರೋಧಿಸುತ್ತಿರುವ ಪ್ರಜೆಗಳ ನಡುವಿನ ಸಂಘರ್ಷ ಎಂದು ವ್ಯಾಖ್ಯಾನಿಸಬಹುದು. ಹಿಂದುತ್ವ ರಾಜಕಾರಣದ ಸಂಕಥನದಲ್ಲಿ ಭಾರತದ ಕೃಷಿ ಬಿಕ್ಕಟ್ಟು ಅಥವಾ ರೈತರು ಎದುರಿಸುತ್ತಿರುವ ಸಮಸ್ಯೆಗಳು ಯಾವುದೇ ಸಂದರ್ಭದಲ್ಲೂ ಪ್ರಾಮುಖ್ಯತೆ ಪಡೆದಿಲ್ಲ ಎನ್ನುವುದನ್ನು ಗಮನಿಸಬೇಕಿದೆ. ಏಕೆಂದರೆ ಕೇಂದ್ರ ಸರ್ಕಾರ ತ್ವರಿತಗತಿಯಲ್ಲಿ ಜಾರಿಗೊಳಿಸುತ್ತಿರುವ ನವ ಉದಾರವಾದಿ ಆರ್ಥಿಕ ನೀತಿಗಳು ಮತ್ತು ಕಾರ್ಪೋರೇಟ್ ಮಾರುಕಟ್ಟೆ ನೀತಿಗಳು ಹಿಂದುತ್ವ ರಾಜಕಾರಣದ ಒಂದು ಭಾಗವಾಗಿಯೇ ಅನಾವರಣಗೊಳ್ಳುತ್ತಿದೆ.

-ನಾ ದಿವಾಕರ


ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ