ಮನೆ ಆಗ ಕುಸಿಯುತ್ತೋ, ಈಗ ಕುಸಿಯುತ್ತೋ? | ಪ್ರಾಣ ಅಂಗೈಯಲ್ಲಿಡಿದು ಕುಳಿತಿರುವ ಮುತ್ತೂರು ನಿವಾಸಿಗಳು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಈ ನಡುವೆ ವಿವಿಧಡೆಗಳಲ್ಲಿ ಗುಡ್ಡ ಕುಸಿದು, ಜನರಲ್ಲಿ ಆತಂಕವನ್ನುಂಟು ಮಾಡಿದೆ. ಸಾರ್ವಜನಿಕರು ತೀವ್ರ ಆತಂಕದಲ್ಲಿದ್ದಾರೆ.
ಎಡಪದವು ಸಮೀಪದ ಮುತ್ತೂರು ಗ್ರಾಮ ಪಂಚಾಯತ್ ನ ಅಂಬೇಡ್ಕರ್ ನಗರದ ಎಸ್ಸಿ ಕಾಲನಿಯಲ್ಲಿರುವ ಸತ್ಯಸಾರಮಾಣಿ ದೈವಸ್ಥಾನ ಸಮೀಪದ ಗುಡ್ಡವೊಂದು ಕುಸಿಯುತ್ತಿದ್ದು, ಈ ಪ್ರದೇಶದಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿಯ ಶಂಕರ ಮತ್ತು ಜ್ಯೋತಿ ದಂಪತಿಯ ಮನೆ, ಹಾಗೂ ದಯಾನಂದ ಆಚಾರಿ, ಎಂಬವರ ಮನೆಯು ಕುಸಿಯುವ ಹಂತದಲ್ಲಿದೆ. ಇದಲ್ಲದೇ ಈ ಮನೆಗಳ ಕೆಳಭಾಗದಲ್ಲಿರುವ ಧರ್ಣಪ್ಪ ಮೂಲ್ಯ, ತಿಮ್ಮಪ್ಪ ಪೂಜಾರಿ, ಲಿಂಗಪ್ಪ ಮೂಲ್ಯ ಹಾಗೂ ಹರಿಯಪ್ಪ ಮುತ್ತೂರು ಎಂಬವರ ಮನೆ ಕೂಡ ಅಪಾಯದಲ್ಲಿದ್ದು, ಮೇಲಿರುವ ಮನೆಗಳು ಕುಸಿದರೆ, ಕೆಳಗಿರುವ ಮನೆಗಳ ಮೇಲೆಯೇ ಕುಸಿಯುವ ಸಾಧ್ಯತೆಗಳಿದ್ದು, ಈ ಹೀಗಾಗಿ ಇಲ್ಲಿನ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಮುತ್ತೂರು ಗ್ರಾಮ ಪಂಚಾಯತ್‌ಗೆ ಮನವಿ ಹಾಗೂ ಗ್ರಾಮ ಸಭೆಗಳಲ್ಲಿ ಈ ವಿಚಾರ ಪ್ರಸ್ತಾಪವಾಗಿತ್ತು. ಈ ಸಮಸ್ಯೆಯ ಬಗ್ಗೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಲಾಗಿದೆ. ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಭರತ್ ಶೆಟ್ಟಿ ಅವರ ಗಮನಕ್ಕೂ ತರಲಾಗಿದ್ದರೂ, ಈವರೆಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಇಲ್ಲಿನ ನಿವಾಸಿಗಳು ದೂರಿದ್ದಾರೆ.
ಘಟನಾ ಸ್ಥಳಕ್ಕೆ ಮುತ್ತೂರು ಗ್ರಾ.ಪಂನ ಪಿಡಿಒ ಭೇಟಿ ನೀಡಿದ್ದು, ಗುಡ್ಡ ಕುಸಿತವಾದರೆ ಇಲ್ಲಿನ ನಿವಾಸಿಗಳಿಗೆ ತುಂಬಾ ಅಪಾಯವಿದೆ ಎಂದು ಅವರು ಹೇಳಿದ್ದಾರೆ. ಇದಕ್ಕೆ ಹೆಚ್ಚಿನ ಅನುದಾನ ಬೇಕಿದೆ. ಹೀಗಾಗಿ ಗ್ರಾ.ಪಂ.ಅಧ್ಯಕ್ಷರು ಶಾಸಕರ ಬಳಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸದ್ಯ ಮಣ್ಣು ಕುಸಿಯದಂತೆ ಟರ್ಪಾಲ್ ಹಾಕಲಾಗಿದೆ. ಇಲ್ಲಿ ನಿವಾಸಿಗಳನ್ನು ಸ್ಥಳಾಂತರಿಸಲು ಪರ್ಯಾಯ ಕ್ರಮಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಿಶಿಷ್ಟ ಜಾತಿ ಕಾಲನಿಯಲ್ಲಿ ಮಳೆಯಿಂದಾಗಿ ತುಂಬಾ ಹಾನಿಯಾಗಿದ್ದು, ಗುಡ್ಡ ಕುಸಿತದಿಂದ ಶಂಕರ, ಹರಿಯಪ್ಪ, ತಿಮ್ಮಪ್ಪ, ಧರ್ಣಪ್ಪ ಮೊದಲಾದವರ ಮನೆಗಳಿಗೆ ಹಾನಿಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಮೊದಲೇ ಶಾಸಕರಲ್ಲಿ ಮನವಿ ಮಾಡಿದ್ದು, ಆದರೆ ಅನುದಾನ ಇಷ್ಟರವರೆಗೆ ಬಂದಿಲ್ಲ. ಇವಾಗ ಶಾಸಕರಲ್ಲಿ ಮತ್ತೆ ವಿಚಾರಣೆ ಮಾಡಿದಾಗ ಈ ಬಗ್ಗೆ ಎಂಜಿನಿಯರ್ ಮೂಲಕ ಸ್ಥಳ ಪರಿಶೀಲನೆ ಮಾಡಿ ಇನ್ನು ಅಗುವಂತ ಸಮಸ್ಯೆಗೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ನಮ್ಮ ಪಂಚಾಯತ್ ವತಿಯಿಂದ ಸದಸ್ಯರು ಸೇರಿ ಮಣ್ಣು ಕುಸಿಯದಂತೆ ತಾತ್ಕಾಲಿಕವಾಗಿ ಟರ್ಪಾಲ್ ವ್ಯವಸ್ಥೆ ಮಾಡುತ್ತೇವೆ. ಅಲ್ಲದೆ, ಅವರಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿ ಗಂಜಿ ಕೇಂದ್ರದ ವ್ಯವಸ್ಥೆಯನ್ನು ಕಂದಾಯ ಇಲಾಖೆ ಮೂಲಕ ಮನವಿಯನ್ನು ಮಾಡಿಸುತ್ತೇವೆ.
-ಸತೀಶ್ ಬಳ್ಳಾಜೆ, ಗ್ರಾಮ ಪಂಚಾಯತ್ ಅಧ್ಯಕ್ಷ
ತಹಶೀಲ್ದಾರ್ ಅವರು ಸಾರ್ವಜನಿಕರ ಮನವಿಯನ್ನು ಕಸದ ಬುಟ್ಟಿಗೆ ಎಸೆದಿದ್ದಾರೆ. ಇಲ್ಲಿನ ಸಾರ್ವಜನಿಕರ ಪರಿಸ್ಥಿತಿ ಶೋಚನೀಯವಾಗಿದೆ. ರಾತ್ರಿ ಕುಟುಂಬಸ್ಥರು ಈ ಮನೆಯಲ್ಲಿ ಮಲಗುವಂತಹ ಪರಿಸ್ಥಿತಿ ಕೂಡ ಇಲ್ಲವಾಗಿದೆ. ಇಲ್ಲಿ ವಾಸಿಸಲು ಧೈರ್ಯವಿಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾಧಿಕಾರಿಗಳು ತಕ್ಷಣವೇ ತಹಶೀಲ್ದಾರ್ ಅವರಿಗೆ ಆದೇಶ ನೀಡಿ, ಶಾಶ್ವತ ಪರಿಹಾರವನ್ನು ನೀಡಬೇಕು.
-ದಾಸಪ್ಪ ಎಡಪದವು, ಬಿಎಸ್ ಪಿ ದ.ಕ.ಜಿಲ್ಲಾಧ್ಯಕ್ಷರು
ನೂರು ಮೀಟರ್ ಗಳಷ್ಟು ಎತ್ತರದಲ್ಲಿರುವ ಎರಡು ಮೂರು ಮನೆಗಳು ಕುಸಿದು ಬಿದ್ದು ಕೆಳಗಿನ ಮನೆಗಳಿಗೆ ಅಪಾಯವಾಗುವ ಪರಿಸ್ಥಿತಿಯಲ್ಲಿದೆ. ಇಲ್ಲಿನ ನಿವಾಸಿಗಳಾದ ಜ್ಯೋತಿ ಹಾಗೂ ಶಂಕರ್ ಅವರು ಜಿಲ್ಲಾಧಿಕಾರಿಗಳಿಗೆ ಈ ಪರಿಸ್ಥಿತಿ ಬಗ್ಗೆ ಮನವಿ ಕೂಡ ಮಾಡಿದ್ದರು. ಆದರೆ ಮನವಿ ಮಾಡಿ ಒಂದು ವರ್ಷ ಕಳೆದರೂ ಅವರಿಗೆ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮನೆಗಳು ಕುಸಿದು ಬೀಳುವ ಸ್ಥಿತಿ ತಲುಪಿವೆ. ಇಲ್ಲಿನ ನಿವಾಸಿಗಳು ಬಾಡಿಗೆ ಮನೆಗಳಲ್ಲಿ ವಾಸಿಸುವಂತಹ ಸ್ಥಿತಿಯಲ್ಲಿಲ್ಲ. ಹೀಗಾಗಿ ಅವರ ಅಹವಾಲುಗಳನ್ನು ಶಾಸಕರು, ಪಂಚಾಯತ್ ಅಧ್ಯಕ್ಷರು ಪರಿಶೀಲಿಸಿ ತಕ್ಷಣವೇ ಶಾಶ್ವತ ಪರಿಹಾರ ಒದಗಿಸಬೇಕಿದೆ.
ಗೋಪಾಲ್ ಮುತ್ತೂರು, ಬಿಎಸ್ ಪಿ ಮುಖಂಡರು.
ಈ ವೇಳೆ ಗ್ರಾಮ ಪಂಚಾಯತ್ ಸದಸ್ಯರಾದ ರುಕ್ಮಿಣಿ, ಅನಿತಾ, ತಾರನಾಥ್ ಕುಲಾಲ್, ವನಿತಾ ಗೋಪಾಲ್, ಥೋಮಸ್ ಹೆರಾಲ್ಡ್ ರುಝರ್‍ಯೊ, ಬಿಎಸ್ಪಿ ದ.ಕ. ಜಿಲ್ಲಾ ಉಸ್ತುವಾರಿ ಗೋಪಾಲ್ ಮುತ್ತೂರು, ಗುರುಪುರ ಬ್ಲಾಕ್ ಎಸ್ಸಿ, ಎಸ್ಟಿ ಕಾಂಗ್ರೆಸ್ ಘಟಕದ ಅಧ್ಯಕ್ಷ ಹರಿಯಪ್ಪ ಮುತ್ತೂರು, ಬಿಜೆಪಿ ಎಸ್ಸಿ ಮೋರ್ಚಾದ ಅಧ್ಯಕ್ಷ ಹೊನ್ನಯ್ಯ ಕೊಳವೂರು, ಕುಪ್ಪೆಪದವು ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಚಂದ್ರಹಾಸ್ ಶೆಟ್ಟಿ, ಮಂಗಳೂರು ಉತ್ತರದ ಬಿಎಸ್ಪಿ ಉಸ್ತುವಾರಿ ಲೋಕೇಶ್ ಮುತ್ತೂರು ಹಾಗೂ ಸ್ಥಳೀಯರು ಇದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka