ರೈತರ ಬೃಹತ್ ಪ್ರತಿಭಟನೆಗೆ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಬೆಂಬಲ - Mahanayaka

ರೈತರ ಬೃಹತ್ ಪ್ರತಿಭಟನೆಗೆ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಬೆಂಬಲ

07/12/2020

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ರೈತರ ಪ್ರತಿಭಟನೆ ತೀವ್ರವಾಗುತ್ತಿದೆ. ಇದೇ ಸಂದರ್ಭದಲ್ಲಿ ಭಾರತದ ಕ್ರಿಕೆಟ್ ತಂಡದ ಮಾಜಿ ಚಾಂಪಿಯನ್ ಆಟಗಾರ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.

ಇನ್ನೂ ಪ್ರತಿಭಟನೆಯನ್ನು ಬೆಂಬಲಿಸಿ ಕ್ರೀಡಾಪಟುಗಳು ತಮ್ಮ ಪ್ರಶಸ್ತಿಯನ್ನು ಹಿಂದಿರುಗಿಸುವ ನಿರ್ಧಾರವನ್ನು ಅವರು ಬೆಂಬಲಿಸಿದ್ದು,  ಕ್ರೀಡಾಪಟುಗಳು ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಾರೆ ಅಂದರೆ ಪ್ರಶಸ್ತಿಗೆ ಅವಮಾನ ಮಾಡಲಾಗುತ್ತಿದೆ ಎಂದರ್ಥವಲ್ಲ. ಇದು ಪ್ರತಿಭಟನಾ ನಿರತ ರೈತರೊಂದಿಗೆ ತಮ್ಮ ಒಗ್ಗಟ್ಟನ್ನು ತೋರಿಸುವ ಮಾರ್ಗವಾಗಿದೆ ಎಂದು ಅವರು ಹೇಳಿದ್ದಾರೆ.

ರೈತರ ಬೇಡಿಕೆ ಸರಿಯಾಗಿದೆ. ಸರ್ಕಾರವು ಅವರ ಬೇಡಿಕೆಯನ್ನು ಆಲಿಸಬೇಕು. ಸರ್ಕಾರ ಪರಿಹಾರ ಸೂಚಿಸಬೇಕಾದ ಕಾಲ ಮೀರಿ ಹೋಗಿದೆ. ಹಾಗಾಗಿ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿಗಳನ್ನು ಹಿಂದಿರುಗಿಸುವ ಎಲ್ಲ ಕ್ರೀಡಾಪಟುಗಳಿಗೆ ನನ್ನ ಬೆಂಬಲ ನೀಡುತ್ತೇನೆ ಎಂದು ಅವರು ಹೇಳಿದರು.


Provided by

ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಯುವರಾಜ್ ಸಿಂಗ್ ಕೂಡ ತಮ್ಮ ಪ್ರಶಸ್ತಿಯನ್ನು ಹಿಂದಿರುಗಿಸುವ ಸಾಧ್ಯತೆ ಕಂಡು ಬಂದಿದೆ. ರೈತರ ಪ್ರತಿಭಟನೆಯಲ್ಲಿ ಸಿಖ್ಖರು ನೇತೃತ್ವವಹಿಸಿದ್ದು, ಸರ್ಕಾರವು ಕರಾಳ ಕೃಷಿ ಕಾನೂನನ್ನು ರದ್ದುಗೊಳಿಸಬೇಕು ಎನ್ನುವುದಷ್ಟೇ ರೈತರ ಬೇಡಿಕೆಯಾಗಿದೆ. ಹಲವು ಸುತ್ತುಗಳಲ್ಲಿ ರೈತರ ಜೊತೆಗೆ ಕೇಂದ್ರ ಸರ್ಕಾರ ಚರ್ಚೆ ನಡೆಸಿದೆ. ಆದರೆ, ವಿವಾದಾತ್ಮಕ ಕೃಷಿ ಕಾನೂನನ್ನು ರದ್ದು ಮಾಡಲು ಸರ್ಕಾರ ತೀರ್ಮಾನ ತೆಗೆದುಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ನಾಳೆ, ಅಂದರೆ, ಡಿಸೆಂಬರ್ 8ರಂದು ಭಾರತ ಬಂದ್ ಗೆ ರೈತರು ಕರೆ ನೀಡಿದ್ದಾರೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಭಾರತ ಬಂದ್ ಗೆ ರೈತರು ಬೆಂಬಲ ನೀಡಲಿದ್ದಾರೆ.


ಇತ್ತೀಚಿನ ಸುದ್ದಿ