ಜೋಳ ಮಾರಾಟಗಾರನೊಂದಿಗೆ ಚೌಕಾಶಿ ಮಾಡಿದ ಕೇಂದ್ರ ಸಚಿವ: ವಿಡಿಯೋ ವೈರಲ್
ನವದೆಹಲಿ: ದೇಶದಲ್ಲಿ ಬೆಲೆ ಏರಿಕೆ ಬಿಸಿ ಜನಸಾಮಾನ್ಯರನ್ನು ತಟ್ಟಿದ್ದು, ಪಕ್ಷ ಬೇಧ ಮರೆತು ಜನರು ಬೆಲೆ ಏರಿಕೆಯನ್ನು ಟೀಕಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕೇಂದ್ರ ಸಚಿವರೊಬ್ಬರು ಮೆಕ್ಕೆಜೋಳ ಖರೀದಿ ವೇಳೆ ಬೀದಿ ಬದಿ ವ್ಯಾಪಾರಿಯ ಜೊತೆಗೆ ಚೌಕಾಶಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಚಿವರ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿದೆ.
ಮಧ್ಯಪ್ರದೇಶದ ರಸ್ತೆ ಬದಿ ವ್ಯಾಪಾರಿಯೊಬ್ಬರು ಮೆಕ್ಕೆಜೋಳ ಮಾರಾಟ ಮಾಡ್ತಿದ್ದು, ಆ ರಸ್ತೆಯಲ್ಲಿಯೇ ಕೇಂದ್ರ ಸಚಿವರು ಹಾದು ಹೋಗ್ತಿರುವಾಗ ಜೋಳ ಖರೀದಿಸಲು ಕಾರು ನಿಲ್ಲಿಸಿದ್ದಾರೆ. 45 ಬೆಲೆಗೆ ಮೂರು ಜೋಳ ಕೊಡುವಂತೆ ಬಡ ವ್ಯಾಪಾರಿ ಜೊತೆಗೆ ಸಚಿವರು ಚೌಕಾಶಿ ಮಾಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಕೇಂದ್ರ ಉಕ್ಕು ಸಚಿವಾಲಯದ ರಾಜ್ಯ ಸಚಿವ ಮತ್ತು ಬಿಜೆಪಿ ನಾಯಕ ಫಗ್ಗನ್ ಸಿಂಗ್ ಕುಲಸ್ತೆ ವಿಡಿಯೋದಲ್ಲಿ ಕಂಡು ಬಂದ ಸಚಿವರಾಗಿದ್ದು, ಈ ವಿಡಿಯೋವನ್ನು ಸ್ವತಃ ಅವರೇ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವ್ಯಾಪಾರಿಯು ಮೆಕ್ಕೆ ಜೋಳಕ್ಕೆ 45 ರೂಪಾಯಿ ಹೇಳಿದಾಗ ಸಚಿವರು, 45 ರೂಪಾಯಿಯೇ? ಎಂದು ಅಚ್ಚರಿಯಿಂದ ಪ್ರಶ್ನಿಸಿ, ಇದು ತುಂಬಾ ದುಬಾರಿ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಮಾರಾಟಗಾರ ಇದು ಪ್ರಮಾಣಿತ ದರ, ನೀವು ಕಾರಿನಲ್ಲಿ ಬಂದಿದ್ದೀರಿ ಎಂದು ನಾವು ಹೆಚ್ಚು ಹೇಳುತ್ತಿಲ್ಲ ಎಂದಿದ್ದಾರೆ.
ಇದಕ್ಕೆ ಕುಲಸ್ತೆ, ‘ಇಲ್ಲಿ ಜೋಳಗಳು ಉಚಿತವಾಗಿ ಲಭ್ಯವಿವೆ’ ಎನ್ನುತ್ತಾ, ಅಂಗಡಿ ಮಾಲೀಕರಿಗೆ ಹಣ ಪಾವತಿಸಿದರು. ಸಚಿವರು ವ್ಯಾಪಾರಿಯ ಜೊತೆಗೆ ಚೌಕಾಶಿ ಮಾಡುತ್ತಿರುವ ವಿಡಿಯೋ ವಿಪಕ್ಷಗಳು ತೀವ್ರ ಟೀಕೆ ಮಾಡಿದ್ದು, ಇಲ್ಲಿ ಎಲ್ಲವೂ ದುಬಾರಿಯಾಗಿದೆ. ಕೇಂದ್ರ ಸಚಿವರು ಎಷ್ಟೊಂದು ಬಡವರು ಎಂದರೆ ಅವರಿಗೆ 15 ರೂಪಾಯಿ ಬಹಳ ದುಬಾರಿಯಾಗಿದೆ ಎಂದು ತೀವ್ರವಾಗಿ ತರಾಟೆಗೆತ್ತಿಕೊಂಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka