ಹಾಸನದಲ್ಲಿ ಕಳೆಗುಂದಿದ ‘ವಿಕ್ರಾಂತ್ ರೋಣ’: ಫ್ಲೆಕ್ಸ್ ಇಲ್ಲ, ಕಟೌಟ್ ಇಲ್ಲದೇ ಬಿಕೋ ಎಂದ ಚಿತ್ರ ಮಂದಿರ
ಹಾಸನ: ವಿಶ್ವಾದ್ಯಂತ ಇಂದು ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಚಿತ್ರ ಅದ್ದೂರಿಯಾಗಿ ತೆರೆ ಕಂಡಿದೆ. ಆದರೆ ಹಾಸನದಲ್ಲಿ ಮಾತ್ರ ಚಿತ್ರ ಮಂದಿರದಲ್ಲಿ ಯಾವ ಸಂಭ್ರಮವೂ ತುಂಬಿರಲಿಲ್ಲ. ಅಭಿಮಾನಿಗಳ ಕಟೌಟ್, ಸಂಭ್ರಮ, ಸಡಗರ ಇಲ್ಲದೇ ಚಿತ್ರ ಮಂದಿರ ಕಳೆಗುಂದಿತ್ತು.
ಪ್ರತೀ ಬಾರಿಯೂ ಹಾಸನದಲ್ಲಿ ಕಿಚ್ಚ ಸುದೀಪ್ ಅವರ ಚಿತ್ರ ಬಿಡುಗಡೆಯಾದರೆ, ಹಬ್ಬದ ಸಂಭ್ರಮ ಮನೆ ಮಾಡಿರುತ್ತಿತ್ತು. ಈ ಹಿಂದೆ ಹಾಸನದಲ್ಲಿ ಕಿಚ್ಚ ಸುದೀಪ್ ಅವರ ಚಿತ್ರಕ್ಕೆ ಭರ್ಜರಿ ಜನ ಸೇರಿದ್ದು, ಈ ಬಗ್ಗೆ ಕಿಚ್ಚ ಸುದೀಪ್ ಅವರೇ ಮೆಚ್ಚುಗೆ ವ್ಯಕ್ತಪಡಿಸಿ, ಟ್ವೀಟ್ ಮಾಡಿದ್ದರು. ಕಿಚ್ಚ ಸುದೀಪ್ ಅಭಿಮಾನಿಗಳು ಚಿತ್ರ ಬಿಡುಗಡೆಗೂ ಮೊದಲೇ ಇಡೀ ನಗರದಲ್ಲಿ ಭರ್ಜರಿಯಾಗಿ ಪ್ರಚಾರ ನೀಡುತ್ತಿದ್ದರು. ಚಿತ್ರ ಮಂದಿರಗಳ ಮುಂದೆ, ಸಾಲು ಸಾಲು ಕಟೌಟ್ ಗಳು, ಶುಭ ಕೋರುವವರ ಸಂಖ್ಯೆ ಭಾರೀ ದೊಡ್ಡದಿರುತ್ತಿತ್ತು. ಜನರನ್ನು ಚಿತ್ರ ಮಂದಿರದ ಕಡೆಗೆ ಸೆಳೆಯಲು ಅಭಿಮಾನಿಗಳ ಕಟೌಟ್ ಕಾರಣವಾಗುತ್ತಿತ್ತು. ಆದರೆ, ಈ ಬಾರಿ ಅಭಿಮಾನಿಗಳ ಕಟೌಟ್ ಇಲ್ಲದೇ ಚಿತ್ರ ಮಂದಿರದ ಮುಂಭಾಗ ಬಿಕೋ ಎನ್ನುತ್ತಿತ್ತು.
ಸುದೀಪ್ ಹಾಸನ ಜಿಲ್ಲಾ ಕಿಚ್ಚ ಸುದೀಪ್ ಅಭಿಮಾನಿಗಳ ಬಳಗ (ರಿ)
ಕಿಚ್ಚ ಸುದೀಪ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷರಾದ ಸುದೀಪ್ ಹಾಗೂ ಪದಾಧಿಕಾರಿಗಳಿಗೆ ಕಿಚ್ಚ ಸುದೀಪ್ ಅವರ ಮನೆ ಮುಂಭಾಗದಲ್ಲಿ ಆದ ಅವಮಾನವೇ ಅಭಿಮಾನಿಗಳ ನಿರುತ್ಸಾಹಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಆದರೆ, ಕಿಚ್ಚ ಸುದೀಪ್ ಅವರ ಮೇಲೆ ಅಭಿಮಾನಿಗಳಿಗೆ ಯಾವ ಬೇಸರವೂ ಇಲ್ಲ. ಕಿಚ್ಚ ಸುದೀಪ್ ಅವರ ಮನೆಯ ಸಿಬ್ಬಂದಿ ಅಭಿಮಾನಿಗಳ ಜೊತೆಗೆ ಒರಟಾಗಿ ವರ್ತಿಸುತ್ತಿರುವುದು ಅಭಿಮಾನಿಗಳಿಗೆ ನೋವು ಉಂಟು ಮಾಡಿದೆ ಎಂದು ಅಭಿಮಾನಿಗಳು ತಿಳಿಸಿದ್ದಾರೆ.
ಕಟೌಟ್ ಗಳೇ ಕಾಣದೇ ಬಿಕೋ ಎನ್ನುತ್ತಿರುವ ಚಿತ್ರ ಮಂದಿರ
ಕಿಚ್ಚ ಸುದೀಪ್ ಅವರನ್ನು ಭೇಟಿಯಾಗಲು 400ಕ್ಕೂ ಅಧಿಕ ಕಿ.ಮೀ.ದೂರದಿಂದ ಅಭಿಮಾನಿಗಳು ಆಸೆಯಿಂದ ಬಂದಿರುತ್ತಾರೆ. ಕಿಚ್ಚ ಸುದೀಪ್ ಅವರು ಮನೆಯಲ್ಲಿದ್ದರೂ ಭೇಟಿ ನೀಡಲು ಅವಕಾಶ ಕೊಡದ ಸಿಬ್ಬಂದಿ, ಸುದೀಪ್ ಅವರು ಮನೆಯಲ್ಲಿಲ್ಲ ಎಂದು ವಾಪಸ್ ಕಳುಹಿಸುತ್ತಿದ್ದಾರೆ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದು, ಕಿಚ್ಚ ಸುದೀಪ್ ಅವರ ಆಪ್ತ ವಿಶ್ವ ಮತ್ತು ಅವರ ಬಾಮೈದ ರಾಜೇಶ್ ಅವರೇ ಇದಕ್ಕೆ ನೇರ ಕಾರಣ ಎಂದು ಅಭಿಮಾನಿಗಳು ಆರೋಪಿಸಿದ್ದಾರೆ.
ಹಾಸನ ಜಿಲ್ಲಾ ಕಿಚ್ಚ ಸುದೀಪ್ ಅಭಿಮಾನಿಗಳ ಬಳಗದ ಸುದೀಪ್ ಅವರಿಗೂ ಇದೇ ಅನುಭವವಾಗಿದ್ದು, ಇದರಿಂದಾಗಿ ಪದಾಧಿಕಾರಿಗಳು ಕೂಡ ತೀವ್ರವಾಗಿ ನೊಂದಿದ್ದಾರೆನ್ನಲಾಗಿದೆ. ಕಿಚ್ಚ ಸುದೀಪ್ ಅವರ ಹೆಸರಿನಲ್ಲಿ ಸಾಕಷ್ಟು ಸಮಾಜ ಸೇವೆಗಳನ್ನು ಮಾಡುತ್ತಾ, ಸುದೀಪ್ ಅವರ ಪರವಾಗಿ ಕೆಲಸ ಮಾಡುತ್ತಿರುವ ಜಿಲ್ಲಾಧ್ಯಕ್ಷ ಸುದೀಪ್ ಅವರಿಗೆ ಅವಮಾನವಾಗಿದೆ. ಹೀಗಾಗಿಯೇ ಈ ಬಾರಿ ಹಾಸನದಲ್ಲಿ ಕಿಚ್ಚ ಸುದೀಪ್ ಅವರ ಚಿತ್ರಕ್ಕೆ ಅಭಿಮಾನಿಗಳು ನಿರುತ್ಸಾಹ ತೋರಿದ್ದಾರೆ. ಆದರೂ, ತಮ್ಮ ಇಷ್ಟದ ನಾಯಕನ ಚಿತ್ರವನ್ನು ವೀಕ್ಷಿಸಿ ಶುಭ ಹಾರೈಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka