“ಬಹುಜನರಿಗೆ ಸೈದ್ಧಾಂತಿಕ ಧೈರ್ಯ ತುಂಬಿದ ಅಂಬೇಡ್ಕರ್ ವಾದಿ ಪಿ.ಡೀಕಯ್ಯ”: ಡಾ.ವೆಂಕಟಸ್ವಾಮಿ

ಪದ್ಮುಂಜ: ಪಿ.ಡೀಕಯ್ಯರವರಿಗೆ ಹುಟ್ಟೂರ ಶ್ರದ್ಧಾಂಜಲಿ
ಬೆಳ್ತಂಗಡಿ: ಬಹುಜನ ಸಮಾಜಕ್ಕೆ ಸೈಸಮಾಜದಲ್ಲಿ ಮೌಲ್ಯಾಧಾರಿತ ಬದಲಾವಣೆಗಾಗಿ ಚಳುವಳಿಯಲ್ಲಿ ತೊಡಗಿದ್ದ ಪಿ.ಡೀಕಯ್ಯರವರು ಅಪ್ಪಟ ಅಂಬೇಡ್ಕರ್ ವಾದಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಲಿತರ ಮೇಲಾಗುತ್ತಿದ್ದ ಶೋಷಣೆ, ದೌರ್ಜನ್ಯ, ಅನ್ಯಾಯ,ಅಸಮಾನತೆಗಳ ವಿರುದ್ಧ ಗಟ್ಟಿ ಧ್ವನಿ ಎತ್ತಿ ಹೋರಾಡಿ ದಲಿತ, ಹಿಂದುಳಿದ ಶೋಷಿತ ಸಮುದಾಯಗಳ ವಿಮೋಚನೆಗಾಗಿ ಶ್ರಮಿಸಿ ರಾಜ್ಯಾದ್ಯಂತ ಸಾವಿರಾರು ಬೆಂಬಲಿಗರನ್ನು ಅಭಿಮಾನಿಗಳನ್ನು ಸಂಪಾದಿಸಿ ಚಳುವಳಿಯನ್ನು ಮುನ್ನಡೆಸುತ್ತಾ ಬಹುಜನ ಸಮಾಜದಲ್ಲಿ ಸೈದ್ಧಾಂತಿಕ ಧೈರ್ಯವನ್ನು ತುಂಬಿದವರು ಎಂದು ಹಿರಿಯ ಅಂಬೇಡ್ಕರ್ ವಾದಿ, ಪಿ.ಡೀಕಯ್ಯರವರ ಚಳುವಳಿಯ ಒಡನಾಡಿ ಸಮತಾ ಸೈನಿಕದಳ ಸ್ಥಾಪಕ , ಆರ್.ಪಿ.ಐ. ರಾಜ್ಯಾಧ್ಯಕ್ಷ ಡಾ.ವೆಂಕಟ ಸ್ವಾಮಿ ಹೇಳಿದರು.
ಇತ್ತೀಚೆಗೆ ಪರಿನಿಬ್ಬಾಣ ಹೊಂದಿದ ಹಿರಿಯ ಅಂಬೇಡ್ಕರ್ ವಾದಿ, ಬಹುಜನ ಸಮಾಜ ಚಳುವಳಿಯ ನೇತಾರ ಪಿ.ಡೀಕಯ್ಯ ಅವರಿಗೆ ಪದ್ಮುಂಜ ಸಂಗಮ್ ವಿಹಾರ್ ನಲ್ಲಿ ನಡೆದ ಹುಟ್ಟೂರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣಕಾರರಾಗಿ ಜು.30ರಂದು ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಬತ್ತರ ದಶಕದಲ್ಲಿ ದಲಿತ ಸಂಘರ್ಷ ಸಮಿತಿ ಪ್ರಾರಂಭವಾದ ದಿನಗಳಲ್ಲಿ ಮಂಗಳೂರಿನಲ್ಲಿ ಹೋರಾಟಗಳನ್ನು ರೂಪಿಸುವುದು ಕಷ್ಟವೆಂದು ಕಾಣಿಸಿದಾಗ ಬೆಳ್ತಂಗಡಿ ತಾಲೂಕಿನಲ್ಲಿ ಜಿಲ್ಲಾ ಕೇಂದ್ರವೆಂಬ ರೀತಿಯಲ್ಲಿ ಅನೇಕ ಹೋರಾಟಗಳ ನೇತೃತ್ವವಹಿಸಿಕೊಂಡು ಒಬ್ಬ ಹೋರಾಟಗಾರನಾಗಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ತಮ್ಮ ಸಂಘಟನಾ ಚತುರತೆಯಿಂದಲೂ ಜ್ಞಾನದಿಂದಲೂ ಗುರುತಿಸಿಕೊಂಡು ನಾಯಕರಾಗಿ ಬೆಳೆದ ಪಿ. ಡೀಕಯ್ಯ ಅವರ ಅಗಲುವಿಕೆಯಿಂದ ಕುಟುಂಬಕ್ಕೆ ಸಹಿಸಲಾಗದ ನೋವು, ಬಹುಜನ ಸಮಾಜಕ್ಕೆ ದೊಡ್ಡ ನಷ್ಟ ಉಂಟಾಗಿದೆ ಎಂದರು.
ಹಿರಿಯ ಸಾಮಾಜಿಕ ಚಿಂತಕ , ಹೋರಾಟಗಾರ ಲೋಲಾಕ್ಷ ಮಂಗಳೂರು ಅವರು ನುಡಿ ನಮನ ಸಲ್ಲಿಸುತ್ತಾ ಮಾತನಾಡಿ, ಬಹುಜನ ಸಮಾಜ ಚಳುವಳಿ ನೇತಾರ ಅಂಬೇಡ್ಕರ್ ವಾದಿ ಪಿ.ಡೀಕಯ್ಯ ಅವರ ಸಾವಿನ ಸುತ್ತ ಇರುವ ಸಂಶಯಗಳು ನಿವಾರಣೆಯಾಗಿ ಸಾವಿಗೆ ನ್ಯಾಯ ಸಿಗಲಿ ಎಂದರು.
ಪದ್ಮುಂಜ ಸಿ.ಎ. ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಶೆಟ್ಟಿ ಪಣೆಕ್ಕರ, ನಿವೃತ್ತ ಮ್ಯಾನೇಜರ್ ತಿಮ್ಮಯ್ಯ ಗೌಡ , ಡಾ.ರಾಜಾರಾಮ್, ಎಲ್ ಐ ಸಿ ಅಧಿಕಾರಿ, ಬಿ.ಎಸ್.ಪಿ. ರಾಜ್ಯ ಮುಖಂಡ ಕಾಂತಪ್ಪ ಆಲಂಗಾರ್, ಪ.ಜಾ., ಪ.ಪಂ. ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಮೋಹನಾಂಗಯ್ಯ ಸ್ವಾಮಿ, ನ್ಯಾಯವಾದಿ ಶಿವಕುಮಾರ್ , ಬೆಳ್ತಂಗಡಿ ಠಾಣಾ ಪೊಲೀಸ್ ವೆಂಕಪ್ಪ ಪಿ.ಎಸ್., ಹಿರಿಯರಾದ ಬೀರಣ್ಣ ಸಾಧನ, ಅಣ್ಣು ಸಾಧನ, ಪೊಡಿಯ ಬಾಂಗೇರು, ಎಲ್ ಐ ಸಿ ಅಧಿಕಾರಿ ಮೋಹನ್ ರಾಮನಗರ, ಸಾಮಾಜಿಕ ಹೋರಾಟಗಾರ ಶೇಖರ್ ಎಲ್, ಬಾಬು ಎಂ. ಬೆಳಾಲು, ಬಿ.ಎಸ್.ಪಿ.ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ಶ್ರೀನಿವಾಸ್ ಪಿ.ಎಸ್. ಮುಂತಾದವರು ನುಡಿ ನಮನ ಸಲ್ಲಿಸುತ್ತಾ ಪಿ.ಡೀಕಯ್ಯರವರ ಆಶಯಗಳ ಈಡೇರಿಕೆಗೆ ಶ್ರಮಿಸೋಣ ಎಂದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಕುಟುಂಬದ ಸದಸ್ಯರು ನುಡಿ ನಮನ ಸಲ್ಲಿಸಿದರು. ಬಂಗಾಡಿ ಕಾನದ – ಕಟದ ಜನ್ಮಭೂಮಿ ಶೋಧನಾ ಸಮಿತಿ ಗೌರವಾಧ್ಯಕ್ಷ ವೆಂಕಣ್ಣ ಕೊಯ್ಯೂರು, ಬಿ.ಎಸ್.ಪಿ ತಾಲೂಕು ಉಸ್ತುವಾರಿ ಸಂಜೀವ ನೀರಾಡಿ, ಬರಹಗಾರ ಸತೀಶ್ ಕಕ್ಯಪದವು ಉಪಸ್ಥಿತರಿದ್ದರು. ಅಚುಶ್ರೀ ಬಾಂಗೇರು ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮಕ್ಕೆ ಶಾಸಕ ಹರೀಶ್ ಪೂಂಜ ಭೇಟಿ ನೀಡಿ ಪಿ.ಡೀಕಯ್ಯ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಣೆಯೊಂದಿಗೆ ಗೌರವ ಸಲ್ಲಿಸಿ ಅವರ ಕುಟುಂಬಕ್ಕೆ ಸಾಂತ್ವನ ನೀಡಿದರು. ಈ ಸಂದರ್ಭ ಪಿ.ಡೀಕಯ್ಯ ಅವರ ನಿಗೂಢ ಸಾವಿನ ಬಗ್ಗೆ ನೀಡಿರುವ ದೂರಿಗೆ ಸಂಬಂಧಿಸಿ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಲು ಕ್ರಮಕೈಗೊಳ್ಳುವಂತೆ ಶಾಸಕರಲ್ಲಿ ಕುಟುಂಬದ ಸದಸ್ಯರು ವಿನಂತಿಸಿಕೊಂಡಿದ್ದು ಈ ಬಗ್ಗೆ ಶಾಸಕರು ಭರವಸೆ ನೀಡಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka