ರಾಜಸ್ಥಾನದಲ್ಲಿ ದಲಿತ ಬಾಲಕನ ಹತ್ಯೆ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು: ಬಿಜೆಪಿ ಒತ್ತಾಯ
ಉಡುಪಿ: ರಾಜಸ್ಥಾನದಲ್ಲಿ ದಲಿತ ಬಾಲಕನ ಹತ್ಯೆ ನಡೆದಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವ ವಿಚಾರ. ಜುಲೈ 25ರಂದು ಶಿಕ್ಷಕನ ಮಡಕೆಯ ನೀರನ್ನು ಮುಟ್ಟಿದ ಕಾರಣಕ್ಕೆ ಶಾಲೆಯ ಮುಖ್ಯೋಪಾಧ್ಯಾಯರು ಹುಡುಗನಿಗೆ ಹೊಡೆಯುತ್ತಾರೆ. ಬಾಲಕನ್ನು ಮೊದಲು ಸರ್ಕಾರಿ ಆಸ್ಪತ್ರೆಗೆ ಮತ್ತು ಆ ಬಳಿಕ ಉದಯಪುರ ಆಸ್ಪತ್ರೆಯಲ್ಲಿ ದಾಖಲಿಸಲಾಗುತ್ತದೆ. ಒಂದು ತಿಂಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ 9 ವರ್ಷದ ಬಾಲಕ ಸಾವಿಗೀಡಾಗುತ್ತಾನೆ. ಬಾಲಕನ ಹತ್ಯೆಗೈದ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಬಿಜೆಪಿ ಜಿಲ್ಲಾ ಎಸ್.ಸಿ. ಮೋರ್ಚಾ ಆಗ್ರಹಿಸುತ್ತದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ ಹೇಳಿದರು.
ರಾಜಸ್ಥಾನದಲ್ಲಿ ನಡೆದ ದಲಿತ ಬಾಲಕನ ಹತ್ಯೆಯನ್ನು ಖಂಡಿಸಿ ಬಿಜೆಪಿ ಜಿಲ್ಲಾ ಎಸ್.ಸಿ. ಮೋರ್ಚಾ ಅಧ್ಯಕ್ಷ ಗೋಪಾಲ ಕಳಂಜಿ ಅಧ್ಯಕ್ಷತೆಯಲ್ಲಿ ಗುರುವಾರ ಬಿಜೆಪಿ ಜಿಲ್ಲಾ ಕಚೇರಿಯ ಬಳಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ರಾಜಸ್ಥಾನದ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು. ಬಾಲಕನ ಮನೆಯವರು ಪೊಲೀಸ್ ಠಾಣೆಗೆ ಹೋದಾಗ ಎಫ್.ಐ.ಆರ್. ದಾಖಲಿಸಲೂ ಸಿದ್ದರಿಲ್ಲದ ನಿರ್ಲಜ್ಜ ಸರ್ಕಾರದ ಆಡಳಿತವಿದ್ದರೆ ಅದು ರಾಜಸ್ಥಾನದ ಕಾಂಗ್ರೆಸ್ ಸರ್ಕಾರ. ದಲಿತರ ಬಗ್ಗೆ ದೊಡ್ಡ ಮಾತುಗಳನ್ನಾಡುವ ಕಾಂಗ್ರೆಸ್ ನಾಯಕರು ಈಗ ಎಲ್ಲಿದ್ದಾರೆ. ಶಾಲಾ ಬಾಲಕ ಶಿಕ್ಷಕನ ಮಡಕೆಯ ನೀರನ್ನು ಮುಟ್ಟಿದ ಕಾರಣಕ್ಕೆ ಬಾಲಕನ ಕೊಲೆಯಾಗುತ್ತದೆಯೆಂದಾದರೆ ನಾಗರಿಕ ಸಮಾಜ ಚಿಂತನೆ ಮಾಡಬೇಕಾಗಿದೆ. ಇವತ್ತು ಎಂತಹ ಸ್ಥಿತಿಯಲ್ಲಿ ನಾವಿದ್ದೇವೆ ಎನ್ನುವುದನ್ನು ಅಲೋಚನೆ ಮಾಡಬೇಕಾಗಿದೆ ಎಂದರು.
ಇದು ರಾಜಸ್ಥಾನದಲ್ಲಿ ನಡೆದ ಮೊದಲ ಘಟನೆಯೇನಲ್ಲ, ಈ ಹಿಂದೆ ಕನ್ಹಯ್ಯಾಲಾಲ್ ಪ್ರಕರಣ ಕೂಡಾ ನಿರ್ಲಜ್ಜ ಸರ್ಕಾರದ ಆಡಳಿತಾವಧಿಯಲ್ಲಿಯೆ ನಡೆದ ಘಟನೆ. ರಾಜಸ್ಥಾನದಲ್ಲಿರುವುದು ಜನ ವಿರೋಧಿ ಸರ್ಕಾರ. ದಲಿತ ಬಾಲಕನಿಗೆ ಆಗಿರುವ ಅನ್ಯಾಯ ದೇಶವೇ ತಲೆ ತಗ್ಗಿಸಬೇಕಾದ ವಿಚಾರ ಎಂದರು.
ಬಿಜೆಪಿ ರಾಜ್ಯ ಎಸ್.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಕನು ಬಾಲಕನಿಗೆ ವಿದ್ಯೆ ನೀಡುವ ಬದಲಿಗೆ ಅಮಾನವೀಯ ಸಾವು ನೀಡಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ರಾಜಸ್ಥಾನದ ದಲಿತ ವಿರೋಧಿ ಕಾಂಗ್ರೆಸ್ ಸರ್ಕಾರ ಈ ಘಟನೆಯ ಬಗ್ಗೆ ಮುಂದಿನ ದಿನಗಳಲ್ಲಿ ತಕ್ಕ ಬೆಲೆ ತೆರಬೇಕಾದೀತು. ಅಸಂಬದ್ಧ ವಿಚಾರಗಳ ಬಗ್ಗೆ ದಿನಂಪ್ರತಿ ಮಾತನಾಡುವ ಕಾಂಗ್ರೆಸ್ ಮುಖಂಡರು ಇಂತಹ ಕುಕೃತ್ಯದ ಬಗ್ಗೆ ಚಕಾರವೆತ್ತದಿರುವುದು ಖಂಡನೀಯ. ಬಿಜೆಪಿ ಸದಾ ದಲಿತರ ಶ್ರೇಯೋಭಿವೃದ್ಧಿ ಪರ ಚಿಂತನೆ ಹೊಂದಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜೀವನದ ಸ್ಮರಣೀಯ ಸ್ಥಳಗಳನ್ನು ಪಂಚತೀರ್ಥಗಳ ಹೆಸರಲ್ಲಿ ಅಭಿವೃದ್ಧಿಪಡಿದಿರುವುದು ಇದಕ್ಕೆ ಸಾಕ್ಷಿಯಾಗಿದೆ. ಸದ್ರಿ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿ ಆರೋಪಿಗೆ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಎಂದು ಅವರು ರಾಜಸ್ಥಾನ ಸರಕಾರ ಮತ್ತು ಕೇಂದ್ರ ಸರಕಾರವನ್ನು ಆಗ್ರಹಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಗೀತಾಂಜಲಿ ಎಮ್. ಸುವರ್ಣ ಮತ್ತು ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿ ಘಟನೆಯನ್ನು ಖಂಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಫಲಾನುಭವಿಗಳ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ಅಂಡಾರು ದೇವಿಪ್ರಸಾದ್ ಶೆಟ್ಟಿ, ಬಿಜೆಪಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ಜಗದೀಶ್ ಆಚಾರ್ಯ ಕಪ್ಪೆಟ್ಟು, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ದಾವೂದ್ ಅಬೂಬಕರ್, ಬಿಜೆಪಿ ಕಾಪು ಮಂಡಲಾಧ್ಯಕ್ಷ ಶ್ರೀಕಾಂತ್ ನಾಯಕ್, ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್ ಮಟ್ಟು, ಉಡುಪಿ ನಗರ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ್, ನಗರ ಯುವ ಮೋರ್ಚಾ ಅಧ್ಯಕ್ಷ ರೋಷನ್ ಶೆಟ್ಟಿ ಹಾಗೂ ಜಿಲ್ಲಾ ಮತ್ತು ಮಂಡಲ ಎಸ್.ಸಿ ಮೋರ್ಚಾ ಸಹಿತ ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾ ಎಸ್.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣಮೂರ್ತಿ ಡಿ.ಬಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ, ಸದಾನಂದ ಕೈಪುಂಜಾಲು ವಂದಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka