ದಲಿತ ಶಿಕ್ಷಕಿಯ ಮೇಲೆ ಪೆಟ್ರೋಲ್ ಸುರಿದು ಸಜೀವ ದಹನ!

ರಾಜಸ್ಥಾನ: ಜಾಲೋರ್ ನಲ್ಲಿ ಶಿಕ್ಷಕನೋರ್ವ ನೀರಿನ ಕೊಡ ಮುಟ್ಟಿದ ದಲಿತ ಬಾಲಕನಿಗೆ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆ ನಡೆಸಿದ ಘಟನೆ ಮಾಸುವ ಮೊದಲೇ ರಾಜಸ್ಥಾನದಲ್ಲಿ ಮತ್ತೊಂದು ಭೀಕರ ಘಟನೆ ನಡೆದಿದ್ದು, ದಲಿತ ಶಿಕ್ಷಕಿಯೊಬ್ಬರನ್ನು ಸಜೀವ ದಹಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಜೈಪುರ ಮೂಲದ 35 ವರ್ಷ ವಯಸ್ಸಿನ ಅನಿತಾ ರೇಗಾರ್ ಅವರು ಹತ್ಯೆಗೀಡಾದ ಶಿಕ್ಷಕಿಯಾಗಿದ್ದು, ಜೈಪುರದ ರೇಗಾರೋದಲ್ಲಿ ವಾಸವಿದ್ದ ಶಿಕ್ಷಕಿ ತಮ್ಮ 6 ವರ್ಷದ ಮಗನೊಂದಿಗೆ ಇಲ್ಲಿನ ವೀಣಾ ಸ್ಮಾರಕ ಶಾಲೆಗೆ ಹೋಗುತ್ತಿದ್ದರು. ಈ ವೇಳೆ ಏಕಾಏಕಿ ದುಷ್ಕರ್ಮಿಗಳು ಅವರನ್ನು ಸುತ್ತವರಿದು ಹಲ್ಲೆ ನಡೆಸಿದ್ದಾರೆ.
ಹಲ್ಲೆಯ ನಡುವೆಯೇ ಶಿಕ್ಷಕಿ ಹೇಗೋ ತಪ್ಪಿಸಿಕೊಂಡು ಸ್ಥಳೀಯ ಮನೆಯೊಂದಕ್ಕೆ ಪ್ರವೇಶಿಸಿದ್ದು, ಪೊಲೀಸರಿಗೆ ಕರೆ ಮಾಡಿದ್ದಾರೆ. ಆದರೆ ಸಾಕಷ್ಟು ಹೊತ್ತು ಕಳೆದರೂ ಪೊಲೀಸರು ಬಾರದೇ ದುಷ್ಕರ್ಮಿಗಳ ಕೃತ್ಯಕ್ಕೆ ನೆರವಾಗಿದ್ದಾರೆನ್ನಲಾಗಿದೆ.
ಅಷ್ಟೊತ್ತಿಗಾಗಲೇ ದುಷ್ಕರ್ಮಿಗಳು ಅನಿತಾ ಅವರನ್ನು ಮನೆಯಿಂದ ಹೊರಗೆಳೆದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಸಹಾಯಕ್ಕಾಗಿ ಅನಿತಾ ಪರಿಪರಿಯಾಗಿ ಬೇಡಿಕೊಂಡರೂ ಯಾರೂ ಕೂಡ ಅವರ ನೆರವಿಗೆ ಬಂದಿರಲಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಬಂದ ಅನಿತಾ ಅವರ ಪತಿ ತಾರಾ ಚಂದ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶೇ.70ರಷ್ಟು ಸುಟ್ಟಗಾಯಗಳಿಂದ ಗಂಭೀರ ಸ್ಥಿತಿಯಲ್ಲಿದ್ದ ಅನಿತಾ ಅವರು ಚಿಕಿತ್ಸೆ ಫಲಿಸದೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಸಾವಿಗೂ ಮೊದಲು ಅವರು ಹೇಳಿಕೆ ದಾಖಲಿಸಿದ್ದು, ಇದರನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka