ಪ್ರಧಾನಿ ಮೋದಿ ಮಂಗಳೂರು ಭೇಟಿ ಯಶಸ್ವಿಗೊಳಿಸಲು ಸಚಿವ ವಿ.ಸುನಿಲ್ ಕುಮಾರ್ ಕರೆ
ಉಡುಪಿ: ದ.ಕ. ಜಿಲ್ಲಾ ಉಸ್ತುವಾರಿ ಸಚಿವನಾದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರ ಪ್ರಥಮ ಕಾರ್ಯಕ್ರಮ ಸೆ.2ರಂದು ಮಂಗಳೂರಿನ ಗೋಲ್ಡ್ ಪಿಂಚ್ ಮೈದಾನದಲ್ಲಿ ನಡೆಯಲಿದೆ. ಚುನಾವಣಾ ಸಂಬಂಧಿತ ಉಭಯ ಜಿಲ್ಲೆಗಳ ವಿವಿಧ ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿಯವರು ಭಾಗಿಯಾಗಿದ್ದರೂ, ವಿವಿಧ ಅಭಿವೃದ್ಧಿ ಚಟುವಟಿಕೆಗಳಿಗೆ ಚಾಲನೆ ನೀಡುವ ಸರಕಾರಿ ಕಾರ್ಯಕ್ರಮ ಇದಾಗಿದೆ. ದ.ಕ ಜಿಲ್ಲೆಯಿಂದ ಸುಮಾರು 80 ಸಾವಿರ ಮಂದಿ ಹಾಗೂ ಉಡುಪಿ ಜಿಲ್ಲೆಯಿಂದ ಸುಮಾರು 20 ಸಾವಿರ ಮಂದಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಬೇಕು ಎಂದು ಕರ್ನಾಟಕ ಸರಕಾರದ ಇಂಧನ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.
ಶುಕ್ರವಾರ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಪ್ರಧಾನಿ ಮಂಗಳೂರು ಭೇಟಿ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಮಂಗಳೂರಿನಲ್ಲಿ ನಡೆಯುವ ಪ್ರಧಾನಿ ಮೋದಿಯವರ ಮೊದಲನೇ ಸರಕಾರಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ನೆರವೇರಿಸಲು ಯೋಜನೆಯನ್ನು ರೂಪಿಸಲಾಗಿದೆ. ಸೆ.2ರ ಮಧ್ಯಾಹ್ನ 2:30ಕ್ಕೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಪ್ರಧಾನಿ ಮೋದಿಯವರು ಸಂಜೆ 4 ಗಂಟೆಗೆ ಆಗಮಿಸಲಿದ್ದಾರೆ. ಗೋಲ್ಡ್ ಪಿಂಚ್ ಮೈದಾನದಲ್ಲಿ ಸುಮಾರು 1 ಲಕ್ಷ ಮಂದಿ ಸೇರಲಿದ್ದು, ಪ್ರಧಾನಿಯವರು ಆಗಮಿಸುವ ದಾರಿಯಲ್ಲಿ ಸುಮಾರು 2 ಕಿ.ಮೀ ಉದ್ದಕ್ಕೆ ಸುಮಾರು 15 ಸಾವಿರ ಮಂದಿಯನ್ನು ಸೇರಿಸಿ ರೋಡ್ ಶೋ ಮಾಡಲು ಸಿದ್ಧತೆಗಳನ್ನು ನಡೆಸಲಾಗಿದೆ.
ಈಗಾಗಲೇ ಸರಕಾರಿ ಅಧಿಕಾರಿಗಳ ಮಟ್ಟದ ಸಭೆಗಳನ್ನು ನಡೆಸಲಾಗಿದೆ. ಪ್ರತೀ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶೇಕಡಾ 50ಕ್ಕೂ ಹೆಚ್ಚು ಮನೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದ ಯಾವುದಾದರೊಂದು ಯೋಜನೆಗಳು ತಲುಪಿರುವ ಹಿನ್ನೆಲೆಯಲ್ಲಿ ಅಂತಹ ಫಲಾನುಭವಿಗಳನ್ನು ಕೂಡಾ ಈ ಸಮಾವೇಶದಲ್ಲಿ ಜೋಡಿಸಿಕೊಳ್ಳಲು ಸಿದ್ಧತೆಗಳನ್ನು ನಡೆಸಲಾಗಿದೆ. ಉಭಯ ಜಿಲ್ಲೆಗಳಲ್ಲಿ ಯೋಜನಾಬದ್ಧ ಪೂರ್ವ ಸಿದ್ದತಾ ಸಭೆಗಳ ಮೂಲಕ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ, ಸೆ.2ರ ಪ್ರಧಾನಿ ಮೋದಿಯವರ ಮಂಗಳೂರು ಐತಿಹಾಸಿಕ ಸಮಾವೇಶದಲ್ಲಿ ಸುಮಾರು 15 ಸಾವಿರ ಮಂದಿ ಮೇಲ್ಪಟ್ಟು ಭಾಗವಹಿಸಲು ಜಿಲ್ಲಾದ್ಯಂತ ಆ.27, 28 ಮತ್ತು 29ರಂದು ಬೈಂದೂರು, ಕುಂದಾಪುರ, ಕಾಪು, ಕಾರ್ಕಳ, ಉಡುಪಿ ಗ್ರಾಮಾಂತರ ಮತ್ತು ಉಡುಪಿ ನಗರ ಮಂಡಲಗಳ ಪೂರ್ವಸಿದ್ಧತಾ ಸಭೆಗಳು ನಡೆಯಲಿವೆ. ಪ್ರತೀ ಗ್ರಾಮ ಪಂಚಾಯತ್ ವ್ಯಾಪ್ತಿಯಿಂದ ಮತ್ತು ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಗಳ ಪ್ರತೀ ವಾರ್ಡ್ ಗಳ ವ್ಯಾಪ್ತಿಯಿಂದ ಕನಿಷ್ಠ ನೂರು ಮಂದಿ ಹಾಗೂ ಪಕ್ಷದ ಪ್ರಮುಖರು, ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತ ಬಂಧುಗಳು ಮತ್ತು ಸರಕಾರದ ಯೋಜನೆಗಳ ಫಲಾನುಭವಿಗಳು ಸಕ್ರಿಯವಾಗಿ ಭಾಗವಹಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದರು.
ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ ಮಾತನಾಡಿ, ಚುನಾವಣಾ ವರ್ಷದಲ್ಲಿರುವ ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮಂಗಳೂರು ಬೇಟಿ ಕಾರ್ಯಕ್ರಮ ಅತ್ಯಂತ ಮಹತ್ವವನ್ನು ಪಡೆದಿದೆ. ಪಕ್ಷದ ಪ್ರಮುಖರು, ಜವಾಬ್ದಾರಿಯುತ ಪದಾಧಿಕಾರಿಗಳು, ಕಾರ್ಯಕರ್ತ ಬಂಧುಗಳು ಮತ್ತು ಎಲ್ಲಾ ಸ್ತರದ ಜನಪ್ರತಿನಿಧಿಗಳು ಒಂದಾಗಿ ಸಂಘಟಿತ ಪ್ರಯತ್ನದ ಮೂಲಕ ಗರಿಷ್ಠ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಧಾನಿ ಮೋದಿಯವರ ಮಂಗಳೂರು ಸಮಾವೇಶವನ್ನು ಅತ್ಯಂತ ಯಶಸ್ವಿಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಉಡುಪಿ ಶಾಸಕ ಕೆ.ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಎ. ಸುವರ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಗುರ್ಮೆ ಸುರೇಶ್ ಶೆಟ್ಟಿ, ಬಿಜೆಪಿ ರಾಜ್ಯ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ರಾಜ್ಯ ಎಸ್.ಟಿ. ಮೋರ್ಚಾ ಕಾರ್ಯದರ್ಶಿ ಉಮೇಶ್ ನಾಯ್ಕ್, ಫಲಾನುಭವಿಗಳ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ಅಂಡಾರು ದೇವಿ ಪ್ರಸಾದ್ ಶೆಟ್ಟಿ, ಕರ್ನಾಟಕ ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ ಹಾಗೂ ಪಕ್ಷದ ಪ್ರಮುಖರು, ಬಿಜೆಪಿ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಹಾಗೂ ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ್ ಎಸ್. ಕಲ್ಮಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ವಂದಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka