ಧರ್ಮಸ್ಥಳದಲ್ಲಿ ಸಣ್ಣ ವಿಮಾನ ನಿಲ್ದಾಣ ನಿರ್ಮಾಣ: ಸಚಿವ ವಿ.ಸೋಮಣ್ಣ - Mahanayaka

ಧರ್ಮಸ್ಥಳದಲ್ಲಿ ಸಣ್ಣ ವಿಮಾನ ನಿಲ್ದಾಣ ನಿರ್ಮಾಣ: ಸಚಿವ ವಿ.ಸೋಮಣ್ಣ

v somanna
28/08/2022

ಬೆಳ್ತಂಗಡಿ; ಪ್ರವಾಸೋದ್ಯಮ ಅಭಿವೃದ್ದಿಯ ದೃಷ್ಟಿಯಿಂದ ಹಾಗೂ ಶ್ರೀ ಕ್ಷೇತ್ರಕ್ಕೆ ಬರುವ ಯಾತ್ರಿಕರಿಗೆ ಪ್ರಯೋಜನವಾಗುವಂತೆ ಧರ್ಮಸ್ಥಳದಲ್ಲಿ ಸಣ್ಣ ವಿಮಾನ ನಿಲ್ದಾಣ ನಿರ್ಮಿಸುವುದಾಗಿ ರಾಜ್ಯ ಸರಕಾರದ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಹೇಳಿದರು.


Provided by

ಅವರು ಬೆಳ್ತಂಗಡಿಯಲ್ಲಿ ಶನಿವಾರ ವಸತಿ ಇಲಾಖೆಯಿಂದ ತಾಲೂಕಿನ ಫಲಾನುಭಾವಿಗಳಿಗೆ ಮಂಜೂರಾಗಿರುವ ಮನೆಗಳ ಆದೇಶ ಪತ್ರ ವಿತರಿಸಿ ಮಾತನಾಡಿದರು.

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ನೂರು ಎಕ್ರೆ ಜಮೀನು ಅಗತ್ಯವಿದ್ದು, ಸುಮಾರು ನೂರು ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ಮಾಣಗೊಳ್ಳಲಿದೆ. ಏಕಕಾಲದಲ್ಲಿ ನಾಲ್ಕು ವಿಮಾನಗಳಿಗೆ ಅವಕಾಶವಿರುವ ವಿಮಾನ ನಿಲ್ದಾಣ ನಿರ್ಮಿಸಲಾಗುವುದು ಎಂದರು.


Provided by

ಈ ಬಗ್ಗೆ ಈಗಾಗಲೇ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದ್ದು, ಜಾಗ ಗುರುತಿಸುವ ಕಾರ್ಯವನ್ನು ಮಾಡಲಾಗುವುದು.  ಒಂದು ವಾರದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಡಿ.ಪಿ.ಆರ್. ಸಿದ್ದಪಡಿಸಲಾಗುವುದು ಎಂದು ಅವರು ತಿಳಿಸಿದರು. ಈ ಯೋಜನೆಗೆ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆಯಲಾಗುವುದು ಎಂದು ತಿಳಿಸಿದರು.

ಶಿವಮೊಗ್ಗ ವಿಮಾನ ನಿಲ್ದಾಣ ಡಿಸೆಂಬರ್ ವೇಳೆಗೆ ಉದ್ಘಾಟನೆಗೊಳ್ಳಲಿದೆ. ರಾಯಚೂರು ವಿಮಾನ ನಿಲ್ದಾಣಕ್ಕೆ ಸದ್ಯದಲ್ಲಿಯೇ ಶಂಕುಸ್ಥಾಪನೆ ನೆರವೇರಿಸುವುದಾಗಿ ತಿಳಿಸಿದ ಅವರು ಹಾಸನ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದರು.

ಬೆಳ್ತಂಗಡಿ ತಾಲೂಕಿನಲ್ಲಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ರೂ. ಹತ್ತು ಕೋಟಿ ವಿಶೇಷ ಅನುದಾನ ಒದಗಿಸುವುದಾಗಿ ಭರವಸೆ ನೀಡಿದ ಅವರು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅವರ ಬೇಡಿಕೆಯಂತೆ ತಾಲೂಕಿಗೆ ಇನ್ನಷ್ಟು ಮನೆಗಳನ್ನು ಒದಗಿಸುವುದಾಗಿ ತಿಳಿಸಿದರು.

ತಾಲೂಕಿನ ಎಲ್ಲ ಗ್ರಾಮ ಪಂಚಾಯತುಗಳಲ್ಲಿ ಕೂಡಲೇ ಸಮೀಕ್ಷೆ ನಡೆಸಿ ವಸತಿ ರಹಿತರ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು ಅಗತ್ಯವಿರುವಷ್ಟು ಮನೆಗಳನ್ನು ಈ ವರ್ಷ ಮಂಜೂರು ಮಾಡುವುದಾಗಿ ಭರವಸೆ ನೀಡಿದರು.

ರಾಜ್ಯದಲ್ಲಿ ಮಂಜೂರಾಗಿರುವ ಮನೆಗಳಿಗೆ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿದ ಸಚಿವರು ಇದೀಗ ದಾಖಲೀಕರಣವನ್ನು ಸುಲಭಗೊಳಿಸಲಾಗಿದ್ದು ಫಲಾನುಭಾವಿಗಳು ಯಾವುದೇ ವಿಳಂಬವಿಲ್ಲದೆ ಸುಲಭವಾಗಿ ಹಣ ಪಡೆಯಬಹುದಾಗಿದೆ. ಹಿಂದೆ ಯಾವುದೇ ಯೋಜನೆಯಲ್ಲಿ ಮನೆ ಪಡೆದು ಹಣ ಸಿದಿರುವ ಫಲಾನುಭಾವಿಗಳಿಗೆ ಅದನ್ನು ಒದಗಿಸಲಾಗುವುದು ಎಂದರು.

ಮನೆಗಳನ್ನು ಪಡೆದವರು ಒಳ್ಳೆಯ ಮನೆ ಕಟ್ಟಿ ನೆಮ್ಮದಿಯ ಜೀವನ ನಡೆಸಿ ಯಾವುದೇಕಾರಣಕ್ಕೂ ಮನೆಗಳನ್ನು ಮಾರಾಟ ಮಾಡಲು ಮು‌ದಾಗಬೇಡಿ ಎಂದು ಸಚಿವರು ಫಲಾನೂಭಾವಿಗಳಿಗೆ ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ವಹಿಸಿ ಮಾತನಾಡಿ ತಾಲೂಕಿಗೆ ಇನ್ನೂ ಐದು ಸಾವಿರ ಮನೆಗಳ ಅಗತ್ಯವಿದ್ದು ಮಂಜೂರು ಮಾಡುವಂತೆ ವಿನಂತಿಸಿದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಾಧಿಕಾರಿ ಡಾ.ಕುಮಾರ್, ಪಟ್ಟಣ ಪಂಚಾಯತು ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ,ರಾಜೀವ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ಅರುಣ್ ಕುಮಾರ್, ಜಿ.ಪಂ ಯೋಜನಾ ನಿರ್ದೇಶಕ ಹೆಚ್. ಆರ್ ನಾಯಕ್, ಬೆಳ್ತಂಗಡಿ ತಹಶಿಲ್ದಾರ್ ಪೃಥ್ವಿ ಸಾನಿಕಮ್, ತಾಲೂಕಿನ ಗ್ರಾಮ ಪಂಚಾಯತು ಅಧ್ಯಕ್ಷರುಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ತಾಲೂಕಿನ ಗ್ರಾಮ ಪಂಚಾಯತು ಅಧ್ಯಕ್ಷರುಗಳು ಸಚಿವರಿಗೆ ಪುಸ್ತಕ ನೀಡಿ ಅಭಿನಂದಿಸಿದರು. ಶಾಸಕರ ನೇತೃತ್ವದಲ್ಲಿ ಸಚಿವರನ್ನು ಸನ್ಮಾನಿಸಲಾಯಿತು. ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್ ಸ್ವಾಗತಿಸಿದರು, ಪ್ರಕಾಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ತಾಲೂಕಿನ ವಿವಿಧ ಭಾಗಗಳಿಂದ ವಸತಿ ಯೋಜನೆಯ ಫಲಾನೂಭಾವಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ