ನಿಮ್ಮನ್ನೇ ಪ್ರಶ್ನಿಸುವ ನಾಯಕರನ್ನು ದಮನಿತರಿಗೆ ಕೊಟ್ಟು ಬಿಟ್ಟಿರಲ್ಲ ಎನ್.ಮಹೇಶ್'ರವರೇ! - Mahanayaka

ನಿಮ್ಮನ್ನೇ ಪ್ರಶ್ನಿಸುವ ನಾಯಕರನ್ನು ದಮನಿತರಿಗೆ ಕೊಟ್ಟು ಬಿಟ್ಟಿರಲ್ಲ ಎನ್.ಮಹೇಶ್’ರವರೇ!

n mahesh
31/08/2022

  • ಬುದ್ಧಪ್ರಿಯ, ಬೆಂಗಳೂರು

ನಮ್ಮ ದೇಶದ ರಾಜಕೀಯ ವ್ಯವಸ್ಥೆ ಕಾಲ ಕಾಲಕ್ಕೆ ತಕ್ಕಂತೆ ಬದಲಾಗುತ್ತಲೇ ಹೋಗುತ್ತಿದೆ. 70 ವರ್ಷಗಳ ಕಾಲ ಕಾಂಗ್ರೆಸ್ ಆಡಿದ್ದೇ ಆಟ ಎಂಬಂತೆ ರಾಜಕೀಯ ವ್ಯವಸ್ಥೆ ಇದ್ದರೆ, ಇದೀಗ ಬಿಜೆಪಿ ಆಡಿದ್ದೇ ಆಟ ಎಂಬ ಸ್ಥಿತಿಯಲ್ಲಿ ರಾಜಕೀಯ ವ್ಯವಸ್ಥೆ ಸಾಗುತ್ತಿದೆ. ರಾಜಕೀಯ ವ್ಯವಸ್ಥೆಯ ಜೊತೆಗೆ ರಾಜಕಾರಣಿಗಳು ಕೂಡ ಬದಲಾವಣೆಗೆ ಒಗ್ಗಿಕೊಂಡು ತಾವೂ ಬದಲಾಗುತ್ತಾ, ಕಾಲಕ್ಕೆ ತಕ್ಕಂತೆ ರಾಜಕೀಯ ಮಾಡುತ್ತಿದ್ದಾರೆ. ಇಷ್ಟೆಲ್ಲ ಯಾಕೆ ಪೀಠಿಕೆ ಹಾಕಬೇಕಾಯ್ತು ಅಂದ್ರೆ ಕೊಳ್ಳೇಗಾಲ ಶಾಸಕರಾದ ಎನ್.ಮಹೇಶ್ ಅವರ ರಾಜಕೀಯ ನಡೆಯ ಬಗ್ಗೆ ಕೆಲವರು ಸಾಕಷ್ಟು ಟೀಕೆಗಳನ್ನು ಮಾಡುತ್ತಿದ್ದಾರೆ. ಟೀಕೆಗಳನ್ನು ಮತ್ತು ವಿಮರ್ಶೆಗಳನ್ನು ಸಮಾನವಾಗಿ ಎನ್.ಮಹೇಶ್ ಸ್ವೀಕರಿಸುತ್ತಾರೆ ಎಂದು ಭಾವಿಸೋಣ ಅದರ ಜೊತೆಗೆ ಎನ್.ಮಹೇಶ್ ಎಲ್ಲೋ ಒಂದು ಕಡೆ ಟಾರ್ಗೆಟ್ ಆಗ್ತಾ ಇದ್ದಾರಾ ಎಂಬ ಬಗ್ಗೆಯೂ ಯೋಚಿಸಲೇ ಬೇಕಿದೆ.


Provided by

ಇತ್ತೀಚೆಗೆ ಎನ್.ಮಹೇಶ್ ಅವರ ಕುರಿತು ಪತ್ರಿಕೆಯೊಂದರಲ್ಲಿ “ದಮನಿತರಿಗೆ ನೀವೇನು ಕೊಟ್ಟಿರಿ ಎನ್.ಮಹೇಶ್ ರವರೇ?” ಅನ್ನೋ ಶೀರ್ಷಿಕೆಯಲ್ಲಿ ಪ್ರಕಟವಾದ ಲೇಖನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಎನ್.ಮಹೇಶ್ ಅವರು ಈ ಹಿಂದೆ ಮನುವಾದದ ವಿರುದ್ಧ, ಬ್ರಾಹ್ಮಣ ವಾದದ ವಿರುದ್ಧ ಮಾತನಾಡುತ್ತಿದ್ದರು. ಈಗೇಕೆ ಮಾತನಾಡುತ್ತಿಲ್ಲ, ವೀರ ಸಾವರ್ಕರ್ ಬಗ್ಗೆ ಬರೆದು ಬಿಟ್ಟಿದ್ದೀರಿ, ನಾವು ಅಂಬೇಡ್ಕರ್ ಮಕ್ಕಳು ಅಂತಿದ್ದವರು ಈಗ ಎಲ್ಲಿದ್ದೀರಿ ಎಂಬೆಲ್ಲ ಪ್ರಶ್ನೆಗಳನ್ನು ಎನ್.ಮಹೇಶ್ ಅವರಿಗೆ ಕೇಳಲಾಗಿದೆ. ಇಷ್ಟೆಲ್ಲ ಪ್ರಶ್ನೆಗಳನ್ನು ಕೇಳಿದ್ದರೂ, ಎನ್.ಮಹೇಶ್ ಅವರು ಸೃಷ್ಟಿಸಿದ ಚಳುವಳಿ, ಅದರಿಂದ ಸಮಾಜ, ಜನರು ಎಷ್ಟೊಂದು ಜಾಗೃತರಾಗಿದ್ದಾರೆ ಅನ್ನೋದನ್ನು ಎಲ್ಲಿಯೂ ಪ್ರಸ್ತಾಪಿಸದಿರುವುದು ನಿಜಕ್ಕೂ ದುರಾದೃಷ್ಟ ಎಂದು ಭಾವಿಸುತ್ತೇನೆ.

ಎನ್.ಮಹೇಶ್ ಅವರು ಯುವ ಜನತೆಯ ಮೇಲೆ ತಮ್ಮ ಸಂಘಟನೆಗಳ ಮೂಲಕ ಈ ದೇಶದ ಇತಿಹಾಸದ ಬೆಳಕನ್ನು ಎಷ್ಟು ಚೆಲ್ಲಿದ್ದಾರೆಂದರೆ, ಇಂದು ಎನ್.ಮಹೇಶ್ ಅವರಿಂದ ಸಾಮಾಜಿಕ ವಿಚಾರಗಳನ್ನು ತಿಳಿದು, ಅವರನ್ನೇ ಪ್ರಶ್ನೆ ಮಾಡುವ, ವಿಮರ್ಶಿಸುವ, ಟೀಕಿಸುವ ಮಟ್ಟಕ್ಕೆ ಚಳುವಳಿಯ ಹುಡುಗರು ಬೆಳೆದು ನಿಂತಿದ್ದಾರೆ. ಇದರ ಬಗ್ಗೆ ಎನ್.ಮಹೇಶ್ ಅವರಿಗೂ ಹೆಮ್ಮೆ ಇರಬಹುದು. ಆದರೆ, ಇಂದು ಎನ್.ಮಹೇಶ್ ಅವರನ್ನು ಬಿಜೆಪಿಗೆ ಯಾಕೆ ಸೇರಿದ್ರಿ, ಅದು ಬ್ರಾಹ್ಮಣವಾದ, ಮನುವಾದ ಅಂತ ಸಾಕಷ್ಟು ಜನರು ಪ್ರಶ್ನಿಸುತ್ತಿದ್ದಾರೆ. ಹಾಗಿದ್ರೆ, ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದರೆ, ಅಂಬೇಡ್ಕರ್ ವಾದ ಆಗ್ತಿತ್ತೇ? ಕಾಂಗ್ರೆಸ್ ಪಕ್ಷವನ್ನು ನಂಬಬೇಡಿ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರೇ ಹೇಳಿದ್ದಾರೆ. ಹೀಗಿರುವಾಗ ಎನ್.ಮಹೇಶ್ ಕಾಂಗ್ರೆಸ್ ಗೆ ಸೇರ್ಪಡೆಯಾಗದೇ ಇರುವುದು ಸರಿಯಾದ ನಿರ್ಧಾರವಲ್ಲವೇ? ಎನ್ನುವ ಬಗ್ಗೆಯೂ ಯೋಚಿಸಬೇಕಿದೆ. ಅಂಬೇಡ್ಕರ್ ಅವರು ಕಾಂಗ್ರೆಸ್ ಪಕ್ಷವನ್ನು ಒಪ್ಪಿಕೊಂಡಿಲ್ಲ ಎನ್ನುವ ಸತ್ಯವನ್ನು ಕಾಂಗ್ರೆಸಿಗರು ಒಪ್ಪಿಕೊಳ್ಳುವುದಿಲ್ಲ. ಆದರೆ, ಕಾಂಗ್ರೆಸ್ ವಿರುದ್ಧ ಮಾತನಾಡುವ ದಲಿತ ಹೋರಾಟಗಾರರನ್ನು, ಜನಪ್ರತಿನಿಧಿಗಳನ್ನು ಅಂಬೇಡ್ಕರ್ ವಿರೋಧಿಗಳು ಎಂದು ಬಿಂಬಿಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ.


Provided by

ಸಮಾಜವನ್ನು, ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು, ಸಮಾಜ ಸುಧಾರಕರನ್ನು ಸಾಕಷ್ಟು ಅಧ್ಯಯನ ಮಾಡಿರುವ ಎನ್.ಮಹೇಶ್ ಅವರು ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರಿಂದಲೋ, ಮುಖಂಡರಿಂದಲೋ ಸಲಹೆ ಪಡೆದು ಯಾವ ಪಕ್ಷಕ್ಕೆ ಸೇರ್ಪಡೆಯಾಗಬೇಕಿತ್ತು ಅನ್ನೋ ವರಸೆಯಲ್ಲಿ ಎನ್.ಮಹೇಶ್ ಅವರನ್ನು ಟೀಕಿಸುವವರಿದ್ದಾರೆ. ಆದರೆ, ಇದೇ ಜನ ಎನ್.ಮಹೇಶ್ ಅವರನ್ನು ಬಿಎಸ್ ಪಿಯಿಂದ ಉಚ್ಛಾಟನೆ ಮಾಡಿದಾಗ ಕರ್ನಾಟಕದಲ್ಲಿ ಬಹುಜನ ಸಮಾಜ ಪಾರ್ಟಿಯ ಅಧ್ಯಾಯ ಕೊನೆಯಾಯ್ತು ಅಂತ ಸಂಭ್ರಮಿಸಿದವರಾಗಿದ್ದಾರೆ. ಆದರೆ ಎನ್.ಮಹೇಶ್ ಅವರು ಬಿಎಸ್ ಪಿಯಿಂದ ಉಚ್ಛಾಟನೆಗೊಂಡರೂ ಮತ್ತೆ ಮೈಕೊಡವಿನಿಂತು ತನ್ನ ಕ್ಷೇತ್ರದಲ್ಲಿ ಓಡಾಡಿದಾಗ ಕೈಕೈ ಹಿಚುಕಿಕೊಂಡರು. ಇನ್ನೊಂದು ತಮಾಷೆಯ ವಿಚಾರ ಅಂದ್ರೆ,  ಎನ್.ಮಹೇಶ್ ಅವರನ್ನು ಬಿಎಸ್ ಪಿಯಿಂದ ಉಚ್ಛಾಟನೆ ಮಾಡುವಾಗಬಾರದ ದುಃಖ, ಎನ್.ಮಹೇಶ್ ಅವರು ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಯಾಗುವಾಗ ಆಗಿತ್ತು. ಎನ್.ಮಹೇಶ್ ಅವರ ರಾಜಕೀಯ ಅಧ್ಯಾಯ ಮುಗಿಸಬೇಕು ಅಂತ ಹಗಲು ಗನಸು ಕಾಣುತ್ತಿದ್ದ, ಕೆಲವರಿಗೆ ಎನ್.ಮಹೇಶ್ ಬಿಜೆಪಿಗೆ ಸೇರ್ಪಡೆಯಾಗಿರುವುದು ಇಷ್ಟವಿಲ್ಲದ ಕಡುಬನ್ನು ಗಂಟಲಿಗೆ ತುರುಕಿದಷ್ಟು ಸಂಕಟವಾಗಿತ್ತು. ಇಂತಹ ಸಂದರ್ಭದಲ್ಲಿ ಎನ್.ಮಹೇಶ್ ಅವರನ್ನು ತಮಗೆ ಮನಸ್ಸಿಗೆ ಬಂದ ಮಾತುಗಳನ್ನು ಹೇಳಿ, ಬೈದು ಟ್ರೋಲ್ ಮಾಡಿ, ವೈಯಕ್ತಿಕ ನಿಂದನೆ ಮಾಡಿ, ಅಪ್ಪ ಅಮ್ಮನಿಗೆ ಬೈದು ತಮ್ಮ ಅರ್ಹತೆಯನ್ನು ಸಮಾಜದ ಎದುರು ತೆರೆದಿಟ್ಟು ಬೆತ್ತಲಾಗಿದ್ದರು. ಬಾಯಿ ತೆರೆದರೆ ಅವಾಚ್ಯ ಶಬ್ಧ ಬಳಸಿ ನಿಂದಿಸುವ ಇವರೆಲ್ಲ ಯಾವ ಸೀಮೆಯ ಸಿದ್ಧಾಂತವಾದಿಗಳು? ಯಾವ ಸೀಮೆಯ ವಿಚಾರವಾದಿಗಳು? ಯಾವ ಸೀಮೆಯ ಸಮಾಜ ಸುಧಾರಕರು?

ಎನ್.ಮಹೇಶ್ ಅವರು ಬಿಜೆಪಿಗೆ ಸೇರ್ಪಡೆಯಾಗಿರೋದು ತಪ್ಪು, ಎಂದರೆ ಅವರು ಬಿಎಸ್ ಪಿಯಲ್ಲೇ ಇರಬೇಕು ಅನ್ನುವ ಹಾಗಿದ್ದರೆ, ಯಾಕೆ ಎನ್.ಮಹೇಶ್ ಅವರನ್ನು ನಿಮ್ಮ ಪಕ್ಷಕ್ಕೆ ಮತ್ತೆ ಕರೆಯುವ ಸೌಜನ್ಯ ತೋರಲಿಲ್ಲ? ನಿಮಗೆ ನಿಜವಾಗಿಯೂ ಎನ್.ಮಹೇಶ್ ಅವರ ಬಗ್ಗೆ ಕಾಳಜಿ ಇದ್ದರೆ ಈಗಲೂ ಕಾಲ ಮಿಂಚಿಲ್ಲ, ನಿಮ್ಮ ಪಕ್ಷದ ಹೈಕಮಾಂಡ್ ಬಳಿ ಹೋಗಿ ಎನ್.ಮಹೇಶ್ ಅವರನ್ನು ಮತ್ತೆ ಮೂಲ ಪಕ್ಷಕ್ಕೆ ಕರೆತರುವ ಬಗ್ಗೆ ಮಾತುಕತೆ ನಡೆಸಿ ನೋಡೋಣ? ಅಂದು ಎನ್.ಮಹೇಶ್ ಅವರು ಬೆಹೆನ್ ಮಾಯಾವತಿ ಅವರಿಗೆ ಎಷ್ಟು ಗೌರವ ಕೊಡುತ್ತಿದ್ದರೋ ಅಷ್ಟೇ ಗೌರವ ಇಂದೂ ನೀಡುತ್ತಿದ್ದಾರೆ. ದಾದಾ ಕಾನ್ಸಿರಾಮ್ ಅವರನ್ನು ತಮ್ಮ ಎದೆಯಲ್ಲಿಟ್ಟುಕೊಂಡಿದ್ದಾರೆ. ಅದು ಎನ್.ಮಹೇಶ್ ಅವರಿಗೆ ತಾನು ನಂಬಿದ ಸಿದ್ಧಾಂತಗಳ ಮೇಲಿರುವ ಬದ್ಧತೆಯಾಗಿದೆ. ಆದರೆ, ಚುನಾವಣೆ ಸಮೀಪಿಸುವ ಹೊತ್ತಿಗೆ ಎನ್.ಮಹೇಶ್ ಮೇಲೆ ಮುಗಿಬೀಳುವ ದುರುದ್ದೇಶ ಸರಿಯೇ?

ಎನ್.ಮಹೇಶ್ ಅವರು ದಮನಿತರಿಗೆ ಏನು ಕೊಟ್ಟಿರಿ ಅನ್ನೋ  ವ್ಯಂಗ್ಯದ ಪ್ರಶ್ನೆಗಳನ್ನು ಕೇಳಿ ಒಳ್ಳೆಯ ಕೆಲಸಗಳನ್ನು ಮಾಡಿದ್ದೀರಿ. ಈವರೆಗೆ ಎನ್.ಮಹೇಶ್ ಅವರನ್ನು ದುಷ್ಟ ಶಕ್ತಿಯಂತೆ ಬಿಂಬಿಸಿದ ಪ್ರತಿಯೊಬ್ಬರು ಎನ್.ಮಹೇಶ್ ಅವರು ಮಾಡಿದ ಕೆಲಸಗಳ ಬಗ್ಗೆ ತಿಳಿದುಕೊಳ್ಳಲೇ ಬೇಕಿದೆ.  ವಿಧಾನ ಸೌಧದಲ್ಲಿ ಮತಾಂತರ ವಿಚಾರವಾಗಿ ಕೆಲವು ಶಾಸಕರು ಬೌದ್ಧ ಧಮ್ಮದ ವಿರುದ್ಧ ಮಾತನಾಡಲು ಮುಂದಾದಾಗ ಇದೇ ಎನ್.ಮಹೇಶ್ ಎದ್ದು ನಿಂತು, ನಾನು ಹಿಂದೂ ಅಲ್ಲ, ನಾನೊಬ್ಬ ಬೌದ್ಧ, ನನ್ನ ಧರ್ಮ ಈ ನೆಲದ ಮೂಲ ಧರ್ಮ, ಹಾಗಾಗಿ ನಾವು ಮತಾಂತರವಾದವರಲ್ಲ, ನಮ್ಮ ಮೂಲ ಧರ್ಮಕ್ಕೆ ಮರಳಿದವರು ಎನ್ನುವುದನ್ನು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಯಾವುದೇ ಪಕ್ಷಗಳಿಗೂ ಅಂಜದೇ ಎದೆ ತಟ್ಟಿ ಉತ್ತರ ನೀಡಿದವರು. ಇಂದು ಕಾಂಗ್ರೆಸ್ಸಿಗರು ಎನ್.ಮಹೇಶ್ ಅವರನ್ನು ಮನುವಾದಿ ಅಂತ ಕರೆಯುತ್ತೀರಲ್ಲಾ, ನಾನು ಹಿಂದೂ ಅಂತ ಹೇಳುತ್ತಾ, ದೇವಸ್ಥಾನಕ್ಕೆ ತಿರುಗಾಡುತ್ತಿರುವ ಕಾಂಗ್ರೆಸ್ ನ ದೊಡ್ಡ ದೊಡ್ಡ ನಾಯಕರ ಮುಂದೆ ನೀವ್ಯಾಕೆ ಈ ಪ್ರಶ್ನೆ ಕೇಳಲ್ಲ? ಎನ್.ಮಹೇಶ್ ವಿಧಾನ ಸೌಧದಲ್ಲಿ ಬಿಜೆಪಿಗರ ಎದುರೇ ನಾನು ಹಿಂದೂ ಅಲ್ಲ, ನಾನು ಬೌದ್ಧ ಎಂದು ಹೇಳುವ ಎದೆಗಾರಿಕೆ ತೋರಿಸಿದ್ದಾರೆ. ಈ ಗಟ್ಟಿತನಕ್ಕೆ ಪ್ರಸಂಶಿಸುವುದು ಬಿಟ್ಟು, ಯಾವುದೋ ರಾಜಕೀಯ ಪ್ರಚಾರದ ಲೇಖನವನ್ನು ಮುಂದಿಟ್ಟುಕೊಂಡು ಎನ್.ಮಹೇಶ್ ಅವರನ್ನು ಟೀಕಿಸುತ್ತಿದ್ದಾರೆಂದರೆ, ನಿಮ್ಮ ಉದ್ದೇಶ ಏನು ಅನ್ನೋದು ಸ್ಪಷ್ಟವಾಗುತ್ತಿದೆ.  ಎನ್.ಮಹೇಶ್ ಅವರು ಬಿಜೆಪಿಯ ವೇದಿಕೆಯಲ್ಲೇ ನಿಂತು ನಾನು ಸಾವರ್ಕರ್ ವಾದಿ ಅಲ್ಲ, ಅಂಬೇಡ್ಕರ್ ವಾದಿ ಅನ್ನೋ ಮಾತುಗಳನ್ನಾಡಿದ್ದಾರೆ. ಇದರ ಬಗ್ಗೆಯೂ ಸ್ವಲ್ಪ ಮಾತನಾಡಲು ಮುಂದೆ ಬರಬಹುದಲ್ಲವೇ?

ರಾಜಕೀಯ ಬದಲಾವಣೆಯ ಜೊತೆಗೆ ರಾಜಕಾರಣಿಗಳು ಬದಲಾಗಲೇ ಬೇಕಾಗುತ್ತದೆ ಅನ್ನೋದು ಒಂದು ವಾಸ್ತವ ಸತ್ಯ. ಬದಲಾವಣೆಯ ಜೊತೆಗೆ ಬದಲಾಗದ ರಾಜಕಾರಣಿ  ಇತಿಹಾಸದ ಪುಟ ಸೇರಬೇಕಾಗುತ್ತದೆ. ಆಳುವ ಪಕ್ಷಗಳ ಜೊತೆಗೆ ಸಂಘರ್ಷ ಮಾಡಿಕೊಳ್ಳದೇ ತನ್ನ ಸಮಾಜಕ್ಕೆ ಏನು ಬೇಕೋ ಅದನ್ನು ಗಟ್ಟಿ ಧ್ವನಿಯಲ್ಲಿ ವಿಧಾನಸೌಧದಲ್ಲಿ ಕೇಳುವ ಎನ್.ಮಹೇಶ್ ಅವರ ರಾಜಕೀಯ ನಡೆ ಸಾಕಷ್ಟು ಜನರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಅನ್ನೋದರಲ್ಲಿ ಯಾವುದೇ ಅನುಮಾನಗಳಿಲ್ಲ.

ಅಂದು ವಿಧಾನಸೌಧದಲ್ಲಿ ಮಾತನಾಡಿದ್ದ ಎನ್.ಮಹೇಶ್ ಅವರು ಬುದ್ಧ ಮಾತ್ರವಲ್ಲದೇ ಸಾಮ್ರಾಟ್ ಅಶೋಕನ ಮಹತ್ವವನ್ನೂ ತೆರೆದಿಟ್ಟಿದ್ದರು. ನಿಮ್ಮ ತಲೆ ಮೇಲಿರುವ ಸಿಂಹ ಯಾರ ಕಾಲದ್ದು? ಎಂದು ಪ್ರಶ್ನಿಸಿದ ಎನ್.ಮಹೇಶ್, ಅದು ಸಾಮ್ರಾಟ್ ಅಶೋಕನ ಕಾಲದ್ದು ಎಂದರು. ವಿಧಾನ ಸೌಧದ ಹೊರಗಿರುವ ಬಾವುಟ ಇದೆಯಲ್ವಾ? ಅದರಲ್ಲಿ ಅಶೋಕ ಚಕ್ರ ಇದೆ. ನಾಲ್ಕು ತಲೆಯ ಸಿಂಹವನ್ನು  ಕೊಟ್ಟಿರೋದು, ದೇಶಕ್ಕೆ  ಸತ್ಯವನ್ನು ಸಾರಿದ ಸಾಮ್ರಾಟ್ ಅಶೋಕ. ಈ ದೇಶದಲ್ಲಿ ಬ್ರಾಹ್ಮಣರನ್ನು ಒಳಗೊಂಡು ಎಲ್ಲ, ರಾಜ ಮಹಾರಾಜರುಗಳು ಒಂದು ಕಾಲದಲ್ಲಿ ಬೌದ್ಧರಾಗಿದ್ದವರು ಎನ್ನುವುದನ್ನು ಯಾವುದೇ ಭಯವಿಲ್ಲದೇ ಹೇಳಿರೋದು ಎನ್.ಮಹೇಶ್ ಅವರು.  ದೇಶದ ಬಗ್ಗೆ ಅಂಬೇಡ್ಕರರಿಗಿದ್ದ ದೃಢವಾದ ನಂಬಿಕೆಯನ್ನು  ಎನ್.ಮಹೇಶ್ ವಿವರಿಸುತ್ತಾ, ನನಗೆ ನನ್ನ ಜನರಿಗೆ ನೂರಾರು ರೀತಿಯ ಶೋಷಣೆಯಾಗಿರಬಹುದು ಆದರೆ, ಈ ದೇಶಕ್ಕೆ ಅಪಚಾರ ಮಾಡುವ ಕೆಲಸವನ್ನು ನಾನು ಮಾಡೋದಿಲ್ಲ. ಈ ದೇಶ ನಮ್ಮ ದೇಶ. ಅಂತ ಹೇಳಿ ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಹೋಗಿದ್ದಾರೆ ಅನ್ನೋದನ್ನು  ಹೇಳಿ, ನಾನು ಹಿಂದೂ ಅಲ್ಲ, ನಾನು ಬೌದ್ಧ ಎಂದು ಗಟ್ಟಿಧ್ವನಿಯಲ್ಲಿ ಹೇಳಿದ್ದರು.

ಅಷ್ಟೇ ಏಕೆ? ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದಲ್ಲಿ ಎನ್.ಮಹೇಶ್ ಅವರು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬೃಹತ್ ಪ್ರತಿಮೆ ಸ್ಥಾಪಿಸಿದ್ದು, ಈ ಪ್ರದೇಶ ಇದೀಗ ಪ್ರವಾಸಿ ತಾಣವಾಗುತ್ತಿದೆ. ಈ ಮೂಲಕ ಹೊಸ ಸಾಮಾಜಿಕ ಬದಲಾವಣೆಗೆ ಮುನ್ನುಡಿ ಬರೆದಿದ್ದಾರೆ

2001ರಲ್ಲಿ ಬಹುಜನ ವಿದ್ಯಾರ್ಥಿ ಸಂಘ ಎಂಬ ಬಹಳ ಶಿಸ್ತುಬದ್ದ ಸಂಘಟನೆಯನ್ನು  ಕಟ್ಟಿದ ಎನ್.ಮಹೇಶ್ ಅವರು, ಕರ್ನಾಟಕರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ BVS ನ ಜಿಲ್ಲಾ ತಾಲ್ಲೂಕು ಹೋಬಳಿ ಗ್ರಾಮ ಕಮಿಟಿಗಳನ್ನು ಸೃಷ್ಟಿಸಿದರು. ಅದರ ಮೂಲಕ ಜನರನ್ನು ಜಾಗೃತಗೊಳಿಸುವ ಕಾರ್ಯವನ್ನು BVS ಯಶಸ್ವಿಯಾಗಿ ಮಾಡಿತು. ತಮ್ಮ ಪಿಂಚಣಿ ಹಣ ಮತ್ತು ವಿಜಯಕ್ಕರವರ ವೇತನದ ಹಣವನ್ನು ಖರ್ಚುಮಾಡಿಕೊಂಡು ರಾಜ್ಯ ಸುತ್ತಿದ ಎನ್.ಮಹೇಶ್ ಎಲ್ಲರನ್ನೂ ಒಳಗೊಂಡು ಚಳುವಳಿಯ ದೀಪ ಹಚ್ಚಿದರು. ಇದರಿಂದಾಗಿ ಮನೆ ಮನೆಗಳಿಗೂ ಮಹಾತ್ಮ ಜ್ಯೋತಿ ಬಾಫುಲೆ, ಸಾವಿತ್ರಿ ಬಾಯಿ ಪುಲೆ, ಛತ್ರಪತಿ ಶಾಹುಮಹಾರಾಜ್, ತಂದೆ ಪೆರಿಯಾರ್, ನಾರಾಯಣಗುರುಗಳು, ಮಹಾತ್ಮ ಅಯ್ಯಂಕಾಳಿ, ನಾಲ್ವಡಿ ಕೃಷ್ಣರಾಜ ಒಡೆಯರ್, ದಾದಾಸಾಹೇಬ ಕಾನ್ಷಿರಾಂಜೀ, ಮಾಯಾವತಿ ಸೇರಿದಂತೆ ಮೂಲ ನಿವಾಸಿಗಳ ಮಹಾಪುರುಷರನ್ನು ಪರಿಚಯಿಸಿ, ಜನರನ್ನು ಜಾಗೃತಗೊಳಿಸುವ ಕೆಲಸ ಮಾಡಿದರು.

ಎನ್.ಮಹೇಶ್ ಆರಂಭಿಸಿದ ಈ ಚಳುವಳಿಯಿಂದ  ಸಾವಿರಾರು ಹಾಡುಗಳು ಚಳುವಳಿಯಿಂದ ಬರೆಯಲ್ಪಟ್ಟವು.  ಚಳುವಳಿ ಹಾಡುಗಳ ಕೆಲವು ಕ್ಯಾಸೆಟ್ಟುಗಳು ಹೊರ ಬಂದವು.  ಬೌದ್ದಧರ್ಮ 2001 ರಿಂದೀಚೆಗೆ ಕರ್ನಾಟಕದಲ್ಲಿ ಹೆಚ್ಚು ಅನುಯಾಯಿಗಳನ್ನು ಸೃಷ್ಟಿಸಿ, ಬೌದ್ದಧಮ್ಮ ಈ ನೆಲದ ಧಮ್ಮ ಅನ್ನೋದನ್ನು ಸಾರಿ ಸಾರಿ ಹೇಳಿರೋದು ಇದೇ ಎನ್.ಮಹೇಶ್ ಅವರು. ಮುಸಲ್ಮಾನರು ರಾಜಕೀಯ ಅಸ್ಮಿತೆಯೇ ಇಲ್ಲದ ಕಾಲದಲ್ಲಿ ಮುಸಲ್ಮಾನರ ರಾಜಪರಂಪರೆಯನ್ನು ಅವರಿಗೆ ತಿಳಿಸುವ ಕಾರ್ಯವನ್ನು  ಎನ್.ಮಹೇಶ್ ಆರಂಭಿಸಿದ್ದರು. ಇಂದು ಪಕ್ಷ ಬೇಧವಿಲ್ಲದೇ ಕರ್ನಾಟಕದಲ್ಲಿ ಮನುವಾದದ ಬಗ್ಗೆ ಮಾತನಾಡುತ್ತಾರೆಂದರೆ ಅದರಲ್ಲಿ ಎನ್.ಮಹೇಶ್ ಅವರ ಶ್ರಮ ದೊಡ್ಡದಿದೆ.

ಎನ್.ಮಹೇಶ್ ಅವರು ಶಾಸಕರಾದ ಮೇಲೆ ಹೋರಾಟನೇ ಮಾಡುತ್ತಿಲ್ಲ, ಅವರೇನೂ ಕೆಲಸನೇ ಮಾಡುತ್ತಿಲ್ಲ ಅಂತ ಕೆಲವು ಟೀಕಾಕಾರರು ಸಮಾಜದಲ್ಲಿ ಬಿಂಬಿಸುತ್ತಿರುವುದನ್ನು ನಾನು ನೋಡಿದ್ದೇನೆ. ಇದರ ಹಿಂದೆ ರಾಜಕೀಯ ಉದ್ದೇಶವೂ ಇರಬಹುದೋ ಏನೋ, ಆದರೆ, ಎನ್.ಮಹೇಶ್ ಅವರು ಶಾಸಕರಾದ ಬಳಿಕವೂ ನಿರಂತರವಾಗಿ ಅಸ್ಪೃಷ್ಯರ ಪರ, ಧ್ವನಿ ಇಲ್ಲದವರ ಪರವಾಗಿ ಹೋರಾಟ ಮಾಡುತ್ತಲೇ ಇದ್ದಾರೆ.  ಬಗರ್ ಹುಕುಂ ಜಮೀನಿಗೆ ಸಂಬಂಧಪಟ್ಟಂತೆ, ಎಲ್ಲ ಶಾಸಕರಿಗಿಂತ ಮುಂದೆ ನಿಂತು ಅಸ್ಪೃಷ್ಯರ ಭೂಮಿಗೆ ಸಂಬಂಧಿಸಿದಂತೆ ಎನ್.ಮಹೇಶ್ ಹೋರಾಡುತ್ತಿದ್ದಾರೆ.  ವಿಧಾನ ಸೌಧದಲ್ಲಿ ಬಗರ್ ಹುಕುಂ ಜಮೀನಿಗೆ ಸಂಬಂಧಪಟ್ಟಂತೆ ದಲಿತರ ಪರವಾದ ಒಂದು ಕಾಯ್ದೆ ರಚನೆಯಾಗಬೇಕು ಎನ್ನುವ ನಿಟ್ಟಿನಲ್ಲಿ ಎನ್.ಮಹೇಶ್ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಈ ಕಾಯ್ದೆ ರಚನೆಯಾಗುವವರೆಗೂ ಅವರ ಹೋರಾಟ ಮುಂದುವರಿಯುತ್ತದೆ.

ಕೆಎಸ್ ಆರ್ ಟಿಸಿ ನೌಕರರು ವಜಾಗೊಂಡು ಸಮಸ್ಯೆಗೆ ಸಿಕ್ಕಿಕೊಂಡಾಗ ಅವರನ್ನು ಮರು ನೇಮಕ ಮಾಡಿಕೊಳ್ಳುವ ವಿಚಾರದಲ್ಲಿ  ಎನ್.ಮಹೇಶ್ ಅವರು ಹೋರಾಟ ಮಾಡಿ ಯಶಸ್ವಿಯಾಗಿದ್ದಾರೆ. ಕೆಲಸ ಕಳೆದುಕೊಂಡಿದ್ದ ಸಾಕಷ್ಟು ಬಡ ಕೆಎಸ್ ಆರ್ ಟಿಸಿ ನೌಕರರಿಗೆ ಮತ್ತೆ ಉದ್ಯೋಗ ಕೊಡಿಸುವಲ್ಲಿ ಎನ್.ಮಹೇಶ್ ಮಹತ್ವದ ಪಾತ್ರವಹಿಸಿದ್ದಾರೆ. ಅಗ್ನಿಶಾಮಕದಳದ ನೌಕರರು ಕಷ್ಟದಲ್ಲಿ ಸಿಲುಕಿಕೊಂಡಾಗ ಅವರ ಪರವಾಗಿ ನಿಂತು ಸಹಾಯ ಮಾಡಿದ್ದಾರೆ. ದೈಹಿಕ ಶಿಕ್ಷಕರನ್ನು ಬೇರೆ ಶಿಕ್ಷಕರ ಸಮಾನವಾಗಿ ಪರಿಗಣಿಸಬೇಕು, ಅವರಿಗೂ ಎಲ್ಲಾ ರೀತಿಯ ಸವಲತ್ತುಗಳು ಸಿಗಬೇಕು ಎಂಬ ಹೋರಾಟ ಮಾಡಿ ಅವರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಬಜೆಟ್ ನಲ್ಲಿ ಎಸ್ ಸಿ, ಎಸ್ ಟಿಗಳಿಗೆ ಬಿಡುಗಡೆಯಾದ ಹಣ, ಬಳಕೆಯಾಗದೇ ಇದ್ದಾಗ ಅದನ್ನು ಬೇರೆ ಕೆಲಸಗಳಿಗೆ ಬಳಕೆ ಮಾಡುವ ಪದ್ಧತಿ ಈ ಹಿಂದಿನಿಂದಲೂ ಸರ್ಕಾರಗಳು ನಡೆಸಿಕೊಂಡು ಬರುತ್ತಿದ್ದವು. ಸಿದ್ದರಾಮಯ್ಯನವರ ಸರ್ಕಾರದಲ್ಲೂ ಇದು ಚಾಲ್ತಿಯಲ್ಲಿತ್ತು. ಆದರೆ, ಈ ರೀತಿಯಾದ ಕ್ರಮ ಸರಿಯಲ್ಲ,  ಆ ಹಣವನ್ನು ಸಂಪೂರ್ಣವಾಗಿ ಅದೇ ಸಮುದಾಯದ ಅಭಿವೃದ್ಧಿಗೆ ಬಳಸಬೇಕು ಎಂದು  ಎನ್.ಮಹೇಶ್ ಅವರು ಹೋರಾಟ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರು ಸರ್ಕಾರವನ್ನು ಒತ್ತಾಯಿಸುತ್ತಲೇ ಇದ್ದಾರೆ.

ಇನ್ನೂ ತನ್ನನ್ನು ಗೆಲ್ಲಿಸಿದ ಕ್ಷೇತ್ರದಲ್ಲಿಯೂ ಎನ್.ಮಹೇಶ್ ನಿರಂತರವಾಗಿ ಜನರ ಕೆಲಸಗಳನ್ನು ಮಾಡುತ್ತಿದ್ದಾರೆ. ಅಭಿವೃದ್ಧಿಯ ವಿಚಾರದಲ್ಲಿ ಅವರು ಯಾವುದೇ ರಾಜಿಯನ್ನೂ ಮಾಡಿಕೊಳ್ಳದೇ ತನ್ನ ಕ್ಷೇತ್ರದ ಜನರ ಪರ ಕೆಲಸ ಮಾಡುತ್ತಿದ್ದಾರೆ. ಹೀಗೆ ಎನ್.ಮಹೇಶ್ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳು, ಸಮಾಜ ಪರವಾದ ಹೋರಾಟಗಳನ್ನು ಹೇಳಿ ಮುಗಿಸಲು ಸಾಧ್ಯವಿಲ್ಲ. ಆದರೂ,  ಒಬ್ಬ ಜನಪ್ರತಿನಿಧಿ ಅಂದಾಗ ಅಲ್ಲಿ ಟೀಕೆ ಟಿಪ್ಪಣಿಗಳು ಸಹಜ. ತಪ್ಪಾದಾಗ ಖಂಡಿಸುವುದೂ ತಪ್ಪಲ್ಲ, ಆದರೆ, ಅವರು ಮಾಡಿರುವ ಒಳ್ಳೆಯ ಕಾರ್ಯಗಳನ್ನು ಮರೆಮಾಚಿ, ಇವರನ್ನು ವಿರೋಧಿಸಲೇ ಬೇಕು, ವಿಲನ್ ನಂತೆ ಬಿಂಬಿಸಲೇ ಬೇಕು ಅಂತ ಹೋರಾಡುವುದು ಎಷ್ಟಮಟ್ಟಿಗೆ ಸರಿ? ಒಬ್ಬ ಜನಪ್ರತಿನಿಧಿಯ ಒಳ್ಳೆಯ ಅಂಶಗಳನ್ನು ಒಪ್ಪಿಕೊಳ್ಳುವ ದೊಡ್ಡತನ ಟೀಕಾಕಾರರಲ್ಲಿ ಇರದಿದ್ದರೆ ಹೇಗೆ? ಯಾರೋ ಒಬ್ಬರು ಎನ್.ಮಹೇಶ್ ಅವರ ಬಗ್ಗೆ ತಪ್ಪಾಗಿ ಮಾತನಾಡಿದರು ಅಂದಾಗ ಅವರ ಮಾತೇ ಸತ್ಯ ಎಂದು ನಂಬಿ, ಅಸಂವಿಧಾನಿಕ ಪದ ಬಳಸುವ ಮೊದಲು, ಅದರ ಪೂರ್ವಾಪರ ವಿಚಾರಗಳನ್ನು ತಿಳಿದುಕೊಂಡು ಆ ಬಳಿಕ ಮಾತನಾಡುವುದು ಒಳ್ಳೆಯದ್ದಲ್ಲವೇ? ಚುನಾವಣೆ ಬಂದಾಗ ಅಧಿಕಾರದಲ್ಲಿರುವ ಜನಪ್ರತಿನಿಧಿಗಳನ್ನು ಟಾರ್ಗೆಟ್ ಮಾಡಿ ಟೀಕಿಸುವುದು ಸಹಜ ಆದರೆ, ಜನರು ಸತ್ಯವನ್ನು ತಿಳಿದುಕೊಂಡು ಪ್ರತಿಕ್ರಿಯಿಸುವುದು ಉತ್ತಮವಲ್ಲವೇ? ಎನ್.ಮಹೇಶ್ ಎಂದಿಗೂ ನೊಂದವರ ಪರ ಇದ್ದಾರೆ ಅನ್ನೋದು ಸತ್ಯ. ಅದು ಮುಂದೊಂದು ದಿನ ಖಂಡಿತವಾಗಿಯೂ ಎಲ್ಲರಿಗೂ ತಿಳಿಯಲಿದೆ ಅನ್ನುವ ಆಶಯ ನನ್ನದು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ