ಪ್ರಧಾನಿ ಮೋದಿಯ ಆಪ್ತ ಉದ್ಯಮಿ ಬಿ.ಆರ್.ಶೆಟ್ಟಿಯನ್ನು ಕಾರ್ಯಕ್ರಮಕ್ಕೆ ಬಿಡದ ಪೊಲೀಸರು: ವಿಡಿಯೋ ವೈರಲ್

ಮಂಗಳೂರು: ಒಂದು ಕಾಲದ ಪ್ರಮುಖ ಉದ್ಯಮಿ, ಪ್ರಧಾನಿ ಮೋದಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಬಿ.ಆರ್.ಶೆಟ್ಟಿ ಅವರು ಮಂಗಳೂರಿನಲ್ಲಿ ನಡೆದ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ಭದ್ರತಾ ಸಿಬ್ಬಂದಿ ಅವರನ್ನು ತಡೆದ ಘಟನೆ ನಡೆದಿದೆ.
ಮಂಗಳೂರಿನ ಬಂಗ್ರ ಕೂಳೂರು ಪ್ರದೇಶದಲ್ಲಿರುವ ಗೋಲ್ಡ್ ಪಿಂಚ್ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಈ ಘಟನೆ ನಡೆದಿದ್ದು, ಬಿ.ಆರ್.ಶೆಟ್ಟಿ ಅವರ ಜೊತೆಗಿದ್ದವರು, ಶೆಟ್ಟಿ ಅವರನ್ನು ಕಾರ್ಯಕ್ರಮಕ್ಕೆ ಬಿಡಲು ಅಧಿಕಾರಿಗಳ ಬಳಿ ಪರಿಪರಿಯಾಗಿ ವಿನಂತಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಅವರನ್ನು ಕಾರ್ಯಕ್ರಮಕ್ಕೆ ಬಿಡಿ ಸರ್, ಪ್ರಧಾನಿ ಮೋದಿ ಅವರನ್ನು ದುಬೈಗೆ ಕರೆಸಿದ್ದು ಇದೇ ಬಿ.ಆರ್.ಶೆಟ್ಟಿ ಅವರು ಅವರನ್ನೇ ನೀವು ಕಾರ್ಯಕ್ರಮಕ್ಕೆ ಬಿಡದಿದ್ದರೆ ಹೇಗೆ ಎಂದು ಬಿ.ಆರ್.ಶೆಟ್ಟಿ ಜೊತೆಗಾರರು ಅಧಿಕಾರಿಗಳನ್ನು ಪರಿಪರಿಯಾಗಿ ತುಳು ಭಾಷೆಯಲ್ಲಿ ವಿನಂತಿಸಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸಾಕಷ್ಟು ಮನವಿ ಮಾಡಿದ ಬಳಿಕ ಬಿ.ಆರ್.ಶೆಟ್ಟಿ ಅವರನ್ನು ಕಾರ್ಯಕ್ರಮಕ್ಕೆ ಬಿಡಲಾಗಿದೆ ಎಂದು ಹೇಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ದುಬೈಗೆ ಕರೆದುಕೊಂಡು ಹೋಗಿ ದೊಡ್ಡ ಮಟ್ಟದ ಕಾರ್ಯಕ್ರಮ ಮಾಡಿದ್ದ ಬಿ.ಆರ್.ಶೆಟ್ಟಿ ಅವರು ಇಂದು ಕಾರ್ಯಕ್ರಮ ಪ್ರವೇಶಕ್ಕೆ ಬೇಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಉದ್ಯಮದಲ್ಲಿ ನಷ್ಟವಾದ ಬಳಿಕ ಯಾರೂ ಕೂಡ ಮೂಸಿ ನೋಡುವುದಿಲ್ಲ. ಧರಣಿ ಮಂಡಲದ ಮಧ್ಯದೊಳಗೆ ತಬ್ಬಲಿ ನೀನಾದೆ ಮಗನೆ ಎಂಬಂತಹ ನಾನಾ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬಂದಿದೆ.
ಕೊಲ್ಲಿ ರಾಷ್ಟ್ರಗಳಲ್ಲಿ ಬೃಹತ್ ಉದ್ಯಮವನ್ನು ನಡೆಸುತ್ತಿದ್ದ ಬಿ.ಆರ್.ಶೆಟ್ಟಿ ಅವರು, ಯುಎಇ ರಾಜರಿಗೂ ಆಪ್ತರಾಗಿದ್ದರು. ಆದರೆ ಉದ್ಯಮದಲ್ಲಿ ನಷ್ಟ ಅನುಭವಿಸಿದ ಬಳಿಕ ತಮ್ಮ ಊರಿನಲ್ಲೇ ಬಂದು ನೆಲೆಸಿದ್ದಾರೆ. ತಮ್ಮ ಇಷ್ಟದ ನಾಯಕ ಪ್ರಧಾನಿ ಮೋದಿ ಅವರನ್ನು ನೋಡಲು ಬಂದ ವೇಳೆ ಅವರಿಗೆ ಕಾರ್ಯಕ್ರಮಕ್ಕೂ ಪ್ರವೇಶ ಸಿಗಲಿಲ್ಲ. ಹಾಗಾಗಿ ಹಣ ಇಲ್ಲದಿದ್ದರೆ ಯಾರೂ ಮೂಸುವುದಿಲ್ಲ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆ ಭಾರೀ ಚರ್ಚೆಯಲ್ಲಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka