ಕೊಕ್ಕಡ: ಮಹಿಳೆಯ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಹೊಸ ತಿರುವು | ಪತಿಯ ಬಂಧನ

ಬೆಳ್ತಂಗಡಿ: ನಾಲ್ಕು ದಿನದ ಹಿಂದೆ ಕೊಕ್ಕಡ ಗ್ರಾಮದ ಅಗರ್ತ ಎಂಬಲ್ಲಿ ನಡೆದ ಮಹಿಳೆಯೋರ್ವರ ಸಂಶಯಾಸ್ಪದ ಸಾವಿನ ಪ್ರಕರಣ ಕೊಲೆ ಎಂದು ಇದೀಗ ವೈದ್ಯಕೀಯ ವರದಿಗಳಿಂದ ದೃಢಪಟ್ಟಿದ್ದು, ಕೊಲೆ ಆರೋಪದಲ್ಲಿ ಮಹಿಳೆಯ ಪತಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.
ಕೊಕ್ಕಡ ಗ್ರಾಮದ ಅಗರ್ತ ನಿವಾಸಿ ಮೋಹಿನಿ(36)ಮೃತಪಟ್ಟವರಾಗಿದ್ದು ಕೊಲೆ ಆರೋಪದಲ್ಲಿ ಆಕೆಯ ಪತಿ ಗಣೇಶ್(48)ಎಂಬವರನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ. ಶನಿವಾರಸಂತೆ ನಿವಾಸಿಯಾಗಿರುವ ಗಣೇಶ್ ಸುಳ್ಯ ತಾಲೂಕು ಕೊಲ್ಲಮೊಗ್ರುವಿನ ಮೋಹಿನಿಯವರನ್ನು 8 ವರ್ಷದ ಹಿಂದೆ ಮದುವೆಯಾಗಿದ್ದು ಮದುವೆಯಾದ ಬಳಿಕ ಪತಿ, ಪತ್ನಿ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಅಗರ್ತ ಎಂಬಲ್ಲಿ ವಾಸವಾಗಿದ್ದರು.
ಗಣೇಶ್ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದು ಈ ದಂಪತಿಗೆ 6 ವರ್ಷದ ಗಂಡು ಮಗನಿದ್ದಾನೆ. ಇವರಿಗೆ ವಿಪರೀತ ಕುಡಿತದ ಚಟವಿದ್ದು ಇಬ್ಬರ ನಡುವೆ ಮನೆಯಲ್ಲಿ ಆಗಾಗ ಜಗಳ ನಡೆಯುತಿತ್ತು ಎಂದು ಹೇಳಲಾಗಿದೆ.
ಆ.30ರಂದು ಬೆಳಿಗ್ಗೆ ಮಹಿಳೆ ಮನೆಯಲ್ಲಿಯೇ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಆಕೆಯ ಹಣೆಯ ಬಳಿ ಗಾಯವಾಗಿ ರಕ್ತ ಬಂದಿತ್ತು. ಧರ್ಮಸ್ಥಳ ಠಾಣೆಯಲ್ಲಿ ಸಂಶಯಾಸ್ಪದ ಸಾವು ಪ್ರಕರಣ ದಾಖಲಾಗಿತ್ತು. ಇದೀಗ ತನಿಖೆ ಮುಂದು ವರಿದಿದ್ದು ವೈದ್ಯಕೀಯ ವರದಿಗಳ ಆಧಾರದ ಮೇಲೆ ಇದೊಂದು ಕೊಲೆ ಪ್ರಕರಣ ಎಂಬುದು ದೃಢ ಪಟ್ಟಿದ್ದು ಕೊಲೆ ಆರೋಪದಲ್ಲಿ ಮಹಿಳೆಯ ಪತಿ ಗಣೇಶ್‌ನನ್ನು ಧರ್ಮಸ್ಥಳ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಮಗು ಪಾಲನಾ ಕೇಂದ್ರಕ್ಕೆ: ಗಣೇಶ್ ಹಾಗೂ ಮೋಹಿನಿ ದಂಪತಿಯ ಕಲಹದಿಂದಾಗಿ ಅವರ 6 ವರ್ಷದ ಮಗು ಅನಾಥವಾಗಿದ್ದು, ಈ ಮಗುವನ್ನು ಮಕ್ಕಳ ಪಾಲನಾಕೇಂದ್ರಕ್ಕೆ ಒಪ್ಪಿಸಲಾಗಿದೆ.
ಗಣೇಶ್ ರನ್ನು ಮದುವೆಯಾದ ಬಳಿಕ ಮೋಹಿನಿಯವರು ತಮ್ಮ ಮನೆಯವರ ಸಂಪರ್ಕ ಕಡಿದುಕೊಂಡಿದ್ದರು. ಶನಿವಾರಸಂತೆ ನಿವಾಸಿಯಾಗಿರುವ ಗಣೇಶ್ ನ ಮನೆಯವರೂ ಆತನ ಸಂಪರ್ಕದಲ್ಲಿ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಈ ದಂಪತಿಯ 6 ವರ್ಷದ ಮಗುವಿನ ಪಾಲನೆಗೆ ಯಾರೂ ಮುಂದೆ ಬಾರದೇ ಇದ್ದ ಹಿನ್ನೆಲೆಯಲ್ಲಿ ಪೊಲೀಸರು ಮಗುವನ್ನು ಮಹಿಳೆ ಮೃತಪಟ್ಟಿದ್ದ ಆ.30ರಂದೇ ಮಕ್ಕಳ ಪಾಲನಾ ಕೇಂದ್ರಕ್ಕೆ ಒಪ್ಪಿಸಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka