ಮಳೆ ಕಡಿಮೆ ಇದ್ದರೂ ದಕ್ಷಿಣ ಕನ್ನಡ ಜಿಲ್ಲೆಯ ನದಿಗಳ ನೀರಿನಮಟ್ಟ ದಿಢೀರ್ ಏರಿಕೆ: ಜನರಲ್ಲಿ ಆತಂಕ - Mahanayaka
1:20 PM Thursday 12 - December 2024

ಮಳೆ ಕಡಿಮೆ ಇದ್ದರೂ ದಕ್ಷಿಣ ಕನ್ನಡ ಜಿಲ್ಲೆಯ ನದಿಗಳ ನೀರಿನಮಟ್ಟ ದಿಢೀರ್ ಏರಿಕೆ: ಜನರಲ್ಲಿ ಆತಂಕ

dakshina kannada
06/09/2022

ಬೆಳ್ತಂಗಡಿ: ನದಿಗಳು ಹರಿಯುವ ಪರಿಸರದಲ್ಲಿ ಹೆಚ್ಚಿನ ಮಳೆ ಇಲ್ಲದಿದ್ದರೂ ಮೃತ್ಯುಂಜಯ ಹಾಗೂ ನೇತ್ರಾವತಿ ನದಿಗಳ ನೀರು ದಿಢೀರ್ ಏರಿಕೆಯಾದ ವಿದ್ಯಮಾನ ಮಂಗಳವಾರ ಸಂಜೆ ನಡೆದಿದೆ. ಇದರಿಂದ ನದಿ ಬದಿಗಳಲ್ಲಿ ವಾಸಿಸುವ ಜನರಲ್ಲಿ ಆತಂಕ ಸೃಷ್ಟಿಯಾಯಿತು.

ದಿಡುಪೆ, ಮಲವಂತಿಗೆ, ಮಿತ್ತಬಾಗಿಲು, ಕಡಿರುದ್ಯಾವರ, ಮುಂಡಾಜೆ, ಕಲ್ಮಂಜ ಮೊದಲಾದ ಗ್ರಾಮಗಳಲ್ಲಿ ಮಳೆ ಇಲ್ಲದಿದ್ದರೂ ಸಂಜೆ 4 ಗಂಟೆ ಬಳಿಕ ನದಿಗಳ ನೀರಿನಲ್ಲಿ ವಿಪರೀತ ಏರಿಕೆ ಕಂಡು ಬಂತು.

ಚಾರ್ಮಾಡಿ ಕಡೆಯಿಂದ ಹರಿಯುವ ಮೃತ್ಯುಂಜಯ ನದಿಯಲ್ಲಿ ಅತ್ಯಧಿಕ ನೀರು ಹರಿದು ಬಂದಿದೆ. ಮೃತ್ಯುಂಜಯ ನದಿಯ ಉಗಮ ಸ್ಥಳವಾದ ಬಿದಿರುತಳ, ಚಾರ್ಮಾಡಿ ಮತ್ತು ಘಾಟಿ ಪ್ರದೇಶದಲ್ಲಿ ಸಂಜೆ 3 ಗಂಟೆ ಬಳಿಕ ಸುಮಾರು ಮೂರು ತಾಸು ಕಾಲ ನಿರಂತರ ಸುರಿದ ವಿಪರೀತ ಮಳೆ ಇದಕ್ಕೆ ಕಾರಣವಾಯಿತು ಎನ್ನಲಾಗಿದೆ. ನದಿ ಬದಿ ಇರುವ ಅಡಕೆ ತೋಟ, ಗದ್ದೆ, ಕಿರು ಸೇತುವೆ, ಕಿಂಡಿ ಅಣೆಕಟ್ಟುಗಳು ಸಂಪೂರ್ಣವಾಗಿ ಜಲಾವೃತವಾಗಿದ್ದು ವ್ಯಾಪಕವಾಗಿ ಕೃಷಿಗೆ ಹಾನಿ ಸಂಭವಿಸಿದೆ.

ದಿಡುಪ ಕಡೆಯಿಂದ ಹರಿಯುವ ನೇತ್ರಾವತಿ ನದಿಯ ಸಂಪರ್ಕ ಹಳ್ಳಗಳಾದ ಕುಕ್ಕಾವಿನ ಏಳೂವರೆ ಹಳ್ಳ ಹಾಗೂ ಕೂಡಬೆಟ್ಟು ಹಳ್ಳಗಳು ಏಕಾ ಏಕಿ ಉಕ್ಕಿಹರಿದ ಪರಿಣಾಮ ನೇತ್ರಾವತಿ ನದಿಯ ತಗ್ಗು ಪ್ರದೇಶಗಳಾದ ಕಡಿರುದ್ಯಾವರ, ಕಾನರ್ಪ, ಪರಮುಖ, ನಿಡಿಗಲ್, ಕಾಯರ್ತೋಡಿ ಕುಡೆಂಚಿ ಹಾಗೂ ಮೃತ್ಯುಂಜಯ ಮತ್ತು ನೇತ್ರಾವತಿ ಸಂಗಮ ಸ್ಥಳವಾದ ಪಜಿರಡ್ಕ ಹಾಗೂ ಕೆಳಭಾಗದ ಪರಿಸರಗಳಲ್ಲಿ ನದಿ ನೀರು ಏರಿಕೆ ಕಂಡಿತು. ಈ ಪ್ರದೇಶಗಳ ಅನೇಕರ ಅಡಕೆ ತೋಟಗಳಿಗೆ ನೀರು ನುಗ್ಗಿದೆ.

ದಿಡುಪೆ, ಕೊಲ್ಲಿ ಭಾಗದಲ್ಲಿ ನದಿ ಶಾಂತವಾಗಿದ್ದ ಕಾರಣದಿಂದ ಭಾರಿ ಪ್ರವಾಹದ ಸ್ಥಿತಿ ಉಂಟಾಗಿಲ್ಲ. ಏಳೂವರೆ ಹಳ್ಳ ಹಾಗೂ ಕೂಡ ಬಟ್ಟು ಹಳ್ಳಗಳಿಗೆ ಚಾರ್ಮಾಡಿ ಭಾಗದ ಸಂಪರ್ಕ ಇರುವ ಕಾರಣ ನೀರು ಏರಿಕೆಯಾಗಿದೆ. ಸಂಜೆ 7:30ರ ಬಳಿಕ ಎರಡು ನದಿಗಳ ನೀರು ಇಳಿಯ ತೊಡಗಿದುದರಿಂದ ಪರಿಸರದ ಜನರಲ್ಲಿ ಉಂಟಾಗಿದ್ದ ಆತಂಕ ದೂರವಾಯಿತು.

ಕೊಚ್ಚಿ ಹೋದ ಮರಮಟ್ಟು

ಎರಡು ನದಿಗಳಲ್ಲಿ ಹಸಿಮರಗಳ ಸಹಿತ ಭಾರಿ ಸಂಖ್ಯೆಯ ಮರಮಟ್ಟು ಕೊಚ್ಚಿಕೊಂಡು ಹೋಗಿದೆ. ಭಾರಿ ಮಣ್ಣು ಮಿಶ್ರಿತ ನೀರು ಕೂಡ ಹರಿದಿದ್ದು ಬಂದಿದ್ದು ಘಟ್ಟ ಪ್ರದೇಶದಲ್ಲಿ ಗುಡ್ಡ ಕುಸಿತವೇನಾದರೂ ಉಂಟಾಗಿರಬಹುದೇ ಎಂಬ ಸಂಶಯ ಸ್ಥಳೀಯರಲ್ಲಿ ಉಂಟಾಗಿದೆ.

2019 ರಲ್ಲಿನ ಪ್ರವಾಹವನ್ನು ನೆನಪಿಸುವ ರೀತಿಯಲ್ಲಿ ಮೃತ್ಯುಂಜಯ ನದಿ ಹರಿದಿದೆ ಎಂದು ಸ್ಥಳೀಯರು ಮಾಹಿತಿ ನೀಡುತ್ತಿದ್ದಾರೆ. ಅಡಕೆ ತೋಟಗಳಿಗೆ ನೀರಿನ ಜತೆ ಮರಮಟ್ಟಗಳು ನುಗ್ಗಿದ್ದು ಹಾನಿ ಪ್ರಮಾಣ ಇನ್ನಷ್ಟೇ ತಿಳಿದು ಬರಬೇಕಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ