ಉಡುಪಿ ಜಿಲ್ಲೆಯಲ್ಲಿ ಸಂಭ್ರಮದ ಮೊಂತಿ ಫೆಸ್ತ್ ಆಚರಣೆ - Mahanayaka
11:15 PM Thursday 12 - December 2024

ಉಡುಪಿ ಜಿಲ್ಲೆಯಲ್ಲಿ ಸಂಭ್ರಮದ ಮೊಂತಿ ಫೆಸ್ತ್ ಆಚರಣೆ

monthi fest
08/09/2022

ಉಡುಪಿ: ಕನ್ಯಾಮರಿಯಮ್ಮನವರ ಜನ್ಮದಿನವಾದ ಮೊಂತಿ ಫೆಸ್ತ್ ಅನ್ನು ಜಿಲ್ಲೆಯಾದ್ಯಂತ ಕ್ರೆಸ್ತ  ಬಾಂಧವರು ಗುರುವಾರ ಭಕ್ತಿ ಭಾವದಿಂದ  ಆಚರಿಸಿದರು.

ಪುಟ್ಟ ಮಕ್ಕಳು ಕನ್ಯಾ ಮರಿಯಮ್ಮನವರ ಮೂರ್ತಿಗೆ ಹೂಗಳನ್ನು ಸಮರ್ಪಿಸಿದ ಬಳಿಕ ಜಿಲ್ಲೆಯ ಎಲ್ಲ ಚರ್ಚುಗಳಲ್ಲಿ ಧರ್ಮಗುರುಗಳು ಆಯಾ ಊರಿನ ಗುರಿಕಾರರು ತಮ್ಮ ಹೊಲಗಳಿಂದ ಆರಿಸಿ ತಂದ ಭತ್ತದ ತೆನೆಯನ್ನು ಆಶೀರ್ವಾದಿಸಿ ಮೆರವಣಿಗೆಯಲ್ಲಿ ಚರ್ಚಿನ ಒಳಗೆ ಕೊಂಡೊಯ್ದು ಪವಿತ್ರ ಬಲಿಪೂಜೆಯಲ್ಲಿ ಪಾಲ್ಗೊಂಡರು. ಪವಿತ್ರ ಬಲಿಪೂಜೆಯಲ್ಲಿ ಧರ್ಮಗುರುಗುಳು ಕುಟುಂಬ, ಜೀವನ ಹಾಗೂ ಸಮಾಜದಲ್ಲಿ ಮಹಿಳೆಯ ಸ್ಥಾನಮಾನದ ಕುರಿತು ಪ್ರವಚನ ನೀಡಿದರು.

ಪವಿತ್ರ ಬಲಿಪೂಜೆಯ  ಬಳಿಕ ಆಶೀರ್ವಾಸಿದ ಭತ್ತದ ತೆನೆಗಳನ್ನು ಪ್ರತಿ ಕುಟುಂಬಕ್ಕೆ ವಿತರಿಸಲಾಯಿತು.  ಹೂವು ಕೊಂಡು ಹೋದ ಮಕ್ಕಳಿಗೆ ಹಾಗೂ ಭಕ್ತಾದಿಗಳಿಗೆ ಸಿಹಿ ತಿಂಡಿಯನ್ನು ಹಾಗೂ ಕಬ್ಬನ್ನು ಹಂಚಲಾಯಿತು.

ತೆನೆಹಬ್ಬವನ್ನು ಕೌಟುಂಬಿಕ ಹಬ್ಬವಾಗಿ ಪರಿಗಣಿಸಲಾಗುತ್ತಿದ್ದು, ಚರ್ಚಿನಿಂದ ತಂದ ಪವಿತ್ರ ಭತ್ತದ ತೆನೆಯನ್ನು ದೇವರ ಪೀಠದ ಮೇಲಿರಿಸಿ ಕುಟುಂಬದ ಎಲ್ಲಾ ಸದಸ್ಯರು ಜೊತೆಯಾಗಿ ಸೇರಿ ಪ್ರಾರ್ಥನೆ ನೆರವೇರಿಸಿ ಬಳಿಕ ಹೊಸ ಭತ್ತದ ತೆನೆಗಳನ್ನು ಹುಡಿ ಮಾಡಿ ಹಾಲು ಅಥವಾ ಪಾಯಸದೊಂದಿಗೆ ಕುಟುಂಬದ ಹಿರಿಯ ಸದಸ್ಯ ಪ್ರತಿಯೊಬ್ಬರಿಗೂ ಸೇವಿಸಲು ನೀಡುತ್ತಾರೆ.

ಬಳಿಕ ಮಧ್ಯಾಹ್ನ ಕುಟುಂಬದ ಎಲ್ಲಾ ಸದಸ್ಯರು ಜೊತೆಯಾಗಿ ಸೇರಿ ಸಂಪೂರ್ಣ ಸಸ್ಯಾಹಾರದ ಊಟವನ್ನು ನೆಲದ ಮೇಲೆ ಕುಳಿತು ಬಾಳೆ ಎಲೆಯಲ್ಲಿ ಸೇವನೆ ಮಾಡಿದರು.  ಸಸ್ಯಹಾರ ಊಟದಲ್ಲಿ  3, 9 ಮತ್ತು 15 ಬಗೆಯ ಸಸ್ಯಹಾರ ಖಾದ್ಯ, ಪಾಯಸ, ಅನ್ನ, ಸಾಂಬಾರು ತಯಾರಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಕೆಸುವಿನ ಪತ್ರೋಡೆ ಮಾಡಲಾಗುತ್ತದೆ. ಅದರೊಂದಿಗೆ ಬೆಂಡೆ, ಅಲಸಂಡೆ, ಹೀರೆಕಾಯಿ ಇನ್ನಿತರ ತರಕಾರಿಗಳು ಮುಖ್ಯವಾಗಿದ್ದವು.

ಉಡುಪಿ ಶೋಕಮಾತಾ ಇಗರ್ಜಿಯಲ್ಲಿ ಜರುಗಿದ ಧಾರ್ಮಿಕ ಕಾರ್ಯಕ್ರಮದಲ್ಲಿ ಚರ್ಚಿನ ಪ್ರಧಾನ ಧರ್ಮಗುರು ವಂ. ಚಾರ್ಲ್ಸ್ ಮಿನೇಜಸ್ ನೇತೃತ್ವದಲ್ಲಿ ಮೋಂತಿ ಫೆಸ್ತ್ ಆಚರಣೆ ಜರುಗಿತು

ಉಡುಪಿ ಕ್ರೆಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂದನೀಯ ಜೆರಾಲ್ಡ್ ಐಸಾಕ್ ಲೋಬೊ ಅವರು ಮಲ್ಪೆ ಸಮೀಪದ ತೊಟ್ಟಂ ಸಂತ ಅನ್ನಮ್ಮ ದೇವಾಲಯದಲ್ಲಿ  ಹಬ್ಬದ ಬಲಿಪೂಜೆ ಅರ್ಪಿಸಿ ಹೊಸ ತೆನೆಗಳನ್ನು ಆಶೀರ್ವದಿಸಿ ಹಬ್ಬದ ಸಂದೇಶ ನೀಡಿದರು. ಈ ವೇಳೆ ಚರ್ಚಿನ ಧರ್ಮಗುರು ವಂ.ಡೆನಿಸ್ ಡೆಸಾ ಉಪಸ್ಥಿತರಿದ್ದರು.

ಕುಂದಾಪುರದ ಹೋಲಿ ರೋಸರಿ ಚರ್ಚಿನಲ್ಲಿ ವಂ.ಸ್ಟ್ಯಾನಿ ತಾವ್ರೋ, ಶಿರ್ವದ ಆರೋಗ್ಯ ಮಾತಾ ಚರ್ಚಿನಲ್ಲಿ ವಂ.ಡಾ.ಲೆಸ್ಲಿ ಡಿಸೋಜಾ, ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ನಲ್ಲಿ ವಂ.ವಲೇರಿಯನ್ ಮೆಂಡೊನ್ಸಾ, ಕಾರ್ಕಳ ಅತ್ತೂರು ಸಂತ ಲಾರೆನ್ಸ್ ಬಾಸಿಲಿಕಾದಲ್ಲಿ ವಂ.ಆಲ್ಬನ್ ಡಿಸೋಜಾ ನೇತೃತ್ವದಲ್ಲಿ ಮೋಂತಿ ಫೆಸ್ತ್ ಆಚರಣೆಯ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ