ಆನ್ ಲೈನ್ ಆ್ಯಪ್ ನ ಬೆದರಿಕೆಗೆ ಹೆದರಿ ಮಗಳ ಹುಟ್ಟುಹಬ್ಬದ ದಿನವೇ ದಂಪತಿ ಆತ್ಮಹತ್ಯೆಗೆ ಶರಣು

ಹೈದರಾಬಾದ್: ಪುತ್ರಿಯ ಜನ್ಮದಿನದಂದೇ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದ್ದು, ಆನ್ ಲೈನ್ ಆ್ಯಪ್ ನ ಬೆದರಿಕೆಯಿಂದ ಬೇಸತ್ತು ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ.
ಕೊಲ್ಲಿ ದುರ್ಗಾರಾವ್ ಹಾಗೂ ಪತ್ನಿ ರಮ್ಯಾ ಲಕ್ಷ್ಮೀ ಆತ್ಮಹತ್ಯೆಗೆ ಶರಣಾದವರು ಎಂದು ಗುರುತಿಸಲಾಗಿದೆ. ದುರ್ಗಾರಾವ್ ಪೈಂಟರ್ ಆಗಿ ಕೆಲಸ ಮಾಡುತ್ತಿದ್ದರು. ರಮ್ಯಾ ಲಕ್ಷ್ಮೀ ಟೈಲರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಹಣಕಾಸಿನ ತೊಂದರೆಯಾಯಿತೆಂದು ದಂಪತಿ 2 ಲೋನ್ ಆ್ಯಪ್ ನಿಂದ ಸಾಲ ಪಡೆದುಕೊಂಡಿದ್ದರು. ಆದರೆ, ಸಕಾಲಕ್ಕೆ ಹಣ ಮರುಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಆ್ಯಪ್ ನವರು ಹಣ ನೀಡುವಂತೆ ಒತ್ತಡ ಹಾಕಿದ್ದರು ಎನ್ನಲಾಗಿದೆ. ಹಣ ಮರುಪಾವತಿ ಮಾಡದಿದ್ದರೆ, ರಮ್ಯಾ ಲಕ್ಷ್ಮೀ ಅವರ ಫೋಟೋವನ್ನು ಅಶ್ಲೀಲವಾಗಿ ಮಾರ್ಫ್(ಎಡಿಟ್) ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದಾಗಿ ಬೆದರಿಕೆ ಹಾಕಲಾಗಿತ್ತು.
ಬೆದರಿಕೆಯಿಂದಾಗಿ ಮಾನಕ್ಕೆ ಅಂಜಿದ ದಂಪತಿ ಗೋದಾವರಿ ಜಿಲ್ಲೆಯ ಮೊಗಲ್ಟೂರಿಗೆ ತೆರಳಿ ಹೊಟೇಲ್ ವೊಂದರಲ್ಲಿ ತಂಗಿದ್ದು, ಸಂಬಂಧಿಕರಿಗೆ ಕರೆ ಮಾಡಿ, ತಮ್ಮ ಮಕ್ಕಳನ್ನು ನೋಡಿಕೊಳ್ಳುವಂತೆ ಮನವಿ ಮಾಡಿದ್ದು, ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಲೋನ್ ಆ್ಯಪ್ ಗಳಿಗೆ ಸಾಕಷ್ಟು ಜನರು ಬಲಿಯಾಗುತ್ತಿದ್ದರೂ, ಈ ಬಗ್ಗೆ ಕಠಿಣ ಕ್ರಮಕೈಗೊಳ್ಳಲು ಸರ್ಕಾರ ವಿಫಲವಾಗುತ್ತಿದೆ. ಹೀಗಾಗಿ ಆ್ಯಪ್ ಗಳ ಅಟ್ಟಹಾಸ ಹೆಚ್ಚಾಗುತ್ತಿದೆ. ಸಾರ್ವಜನಿಕರು ಇಂತಹ ಲೋನ್ ಆ್ಯಪ್ ಗಳಿಂದ ಸಾಲ ಪಡೆಯದೇ ಇರುವುದು ಉತ್ತಮ. ಇನ್ನೊಂದೆಡೆ ಬ್ಯಾಂಕ್ ಗಳಲ್ಲಿ ಸುಲಭವಾಗಿ ಸಾರ್ವಜನಿಕರಿಗೆ ಸಾಲ ಸೌಲಭ್ಯ ಸಿಗದ ಹಿನ್ನೆಲೆಯಲ್ಲಿ ಸಾರ್ವಜನಿಕರು ಇಂತಹ ಆ್ಯಪ್ ಗಳ ಮೊರೆ ಹೋಗುತ್ತಿದ್ದಾರೆ. ಸಾರ್ವಜನಿಕರಿಗೆ ಬ್ಯಾಂಕ್ ಗಳಲ್ಲಿ ಲೋನ್ ಪಡೆಯಲು ಸರಳ ವಿಧಾನಗಳ ಯೋಜನೆಗಳು ಬರಬೇಕಿದೆ ಎನ್ನುವ ಒತ್ತಾಯಗಳು ಕೇಳಿ ಬಂದಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka